ಕೈಗಾ 5, 6ನೇ ಘಟಕದ ಪ್ರಥಮ ಕಾಂಕ್ರೀಟೀಕರಣಕ್ಕೆ ಚಾಲನೆ

ಕನ್ನಡಪ್ರಭ ವಾರ್ತೆ ಕಾರವಾರ

ದೇಶದಲ್ಲಿ ಅಣು ವಿದ್ಯುತ್ ಘಟಕಗಳ ಸ್ಥಾಪನೆ ಮತ್ತು ನಿರ್ವಹಣೆಯಲ್ಲಿ ಸಂಪೂರ್ಣ ಸ್ವದೇಶಿ ತಂತ್ರಜ್ಞಾನ ಮತ್ತು ಯಂತ್ರೋಪಕರಣ ಅಳವಡಿಸಿಕೊಳ್ಳುವ ಮೂಲಕ ಸಂಪೂರ್ಣ ಸ್ವಾವಲಂಬನೆ ಹೊಂದಿದ್ದು, ಆತ್ಮನಿರ್ಭರತೆ ಸಾಧಿಸಲಾಗಿದೆ ಎಂದು ಅಣು ಶಕ್ತಿ ಆಯೋಗದ ಅಧ್ಯಕ್ಷ ಹಾಗೂ ಕೇಂದ್ರ ಅಣುಶಕ್ತಿ ಇಲಾಖೆಯ ಕಾರ್ಯದರ್ಶಿ ಡಾ. ಅಜಿತ್ ಕುಮಾರ್ ಮೊಹಂತಿ ತಿಳಿಸಿದರು.

ಭಾನುವಾರ ಕೈಗಾದಲ್ಲಿ, ಕೈಗಾ 5 ಮತ್ತು 6ನೇ ಘಟಕದ ಪ್ರಥಮ ಕಾಂಕ್ರೀಟೀಕರಣಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ದೇಶವು 2047ಕ್ಕೆ 100 ಗಿಗಾ ವ್ಯಾಟ್ ಅಣುವಿದ್ಯುತ್ ಉತ್ಪಾದನೆಯ ಗುರಿ ಹೊಂದಿದ್ದು ಇದಕ್ಕಾಗಿ ಎನ್.ಪಿ.ಸಿ.ಎಲ್. ವತಿಯಿಂದ 54 ಗಿಗಾ ವ್ಯಾಟ್ ಉತ್ಪಾದನೆ ನೀಡುವ ಗುರಿ ಹೊಂದಲಾಗಿದೆ. ಅಣು ವಿದುತ್ ಉತ್ಪಾದನೆಗೆ ನೀರಿನ ಒತ್ತಡದ ರಿಯಾಕ್ಟರ್‌ಗಳು, ಭಾರ ಜಲದ ರಿಯಾಕ್ಟರ್‌ಗಳು ಮತ್ತು ಹೊಸದಾಗಿ ಸಣ್ಣ ಮಾಡ್ಯುಲರ್ ರಿಯಾಕ್ಟರ್‌ಗಳನ್ನು ಆರಂಭಿಸುವ ಉದ್ದೇಶ ಹೊಂದಲಾಗಿದೆ. ಈಗಾಗಲೇ ಇದರ ಆರಂಭಿಕ ಕಾರ್ಯಗಳು ಪ್ರಾಯೋಗಿಕವಾಗಿ ನಡೆಯುತ್ತಿದೆ. ಅಣು ವಿದ್ಯುತ್ ಉತ್ಪಾದನೆಯಲ್ಲಿ ಸುರಕ್ಷತೆ ಮತ್ತು ಗುಣಮಟ್ಟಕ್ಕೆ ಅತ್ಯಂತ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ ಎಂದರು.

ಕೈಗಾದಲ್ಲಿ ಉದ್ದೇಶಿತ 5 ಮತ್ತು 6ರ ಮೊದಲ ಘಟಕವು ಸುಮಾರು 60 ತಿಂಗಳಲ್ಲಿ ವಿದ್ಯುತ್ ಉತ್ಪಾದನಾ ಹಂತವನ್ನು ಸಾಧಿಸುವ ನಿರೀಕ್ಷೆಯಿದ್ದು, ಮೊದಲ ಬಾರಿಗೆ, ಈ ಯೋಜನೆಯ ನಿರ್ಮಾಣವನ್ನು ಕೆಲವೇ ಮೆಗಾ ಪ್ಯಾಕೇಜ್‌ (ಉತ್ಖನನ, ಪರಮಾಣು ದ್ವೀಪ, ಟರ್ಬೈನ್ ದ್ವೀಪ ಮತ್ತು ಪರಮಾಣು ಉಪಕರಣಗಳಂತಹವು) ಒಳಗೊಂಡ ನವೀನ ಕಾರ್ಯತಂತ್ರ ಅಳವಡಿಸಿಕೊಂಡು ಕಾರ್ಯಗತಗೊಳಿಸಲಾಗುತ್ತಿದೆ, ಇದು ಯೋಜನೆಯನ್ನು ವೇಗವಾಗಿ ಕಾರ್ಯಗತಗೊಳಿಸಲು ಮತ್ತು ವಿವಿಧ ಪ್ಯಾಕೇಜ್‌ಗಳ ನಡುವೆ ಸಮನ್ವಯ ಸಾಧಿಸಿ, ಅತಿ ಕಡಿಮೆ ಸಮಯದಲ್ಲಿ ಮತ್ತು ವೆಚ್ಚದಲ್ಲಿ ಯೋಜನೆಯ ಕಾರ್ಯಾನ್ವಯಕ್ಕೆ ಅನುವು ಮಾಡಿಕೊಡುತ್ತದೆ ಎಂದರು.


ಕೈಗಾದ 5 ಮತ್ತು 6ನೇ ಘಟಕಗಳು ಅತ್ಯಾಧುನಿಕ, ಭಾರತೀಯ ತಂತ್ರಜ್ಞಾನದ 700 ಮೆ.ವ್ಯಾ. PHWR ಗಳಾಗಿದ್ದು, ಇವು ಸುಧಾರಿತ ಸುರಕ್ಷತಾ ವೈಶಿಷ್ಟ್ಯ ಒಳಗೊಂಡಿವೆ ಮತ್ತು ವಿಶ್ವದ ಅತ್ಯಂತ ಸುರಕ್ಷಿತವಾದ ಅಣುಸ್ಥಾವರಗಳ ಸಾಲಿಗೆ ಸೇರಿವೆ. ಇಂತಹ ಮೂರು ಘಟಕಗಳು ಕ್ರಮವಾಗಿ KAPS-3&4 ಮತ್ತು RAPP-7 ಗುಜರಾತ್ ಮತ್ತು ರಾಜಸ್ಥಾನ ರಾಜ್ಯಗಳಲ್ಲಿ ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿವೆ. ಯೋಜನೆಗೆ ಸಂಬಂಧಿಸಿದ ಸಾಮಗ್ರಿಗಳು ಮತ್ತು ಉಪಕರಣಗಳನ್ನು ದೇಶೀಯ ಉದ್ಯಮ ಪಾಲುದಾರರು ಪೂರೈಸಲಿದ್ದಾರೆ ಮತ್ತು ಸರ್ಕಾರದ ಆತ್ಮನಿರ್ಭರ ಭಾರತ ನೀತಿಗೆ ಅನುಗುಣವಾಗಿ ಕೆಲಸಗಳನ್ನು ಭಾರತೀಯ ಗುತ್ತಿಗೆದಾರರೇ ನಿರ್ವಹಿಸಲಿದ್ದಾರೆ ಎಂದರು.

ಪ್ರಸ್ತುತ ಕೈಗಾ ಸ್ಥಳದಲ್ಲಿ 220 ಮೆಗಾವ್ಯಾಟ್‌ನ ನಾಲ್ಕು ಘಟಕಗಳು ಒಟ್ಟು 880 ಮೆಗಾವ್ಯಾಟ್ ಸ್ಥಾಪಿತ ಸಾಮರ್ಥ್ಯದೊಂದಿಗೆ ಕಾರ್ಯನಿರ್ವಹಿಸುತ್ತಿದ್ದು, 5 ಮತ್ತು 6 ಘಟಕಗಳು ಪೂರ್ಣಗೊಂಡ ನಂತರ, ಇಲ್ಲಿ ಒಟ್ಟು ಸಾಮರ್ಥ್ಯವು 2,280 ಮೆ. ವ್ಯಾಟ್‌ಗೆ ಹೆಚ್ಚಳವಾಗಲಿದೆ ಎಂದರು.

ಎನ್‌ಪಿಸಿಐಎಲ್‌ನ ಅಧ್ಯಕ್ಷ ಹಾಗೂ ವ್ಯವಸ್ಥಾಪಕ ನಿರ್ದೇಶಕ ಭುವನ್ ಚಂದ್ರ ಪಾಠಕ್ ಮಾತನಾಡಿ, ಇಡೀ ದೇಶವೇ ಕೈಗಾ 5 ಮತ್ತು 6ನೇ ಘಟಕಗಳತ್ತ ಕುತೂಹಲದಿಂದ ಎದುರು ನೋಡುತ್ತಿದೆ. ಪ್ರಸ್ತುತ ನಮ್ಮಲ್ಲಿರುವ 25 ರಿಯಾಕ್ಟರ್‌ಗಳ ಪೈಕಿ 24 ರಿಯಾಕ್ಟರ್‌ಗಳು ಯಶಸ್ವಿಯಾಗಿ ಕಾರ್ಯಾಚರಣೆಯಲ್ಲಿವೆ. ಕಳೆದ ವರ್ಷ ಎನ್‌ಪಿಸಿಐಎಲ್ ಅತಿ ಹೆಚ್ಚು ವಿದ್ಯುತ್ ಉತ್ಪಾದನೆ, ಗರಿಷ್ಠ ಆದಾಯ ಮತ್ತು ಸರ್ಕಾರಕ್ಕೆ ಗರಿಷ್ಠ ತೆರಿಗೆ ಪಾವತಿಸುವ ಮೂಲಕ ದಾಖಲೆ ನಿರ್ಮಿಸಿದೆ. ಇತ್ತೀಚೆಗಷ್ಟೇ ಸಂಸ್ಥೆಯು ಪ್ರತಿ ದಿನಕ್ಕೆ ಸುಮಾರು 55 ಮಿಲಿಯನ್ ಯೂನಿಟ್ ವಿದ್ಯುತ್ ಉತ್ಪಾದಿಸುವ ಮೂಲಕ ಸಾರ್ವಕಾಲಿಕ ದಾಖಲೆ ಮೀರಿದೆ ಎಂದರು.

ಈ ಹಿಂದೆ ತಾರಾಪುರ 3 ಮತ್ತು 4 ಹಾಗೂ ಕೈಗಾ 3 ಮತ್ತು 4ನೇ ಘಟಕಗಳನ್ನು ಕೇವಲ 59 ತಿಂಗಳ (5 ವರ್ಷಗಳಿಗಿಂತ ಕಡಿಮೆ) ಅವಧಿಯಲ್ಲಿ ಪೂರ್ಣಗೊಳಿಸಿರುವ ಸಾಧನೆಯನ್ನು ಪಾಠಕ್ ಸ್ಮರಿಸಿದರು. ಈಗ ಹೊಸದಾಗಿ ನಿರ್ಮಾಣವಾಗುತ್ತಿರುವ ಕೈಗಾ 5 ಮತ್ತು 6ನೇ ಘಟಕಗಳನ್ನು ಈ ಹಿಂದಿನ ಮೈಲಿಗಲ್ಲನ್ನು ಮೀರಿಸಿ, ಕೇವಲ 50ರಿಂದ 59 ತಿಂಗಳ ಒಳಗಾಗಿ ಪೂರ್ಣಗೊಳಿಸಿ 5ನೇ ಘಟಕವನ್ನು ಕಾರ್ಯಾಚರಣೆಗೆ ತರುವ ಸಂಕಲ್ಪ ಮಾಡಬೇಕಿದೆ ಎಂದು ಸ್ಪಷ್ಟಪಡಿಸಿದರು.

ಈ ಸಂದರ್ಭದಲ್ಲಿ ಕೈಗಾದ ಸ್ಥಳ ನಿರ್ದೇಶಕ ಬಿ. ವಿನೋದ್ ಕುಮಾರ್ ಹಾಗೂ ಕೈಗಾ 5 ಮತ್ತು 6ರ ಘಟಕದ ನಿರ್ದೇಶಕ ಕುಲಕರ್ಣಿ ಹಾಗೂ ಎನ್.ಪಿ.ಸಿ.ಎಲ್. ಕೈಗಾದ ಹಲವು ಅಧಿಕಾರಿಗಳು ಇದ್ದರು.