ಬೆಳೆ ಹಾನಿ ಸಮೀಕ್ಷೆ ಕಾರ್ಯ ಶೀಘ್ರವಾಗಿ ಪೂರ್ಣಗೊಳಿಸಿ: ಡಿಸಿ ಗೋವಿಂದರೆಡ್ಡಿ

| Published : Nov 01 2024, 12:10 AM IST

ಬೆಳೆ ಹಾನಿ ಸಮೀಕ್ಷೆ ಕಾರ್ಯ ಶೀಘ್ರವಾಗಿ ಪೂರ್ಣಗೊಳಿಸಿ: ಡಿಸಿ ಗೋವಿಂದರೆಡ್ಡಿ
Share this Article
  • FB
  • TW
  • Linkdin
  • Email

ಸಾರಾಂಶ

ಅರ್ಹ ರೈತರಿಗೆ ಸರ್ಕಾರದ ಸಹಾಯಧನ ದೊರಕಿಸಿಕೊಡಲು ಪ್ರಯತ್ನ

ಗದಗ: ಜಿಲ್ಲಾಧಿಕಾರಿ ಗೋವಿಂದರೆಡ್ಡಿ ಅಧಿಕ ಮಳೆಯಿಂದ ಆಗಿರುವ ಬೆಳೆ ಹಾನಿ ವೀಕ್ಷಣೆಗೆ ಜಿಲ್ಲೆಯ ಬೆಳೆ ಹಾನಿ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಗದಗ ತಾಲೂಕಿನ ಹೊಂಬಳ, ಮುಂಡರಗಿ ತಾಲೂಕಿನ ಚುರ್ಚಿಹಾಳ, ಡಂಬಳ, ಕದಾಂಪೂರ, ಪೇಟಾಲೂರ ಸೇರಿದಂತೆ ವಿವಿಧ ಗ್ರಾಮಗಳ ಬೆಳೆ ಹಾನಿ ಪ್ರದೇಶಕ್ಕೆ ಭೇಟಿ ನೀಡಿ ಬೆಳೆ ಹಾನಿ ಪರಿಸ್ಥಿತಿಯ ಅವಲೋಕನ ನಡೆಸಿದರು.

ಸರ್ಕಾರದ ನಿಯಮಾವಳಿಯಂತೆ ಬೆಳೆ ಹಾನಿಯಾದ ಅರ್ಹ ರೈತರಿಗೆ ಸರ್ಕಾರದ ಸಹಾಯಧನ ಸರಿಯಾಗಿ ತಲುಪಬೇಕು. ಮಾರ್ಗಸೂಚಿಯನ್ವಯ ಕೃಷಿ ಇಲಾಖೆ, ತೋಟಗಾರಿಕೆ ಇಲಾಖೆ ಹಾಗೂ ಕಂದಾಯ ಇಲಾಖೆಯ ಅಧಿಕಾರಿಗಳು ಜಂಟಿ ಸಮೀಕ್ಷೆ ಕೈಗೊಳ್ಳುವ ಮೂಲಕ ಶೀಘ್ರವಾಗಿ ಪೂರ್ಣಗೊಳಿಸಿ ಬೆಳೆ ಹಾನಿಯಾದ ಅರ್ಹ ರೈತರಿಗೆ ಸರ್ಕಾರದ ಸಹಾಯಧನ ದೊರಕಿಸಿಕೊಡಲು ಪ್ರಯತ್ನ ಇಲಾಖಾಧಿಕಾರಿಗಳು ಸಮನ್ವಯದೊಂದಿಗೆ ಕಾರ್ಯ ಪ್ರವೃತ್ತರಾಗುವಂತೆ ಸೂಚಿಸಿದರು.

ಕೃಷಿ ಹಾಗೂ ತೋಟಗಾರಿಕೆ ಬೆಳೆಗಳಾದ ಮೆಕ್ಕೆಜೋಳ, ಮೆಣಸಿನಕಾಯಿ, ಈರುಳ್ಳಿ ಬೆಳೆಗಳ ಹಾನಿ ವೀಕ್ಷಣೆ ನಡೆಸಿದ ಅವರು, ಅಧಿಕ ಮಳೆಯಿಂದ ಅಪಾರ ಪ್ರಮಾಣದ ಹಾನಿಯಾಗಿದೆ. ಬೆಳೆ ಹಾನಿ ಜಂಟಿ ಸಮೀಕ್ಷೆ ನಡೆಸುವವರು ಸರಿಯಾಗಿ ಸಮೀಕ್ಷೆ ಕಾರ್ಯ ಕೈಗೊಳ್ಳಬೇಕು ಹಾಗೂ ಸಮೀಕ್ಷೆ ಕಾರ್ಯವು ನಿಖರತೆಯಿಂದ ಕೂಡಿರಲಿ ಹಾಗೂ ಸಮೀಕ್ಷೆಯು ಚುರುಕಿನಿಂದ ಪೂರ್ಣವಾಗಲಿ ಎಂದು ತಿಳಿಸಿದರು.

ಜಿಲ್ಲಾಧಿಕಾರಿ ಗೋವಿಂದರೆಡ್ಡಿ ಅವರಲ್ಲಿ ಸರ್ಕಾರದಿಂದ ಬೆಳೆ ಹಾನಿ ನಷ್ಟ ಕೊಡಿಸುವಂತೆ ಹಾನಿ ಪ್ರದೇಶಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಬೆಳೆ ಹಾನಿಗೊಳಗಾದ ರೈತರು ಮನವಿ ಮಾಡಿದರು.

ಇದಕ್ಕೆ ಜಿಲ್ಲಾಧಿಕಾರಿಗಳು, ಹಾನಿ ಸಮೀಕ್ಷೆ ಕಾರ್ಯ ನಡೆಯುತ್ತಲಿದೆ. ಸರ್ಕಾರದ ನಿಯಮಾವಳಿಗಳಲ್ಲಿ ಇರುವ ಅವಕಾಶ ಬಳಸಿಕೊಂಡು ಅರ್ಹ ಬೆಳೆ ಹಾನಿ ರೈತರಿಗೆ ಪರಿಹಾರ ಒದಗಿಸಲು ಖಂಡಿತ ಪ್ರಯತ್ನ ಮಾಡಲಾಗುವುದು ಎಂದು ಭರವಸೆ ನೀಡಿದರು.

ಈ ವೇಳೆ ತೋಟಗಾರಿಕೆ ಇಲಾಖೆಯ ಉಪನಿರ್ದೇಶಕ ಶಶಿಕಾಂತ ಕೋಟೆಮನಿ, ಮುಂಡರಗಿ ತಹಸೀಲ್ದಾರರು, ಕೃಷಿ ಇಲಾಖೆ ಅಧಿಕಾರಿಗಳು ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿ, ಸಿಬ್ಬಂದಿಗಳು, ರೈತರು ಇದ್ದರು.