ಮೈಸೂರು ತಂಡಕ್ಕೆ ಸಮಗ್ರ ವೀರಾಗ್ರಣಿ

| Published : Oct 01 2024, 01:35 AM IST

ಸಾರಾಂಶ

ಬಾಗಲಕೋಟೆ ನಗರದ ಬಸವೇಶ್ವರ ಪ್ರೌಢಶಾಲೆ ಮೈದಾನದಲ್ಲಿ ಮುಕ್ತಾಯಗೊಂಡ ಕಿವುಡರ ರಾಜ್ಯಮಟ್ಟದ 14ನೇ ಕ್ರೀಡಾಕೂಟದಲ್ಲಿ 173 ಅಂಕಗಳನ್ನು ಪಡೆಯುವ ಮೂಲಕ ಮೈಸೂರು ಕ್ರೀಡಾಪಟುಗಳು ಸಮಗ್ರ ವೀರಾಗ್ರಣಿ ಪಡೆದುಕೊಂಡಿದ್ದಾರೆ.

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ಬಾಗಲಕೋಟೆ ನಗರದ ಬಸವೇಶ್ವರ ಪ್ರೌಢಶಾಲೆ ಮೈದಾನದಲ್ಲಿ ಮುಕ್ತಾಯಗೊಂಡ ಕಿವುಡರ ರಾಜ್ಯಮಟ್ಟದ 14ನೇ ಕ್ರೀಡಾಕೂಟದಲ್ಲಿ 173 ಅಂಕಗಳನ್ನು ಪಡೆಯುವ ಮೂಲಕ ಮೈಸೂರು ಕ್ರೀಡಾಪಟುಗಳು ಸಮಗ್ರ ವೀರಾಗ್ರಣಿ ಪಡೆದುಕೊಂಡಿದ್ದಾರೆ.

103 ಅಂಕಗಳನ್ನು ಗಳಿಸಿದ ಬೆಂಗಳೂರು ತಂಡ ದ್ವಿತೀಯ ಸ್ಥಾನ ಹಾಗೂ 64 ಅಂಕಗಳನ್ನು ಪಡೆದ ಮಂಡ್ಯ ಜಿಲ್ಲೆ ಕ್ರೀಡಾಪಟುಗಳು ತೃತೀಯ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡರು. ಅತಿಥೆಯ ಬಾಗಲಕೋಟೆ ತಂಡ 29 ಅಂಕಗಳನ್ನು ಗಳಿಸುವ ಮೂಲಕ 7ನೇ ಸ್ಥಾನ ಪಡೆಯಿತು.

ಕರ್ನಾಟಕ ಕಿವುಡರ ಕ್ರೀಡಾ ಒಕ್ಕೂಟದ ಸಹಯೋಗದಲ್ಲಿ ಬಾಗಲಕೋಟೆ ಜಿಲ್ಲಾ ಕಿವುಡರ ಸಂಘ ಸೆ.27ರಿಂದ ಮೂರು ದಿನಗಳ ಕಾಲ ಕ್ರೀಡಾಕೂಟ ಆಯೋಜಿಸಲಾಗಿತ್ತು. 12 ವರ್ಷದಿಂದ 18 ವರ್ಷ ಮೇಲ್ಪಟ್ಟ 126 ವಿದ್ಯಾರ್ಥಿನಿಯರು ಸೇರಿ ಒಟ್ಟು ರಾಜ್ಯದ 20 ಜಿಲ್ಲೆಗಳ 465 ಕ್ರೀಡಾಪಟುಗಳು ಭಾಗವಹಿಸಿದ್ದರು. ಸಂಜ್ಞೆ ಭಾಷೆ ಹಾಗೂ ಧ್ವಜದ ಚಿಹ್ನೆಗಳನ್ನು ನೋಡುವ ಮೂಲಕ ಕ್ರೀಡೆಗಳಲ್ಲಿ ಸೆಣಸಾಟ ಆರಂಭಿಸುತ್ತಿದ್ದ ಕ್ರೀಡಾಪಟುಗಳು ಕೊನೆಯ ಕ್ಷಣದವರೆಗೂ ರೋಚಕವಾಗಿ ಹೋರಾಟ ನಡೆಸಿ ಗಮನ ಸೆಳೆದರು. ರಾಜ್ಯದ ಬೇರೆ ಬೇರೆ ಭಾಗಗಳಿಂದ ಬಂದಿದ್ದ ಎಲ್ಲ ಕ್ರೀಡಾಪಟುಗಳಿಗೂ ಬಾಗಲಕೋಟೆ ಜಿಲ್ಲಾ ಉಡರ ಸಂಘದ ವತಿಯಿಂದ ಊಟ ಹಾಗೂ ಪ್ರತ್ಯೇಕ ವಸತಿ ವ್ಯವಸ್ಥೆ ಕಲ್ಪಿಸಲಾಗಿತ್ತು. ಹೊಸ ದಾಖಲೆ:

18 ವರ್ಷ ಮೇಲ್ಪಟ್ಟ ಮಹಿಳೆಯರ ಎತ್ತರ ಜಿಗಿತದಲ್ಲಿ ಉತ್ತರ ಕನ್ನಡದ ಪ್ರೀತಿ ಹೆಗಡೆ 1.10ಮೀ ಜಿಗಿಯುವ ಮೂಲಕ ಹೊಸ ದಾಖಲೆ ಬರೆದರು. 18 ವರ್ಷದೊಳಗಿನ ಪುರುಷರ ಎತ್ತರ ಜಿಗಿತದಲ್ಲಿ ತುಮಕೂರಿನ ಗೋವಿಂದರಾಜು 1.50ಮೀ ಜಿಗಿಯುವ ಮೂಲಕ ನೂತನ ದಾಖಲೆ ಬರೆದರು. 18 ವರ್ಷದೊಳಗಿನ ಮಹಿಳೆಯರ ಎತ್ತರ ಜಿಗಿತದಲ್ಲಿ ತುಮಕೂರಿನ ಮೋಹಿತಾ ಆರ್. 1.20ಮೀ.ಜಿಗಿಯುವ ಮೂಲಕ ಹೊಸ ದಾಖಲೆ ನಿರ್ಮಿಸಿದರು.ನ್ಯಾಷನಲ್ ಗೇಮ್ಸ್‌ನಲ್ಲೂ ಮಿಂಚಲಿ

ಬಾಗಲಕೋಟೆ: ಮೂರು ದಿನಗಳ ಕಾಲ ನಗರದಲ್ಲಿ ನಡೆದ ಕಿವುಡ ಮಕ್ಕಳ ರಾಜ್ಯಮಟ್ಟದ ಕ್ರೀಡಾಕೂಟಗಳು ಸಾಮಾನ್ಯ ಮಕ್ಕಳಲ್ಲೂ ಉತ್ಸಾಹ ಮೂಡಿಸಿವೆ ಎಂದು ಉದ್ಯಮಿ ರಾಘವೇಂದ್ರ ಕಂದಕೂರ ಹೇಳಿದರು.ನಗರದ ಬಸವೇಶ್ವರ ಪ್ರೌಢಶಾಲೆ ಮೈದಾನದಲ್ಲಿ ಭಾನುವಾರ ಮುಕ್ತಾಯಗೊಂಡ ಕಿವುಡರ ರಾಜ್ಯಮಟ್ಟದ 14ನೇ ಕ್ರೀಡಾಕೂಟದಲ್ಲಿ ಮಾತನಾಡಿದರು.ಇನರ್‌ವಿಲ್‌ ಕ್ಲಬ್ ಅಧ್ಯಕ್ಷೆ ಶ್ರೀಲತಾ ಹೆರಂಜಲ್ ಮಾತನಾಡಿ, ಎಲ್ಲ ಜಿಲ್ಲೆಯ ಮಕ್ಕಳು ಅತ್ಯಂತ ಉತ್ಸಾಹದಿಂದ ಆಟಗಳಲ್ಲಿ ಭಾಗವಹಿಸಿ ಕ್ರೀಡಾಮನೋಭಾವ ಮೆರೆದಿದ್ದಾರೆ. ಇಲ್ಲಿ ಗೆದ್ದ ಪ್ರತಿಭೆಗಳು ರಾಷ್ಟ್ರಮಟ್ಟದಲ್ಲೂ ಉತ್ತಮ ಪ್ರದರ್ಶನ ತೋರಿ ರಾಜ್ಯದ ಕೀರ್ತಿ ಬೆಳಗಲಿ ಎಂದು ಹಾರೈಸಿದರು.ಉದ್ಯಮಿಗಳಾದ ವಿಶ್ವನಾಥ ಗುಳೇದ, ರಾಮಚಂದ್ರ ಚಾವಲಾ, ಕರ್ನಾಟಕ ಕಿವುಡರ ಕ್ರೀಡಾ ಒಕ್ಕೂಟದ ಉಪಾಧ್ಯಕ್ಷ ಕಾಡಪ್ಪ ಗುಡದಿನ್ನಿ ಕ್ರೀಡಾಪಟುಗಳಿಗೆ ಶುಭ ಕೋರಿದರು.ಇನ್ನರ್‌ವಿಲ್‌ ಕ್ಲಬ್‌ ಸಂಧ್ಯಾ ಮಿಸ್ಕಿನ್, ಸುಮಂಗಲಾ ಹದ್ಲಿ, ವೀಣಾ ವಾಘ, ಜಯಲಕ್ಷ್ಮೀ ಪಾಟೀಲ, ಪೂರ್ಣಿಮಾ ಅಕ್ಕಿಮರಡಿ, ರಮೇಶ ಪಡಸಲಗಿ, ಬಾಗಲಕೋಟೆ ಜಿಲ್ಲಾ ಕಿವುಡರ ಸಂಘದ ಅಧ್ಯಕ್ಷ ಸುನೀಲ ಕಂದಕೂರ, ಕಾಯದರ್ಶಿ ರಾಘವೇಂದ್ರ ಜಾಧವ ಇತರರಿದ್ದರು.

ಬಾಗಲಕೋಟೆ ಜಿಲ್ಲಾ ಕಿವುಡರ ಸಂಘದವರು ಎಲ್ಲ ಕ್ರೀಡೆಗಳನ್ನು ಉತ್ತಮವಾಗಿ ಆಯೋಜನೆ ಮಾಡಿದ್ದಾರೆ. ಇಲ್ಲಿ ವಿಜಯಶಾಲಿಯಾದ ಕ್ರೀಡಾಪಟುಗಳು 2025 ಮಾರ್ಚ್‌ನಲ್ಲಿ ಮಧ್ಯಪ್ರದೇಶದ ಗ್ವಾಲಿಯರ್‌ನಲ್ಲಿ ನಡೆಯುವ ರಾಷ್ಟ್ರಮಟ್ಟದ ಕ್ರೀಡೆಗಳಲ್ಲಿ ಸೆಣಸಲಿದ್ದಾರೆ.

- ವಿ.ಕುಮಾರ್, ಅಖಿಲ ಭಾರತ ಕಿವುಡರ ಕ್ರೀಡಾ ಒಕ್ಕೂಟದ ಅಧ್ಯಕ್ಷ, ಹೊಸದಿಲ್ಲಿ.