ವಿಮಾನ ನಿಲ್ದಾಣ ಕಾಮಗಾರಿ ಶೀಘ್ರ ಪೂರ್ಣಗೊಳಿಸಿ

| Published : Jul 22 2024, 01:16 AM IST

ಸಾರಾಂಶ

ಕನ್ನಡಪ್ರಭ ವಾರ್ತೆ ವಿಜಯಪುರ ವಿಜಯಪುರ ವಿಮಾನ ನಿಲ್ದಾಣಕ್ಕೆ 24/7 ಕುಡಿಯುವ ನೀರು, 2 ಸಾವಿರ ಕಿ.ವ್ಯಾ ನಿರಂತರ ವಿದ್ಯುತ್ ಪೂರೈಕೆ, ಅಗ್ನಿಶಾಮಕ ಸಿಬ್ಬಂದಿ ನಿಯೋಜನೆಯನ್ನು ನಿಗದಿತ ಕಾಲಾವಧಿಯಲ್ಲಿ ಪೂರ್ಣಗೊಳಿಸಬೇಕು ಎಂದು ಕರ್ನಾಟಕ ರಾಜ್ಯ ಕೈಗಾರಿಕಾ ಮತ್ತು ಮೂಲಸೌಲಭ್ಯ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಡಾ.ಸತೀಶ್ ಬಿ.ಸಿ ಸೂಚಿಸಿದರು.

ಕನ್ನಡಪ್ರಭ ವಾರ್ತೆ ವಿಜಯಪುರ

ವಿಜಯಪುರ ವಿಮಾನ ನಿಲ್ದಾಣಕ್ಕೆ 24/7 ಕುಡಿಯುವ ನೀರು, 2 ಸಾವಿರ ಕಿ.ವ್ಯಾ ನಿರಂತರ ವಿದ್ಯುತ್ ಪೂರೈಕೆ, ಅಗ್ನಿಶಾಮಕ ಸಿಬ್ಬಂದಿ ನಿಯೋಜನೆಯನ್ನು ನಿಗದಿತ ಕಾಲಾವಧಿಯಲ್ಲಿ ಪೂರ್ಣಗೊಳಿಸಬೇಕು ಎಂದು ಕರ್ನಾಟಕ ರಾಜ್ಯ ಕೈಗಾರಿಕಾ ಮತ್ತು ಮೂಲಸೌಲಭ್ಯ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಡಾ.ಸತೀಶ್ ಬಿ.ಸಿ ಸೂಚಿಸಿದರು.

ನಗರದ ಹೊರವಲಯದ ಬುರಣಾಪುರ ಹತ್ತಿರ ನಿರ್ಮಾಣವಾಗುತ್ತಿರುವ ವಿಜಯಪುರದ ವಿಮಾನ ನಿಲ್ದಾಣಕ್ಕೆ ಭೇಟಿ ನೀಡಿ ಕಾಮಗಾರಿಯನ್ನು ಪರಿಶೀಲಿಸಿದರು. ಟರ್ಮಿನಲ್ ಕಟ್ಟಡ, ಎಟಿಸಿ ಟಾವರ್, ಸಿಎಫ್‌ಆರ್ ಕಟ್ಟಡ, ನಿಲ್ದಾಣದ ಕಂಪೌಂಡ್ ಗೋಡೆ ಹಾಗೂ ವಿವಿಧ ಪ್ರಗತಿಯಲ್ಲಿರುವ ಕಾಮಗಾರಿಗಳನ್ನು ವೀಕ್ಷಿಸಿದ್ದು, ಪರಿಶೀಲನೆ ನಡೆಸಿದರು. ನಂತರ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ನಿಯಮಿತವಾಗಿ ಹಾಗೂ ನಿರಂತರವಾಗಿ ಈ ವಿಮಾನ ನಿಲ್ದಾಣಕ್ಕೆ ವಿದ್ಯುತ್ ಪೂರೈಕೆ ಮಾಡುವ ಹಿನ್ನೆಲೆಯಲ್ಲಿ ಕೆಪಿಟಿಸಿಎಲ್ ಹಾಗೂ ಹೆಸ್ಕಾಂನ ಅಧಿಕಾರಿಗಳಿಗೆ ಕಾಲಮಿತಿಯೊಳಗೆ ಬಾಕಿ ಉಳಿದಿರುವ ವಿದ್ಯುತ್ ಕಾಮಗಾರಿಗಳನ್ನು ಆದ್ಯತೆಯ ಮೇರೆಗೆ ನಿರ್ವಹಿಸಬೇಕು. ಕೆಲಸದಲ್ಲಿ ಯಾವುದೇ ಸಮಸ್ಯೆಗಳು ಉಂಟಾಗದಂತೆ ಕಾರ್ಯನಿರ್ವಹಿಸಬೇಕು ಎಂದು ಹೇಳಿದರು.

ಶೀಘ್ರ ಎನ್‌ಒಸಿ ಪಡೆಯಿರಿ:

ವಿಮಾನ ನಿಲ್ದಾಣಕ್ಕೆ ಅಳವಡಿಸಲಾಗುತ್ತಿರುವ ಬಿಎಸ್‌ಎನ್‌ಎಲ್ ಸಂಪರ್ಕ ಕಾಮಗಾರಿಯನ್ನು ವಿಳಂಬ ಮಾಡದೇ ಶೀಘ್ರ ಪೂರ್ಣಗೊಳಿಸಬೇಕು. ನೀರು ಸರಬರಾಜುವಿಗೆ ಸೂಕ್ತ ಕ್ರಮ ಕೈಗೊಳ್ಳಬೇಕು. ವಿಮಾನ ನಿಲ್ದಾಣದಲ್ಲಿ ಯಾವುದೇ ಅಗ್ನಿ ಅವಘಡಗಳು ಸಂಭವಿಸದಂತೆ ನಿರ್ವಹಿಸಿದ ಕಾಮಗಾರಿಗಳು ಹಾಗೂ ವಿದ್ಯುತ್ ಕಾಮಗಾರಿಗಳಿಗೆ ಎನ್‌ಒಸಿ ಪಡೆದುಕೊಳ್ಳಲು ಕ್ರಮ ವಹಿಸಬೇಕು ಎಂದು ಸೂಚಿಸಿದರು.

ಲೋಕೋಪಯೋಗಿ ಇಲಾಖೆಯೆ ಕಾರ್ಯನಿರ್ವಾಹಕ ಅಭಿಯಂತರ ರಾಜು ಮುಜುಮದಾರ ಅವರು ವಿಮಾನ ನಿಲ್ದಾಣ ಕಾಮಗಾರಿಯ ಪೂರ್ಣ ವಿವರಗಳನ್ನು ಸಭೆಯಲ್ಲಿ ಮಂಡಿಸಿದರು.ಸಭೆಯಲ್ಲಿ ಜಿಲ್ಲಾಧಿಕಾರಿ ಟಿ.ಭೂಬಾಲನ್, ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಿಷಿ ಆನಂದ, ಕೆಎಸ್‌ಐಐಡಿಸಿ ಕಾರ್ಯನಿರ್ವಾಹಕ ನಿರ್ದೇಶಕ ಡಿ.ಪಿ.ಪ್ರಕಾಶ, ನಾಗರಿಕ ವಿಮಾನಯಾನ ಸಮಾಲೋಚಕ ಬಾಲಸುಬ್ರಮಣ್ಯ, ತಾಂತ್ರಿಕ ಸಲಹೆಗಾರ ಕಾಂತರಾಜು, ಲೋಕೋಪಯೋಗಿ ಇಲಾಖೆ ಬೆಳಗಾವಿ ವಿಭಾಗದ ಅಧೀಕ್ಷಕ ಅಭಿಯಂತರ ಅರುಣಕುಮಾರ ಪಾಟೀಲ, ವಿಜಯಪುರ ಉಪ ವಿಭಾಗಾಧಿಕಾರಿ ಬಸವಣ್ಣೆಪ್ಪ ಕಲಶೆಟ್ಟಿ, ಹೆಸ್ಕಾಂ ಅಧೀಕ್ಷಕ ಸಿದ್ದಪ್ಪ ಬಿಂಜಗೇರಿ, ಲೋಕೋಪಯೋಗಿ ಇಲಾಖೆ ಸಹಾಯಕ ಅಭಿಯಂತರ ಆರ್.ಎನ್.ಮಸಳಿ, ರವಿ ಪವಾರ, ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಪ್ರಮೋದ ಹೊಟ್ಟಿ, ಕೆಪಿಟಿಸಿಎಲ್ ಕಾರ್ಯನಿರ್ವಾಹಕ ಅಭಿಯಂತರ ಜಗದೀಶ ಜಾಧವ ಸೇರಿದಂತೆ ಮುಂತಾದವರು ಹಾಜರಿದ್ದರು.