ಬೆಳೆ ಹಾನಿ ಸಮೀಕ್ಷೆ ಪೂರ್ಣಗೊಳಿಸಿ ಸರ್ಕಾರಕ್ಕೆ ಶೀಘ್ರ ಶಿಫಾರಸು: ಲಾಡ್

| Published : Aug 31 2025, 02:00 AM IST

ಬೆಳೆ ಹಾನಿ ಸಮೀಕ್ಷೆ ಪೂರ್ಣಗೊಳಿಸಿ ಸರ್ಕಾರಕ್ಕೆ ಶೀಘ್ರ ಶಿಫಾರಸು: ಲಾಡ್
Share this Article
  • FB
  • TW
  • Linkdin
  • Email

ಸಾರಾಂಶ

ಅತಿವೃಷ್ಟಿಯಿಂದ ಹಾನಿಗೊಳಗಾದ ಎಲ್ಲ ಕೃಷಿ ಮತ್ತು ತೋಟಗಾರಿಕೆ ಬೆಳೆಗಳ ನಿಖರ ಸಮೀಕ್ಷೆ ಕೈಗೊಳ್ಳಲು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು. ಸಮೀಕ್ಷಾ ಕಾರ್ಯದಲ್ಲಿ ಯಾವುದೇ ವಿಳಂಬವಾಗದಂತೆ ಮತ್ತು ಅರ್ಹ ಫಲಾನುಭವಿಗಳಿಗೆ ನ್ಯಾಯ ದೊರಕಿಸಬೇಕು.

ಧಾರವಾಡ: ಅತಿವೃಷ್ಟಿಯಿಂದ ನಷ್ಟ ಅನುಭವಿಸಿದ ರೈತರಿಗೆ ಸರ್ಕಾರ ನಿಯಮಾನುಸಾರ ಪರಿಹಾರ ನೀಡುತ್ತದೆ. ಪರಿಹಾರ ಕಾರ್ಯಗಳಲ್ಲಿ ಯಾವುದೇ ಲೋಪದೋಷಗಳಾಗದಂತೆ ಅಧಿಕಾರಿಗಳು ಎಚ್ಚರ ವಹಿಸಬೇಕು. ಸಮೀಕ್ಷೆ ಶೀಘ್ರ ಪೂರ್ಣಗೊಳಿಸಿ ವರದಿ ಸಲ್ಲಿಸಬೇಕು ಎಂದು ಸಚಿವ ಸಂತೋಷ ಲಾಡ್ ಹೇಳಿದರು.

ನಗರದ ಜಿಲ್ಲಾಧಿಕಾರಿ ಕಚೇರಿಯ ನೂತನ ಸಭಾಭವನದಲ್ಲಿ ಬೆಳೆ ಪರಿಹಾರದ ಕುರಿತು ಕೃಷಿ, ಕಂದಾಯ, ತೋಟಗಾರಿಕೆ ಇಲಾಖೆಗಳ ಅಧಿಕಾರಿಗಳೊಂದಿಗೆ ಜಿಲ್ಲಾ ಮಟ್ಟದ ಸಭೆ ಜರುಗಿಸಿ ಮಾತನಾಡಿದರು.

ಅತಿವೃಷ್ಟಿಯಿಂದ ಹಾನಿಗೊಳಗಾದ ಎಲ್ಲ ಕೃಷಿ ಮತ್ತು ತೋಟಗಾರಿಕೆ ಬೆಳೆಗಳ ನಿಖರ ಸಮೀಕ್ಷೆ ಕೈಗೊಳ್ಳಲು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು. ಸಮೀಕ್ಷಾ ಕಾರ್ಯದಲ್ಲಿ ಯಾವುದೇ ವಿಳಂಬವಾಗದಂತೆ ಮತ್ತು ಅರ್ಹ ಫಲಾನುಭವಿಗಳಿಗೆ ನ್ಯಾಯ ದೊರಕಿಸಬೇಕು. ಜಿಲ್ಲೆಯಲ್ಲಿ ಅತಿವೃಷ್ಟಿ ಪರಿಹಾರ ಕಾರ್ಯಗಳನ್ನು ಚುರುಕುಗೊಳಿಸಲು ಮತ್ತು ಸಂತ್ರಸ್ತರಿಗೆ ಶೀಘ್ರ ನ್ಯಾಯ ಒದಗಿಸಲು ಬೆಳೆ ಸಮೀಕ್ಷೆ ಕಾರ್ಯ ಸಹಾಯಕವಾಗಲಿದೆ ಎಂದರು.

ಕೃಷಿ ಹಾಗೂ ತೋಟಗಾರಿಕೆ ಇಲಾಖೆ ನೀಡಿರುವ ಪ್ರಾಥಮಿಕ ಅಂದಾಜು ವರದಿಯ ಪ್ರಕಾರ 79,697 ಹಕ್ಟೇರ್ ಹೆಸರು, 6,550 ಹೆಕ್ಟೇರ್ ಉದ್ದು, 7,250 ಹೆಕ್ಟೇರ್ ಸೋಯಾ ಅವರೆ ಬೆಳೆ, 50 ಹಕ್ಟೇರ್ ಮುಸಿಕಿನ ಜೋಳ ಸೇರಿದಂತೆ ಸರಿಸುಮಾರು 93,547 ಹಕ್ಟೇರ್ ಹಾನಿಯಾಗಿದೆ. ತೋಟಗಾರಿಕಾ ಬೆಳೆಗಳಾದ ಒಣಮೆಣಸಿನಕಾಯಿ 915 ಹೆಕ್ಟೇರ್, 2,920 ಹೆಕ್ಟೇರ್ ಈರುಳ್ಳಿ, 230 ಹೆಕ್ಟೇರ್ ಬಳ್ಳೊಳ್ಳಿ ಸೇರಿದಂತೆ ಸರಿಸುಮಾರು 4,065 ಹೆಕ್ಟೇರ್ ಬೆಳೆ ಹಾನಿಯಾಗಿದೆ. ಮುಂದಿನ ಎರಡ್ಮೂರು ದಿನಗಳಲ್ಲಿ ಸಮೀಕ್ಷೆ ಪೂರ್ಣಗೊಳಿಸುವುದಾಗಿ ತಿಳಿಸಿದ್ದಾರೆ. ಸಮೀಕ್ಷೆಯ ನಂತರ ಒಟ್ಟು ಹಾನಿಯ ನಿಖರ ಮಾಹಿತಿ ಲಭ್ಯವಾಗಲಿದೆ ಎಂದು ಹೇಳಿದರು.

ಆಗಸ್ಟ್‌ನಲ್ಲಿ ಸುರಿದ ಮಳೆಯಿಂದಾಗಿ ಪ್ರಾಥಮಿಕ ವರದಿಯ ಪ್ರಕಾರ 223 ಮನೆಗಳಿಗೆ ಹಾನಿಯಾಗಿದೆ. ಕಂದಾಯ ಹಾಗೂ ಇತರ ಇಲಾಖೆಗಳ ಜಂಟಿ ಸಮಿತಿ ಪರಿಶೀಲನೆಯ ನಂತರ ಇದರಲ್ಲಿನ 81 ಪ್ರಕರಣಗಳನ್ನು ತಿರಸ್ಕರಿಸಲಾಗಿದೆ. ಉಳಿದಂತೆ 128 ಮನೆ ಹಾನಿ ಪ್ರಕರಣಗಳ ಪೈಕಿ ಶೇ. 76ಕ್ಕಿಂತ ಹೆಚ್ಚು ಹಾನಿಯಾದ 25 ಮನೆಗಳಿಗೆ, ಶೇ. 51ರಿಂದ 75ರಷ್ಟು ಹಾನಿಯಾದ 41 ಮನೆಗಳಿಗೆ, ಶೇ. 21ರಿಂದ 50ರಷ್ಟು ಹಾನಿಯಾದ 51 ಮನೆಗಳಿಗೆ ಮತ್ತು ಶೇ. 15ರಿಂದ 20ರಷ್ಟು ಹಾನಿಯಾದ 11 ಮನೆಗಳಿಗೆ ನಿಯಮಾನುಸಾರ ಪರಿಹಾರ ನೀಡಲು ಈಗಾಗಲೇ ಕ್ರಮಕೈಗೊಳ್ಳಲಾಗಿದೆ. 14 ಮನೆಗಳು ಇನ್ನೂ ಪರಿಶೀಲನಾ ಹಂತದಲ್ಲಿದೆ ಎಂದರು.

ಜಿಲ್ಲಾಧಿಕಾರಿ ದಿವ್ಯಪ್ರಭು ಮಾತನಾಡಿ, ಸೋಮವಾರ ಸಂಜೆಯೊಳಗೆ ಸಮೀಕ್ಷೆಯ ಪೂರ್ಣ ವರದಿಯನ್ನು ಅಧಿಕಾರಿಗಳು ಸಲ್ಲಿಸಬೇಕು. ಆಕ್ಷೇಪಣೆಗಳಿದ್ದಲ್ಲಿ ಸಲ್ಲಿಸಲು ಒಂದು ವಾರ ಕಾಲಾವಕಾಶ ನೀಡಲಾಗುವುದು. ಆದಷ್ಟು ಶೀಘ್ರ ಸರ್ಕಾರಕ್ಕೆ ಬೆಳೆ ಹಾನಿ ಸಮೀಕ್ಷೆಯ ವರದಿಯನ್ನು ಸಲ್ಲಿಸಿ, ಪರಿಹಾರ ಬರುವಂತೆ ಸಚಿವರ ಹಾಗೂ ಶಾಸಕರ ಮಾರ್ಗದರ್ಶನದಲ್ಲಿ ಜಿಲ್ಲಾಡಳಿತ ಕ್ರಮವಹಿಸಲಿದೆ ಎಂದು ತಿಳಿಸಿದರು.

ಶಾಸಕ ಎನ್.ಎಚ್. ಕೋನರೆಡ್ಡಿ, ಕೃಷಿ ವಿವಿ ಕುಲಪತಿ ಡಾ. ಪಿ.ಎಲ್. ಪಾಟೀಲ ಹಾಗೂ ಇತರರು ಮಾತನಾಡಿದರು. ಎಸ್ಪಿ ಗುಂಜನ್ ಆರ್ಯ, ಪಾಲಿಕೆ ಆಯುಕ್ತ ಡಾ. ರುದ್ರೇಶ ಘಾಳಿ, ಉಪಪೊಲೀಸ್ ಆಯುಕ್ತ ಮಹಾನಿಂಗ ನಂದಗಾವಿ ಇದ್ದರು.

ಸಭೆಯಲ್ಲಿ ಉಪವಿಭಾಗಾಧಿಕಾರಿ ಶಾಲಂ ಹುಸೇನ್, ಜಿಪಂ ಉಪಕಾರ್ಯದರ್ಶಿ ಮಲ್ಲಿಕಾರ್ಜುನ ತೊದಲಬಾಗಿ, ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಮಂಜುನಾಥ ಅಂತರವಳ್ಳಿ, ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಕಾಶಿನಾಥ ಭದ್ರಣ್ಣನವರ, ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿ ವೀರಣ್ಣಗೌಡ ಪಾಟೀಲ, ಕೃಷಿ ಇಲಾಖೆ ಉಪನಿರ್ದೇಶಕಿ ಜಯಶ್ರೀ ಹಿರೇಮಠ, ಸಂದೀಪ ಜಿ, ತಹಸೀಲ್ದಾರರು, ಸೇರಿ ವಿವಿಧ ಇಲಾಖೆ ಅಧಿಕಾರಿಗಳಿದ್ದರು.