ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಆದ್ಯತೆ ಮೇರೆಗೆ ಪೂರ್ಣಗೊಳಿಸಿ - ಸಂಸದ ಬೊಮ್ಮಾಯಿ

| Published : Sep 28 2024, 01:33 AM IST / Updated: Sep 28 2024, 12:19 PM IST

ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಆದ್ಯತೆ ಮೇರೆಗೆ ಪೂರ್ಣಗೊಳಿಸಿ - ಸಂಸದ ಬೊಮ್ಮಾಯಿ
Share this Article
  • FB
  • TW
  • Linkdin
  • Email

ಸಾರಾಂಶ

ಜಿಲ್ಲೆಯ ತಡಸ, ಆಣೂರ ಹಾಗೂ ಹಂಸಭಾವಿ ಈ ಮೂರು ಬಹುಗ್ರಾಮ ಕುಡಿಯುವ ನೀರಿನ ಕಾಮಗಾರಿಗಳನ್ನು ಡಿಸೆಂಬರ್ ಅಂತ್ಯದೊಳಗೆ ಆದ್ಯತೆ ಮೇರೆಗೆ ಪೂರ್ಣಗೊಳಿಸಬೇಕು ಎಂದು ಅಧಿಕಾರಿಗಳಿಗೆ ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ತಾಕೀತು ಮಾಡಿದರು.

ಹಾವೇರಿ: ಜಿಲ್ಲೆಯ ತಡಸ, ಆಣೂರ ಹಾಗೂ ಹಂಸಭಾವಿ ಈ ಮೂರು ಬಹುಗ್ರಾಮ ಕುಡಿಯುವ ನೀರಿನ ಕಾಮಗಾರಿಗಳನ್ನು ಡಿಸೆಂಬರ್ ಅಂತ್ಯದೊಳಗೆ ಆದ್ಯತೆ ಮೇರೆಗೆ ಪೂರ್ಣಗೊಳಿಸಬೇಕು ಎಂದು ಅಧಿಕಾರಿಗಳಿಗೆ ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ತಾಕೀತು ಮಾಡಿದರು.

ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಗುರುವಾರ ದಿಶಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಈ ಕಾಮಗಾರಿಗಳು ಬಹಳ ಮಂದಗತಿಯಲ್ಲಿ ಸಾಗುತ್ತಿವೆ, ಗುತ್ತಿಗೆದಾರರು ಹೇಳಿದಂತೆ ಇಲ್ಲಿ ಹೇಳಬೇಡಿ ಕಾಳಜಿಯಿಂದ ಕಾಮಗಾರಿ ಪೂರ್ಣಗೊಳಿಸುವ ಮೂಲಕ ಬರುವ ಬೇಸಿಗೆಯಲ್ಲಿ ಗ್ರಾಮೀಣ ಪ್ರದೇಶಗಳಿಗೆ ಕುಡಿಯುವ ನೀರು ಪೂರೈಸುವ ಕೆಲಸವಾಗಬೇಕು ಎಂದು ಸೂಚನೆ ನೀಡಿದರು.

ಕಾಮಗಾರಿಗೆ ಅರಣ್ಯ ಕ್ಲಿಯರೆನ್ಸ್ ಅವಶ್ಯಕತೆ, ಚಾಕವೆಲ್, ವಿದ್ಯುತ್ ಸಂಪರ್ಕ ಕೆಲಸ ಸೇರಿದಂತೆ ಕಾಮಗಾರಿಗಳು ಯಾವ ಹಂತದಲ್ಲಿ ನಡೆಯುತ್ತಿದೆ ಎಂಬ ಮಾಹಿತಿ ನೀಡಿದ ಅಭಿಯಂತರರನ್ನು ತರಾಟೆಗೆ ತೆಗೆದುಕೊಂಡ ಸಂಸದರು, ಯಾವುದೇ ಕೆಲಸಗಳನ್ನು ಸರಿಯಾಗಿ ಮಾಡಿಲ್ಲ, ಇನ್ನು ಎಷ್ಟು ದಿನ ಬೇಕು ನಿಮಗೆ? ಕಾರಣ ಹೇಳುವುದು ಬಿಟ್ಟು ಕೆಲಸ ಮಾಡುವುದುನ್ನು ಕಲಿಯಿರಿ. ನಾಳೆಯಿಂದ ವಿದ್ಯುತ್ ಸಂಪರ್ಕ ಕೆಲಸ ಆರಂಭಿಸಬೇಕು ಎಂದು ಹೆಸ್ಕಾಂ ಅಭಿಯಂತರರಿಗೆ ಸೂಚಿಸಿದ ಅವರು, ಅರಣ್ಯ ಕ್ಲಿಯರೆನ್ಸ್‌ಗೆ ಸರ್ಕಾರಕ್ಕೆ ಪತ್ರಬರೆಯುವಂತೆ ಜಿಲ್ಲಾಧಿಕಾರಿಗಳಿಗೆ ನಿರ್ದೇಶನ ನೀಡಿದರು. 

ಚರಂಡಿ ನಿರ್ಮಾಣ: ಜನರಿಗೆ ಉಪಯೋಗವಾಗುವ ರೀತಿಯಲ್ಲಿ ಮನರೇಗಾ ಕ್ರಿಯಾ ಯೋಜನೆ ತಯಾರಿಸಬೇಕು. ಗ್ರಾಮಗಳಲ್ಲಿ ಕಾಂಕ್ರಿಟ್ ರಸ್ತೆ ನಿರ್ಮಾಣ ಮಾಡಲಾಗಿದೆ. ಆದರೆ ಚರಂಡಿ ನೀರು ರಸ್ತೆ ಮೇಲೆ ಹರಿಯುತ್ತಿದೆ.ಇದರಿಂದ ಮಹಿಳೆಯರು, ಮಕ್ಕಳು, ಹಿರಿಯರಿಗೆ ತೊಂದರೆಯಾಗುತ್ತಿದೆ. 

ಹಾಗಾಗಿ ನರೇಗಾದಲ್ಲಿ ಚರಂಡಿ ನಿರ್ಮಾಣಕ್ಕೆ ಆದ್ಯತೆ ನೀಡಬೇಕು. ಮುಖ್ಯ ಚರಂಡಿಗಳನ್ನು ನಿರ್ಮಾಣ ಮಾಡುವ ಮೂಲಕ ಗ್ರಾಮಗಳ ಸ್ವಚ್ಛತೆಗೆ ಆದ್ಯತೆ ನೀಡಬೇಕು ಎಂದು ಸೂಚನೆ ನೀಡಿದರು.ಜಲಜೀವನ್ ಮಿಷನ್ ಯೋಜನೆಗೆ ರು.800 ಕೋಟಿ ಅನುದಾನ ವೆಚ್ಚ ಮಾಡಲಾಗುತ್ತಿದೆ. ಪ್ರಾರಂಭದಿಂದಲೇ ಗುಣಮಟ್ಟ ಕಾಯ್ದುಕೊಳ್ಳಬೇಕು. ಜನರಿಗೆ ಸಿಹಿ ನೀರು ಕೊಡುವ ಯೋಜನೆ ಇದಾಗಿದ್ದು, ಅತ್ಯಂತ ಜವಾಬ್ದಾರಿಯಿಂದ ಗುಣಮಟ್ಟದ ಕಾಮಗಾರಿ ಮಾಡಬೇಕು. ಈ ಯೋಜನೆ ಯಶಸ್ಸಿಗೆ ಎಲ್ಲರೂ ಶ್ರಮಮವಹಿಸಬೇಕು. ಕಚೇರಿಯಲ್ಲಿ ಕುಳಿತುಕೊಳ್ಳದೇ ಕಾಮಗಾರಿ ಸ್ಥಳಗಳಿಗೆ ಭೇಟಿ ನೀಡುವ ಮೂಲಕ ಕಾಮಗಾರಿ ಉತ್ತಮ ಗುಣಮಟ್ಟ ಕಾಯ್ದುಕೊಳ್ಳಬೇಕು ಎಂದು ಸೂಚನೆ ನೀಡಿದರು. 

ಎಲ್ಲ ವಾರ್ಡ್‌ಗಳಿಗೆ ನೀರು:ನೀರು ಲಭ್ಯವಿದ್ದರೂ ಹಾವೇರಿ ನಗರದ ವಿವಿಧ ವಾರ್ಡ್‌ಗಳಿಗೆ ನೀರು ಪೂರೈಕೆಯಾಗುತ್ತಿಲ್ಲ. ಕುಡಿಯುವ ನೀರು ಸರಬರಾಜಿನಲ್ಲಿ ಯಾರೂ ನಿರ್ಲಕ್ಷ್ಯ ವಹಿಸಬಾರದು. ಎಲ್ಲ ವಾರ್ಡ್‌ಗಳಿಗೆ ನೀರು ಪೂರೈಕೆಯಾಗುವಂತೆ ಕ್ರಿಯಾಯೋಜನೆ ತಯಾರಿಸಿ ವಾಲ್ ಸಿಸ್ಟಂ ಅಳವಡಿಸುವ ಮೂಲಕ ಎಲ್ಲ ವಾರ್ಡುಗಳಿಗೆ ನೀರು ಪೂರೈಸುವ ಕಾರ್ಯ ಶೀಘ್ರವಾಗಿ ಮಾಡಬೇಕು ಎಂದು ನಗರಸಭೆ ಅಭಿಯಂತರರಿಗೆ ಸೂಚನೆ ನೀಡಿದರು. ನೀರು ಪೂರೈಕೆ ಯೋಜನೆ ಕಾಮಗಾರಿ ವಿಳಂಬ ಮಾಡುತ್ತಿರುವ ಗುತ್ತಿಗೆದಾರರಿಗೆ ಟರ್ಮಿನೇಷನ್ ಕಳುಹಿಸಿ ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಜಿಲ್ಲೆಯಲ್ಲಿ ಕೈಗಾರಿಕಾ ಟೌನ್‌ಶಿಪ್ ಮಾಡುವುದು ನನ್ನ ಆಸೆ. ಹಾಗಾಗಿ ಇದಕ್ಕೆ ಅಗತ್ಯವಾದ ಸರ್ಕಾರಿ ಅಥವಾ ಖಾಸಗಿ ಜಮೀನು ಗುರುತಿಸಬೇಕು ಎಂದು ಜಿಲ್ಲಾಧಿಕಾರಿಗಳಿಗೆ ನಿರ್ದೇಶನ ನೀಡಿದರು. ವಿವಿಧ ಯೋಜನೆಗಳಡಿ ಮನೆಗಳ ಮಂಜೂರಾತಿ ವಿಳಂಬ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದ ಸಂಸದರು. ಕೂಡಲೇ ಅರ್ಹ ಫಲಾನುಭವಿಗಳಿಗೆ ಮನೆಗಳ ಮಂಜೂರು ಮಾಡುವಂತೆ ಸೂಚನೆ ನೀಡಿದರು.

ಕೃಷಿ,ಶಿಕ್ಷಣ ಇಲಾಖೆ, ಆರೋಗ್ಯ ಇಲಾಖೆ, ಕೈಗಾರಿಕೆ, ಸಮಾಜ ಕಲ್ಯಾಣ ಇಲಾಖೆ, ಪಶು ಸಂಗೋಪನೆ ಇಲಾಖೆಗಳ ಪ್ರಗತಿ ಪರಿಶೀಲನೆ ನಡೆಸಿದ ಅವರು, ಯಾವುದೇ ಕೆಲಸದಲ್ಲಿ ಗುರಿ ಸಾಧನೆ ಆಗುತ್ತಿಲ್ಲ, ನಿಮ್ಮಲ್ಲಿ ಕೆಲಸ ಮಾಡುವ ಉತ್ಸಾಹ ಕಾಣುತ್ತಿಲ್ಲ, ಕೆಲಸ ಮಾಡದಿರಲು ನೂರು ಕಾರಣಗಳು ಸಿಗುತ್ತವೆ. ಆದರೆ ಕೆಲಸ ಮಾಡಲು ಯಾವುದೇ ಕಾರಣ ಬೇಕಿಲ್ಲ. ಗುರಿ ಸಾಧನೆಗೆ ಮನಸ್ಸು ಮಾಡಬೇಕು.

 ನಿಮ್ಮ ಕೆಲಸದ ಶೈಲಿ ಬದಲಾಗಬೇಕು ಎಂದರು. ಸರ್ಕಾರಗಳು ಯೋಜನೆ ರೂಪಿಸುತ್ತವೆ, ಆ ಯೋಜನೆಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸುವ ಮೂಲಕ ಸಮಾಜದ ಕಟ್ಟಕಡೆಯ ವ್ಯಕ್ತಿಗೆ ತಲುಪಿಸುವ ಗುರುತರ ಜವಾಬ್ದಾರಿ ಅಧಿಕಾರಿಗಳ ಮೇಲಿದೆ. ನಾವು-ನೀವು ಯಾರೂ ಶಾಸ್ವತವಲ್ಲ, ಆದರೆ ನಾವು ಮಾಡುವ ಕೆಲಸಗಳು ಶಾಶ್ವತವಾಗಿರುತ್ತವೆ. ಇದನ್ನು ಅರಿತುಕೊಂಡು ಸಕಾರಾತ್ಮವಾಗಿ ಕೆಲಸ ಮಾಡಬೇಕು ಎಂದು ಸೂಚನೆ ನೀಡಿದರು. 

ಜಿಲ್ಲೆ ಯಾವುದೇ ಕ್ಷೇತ್ರದಲ್ಲಿ ಹಿಂದೆ ಉಳಿಯಬಾರದು. ರೈತರು, ಆರೋಗ್ಯ, ಶಿಕ್ಷಣ, ಮಹಿಳೆ ಮತ್ತು ಮಕ್ಕಳ ಅಭಿವೃದ್ಧಿ, ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗಗಳ ಕಲ್ಯಾಣ, ಹಿಂದುಳಿದ ವರ್ಗಗಳ ಸೇರಿದಂತೆ ಜಿಲ್ಲೆಯ ಅಭಿವೃದ್ಧಿಗೆ ತಂಡವಾಗಿ ಕೆಲಸ ಮಾಡಬೇಕು. ಮುಂದಿನ ಸಭೆಯಲ್ಲಿ ಎಲ್ಲ ಇಲಾಖೆಗಳು ಕ್ರಿಯಾಶೀಲರಾಗಿ ಗುರಿಸಾಧನೆ ಮಾಡಬೇಕು. ಇಲ್ಲವಾದಲ್ಲಿ ಆಯಾ ಇಲಾಖೆ ಮುಖ್ಯಸ್ಥರಿಗೆ ಪತ್ರೆ ಬರೆಯಲಾಗುವುದು ಎಂದು ಎಚ್ಚರಿಸಿದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅಕ್ಷಯ್ ಶ್ರೀಧರ್ ಅವರು, ಬಹುಗ್ರಾಮ ಕುಡಿಯುವ ನೀರಿನ ಯೋಜನೆಗಳ ವಿವರ, ನರೇಗಾ, ವಿವಿಧ ವಸತಿ ಯೋಜನೆಗಳು, ಸ್ವಚ್ಛಭಾರತ ಅಭಿಯಾನ ಕಾರ್ಯಕ್ರಮಗಳ ಪ್ರಗತಿ ಕುರಿತು ಸಭೆಗೆ ಮಾಹಿತಿ ನೀಡಿದರು.ಸಭೆಯಲ್ಲಿ ಶಾಸಕರಾದ ರುದ್ರಪ್ಪ ಲಮಾಣಿ, ಶ್ರೀನಿವಾಸ ಮಾನೆ, ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ದಾನಮ್ಮನವರ, ಜಿಪಂ ಉಪ ಕಾರ್ಯದರ್ಶಿ ಡಾ.ರಂಗಸ್ವಾಮಿ ಉಪಸ್ಥಿತರಿದ್ದರು.