ಕುಮಟಾ-ಶಿರಸಿ ರಸ್ತೆ ಭೂಸ್ವಾಧೀನ ಪ್ರಕ್ರಿಯೆ ಶೀಘ್ರ ಮುಗಿಸಿ

| Published : Feb 13 2024, 12:47 AM IST

ಕುಮಟಾ-ಶಿರಸಿ ರಸ್ತೆ ಭೂಸ್ವಾಧೀನ ಪ್ರಕ್ರಿಯೆ ಶೀಘ್ರ ಮುಗಿಸಿ
Share this Article
  • FB
  • TW
  • Linkdin
  • Email

ಸಾರಾಂಶ

ಕುಮಟಾ-ಶಿರಸಿ ರಸ್ತೆ ಸಾಗರ ಮಾಲಾ ಯೋಜನೆಯಲ್ಲಿ 2019ರಿಂದ ಕಾಮಗಾರಿ ಆರಂಭವಾಗಿದೆ. ಆರ್‌.ಎನ್. ಶೆಟ್ಟಿ ಕಂಪನಿ ಕಾಮಗಾರಿ ಕೈಗೊಂಡಿದ್ದು, ಶಿರಸಿ ಭಾಗದಲ್ಲಿ ಭಾಗಶಃ ಕಾಮಗಾರಿ ಮುಗಿಯುತ್ತಾ ಬಂದಿದೆ.

ಕುಮಟಾ:

ಕುಮಟಾ-ಶಿರಸಿ ರಸ್ತೆಗಾಗಿ ಭೂಸ್ವಾಧೀನ ಪ್ರಕ್ರಿಯೆ ಆದಷ್ಟು ಶೀಘ್ರ ಪರಿಹರಿಸಿ, ರಸ್ತೆ ನಿರ್ಮಾಣ ಕಾರ್ಯ ಪೂರ್ಣಗೊಳಿಸುವಂತೆ ಜಿಪಂ ಮಾಜಿ ಸದಸ್ಯ ಗಜಾನನ ಪೈ ನೇತೃತ್ವದ ನಿಯೋಗ ಇಲ್ಲಿನ ಉಪವಿಭಾಗಾಧಿಕಾರಿ ಅವರನ್ನು ಆಗ್ರಹಿಸಿದೆ.

ಈ ಕುರಿತು ಮನವಿ ನೀಡಿರುವ ಅವರು, ತಾಲೂಕಿನ ಕುಮಟಾ-ಶಿರಸಿ ರಸ್ತೆ ಸಾಗರ ಮಾಲಾ ಯೋಜನೆಯಲ್ಲಿ 2019ರಿಂದ ಕಾಮಗಾರಿ ಆರಂಭವಾಗಿದೆ. ಆರ್‌.ಎನ್. ಶೆಟ್ಟಿ ಕಂಪನಿ ಕಾಮಗಾರಿ ಕೈಗೊಂಡಿದ್ದು, ಶಿರಸಿ ಭಾಗದಲ್ಲಿ ಭಾಗಶಃ ಕಾಮಗಾರಿ ಮುಗಿಯುತ್ತಾ ಬಂದಿದೆ. ಅಲ್ಲಿಯ ರೈತರ ಮಾಲ್ಕಿ, ಜಾಗ ಭೂಸ್ವಾಧೀನ ಪ್ರಕ್ರಿಯೆ ಮುಗಿದಿದ್ದು ಹಣ ಸಹ ನೀಡಲಾಗಿದೆ. ಆದರೆ, ಕುಮಟಾ ತಾಲೂಕಿನ ಅಳಕೋಡ ಹಾಗೂ ದಿವಗಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಂತ್ರವಳ್ಳಿ. ಅಳಕೋಡ, ಬೆಳ್ಳಂಗಿ, ಆನೆಗುಂದಿ, ಹರೀಟಾ, ಕೋಡಂಬಳೆ ಗ್ರಾಮಗಳ ಭೂ ಸ್ವಾಧೀನ ಪ್ರಕ್ರಿಯೆ ಅತ್ಯಂತ ಮಂದಗತಿಯಲ್ಲಿ ಸಾಗುತ್ತಿದೆ ಎಂದು ತಿಳಿಸಿದ್ದಾರೆ.ರೈತರ ಮಾಲ್ಕಿ ಜಾಗಕ್ಕೆ ಪರಿಹಾರದ ಹಣ ಇದುವರೆಗೂ ನೀಡದೆ ಇರುವುದರಿಂದ ರಸ್ತೆಯ ಕಾಮಗಾರಿ ನಿಧಾನ ಗತಿಯಲ್ಲಿ ಸಾಗುತ್ತಿದೆ. ಕಂಪನಿ ಅವರನ್ನು ಕೇಳಿದರೆ ಭೂ ಸ್ವಾಧೀನ ಪ್ರಕ್ರಿಯೆ ಮುಗಿಯದೆ ಇರುವುದರಿಂದ ನಮ್ಮ ಕೆಲಸ ತ್ವರಿತವಾಗಿ ನಡೆಯದಂತಾಗಿದೆ ಎಂದು ತಿಳಿಸುತ್ತಿದ್ದಾರೆ. ಮಾರ್ಚ್ ತಿಂಗಳಲ್ಲಿ ಶಿರಸಿ ಶ್ರೀಮಾರಿಕಾಂಬಾ ಜಾತ್ರೆಗೆ ಈ ರಸ್ತೆಯಲ್ಲಿ ಸಾವಿರಾರು ವಾಹನಗಳ ಸಂಚಾರ ಇರುವುದರಿಂದ ಟ್ರಾಫಿಕ್ ಜಾಮ್ ಆಗಲಿದೆ. ಈ ಎಲ್ಲ ಕಾರಣಗಳಿಂದ ಕೂಡಲೇ ಪರಿಹಾರ ನೀಡಿ ಭೂಸ್ವಾಧೀನ ಪ್ರಕ್ರಿಯೆ ಮಾಡಿ, ರಸ್ತೆ ನಿರ್ಮಾಣ ಕಾರ್ಯವನ್ನು ಶೀಘ್ರದಲ್ಲಿ ಪೂರ್ಣಗೊಳಿಸುವಂತೆ ಗಜಾನನ ಪೈ ಆಗ್ರಹಿಸಿದ್ದಾರೆ.