ಸಾರಾಂಶ
ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯ ಕೊಪ್ಪಳ ಜಿಲ್ಲೆಯ ಪ್ರಗತಿ ಪರಿಶೀಲನಾ ಸಭೆ
ಕನ್ನಡಪ್ರಭ ವಾರ್ತೆ ಕೊಪ್ಪಳಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯಿಂದ ನಡೆಯುತ್ತಿರುವ ಕಾಮಗಾರಿಗಳನ್ನು ಯಾವುದೇ ನೆಪ ಹೇಳದೆ ಕಾಲಮಿತಿಯಲ್ಲಿ ಮುಗಿಸಬೇಕೆಂದು ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಡಾ. ಅಜಯ್ ಧರ್ಮಸಿಂಗ್ ಹೇಳಿದರು.
ಮಂಗಳವಾರ ಇಲ್ಲಿನ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯ ಕೊಪ್ಪಳ ಜಿಲ್ಲೆಯ ಪ್ರಗತಿ ಪರಿಶೀಲನಾ ಸಭೆ ನಡೆಸಿ ಅವರು ಮಾತನಾಡಿದರು.2018-19, 2019-20 ಮತ್ತು 2020-21ರಲ್ಲಿ ಕಾಮಗಾರಿಗಳು ಯಾಕೆ ಬಾಕಿ ಇವೆ ಎಂದು ಕೇಳಿದ ಅವರು, ಬಹುದಿನಗಳಿಂದ ಬಾಕಿ ಇರುವ ಜಿಲ್ಲಾ ರಂಗಮಂದಿರವನ್ನು 15 ದಿನಗಳೊಳಗೆ ಪೂರ್ಣಗೊಳಿಸಬೇಕು. ಬೇರೆ ಬೇರೆ ಬಾಕಿ ಇರುವ ಕಾಮಗಾರಿಗಳನ್ನು ಕಾಲಮಿತಿಯಲ್ಲಿ ಮುಗಿಸಿ ಎಂದು ನಿರ್ದೇಶನ ನೀಡಿದರು. ರಸ್ತೆ, ಕಟ್ಟಡ, ಪ್ರಾಥಮಿಕ ಆರೋಗ್ಯ ಕೇಂದ್ರ ಸೇರಿದಂತೆ ಬೇರೆ ಬೇರೆ ಕಾಮಗಾರಿಗಳು ಬಾಕಿ ಉಳಿಯುವುದಕ್ಕೆ ನೆಪ ಹೇಳಬಾರದು. ಅನಿವಾರ್ಯವಿದ್ದರೆ ಬದಲಿ ಕಾಮಗಾರಿಗೆ ಅನುಮತಿ ಪಡೆದು ಅನುದಾನ ಬಳಕೆಗೆ ಗಮನ ಕೊಡಬೇಕು ಎಂದರು.
ಸೆ. 17ರಂದು ನಡೆದ ಸಚಿವ ಸಂಪುಟ ಸಭೆಯಲ್ಲಿ 24 ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಮಂಜೂರಾತಿ ನೀಡಲಾಗಿದೆ. ಇದರಲ್ಲಿ 18 ಟೆಂಡರ್ ಆಗಿವೆ. ಜಿಲ್ಲೆಯಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರಗಳ ನಿರ್ಮಾಣಕ್ಕೆ ಅಗತ್ಯ ಕ್ರಮ ವಹಿಸಬೇಕು ಎಂದರು.ಪ್ರತಿವರ್ಷ ನಿಗದಿಪಡಿಸುವ ಕೆ.ಕೆ.ಆರ್.ಡಿ.ಬಿ. ಹಣವು ಬಳಕೆ ಆಗಲ್ಲ ಎಂಬ ಆಪಾದನೆ ಇದೆ. ಅಧಿಕಾರಿಗಳು ಅನುದಾನ ಬಳಕೆಗೆ ಗಮನ ಹರಿಸದಿದ್ದರೆ ಈ ರೀತಿಯ ದೂರ ಬರುತ್ತವೆ. ಹೀಗಾಗಿ ಅಧಿಕಾರಿಗಳು ಕಾಲಹರಣ ಮಾಡದೇ ಕಾರ್ಯಪ್ರವೃತ್ತರಾಗಬೇಕು. ಜಿಪಂ ಮತ್ತು ನಿರ್ಮಿತಿ ಕೇಂದ್ರ ಇವರು ಬಾಕಿ ಉಳಿಸಿಕೊಂಡ ಎಲ್ಲ ಕಾಮಗಾರಿಗಳನ್ನು ಬೇಗನೇ ಪೂರ್ಣಗೊಳಿಸಬೇಕು ಎಂದರು.
ಜಿಲ್ಲಾಧಿಕಾರಿ ಹಾಗೂ ಜಿಪಂ ಸಿಇಒ ನಿರಂತರವಾಗಿ ಪ್ರಗತಿ ಪರಿಶೀಲನೆ ಸಭೆ ನಡೆಸಿ ಕಾಮಗಾರಿಗಳ ಅನುಷ್ಠಾನಕ್ಕೆ ಒತ್ತು ಕೊಡಬೇಕು. ಕೆಲಸ ಮಾಡದ ಅಧಿಕಾರಿಗಳಿಗೆ ನೋಟಿಸ್ ನೀಡಿ ಎಂದು ತಿಳಿಸಿದರು.ಮಂಡಳಿಯ ಕಾರ್ಯದರ್ಶಿ ಎಂ. ಸುಂದರೇಶಬಾಬು ಮಾತನಾಡಿ, 2023-24ನೇ ಸಾಲಿನ ಕಾಮಗಾರಿಗಳನ್ನು ಈಗಲೇ ಆರಂಭಿಸಬೇಕು. 2023-24ನೇ ಸಾಲಿನಲ್ಲಿ ನಡೆಯುತ್ತಿರುವ ಕಾಮಗಾರಿಗಳನ್ನು 2024-25ನೇ ಸಾಲಿನ ನವೆಂಬರ್‌ಗೆ ಶೇ.50ರಷ್ಟು ಮತ್ತು ಡಿಸೆಂಬರ್‌ನಲ್ಲಿ ಶೇ.50ರಷ್ಟು ಪೂರ್ಣಗೊಳಿಸಬೇಕು ಎಂದು ಸೂಚನೆ ನೀಡಿದರು
ಸಭೆಯಲ್ಲಿ ಶಾಸಕರಾದ ದೊಡ್ಡನಗೌಡ ಪಾಟೀಲ, ಬಸವರಾಜ ರಾಯರಡ್ಡಿ, ಶಾಸಕ ರಾಘವೇಂದ್ರ ಹಿಟ್ನಾಳ, ಜಿಲ್ಲಾಧಿಕಾರಿ ನಲಿನ್ ಅತುಲ್, ಜಿಪಂ ಸಿಇಒ ರಾಹುಲ್ ರತ್ನಂ ಪಾಂಡೆಯ, ಅಪರ ಜಿಲ್ಲಾಧಿಕಾರಿ ಸಿದ್ರಾಮೇಶ್ವರ, ಸಹಾಯಕ ಆಯುಕ್ತ ಕ್ಯಾಪ್ಟನ್ ಮಹೇಶ ಮಾಲಗಿತ್ತಿ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಮತ್ತು ಅನುಷ್ಠಾನಾಧಿಕಾರಿಗಳು ಉಪಸ್ಥಿತರಿದ್ದರು.