ಹೋಗಿದೆ./....ಬೆಳೆಹಾನಿ ಸಮೀಕ್ಷೆ ಪೂರ್ಣಗೊಳಿಸಿ ತಕ್ಷಣ ಪರಿಹಾರ ವಿತರಿಸಿ: ಡಿಸಿ

| Published : Aug 24 2024, 01:19 AM IST

ಹೋಗಿದೆ./....ಬೆಳೆಹಾನಿ ಸಮೀಕ್ಷೆ ಪೂರ್ಣಗೊಳಿಸಿ ತಕ್ಷಣ ಪರಿಹಾರ ವಿತರಿಸಿ: ಡಿಸಿ
Share this Article
  • FB
  • TW
  • Linkdin
  • Email

ಸಾರಾಂಶ

ಬೆಳಗಾವಿ ಜಿಲ್ಲೆಯಲ್ಲಿ ಬೆಳೆ ಹಾನಿ ಸಮೀಕ್ಷೆ ಕಾರ್ಯ ಪೂರ್ಣಗೊಳಿಸಿ, ತಕ್ಷಣವೇ ಪರಿಹಾರ ವಿತರಿಸಬೇಕು ಎಂದು ಜಿಲ್ಲಾಧಿಕಾರಿ ಮೊಹಮ್ಮದ್‌ ರೋಷನ್‌ ಸೂಚಿಸಿದರು.

ಕನ್ನಡಪ್ರಭ ವಾರ್ತೆ ಬೆಳಗಾವಿ

ಜಿಲ್ಲೆಯಲ್ಲಿ ಬೆಳೆ ಹಾನಿ ಸಮೀಕ್ಷೆ ಕಾರ್ಯ ಪೂರ್ಣಗೊಳಿಸಿ, ತಕ್ಷಣವೇ ಪರಿಹಾರ ವಿತರಿಸಬೇಕು. ಮನೆ ಹಾನಿಯಾದ ಮಾಹಿತಿಯನ್ನು ನಿಗಮದ ಪೋರ್ಟಲ್ ನಲ್ಲಿ ಅಳವಡಿಸಿ, ಪರಿಹಾರ ಬಿಡುಗಡೆಗೆ ಕ್ರಮ ವಹಿಸಬೇಕು. ಒಂದು ವೇಳೆ ಸಮೀಕ್ಷೆಯಲ್ಲಿ ವ್ಯತ್ಯಾಸ, ಲೋಪದೋಷ ಕಂಡುಬಂದಲ್ಲಿ ಅಂತಹ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್‌ ಕಟ್ಟುನಿಟ್ಟಿನ ಸೂಚನೆ ನೀಡಿದರು.

ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಶುಕ್ರವಾರ ಕಂದಾಯ ಇಲಾಖೆ ಸೇರಿ, ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನೆ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಬೆಳೆಹಾನಿಯ ಕುರಿತು ಜಿಲ್ಲೆಯಲ್ಲಿ ಈಗಾಗಲೇ ಜಂಟಿ ಸಮೀಕ್ಷೆ ನಡೆಸಲಾಗಿದೆ. ಈ ಸಮೀಕ್ಷೆಯಲ್ಲಿ ಸಾಕಷ್ಟು ವ್ಯತ್ಯಾಸ ಕಂಡು ಬರುತ್ತಿದೆ. ಬೆಳೆಹಾನಿ ಸಮೀಕ್ಷೆ ಪ್ರಕಾರ ರೈತರಿಗೆ ಪರಿಹಾರ ಹಣ ವರ್ಗಾವಣೆಯಾಗುತ್ತಿಲ್ಲ. ಸುಮಾರು 20 ಸಾವಿರ ಹೆಕ್ಟೇರ್ ಪ್ರದೇಶದ ರೈತರಿಗೆ ಪರಿಹಾರ ಬಂದಿಲ್ಲ ಎಂದು ದೂರುಗಳು ಕೇಳಿ ಬಂದಿವೆ. ಅಧಿಕಾರಿಗಳು ಈ ರೀತಿಯ ವಿಳಂಬ ತೋರಬಾರದು ಎಂದು ಕೃಷಿ ಇಲಾಖೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ಸಮೀಕ್ಷೆ ಕೈಗೊಂಡ ಬಳಿಕ ಪರಿಹಾರ ಪೋರ್ಟಲ್ ನಲ್ಲಿ ನಮೂದಿಸಿ, ಅಪ್ರೂವಲ್ ನೀಡಿದ ಬೆಳೆಹಾನಿಯಾದ ರೈತರಿಗೆ ಈವರೆಗೂ ಪರಿಹಾರ ಹಣ ವರ್ಗಾವಣೆಯಾಗಿಲ್ಲ. ಕೂಡಲೇ ತಾಂತ್ರಿಕ ದೋಷ ಸರಿಪಡಿಸಿ ಪರಿಹಾರ ಒದಗಿಸಲು ಕ್ರಮ ವಹಿಸಬೇಕು ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದರು.

ಆಧಾರ್-ಆರ್.ಟಿ.ಸಿ ಜೋಡಣೆ ಪೂರ್ಣಗೊಳಿಸಿ:

ಆಧಾರ್- ಆರ್.ಟಿ.ಸಿ ಯಲ್ಲಿ ಹೆಸರುಗಳು ವ್ಯತ್ಯಾಸ ಹಾಗೂ ಬ್ಯಾಂಕ್ ಖಾತೆಗೆ ಆಧಾರ್ ಲಿಂಕ್ ಇಲ್ಲದ ಕಾರಣ ಡಿಬಿಟಿ ಮೂಲಕ ಹಣ ವರ್ಗಾವಣೆಗೆ ತೊಂದರೆಯಾಗಿದೆ. ಕೂಡಲೇ ಅಂತಹ ರೈತರಿಗೆ ಆಧಾರ್ ಲಿಂಕ್ ಮಾಡಲು ಸೂಚನೆ ನೀಡಬೇಕು ಅಥವಾ ರೈತರಿಗೆ ಇಂಡಿಯನ್ ಪೋಸ್ಟ್ ಬ್ಯಾಂಕ್ ಖಾತೆ ತೆರೆಯಲು ಸೂಚನೆ ನೀಡಬೇಕು ಎಂದು ತಿಳಿಸಿದರು.

ಜಿಲ್ಲೆಯಲ್ಲಿ ಆಧಾರ್-ಆರ್.ಟಿ.ಸಿ ಜೋಡಣೆ ಕೇವಲ ಶೇ.68ರಷ್ಟು ಮಾತ್ರವಾಗಿದೆ. ಒಂದು ವಾರದೊಳಗೆ ಕನಿಷ್ಠ ಶೇ.85ರಷ್ಟು ಆಧಾರ್ ಜೋಡಣೆ ಪೂರ್ಣಗೊಳಿಸಬೇಕು. ಗ್ರಾಮ ಲೆಕ್ಕಾಧಿಕಾರಿಗಳು ಕಡ್ಡಾಯವಾಗಿ ಗ್ರಾಮದಲ್ಲೇ ವಾಸವಿದ್ದು, ಆಧಾರ್ ಜೋಡಣೆ ಕಾರ್ಯ ಪೂರ್ಣಗೊಳಿಸಬೇಕು ಎಂದು ಡಿಸಿ ಸೂಚಿಸಿದರು.

ಶುದ್ಧ ಕುಡಿಯುವ ನೀರು ಪೂರೈಕೆಗೆ ಕ್ರಮ:

ಮಹಾನಗರ ಪಾಲಿಕೆ ಹಾಗೂ ನಗರ ಸ್ಥಳೀಯ ಸಂಸ್ಥೆಗಳಿಗೆ ಶುದ್ಧ ಕುಡಿಯುವ ನೀರು ಪೂರೈಕೆಗೆ ಈಗಾಗಲೇ ಸೂಚನೆ ನೀಡಲಾಗಿದೆ. ಪ್ರತಿ 15 ದಿನಕ್ಕೊಮ್ಮೆ ಕುಡಿಯುವ ನೀರು ಶುದ್ಧತೆ ಬಗ್ಗೆ ಪರೀಕ್ಷಿಸಬೇಕು. ಜಿಲ್ಲೆಯಲ್ಲಿರುವ ಇಂದಿರಾ ಕ್ಯಾಂಟೀನ್ ಗಳು ಸಮರ್ಪಕ ಕಾರ್ಯ ನಿರ್ವಹಿಸಬೇಕು. ಹೊಸ ಇಂದಿರಾ ಕ್ಯಾಂಟೀನ್‌ಗಳ ಪ್ರಾರಂಭಕ್ಕೆ ಗುರುತಿಸಿದ ಸ್ಥಳಗಳ ಬಗ್ಗೆ ಯಾವುದೇ ಸಮಸ್ಯೆಯಿದಲ್ಲಿ ಶಾಸಕರ ಗಮನಕ್ಕೆ ತಂದು ಬೇರೆ ಸ್ಥಳ ಗುರುತಿಸಿ ಕ್ಯಾಂಟೀನ್ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರು.

15ನೇ ಹಣಕಾಸು ಯೋಜನೆಯಡಿ ವಿವಿಧ ಕಾಮಗಾರಿಗಳು ಪ್ರಗತಿ ಹಂತದಲ್ಲಿವೆ. ಮುಂದಿನ ದಿನಗಳಲ್ಲಿ ಪ್ರಾರಂಭಿಸಬೇಕಾದ ಕಾಮಗಾರಿಗಳಿಗೆ ಕೂಡಲೇ ಟೆಂಡರ್ ಕರೆಯಲಾಗುವುದು ಎಂದು ಅಧಿಕಾರಿಗಳು ವಿವರಿಸಿದರು.

ಐಎಎಸ್ ಪ್ರೊಬೇಷನರಿ ಅಧಿಕಾರಿ ದಿನೇಶಕುಮಾರ ಮೀನಾ, ಬೆಳಗಾವಿ ಉಪ ವಿಭಾಗಾಧಿಕಾರಿ ಶ್ರವಣ ನಾಯಕ, ಜಿಲ್ಲಾ ನಗರಾಭಿವೃದ್ಧಿ ಯೋಜನಾ ಕೋಶದ ಯೋಜನಾ ನಿರ್ದೇಶಕ ಮಲ್ಲಿಕಾರ್ಜುನ ಕಲಾದಗಿ, ಎಲ್ಲ ತಹಸೀಲ್ದಾರಗಳು, ವಿವಿಧ ಇಲಾಖೆ ಅಧಿಕಾರಿಗಳು ಸೇರಿದಂತೆ ನಗರ ಸ್ಥಳೀಯ ಸಂಸ್ಥೆಗಳ ಮುಖ್ಯಾಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.

ಪರಿಹಾರ ವಿತರಣೆ ಸಂಬಂಧಿಸಿದ ತಹಸೀಲ್ದಾರಗಳ ಹಂತದಲ್ಲಿದೆ. ಇಂತಹ ಯಾವುದೇ ಪ್ರಕರಣಗಳು ಬಾಕಿ ಉಳಿಯಬಾರದು. ರೈತರಿಗೆ ಪರಿಹಾರ ವಿತರಣೆಯಲ್ಲಿ ವಿಳಂಬ ತೋರಿದರೆ ಅಂತಹ ಅಧಿಕಾರಿಗಳ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮ ಜರುಗಿಸಲಾಗುವುದು.

- ಮೊಹಮ್ಮದ್‌ ರೋಷನ್‌ ಜಿಲ್ಲಾಧಿಕಾರಿ