ಅಯೋಧ್ಯೆಯಲ್ಲಿ ಸಂಪೂರ್ಣ ರಾಮಾಯಣ ನಾಟಕ ಪ್ರದರ್ಶನ

| Published : Mar 09 2025, 01:48 AM IST

ಸಾರಾಂಶ

ಉತ್ತರ ಪ್ರದೇಶದ ರಾಮಜನ್ಮ ಸ್ಥಳ ಅಯೋಧ್ಯೆಯ ರಾಮಕಥಾ ಪಾರ್ಕ್‌ನಲ್ಲಿ ಚನ್ನರಾಯಪಟ್ಟಣ ಹಾಗೂ ಕೆ. ಆರ್. ಪೇಟೆ ತಾಲೂಕಿನ ಜನತೆ ಸೇರಿ ಆನೆಗೋಳ ಗ್ರಾಮ ದೇವತೆ ಶ್ರೀ ಆನೆಗೋಳದಮ್ಮ ಹಾಗೂ ಶ್ರೀ ಆಂಜನೇಯ ಸ್ವಾಮಿ ಕೃಪಾ ಪೋಷಿತ ನಾಟಕ ಮಂಡಳಿ ವತಿಯಿಂದ ಸಂಪೂರ್ಣ ರಾಮಾಯಣ ಅಥವಾ ಶ್ರೀ ರಾಮ ರಾವಣನ ಯುದ್ಧ ಎಂಬ ಪೌರಾಣಿಕ ನಾಟಕವು ಬೋಳಮಾರನಹಳ್ಳಿ ಗ್ರಾಮದ ನಿವೃತ್ತ ಎಂಜಿನಿಯರ್ ಜಯಲಿಂಗೇಗೌಡ, ಬಿ.ಎಸ್. ಮಂಜುನಾಥ್ ನೇತೃತ್ವದಲ್ಲಿ ವಿಜೃಂಭಣೆಯಿಂದ ನಡೆಯಿತು.

ಕನ್ನಡಪ್ರಭ ವಾರ್ತೆ ಚನ್ನರಾಯಪಟ್ಟಣ

ಉತ್ತರ ಪ್ರದೇಶದ ರಾಮಜನ್ಮ ಸ್ಥಳ ಅಯೋಧ್ಯೆಯ ರಾಮಕಥಾ ಪಾರ್ಕ್‌ನಲ್ಲಿ ಚನ್ನರಾಯಪಟ್ಟಣ ಹಾಗೂ ಕೆ. ಆರ್. ಪೇಟೆ ತಾಲೂಕಿನ ಜನತೆ ಸೇರಿ ಆನೆಗೋಳ ಗ್ರಾಮ ದೇವತೆ ಶ್ರೀ ಆನೆಗೋಳದಮ್ಮ ಹಾಗೂ ಶ್ರೀ ಆಂಜನೇಯ ಸ್ವಾಮಿ ಕೃಪಾ ಪೋಷಿತ ನಾಟಕ ಮಂಡಳಿ ವತಿಯಿಂದ ಸಂಪೂರ್ಣ ರಾಮಾಯಣ ಅಥವಾ ಶ್ರೀ ರಾಮ ರಾವಣನ ಯುದ್ಧ ಎಂಬ ಪೌರಾಣಿಕ ನಾಟಕವು ಬೋಳಮಾರನಹಳ್ಳಿ ಗ್ರಾಮದ ನಿವೃತ್ತ ಎಂಜಿನಿಯರ್ ಜಯಲಿಂಗೇಗೌಡ, ಬಿ.ಎಸ್. ಮಂಜುನಾಥ್ ನೇತೃತ್ವದಲ್ಲಿ ವಿಜೃಂಭಣೆಯಿಂದ ನಡೆಯಿತು.

ಅಯೋಧ್ಯೆಯಲ್ಲಿ ಪೌರಾಣಿಕ ನಾಟಕ ನೇತೃತ್ವ ವಹಿಸಿರುವ ಕಲಾವಿದ ನಿವೃತ್ತ ಎಂಜಿನಿಯರ್ ಜಯಲಿಂಗೇಗೌಡ ಮಾತನಾಡಿ, ಸಾಂಸ್ಕೃತಿಕ, ಆಧ್ಯಾತ್ಮಿಕತೆಯ ರಾಜಧಾನಿಯಂತಿರುವ ಉತ್ತರ ಪ್ರದೇಶದಲ್ಲಿ ಇದೀಗ ಅಯೋಧ್ಯೆಯೇ ದೇಶದ ಗಮನ ಸೆಳೆದು ಹಿಂದೂಗಳ ಆರಾಧ್ಯ ದೈವ, ಮಾರ್ಯದಾ ಪುರುಷೋತ್ತಮ ಶ್ರೀರಾಮನ ಜನಸ್ಥಳವಾದ ಅಯೋಧ್ಯೆಯಲ್ಲಿ ರಾಮಲಲ್ಲಾನ ಭವ್ಯಮಂದಿರ ಲೋಕಾರ್ಪಣೆಗೊಂಡು ಒಂದು ವರ್ಷ ಪೂರ್ಣಗೊಂಡಿದೆ. ಇಂತಹ ಪವಿತ್ರ ಕ್ಷೇತ್ರಕ್ಕೆ ಹೋಗುವುದೇ ಸೌಭಾಗ್ಯ. ಇಂತಹ ಸಂದರ್ಭದಲ್ಲಿ ನಮ್ಮ ಶ್ರೀ ಆನೆಗೋಳದಮ್ಮ ಹಾಗೂ ಶ್ರೀ ಆಂಜನೇಯ ಸ್ವಾಮಿ ಕೃಪಾ ಪೋಷಿತ ನಾಟಕ ಮಂಡಳಿ ವತಿಯಿಂದ ಸಂಪೂರ್ಣ ರಾಮಾಯಣ ಅಥವಾ ಶ್ರೀ ರಾಮ, ರಾವಣನ ಯುದ್ಧ ಎಂಬ ಸುಂದರ ಪೌರಾಣಿಕ ನಾಟಕವನ್ನು ರಾಮನ ಜನ್ಮಸ್ಥಳದಲ್ಲೆ ನಾಟಕ ಪ್ರದರ್ಶಿಸಲು ನಮಗೆ ಅವಕಾಶ ಸಿಕ್ಕಿರುವುದು ನಮ್ಮ ಪೂರ್ವ ಜನ್ಮದ ಪುಣ್ಯ ಹಾಗೂ ಪೌರಾಣಿಕ ನಾಟಕ ಕಲಾವಿದರಿಗೆ ಸಂದ ಗೌರವ ಎಂದು ಹರ್ಷ ವ್ಯಕ್ತಪಡಿಸಿದರು. ನಾವು ರಾಜ್ಯದಾದ್ಯಂತ ಹಲವು ಭಾಗಗಳಲ್ಲಿ ನಾಟಕಗಳನ್ನು ಪ್ರದರ್ಶನ ನೀಡಿದ್ದೇವೆ. ಜೊತೆಗೆ ನಮ್ಮ ಬೆನ್ನುಲುಬಾಗಿ ಕಲಾತಂಡದ ಸದಸ್ಯರು ಮತ್ತು ಕುಟುಂಬಸ್ಥರ ಜೊತೆ ಆನೆಗೊಳ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಗ್ರಾಮಸ್ಥರು ನಮ್ಮ ಜೊತೆ ಅಯೋಧ್ಯೆ ನಗರಕ್ಕೆ ರೈಲು, ವಿಮಾನಗಳಲ್ಲಿ ಸುಮಾರು ೧೭೦ ಕಲಾಭಿಮಾನಿಗಳು ಬಂದು ನಮ್ಮ ನಾಟಕವನ್ನು ನೋಡುತ್ತಿರುವುದು ನಮ್ಮ ಪೂರ್ವ ಜನ್ಮದ ಪುಣ್ಯ ಎಂದು ತಿಳಿಸಿದರು.

ಚನ್ನರಾಯಪಟ್ಟಣ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಹಡೇನಹಳ್ಳಿ ಲೋಕೇಶ್ ಮಾತನಾಡುತ್ತಾ, ಚನ್ನರಾಯಪಟ್ಟಣದಿಂದ ಧ್ವನಿವರ್ಧಕ, ನಾಟಕದ ದೃಶ್ಯಗಳಿಗೆ ಬೇಕಾದ ಪರದೆ ಕಿರೀಟ ವಸ್ತ್ರ ಇತರೆ ಪರಿಕರಗಳನ್ನು ತೆಗೆದುಕೊಂಡು ಹೋಗಿ ನಮ್ಮ ಕರ್ನಾಟಕದ ಸಂಸ್ಕೃತಿಯನ್ನು ಅಯೋಧ್ಯೆಯಲ್ಲಿ ಪ್ರದರ್ಶನ ಮಾಡಿದ್ದು ಶ್ಲಾಘನೀಯವಾದ ವಿಚಾರ ಎಂದು ತಿಳಿಸಿದರು.

ವಿಮಾ ಸಲಹೆಗಾರ ದಯಾನಂದ ಮಾತನಾಡುತ್ತಾ ಶ್ರೀ ರಾಮನ ತದ್ರೂಪವಾದ ಜೈಲಿಂಗೇಗೌಡರು ಇಷ್ಟೊಂದು ಜನರನ್ನ ಅಯೋಧ್ಯೆಗೆ ಕರೆದುಕೊಂಡು ಬಂದು ಕಾಶಿ ವಿಶ್ವನಾಥನ ದರ್ಶನ, ಅಯೋಧ್ಯ ರಾಮಲಲ್ಲ ದೇವಸ್ಥಾನ, ಪ್ರಯಾಗ್‌ರಾಜ್‌ನ ಕುಂಭಮೇಳಕು ಭೇಟಿ ಕೊಡಿಸಿರುವುದು ಸಾಹಸದ ವಿಚಾರ ಎಂದು ತಿಳಿಸಿದರು.

ಎಚ್.ಎಸ್.ಎಸ್.ಕೆ. ಸಕ್ಕರೆ ಕಾರ್ಖಾನೆ ಮಾಜಿ ನಿರ್ದೆಶಕ ಬೋಳಮಾರನಹಳ್ಳಿ ಬಿ.ಎಸ್. ಮಂಜುನಾಥ್ ಮಾತನಾಡಿದರು.ರಾಮಾಯಣ ನಾಟಕದಲ್ಲಿ ಜಯಲಿಂಗೇಗೌಡ ರಾಮನ ಪಾತ್ರ ಮಾಡಿದರೆ, ಬಿ.ಎಸ್.ಮಂಜುನಾಥ್ (ರಾವಣ), ಚೈತ್ರ(ಸೀತೆ), ಸಂತೋಷ (ಲಕ್ಷ್ಮಣ), ಪ್ರಕಾಶ (ದಶರಥ), ನಿಂಗರಾಜು(ಭರತ), ಶಿವಲಿಂಗು (ಆಂಜನೇಯ), ಕೃಷ್ಣಮೂರ್ತಿ ರಾವ್ (ವಾಲಿ), ರಮೇಶ್ (ವಸಿಷ್ಠ), ಶೇಖರ್ (ಶತ್ರುಜ್ಞ), ಶಂಕ್ರೇಗೌಡ (ಸೂತ್ರಧಾರಿ), ಶ್ರೀನಿವಾಸ ಮೂರ್ತಿ(ಸುಗ್ರೀವ), ಪುಟ್ಟರಾಜು (ಜಾಂಬವಂಥ), ಸೋಮಾಚಾರ್ (ಸುಮಂತ), ಹರೀಶ್ (ಪ್ರಹಸ್ತ ) ಇತರರು ಗಳು ತಮ್ಮ ಪಾತ್ರಗಳನ್ನು ನಿರ್ವಹಿಸಿ ಕರ್ನಾಟಕ ರಾಜ್ಯದ ಕಲಾ ಪ್ರದರ್ಶನವನ್ನು ನೀಡಿ ಕೀರ್ತಿ ತಂದಿದ್ದಾರೆ ಎಂದು ಸಮಾಜ ಸೇವಕಿ ಲಾವಣ್ಯ ಮಂಜುನಾಥ್ ಹರ್ಷವ್ಯಕ್ತಪಡಿಸಿದ್ದಾರೆ.

ಈ ಸಂದರ್ಭದಲ್ಲಿ ಡ್ರಾಮಾ ಮಾಸ್ಟರ್‌ ಪ್ರಜ್ವಲ್ ಜಗದೀಶ್, ದಶರಥ, ಸಂತೋಷ, ನಿಂಗರಾಜು, ಕೃಷ್ಣಮೂರ್ತಿ, ರಮೇಶ್, ಶ್ರೀನಿವಾಸ್, ಮೂರ್ತಿ, ಪುಟ್ಟರಾಜು, ಸೋಮಾಚಾರ, ಹರೀಶ್, ಚೈತ್ರ, ಶೋಭಾ, ಸೇರಿದಂತೆ ಆನೆಗೊಳ ಸರ್ವೆ ಮಂಜುನಾಥ್, ಅಂಚೇಬೀರನಹಳ್ಳಿ ಮಂಜುನಾಥ್, ಶೀಳನೆರೆ ಮಂಜೇಗೌಡ, ಕಡಹೆಮ್ಮಿಗೆ ಮೀಸೆ ರಾಮೇಗೌಡ, ಲೋಕೇಶ್ ಹಡೇನಹಳ್ಳಿ, ವಿಮಾ ಸಲಹೆಗಾರ ದಯಾನಂದ ಶೆಟ್ಟಿಹಳ್ಳಿ, ಹೇಮಂತ್, ವೈದ್ಯ ನಸಿಂಗ್ ಅಂಡ್ ಪ್ಯಾರಾ ಮೆಡಿಕಲ್ ಶಾಲೆಯ ಪ್ರಾಂಶುಪಾಲ, ಅರುಣ್ ಕುಮಾರ್ ಸೇರಿದಂತೆ ಸುಮಾರು ೧೭೦ಕ್ಕೂ ಹೆಚ್ಚಿನ ಕೆ.ಆರ್‌.ಪೇಟೆ ತಾಲೂಕಿನ ಗ್ರಾಮಸ್ಥರು ಹಾಜರಿದ್ದು, ನಾಟಕವನ್ನು ವೀಕ್ಷಣೆ ಮಾಡಿದ್ದು, ವಿಶೇಷವಾಗಿತ್ತು.