ವೈಜ್ಞಾನಿಕವಾಗಿ ಜಲಜೀವನ್ ಮಿಷನ್ ಕಾಮಗಾರಿ ಪೂರ್ಣಗೊಳಿಸಿ: ಕೋಟಾ ಶ್ರೀನಿವಾಸ ಪೂಜಾರಿ

| Published : Dec 01 2024, 01:33 AM IST

ವೈಜ್ಞಾನಿಕವಾಗಿ ಜಲಜೀವನ್ ಮಿಷನ್ ಕಾಮಗಾರಿ ಪೂರ್ಣಗೊಳಿಸಿ: ಕೋಟಾ ಶ್ರೀನಿವಾಸ ಪೂಜಾರಿ
Share this Article
  • FB
  • TW
  • Linkdin
  • Email

ಸಾರಾಂಶ

ಚಿಕ್ಕಮಗಳೂರುಜಲಜೀವನ್ ಮಿಷನ್ ಕಾಮಗಾರಿಯನ್ನು ವೈಜ್ಞಾನಿಕವಾಗಿ ಪೂರ್ಣಗೊಳಿಸಿ ಶೀಘ್ರವಾಗಿ ಸಾರ್ವಜನಿಕರಿಗೆ ಉತ್ತಮ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಬೇಕು ಎಂದು ಉಡುಪಿ - ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಸದಸ್ಯ ಕೋಟಾ ಶ್ರೀನಿವಾಸ್‌ ಪೂಜಾರಿ ಹೇಳಿದರು.

ಜಲಜೀವನ್ ಮಿಷನ್ ಯೋಜನೆ ಪ್ರಗತಿ ಪರಿಶೀಲನಾ ಸಭೆ

ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು

ಜಲಜೀವನ್ ಮಿಷನ್ ಕಾಮಗಾರಿಯನ್ನು ವೈಜ್ಞಾನಿಕವಾಗಿ ಪೂರ್ಣಗೊಳಿಸಿ ಶೀಘ್ರವಾಗಿ ಸಾರ್ವಜನಿಕರಿಗೆ ಉತ್ತಮ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಬೇಕು ಎಂದು ಉಡುಪಿ - ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಸದಸ್ಯ ಕೋಟಾ ಶ್ರೀನಿವಾಸ್‌ ಪೂಜಾರಿ ಹೇಳಿದರು.ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಶನಿವಾರ ನಡೆದ ಜಲಜೀವನ್ ಮಿಷನ್ ಯೋಜನೆ ಪ್ರಗತಿ ಪರಿಶೀಲನಾ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕೇಂದ್ರ ಸರ್ಕಾರ ಹರ್ ಘರ್ ಜಲ್ ಎಂಬ ಘೋಷಣೆಯೊಂದಿಗೆ ದೇಶದ ಗ್ರಾಮೀಣ ಭಾಗದ ಎಲ್ಲಾ ಮನೆಗಳಿಗೆ ಟ್ಯಾಪ್ ಸಂಪರ್ಕಗಳ ಮೂಲಕ ಸುರಕ್ಷಿತ ಹಾಗೂ ಸಮರ್ಪಕ ಕುಡಿಯುವ ನೀರಿನ ಸಂಪರ್ಕ ಕಲ್ಪಿಸಲು ಜಲ ಜೀವನ್ ಮಿಷನ್ ಯೋಜನೆ ಜಾರಿ ಮಾಡಿದೆ. ಈ ಯೋಜನೆ ಕಾಮಗಾರಿಯನ್ನು ಪ್ರದೇಶಕ್ಕೆ ತಕ್ಕಂತೆ ವೈಜ್ಞಾನಿಕವಾಗಿ ಸಿದ್ದಪಡಿಸಿ ಕಾಮಗಾರಿ ಪೂರ್ಣಗೊಳಿಸಿ ಪ್ರತಿಯೊಂದು ಮನೆಗೆ ನೀರು ಒದಗಿಸಬೇಕು ಎಂದು ತಿಳಿಸಿದರು.

ಕಾಮಗಾರಿಗೆ ಬಳಸುವ ಪೈಪ್, ಟ್ಯಾಪ್, ಮೀಟರ್‌ಗಳು ಹಾಗೂ ಇನ್ನಿತರ ವಸ್ತುಗಳ ಗುಣಮಟ್ಟ ಪರಿಶೀಲಿಸಿ ನಂತರ ಅಳವಡಿಸಬೇಕು. ಕಾಮಗಾರಿ ಸಂಬಂಧ ರಸ್ತೆಗಳನ್ನು ಕತ್ತರಿಸುವ ಸಂದರ್ಭವಿದ್ದಲ್ಲಿ ಬ್ಲೇಡ್ ಮೂಲಕ ಕತ್ತರಿಸಿ ರಸ್ತೆಗಳಿಗೆ ಯಾವುದೇ ಹಾನಿಯಾಗದಂತೆ ಗಮನಹರಿಸಬೇಕು. ಪ್ರಥಮವಾಗಿ ಗ್ರಾಮದಲ್ಲಿ ನೀರಿನ ಮೂಲಗಳನ್ನು ಗುರುತಿಸಿ ನಂತರ ಕಾಮಗಾರಿ ಪ್ರಾರಂಭಿಸಬೇಕು. ಕಾಮಗಾರಿ ಪೂರ್ಣಗೊಂಡ ನಂತರ ಗ್ರಾಪಂ ಅಭಿವೃದ್ಧಿ ಅಧಿಕಾರಿಗಳಿಗೆ ಹಸ್ತಾಂತರಿ ಸಬೇಕು ಹಾಗೂ ಕಳಪೆ ಕಾಮಗಾರಿ ನಿರ್ವಹಿಸುವ ಗುತ್ತಿಗೆದಾರರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು. ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಎಚ್.ಎಸ್. ಕೀರ್ತನಾ ಮಾತನಾಡಿ, ಜಿಲ್ಲೆಯ 226 ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಒಟ್ಟು 1006 ಗ್ರಾಮಗಳಿವೆ. ಇವುಗಳಲ್ಲಿ ಸುಮಾರು 3,729 ಜನ ವಸತಿಯಿದ್ದು ಒಟ್ಟು 2,40,307 ಕುಟುಂಬಗಳಿವೆ. ಇವುಗಳಲ್ಲಿ 66,403 ವೈಯಕ್ತಿಕ ನಳ ಸಂಪರ್ಕ ಹೊಂದಿರುವ ಕುಟುಂಬಗಳಿದ್ದು ಈವರೆಗೆ 1,29,549 ಕುಟುಂಬಗಳಿಗೆ ಸಂಪರ್ಕ ಕಲ್ಪಿಸಲಾಗಿದೆ. 44,355 ಕುಟುಂಬಗಳಿಗೆ ಯೋಜನೆಯಡಿ ಶೀಘ್ರ ವೈಯಕ್ತಿಕ ನಳ ಸಂಪರ್ಕ ಕಲ್ಪಿಸಿಕೊಡಲಾಗುವುದು ಎಂದರು.ಜಿಲ್ಲಾದ್ಯಂತ ಬ್ಯಾಚ್-1 ರಲ್ಲಿ 251 ಕಾಮಗಾರಿಗಳು ಅನುಮೋದನೆಗೊಂಡಿದ್ದು, ಇವುಗಳಲ್ಲಿ 236 ಪೂರ್ಣಗೊಂಡಿದೆ ಹಾಗೂ 15 ಕಾಮಗಾರಿಗಳು ಪ್ರಗತಿಯಲ್ಲಿವೆ. ಬ್ಯಾಚ್-2 ರಲ್ಲಿ 275 ಕಾಮಗಾರಿಗಳಲ್ಲಿ 182 ಕಾಮಗಾರಿಗಳು ಪೂರ್ಣಗೊಂಡಿವೆ ಮತ್ತು 93 ಕಾಮಗಾರಿಗಳು ಪ್ರತಿಯಲ್ಲಿವೆ. ಬ್ಯಾಚ್-3 ರಲ್ಲಿ 129 ಕಾಮಗಾರಿಗಳಿಗೆ ಅನುಮೋದನೆಯಾಗಿದ್ದು, ಇವುಗಳಲ್ಲಿ 106 ಕಾಮಗಾರಿಗಳು ಪೂರ್ಣಗೊಂಡಿವೆ. 23 ಕಾಮಗಾರಿಗಳು ಪ್ರಗತಿ ಹಂತದಲ್ಲಿವೆ ಮತ್ತು ಬ್ಯಾಚ್- 4 ರಲ್ಲಿ ಒಟ್ಟು 1130 ಕಾಮಗಾರಿಗಳಿಗೆ ಅನುಮೋದನೆ ಪಡೆದಿದ್ದು, 322 ಕಾಮಗಾರಿಗಳು ಪೂರ್ಣಗೊಂಡಿವೆ. ಇನ್ನು 587 ಕಾಮಗಾರಿಗಳು ಪ್ರಗತಿಯಲ್ಲಿವೆ. ಜಿಲ್ಲೆಯಾದ್ಯಂತ ಪ್ರಗತಿಯಲ್ಲಿರುವ ಒಟ್ಟು 718 ಜಲ ಜೀವನ್ ಮಿಷನ್ ಕಾಮಗಾರಿಗಳನ್ನು ಹಂತ ಹಂತ ವಾಗಿ ಶೀಘ್ರದಲ್ಲೆ ಪೂರ್ಣಗೊಳಿಸಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ಹಸ್ತಾಂತರಿಸಲಾಗುವುದು ಎಂದು ಹೇಳಿದರು.

ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯ ಲೆಕ್ಕಾಧಿಕಾರಿ ಶಿವಕುಮಾರ್, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಕಾರ್ಯಪಾಲಕ ಅಭಿಯಂತರರಾದ ಚಿದಾನಂದ ಉಪಸ್ಥಿತರಿದ್ದರು. 30 ಕೆಸಿಕೆಎಂ 6ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಸಂಸದ ಕೋಟಾ ಶ್ರೀನಿವಾಸ್ ಪೂಜಾರಿ ಅಧ್ಯಕ್ಷತೆಯಲ್ಲಿ ಶನಿವಾರ ಜಲ ಜೀವನ್ ಮಿಷನ್ ಯೋಜನೆಯ ಪ್ರಗತಿ ಪರಿಶೀಲನಾ ಸಭೆ ನಡೆಯಿತು. ಜಿಪಂ ಸಿಇಒ ಕೀರ್ತನಾ ಇದ್ದರು.