ರಸ್ತೆ ಕಾಮಗಾರಿಗಳನ್ನು ಶೀಘ್ರ ಪೂರ್ಣಗೊಳಿಸಿ: ಕೇಂದ್ರ ಸಚಿವ ಜೋಶಿ

| Published : Jul 07 2024, 01:27 AM IST

ರಸ್ತೆ ಕಾಮಗಾರಿಗಳನ್ನು ಶೀಘ್ರ ಪೂರ್ಣಗೊಳಿಸಿ: ಕೇಂದ್ರ ಸಚಿವ ಜೋಶಿ
Share this Article
  • FB
  • TW
  • Linkdin
  • Email

ಸಾರಾಂಶ

ನಗರದ ಪ್ರವಾಸಿ ಮಂದಿರದಲ್ಲಿ ಶನಿವಾರ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಸೂಚನೆ ವಿವಿಧ ಇಲಾಖೆಗಳ ಅಧಿಕಾರಿಗಳ ಸಭೆ ನಡೆಸಿದರು.

ಕನ್ನಡಪ್ರಭ ವಾರ್ತೆ ಹುಬ್ಬಳ್ಳಿ

ಹುಬ್ಬಳ್ಳಿ- ಧಾರವಾಡ ಮಹಾನಗರದಲ್ಲಿ ನಡೆಯುತ್ತಿರುವ ರಸ್ತೆ ಕಾಮಗಾರಿಗಳನ್ನು ಶೀಘ್ರವೇ ಪೂರ್ಣಗೊಳಿಸುವಂತೆ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಸೂಚನೆ ನೀಡಿದರು.

ಅವರು ನಗರದ ಪ್ರವಾಸಿ ಮಂದಿರದಲ್ಲಿ ಶನಿವಾರ ಹಮ್ಮಿಕೊಂಡಿದ್ದ ವಿವಿಧ ಇಲಾಖೆಗಳ ಅಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು.

ರಸ್ತೆ ಕಾಮಗಾರಿ ಅಪೂರ್ಣಗೊಂಡಿರುವ ಕೆಲವು ಕೆಲವು ಕಡೆ ಭೂಸ್ವಾಧೀನ ಆಗಿಲ್ಲ ಎಂಬ ಸಬೂಬು ಹೇಳುವುದು ಸರಿಯಲ್ಲ. ಕಳೆದ ಆರು ತಿಂಗಳುಗಳಿಂದ ಇದೇ ಮಾತನ್ನು ಕೇಳುತ್ತಿದ್ದೇನೆ. ಉಣಕಲ್ಲ, ತತ್ವದರ್ಶ ಆಸ್ಪತ್ರೆ ಸೇರಿ ವಿವಿಧೆಡೆ ರಸ್ತೆ ಕಾಮಗಾರಿ ಪೂರ್ಣಗೊಂಡಿಲ್ಲ. ಭೂಸ್ವಾಧೀನ ಆಗದೇ ಇರುವ ಜಾಗ ಬಿಟ್ಟು ಬೇರೆಡೆ ಕಾಮಗಾರಿ ನಡೆಸಿ ಎಂದು ಪಾಲಿಕೆ ಆಯುಕ್ತ ಡಾ. ಈಶ್ವರ ಉಳ್ಳಾಗಡ್ಡಿ ಅವರಿಗೆ ಸೂಚನೆ ನೀಡಿದರು.

ಅಧಿಕಾರಿಗಳ ತರಾಟೆಗೆ:

ಹಲವು ಕಡೆಗಳಲ್ಲಿ ಕಾಮಗಾರಿಗಳು ಅರ್ಧಕ್ಕೆ ನಿಂತಿವೆ. ಎಲ್ಲಿ ಯಾವ ಕೆಲಸ ಆಗಿಲ್ಲವೋ ಅವುಗಳನ್ನು ನಮ್ಮ ಗಮನಕ್ಕೆ ತೆಗೆದುಕೊಂಡು ಬನ್ನಿ. ಕೆಲವೆಡೆ ಅನುದಾನ ನೀಡಿದರೂ ಸಹ ಪೂರ್ಣ ಪ್ರಮಾಣದ ಕೆಲಸ ಏಕೆ ಆಗುತ್ತಿಲ್ಲ ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಹಾಗೂ ರಾಜ್ಯ ಹೆದ್ದಾರಿ ಅಧಿಕಾರಿಗಳನ್ನು ಸಚಿವರು ತರಾಟೆಗೆ ತೆಗೆದುಕೊಂಡರು.

ರಾಷ್ಟ್ರೀಯ ಹೆದ್ದಾರಿಯ 15 ಕಾಮಗಾರಿಗಳು ಮಂದಗತಿಯಲ್ಲಿ ಸಾಗುತ್ತಿರುವುದು ಗಮನಕ್ಕಿದೆ ಎಂದರು. ಇದಕ್ಕೆ ಉತ್ತರಿಸಿದ ಅಧಿಕಾರಿ, ಮೂರು ಹಂತದಲ್ಲಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಬೇಕು. ಹಾಗಾಗಿ ನಿಧನವಾಗುತ್ತಿದೆ. ತ್ವರಿತವಾಗಿ ಪರಿಹಾರ ಕೊಟ್ಟು ಕಾಮಗಾರಿ ಆರಂಭಿಸುವುದಾಗಿ ಹೇಳಿಕೊಂಡರು. ಕೆಲವು ಕಾಮಗಾರಿಗಳು ನಡೆದಿಲ್ಲ. ಅವುಗಳ ಬಗ್ಗೆ ಶಾಸಕರೊಂದಿಗೆ ಕುಳಿತುಕೊಂಡು ಚರ್ಚಿಸಿ ನಿರ್ಧರಿಸಬೇಕು. ಅಂಡರ್‌ಪಾಸ್‌, ಪಾದಚಾರಿ ಮಾರ್ಗ ಸೇರಿದಂತೆ ವಿವಿಧ ಕಾಮಗಾರಿಗಳನ್ನು ಶೀಘ್ರವಾಗಿ ಕೈಗೆತ್ತಿಕೊಳ್ಳಬೇಕು. ಒಂದು ವೇಳೆ ಯಾವುದೇ ಅಡ್ಡಿ ಬಂದರೆ ನನ್ನ ಗಮನಕ್ಕೆ ತರಬೇಕು. ಈ ಕುರಿತು ಸಂಬಂಧಿಸಿದ ಸಚಿವರೊಂದಿಗೆ ಮಾತನಾಡಿ ಸಮಸ್ಯೆ ಪರಿಹರಿಸುವ ಕಾರ್ಯ ಮಾಡುತ್ತೇನೆ ಎಂದರು.

ಈ ಸಂದರ್ಭದಲ್ಲಿ ಪ್ರತಿಪಕ್ಷದ ಉಪನಾಯಕ, ಶಾಸಕ ಅರವಿಂದ ಬೆಲ್ಲದ, ಜಿಲ್ಲಾಧಿಕಾರಿ ದಿವ್ಯಪ್ರಭು ಸೇರಿದಂತೆ ವಿವಿಧ ಅಧಿಕಾರಿಗಳು ಪಾಲ್ಗೊಂಡಿದ್ದರು.