ಪಾವಗಡ ತಾಲೂಕು ತೀವ್ರ ಬರಪೀಡಿತ ಪ್ರದೇಶವಾಗಿದ್ದು, ಭದ್ರಾ ಮೇಲ್ದಂಡೆ ಹಾಗೂ ಎತ್ತಿನಹೊಳೆ ಯೋಜನೆಯಿಂದ ತಾಲೂಕಿನ ಕೆರೆಗಳಿಗೆ ನೀರು ಸಂಗ್ರಹಿಸುವ ಹಿನ್ನೆಲೆಯಲ್ಲಿ ತ್ವರಿತ ಗತಿಯಲ್ಲಿ ಕಾಮಗಾರಿ ಪೂರ್ಣಗೊಳಿಸಬೇಕೆಂದು ಮಾಜಿ ಶಾಸಕ ಕೆ.ಎಂ.ತಿಮ್ಮರಾಯಪ್ಪ ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ಆಗ್ರಹಿಸಿದರು.
ಕನ್ನಡಪ್ರಭ ವಾರ್ತೆ ಪಾವಗಡ
ಪಾವಗಡ ತಾಲೂಕು ತೀವ್ರ ಬರಪೀಡಿತ ಪ್ರದೇಶವಾಗಿದ್ದು, ಭದ್ರಾ ಮೇಲ್ದಂಡೆ ಹಾಗೂ ಎತ್ತಿನಹೊಳೆ ಯೋಜನೆಯಿಂದ ತಾಲೂಕಿನ ಕೆರೆಗಳಿಗೆ ನೀರು ಸಂಗ್ರಹಿಸುವ ಹಿನ್ನೆಲೆಯಲ್ಲಿ ತ್ವರಿತ ಗತಿಯಲ್ಲಿ ಕಾಮಗಾರಿ ಪೂರ್ಣಗೊಳಿಸಬೇಕೆಂದು ಮಾಜಿ ಶಾಸಕ ಕೆ.ಎಂ.ತಿಮ್ಮರಾಯಪ್ಪ ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ಆಗ್ರಹಿಸಿದರು.ತಾಲೂಕಿನ ಜ್ವಲಂತ ಸಮಸ್ಯೆಗಳ ಹಿನ್ನೆಲೆಯಲ್ಲಿ ಜೆಡಿಎಸ್ ಹಾಗೂ ಬಿಜೆಪಿಯಿಂದ ಸೋಮವಾರ ಪಟ್ಟಣದಲ್ಲಿ ನಡೆಸಿದ ಬೃಹತ್ ಪ್ರತಿಭಟನಾ ಮೆರವಣಿಗೆ ಸಂದರ್ಭದಲ್ಲಿ ಮಾತನಾಡಿದ ತಾಲೂಕು ಜೆಡಿಎಸ್ ಹಿರಿಯ ಮುಖಂಡರೂ ಆದ ತಿಮ್ಮರಾಯಪ್ಪ, ಪಾವಗಡ ತಾಲೂಕು ನಿರಂತರ ಬರಗಾಲದಿಂದ ತತ್ತರಿಸುತ್ತಿದೆ. ಸರ್ಕಾರ ಕೂಡಲೇ ಭದ್ರಾ ಮೇಲ್ದಂಡೆ ಮತ್ತು ಎತ್ತಿನಹೊಳೆ ನೀರನ್ನು ಪಾವಗಡಕ್ಕೆ ಹರಿಸಬೇಕು. ಸ್ಥಳೀಯ ಪೊಲೀಸರು ಬಿಜೆಪಿ, ಜೆಡಿಎಸ್ ಕಾರ್ಯಕರ್ತರ ವಿರುದ್ಧ ದಾಖಲಿಸಿರುವ ಸುಳ್ಳು ಕೇಸು ವಾಪಸ್ ಪಡೆಯಬೇಕು ಎಂದು ಅವರು ಆಗ್ರಹಿಸಿದರು.
ರಾಜ್ಯದಲ್ಲಿ ಗುಟ್ಕಾ ನಿಷೇಧ ಕೂಡಲೇ ಹಿಂಪಡೆಯಬೇಕು. ಸೋಲಾರ್ ಕಂಪನಿಗಳಲ್ಲಿ ಸ್ಥಳೀಯರಿಗೆ ಉದ್ಯೋಗ ಅವಕಾಶ ನೀಡಬೇಕು. ರೈತರಿಗೆ 7 ಗಂಟೆ ನಿರಂತರ ವಿದ್ಯುತ್ ನೀಡಬೇಕು. ಭೂಸೇನೆ ನಿಗಮದಿಂದ ಕೈಗೊಂಡ ಕಾಮಗಾರಿಗಳು ಕಳಪೆಯಿಂದ ಕೂಡಿದ್ದು, ಸಮಗ್ರ ತನಿಖೆಯಾಗಬೇಕು ಎಂಬುದು ಸೇರಿ ತಮ್ಮ ಹಲವು ಬೇಡಿಕೆ ಈಡೇರಿಸಲು ಆಗ್ರಹಿಸಿದರು.ತಾಲೂಕು ಬಿಜೆಪಿ ಅಧ್ಯಕ್ಷ ಡಿ.ಆರ್.ಅಶೋಕ್ ಮಾತನಾಡಿ, ಸಿಎಂ ಡಿ.ಕೆ.ಶಿವಕುಮಾರ್ ಅವರಿಂದ ಅಭಿವೃದ್ಧಿ ನಿರೀಕ್ಷಿಸಲು ಸಾಧ್ಯವಿಲ್ಲ ಎಂದರಲ್ಲದೆ, ಎನ್‌ಡಿಎ ಕಾರ್ಯಕರ್ತರ ಮೇಲೆ ವಿನಾ ಕಾರಣ ಕೇಸು ದಾಖಲಿಸಿದರೆ ಪರಿಣಾಮ ಎದುರಿಸಬೇಕಿದೆ ಎಂದು ಎಚ್ಚರಿಸಿದರು.ರಾಜ್ಯ ಜೆಡಿಎಸ್ ಉಪಾಧ್ಯಕ್ಷ ಎನ್. ತಿಮ್ಮಾರೆಡ್ಡಿ, ಮಾಜಿ ಜಿಲ್ಲಾಧ್ಯಕ್ಷ ಆರ್.ಸಿ. ಅಂಜಿನಪ್ಪ, ಕಾರ್ಯಾಧ್ಯಕ್ಷ ಗೋವಿಂದಬಾಬು ಮಾತನಾಡಿದರು.
ತಹಸೀಲ್ದಾರ್ ವೈ. ರವಿ ಮನವಿ ಸ್ವೀಕರಿಸಿದರು. ತಾಲೂಕು ಜೆಡಿಎಸ್ ಹಿರಿಯ ಮುಖಂಡರಾದ ಬಲರಾಮರೆಡ್ಡಿ, ಕಾರ್ಯಾಧ್ಯಕ್ಷ ಸೊಗಡು ವೆಂಕಟೇಶ್, ಮುಖಂಡರಾದ ಅಕ್ಕಲಪ್ಪ ನಾಯ್ಡು, ರೈತ ಘಟಕದ ಗಂಗಾಧರ್ ನಾಯ್ಡು, ಗುಟ್ಟಹಳ್ಳಿ ಮಣಿ, ಜಿ.ಎ. ವೆಂಕಟೇಶ್, ಬಿಜೆಪಿ ಪಾವಗಡ ರವಿ, ಎನ್. ರಾಮಕೃಷ್ಣ ರೆಡ್ಡಿ, ಜಿ.ಎನ್. ನಲ್ಲಪ್ಪ, ಜೆಡಿಎಸ್ ಯುವ ಘಟಕದ ಅಧ್ಯಕ್ಷ ಭರತ್ ಕುಮಾರ್, ಅಪ್ಪಾಜಿಹಳ್ಳಿ ಎಲ್. ನಾರಾಯಣರೆಡ್ಡಿ, ಮಾಜಿ ತಾಪಂ ಅಧ್ಯಕ್ಷ ರಾಜ್ ಗೋಪಾಲ್, ನಗರ ಘಟಕದ ಅಪ್‌ಬಂಡೆ ಗೋಪಾಲ್, ಕಾವಲಗೆರೆ ರಾಮಾಂಜಿನಪ್ಪ, ಕನ್ನಮೇಡಿ ಲೋಕೇಶ್, ಅಂಬಿಕಾ ರಮೇಶ್, ಶಕುಂತಮ್ಮ ಇದ್ದರು.