ಸಾರಾಂಶ
ಕನ್ನಡಪ್ರಭ ವಾರ್ತೆ ಗುರುಮಠಕಲ್ ಗುಣಮಟ್ಟದ ರಸ್ತೆ ನಿರ್ಮಾಣ ಕಾಮಗಾರಿಯನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸಬೇಕು ಎಂದು ಗುರುಮಠಕಲ್ ಶಾಸಕ ಶರಣಗೌಡ ಕಂದಕೂರು ಅಧಿಕಾರಿ ಮತ್ತು ಗುತ್ತಿಗೆದಾರರಿಗೆ ತಾಕೀತು ಮಾಡಿದರು.
ಸಮೀಪದ ಮಲ್ಹಾರ ಗ್ರಾಮದಲ್ಲಿ 2023-24ನೇ ಸಾಲಿನ ಕೆಕೆಆರ್‌ಡಿಬಿ ಮೈಕ್ರೋ ಯೋಜನೆಯ ಅನುದಾನದಲ್ಲಿ ಗುರುಮಠಕಲ್ ಮತ ಕ್ಷೇತ್ರದ ಹೆಗ್ಗಣಗೇರಾ ಗ್ರಾಮದಿಂದ ಕೌಳೂರು ಗ್ರಾಮದ ಸೀಮೆಯವರೆಗೆ ₹5 ಕೋಟಿ ವೆಚ್ಚದ ರಸ್ತೆ ನಿರ್ಮಾಣ ಹಾಗೂ ₹10 ಲಕ್ಷ ವೆಚ್ಚದಲ್ಲಿ ಎಸ್.ಟಿ ಕಾಲೊನಿಯಲ್ಲಿ ಸಿಸಿ ತಡೆಗೋಡೆ ನಿರ್ಮಾಣ ಕಾಮಗಾರಿಗೆ ಅಡಿಗಲ್ಲು ನೆರವೇರಿಸಿ ಅವರು ಮಾತನಾಡಿದರು.ಕ್ಷೇತ್ರದ ಜನರ ಹಿತ ಕಾಪಾಡಲು ಕಂದಕೂರು ಬದ್ಧವಾಗಿದ್ದು, ಈ ಹಿಂದೆ ನಮ್ಮ ತಂದೆ ದಿ. ನಾಗನಗೌಡ ಕಂದಕೂರ ಅವರು ಶಾಸಕರಾಗಿದ್ದ ವೇಳೆ ರಸ್ತೆ, ಕೆರೆಗೆ ನೀರು ತುಂಬಿಸುವುದು, ಶಾಲಾ ಕೋಣೆ, ಅಂಗನವಾಡಿ ಕಟ್ಟಡ, ಕುಡಿಯುವ ನೀರು ಹೀಗೆ ಸಾಕಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದಾರೆ.
ತಮ್ಮೆಲ್ಲರ ಆಶೀರ್ವಾದದಿಂದ ನಾನು ಸಹ ಶಾಸಕನಾಗಿದ್ದು, ಜನರ ಬೇಡಿಕೆಗೆ ಅನುಸಾರ ಅಭಿವೃದ್ಧಿ ಕಾರ್ಯಗಳನ್ನು ಮಾಡುತ್ತಿದ್ದೇನೆ. ಅದರ ಭಾಗವಾಗಿ ಯಾದಗಿರಿ ನಗರದಿಂದ ಸೈದಾಪುರಕ್ಕೆ ತೆರಳುವ ಪ್ರಯಾಣಿಕರಿಗೆ ಮಲ್ಹಾರ ಗ್ರಾಮದ ಮೂಲಕ ಸಂಪರ್ಕ ಕಲ್ಪಿಸುವ ಈ ರಸ್ತೆ ಅಂತರದಲ್ಲಿ ಕಡಿಮೆ ಆಗಲಿದ್ದು, ತುಂಬಾ ಉಪಯುಕ್ತವಾಗಲಿದೆ. ಇದಲ್ಲದೆ ಮುಂಬರುವ ದಿನಗಳಲ್ಲಿ ರಾಷ್ಟ್ರೀಯ ಹೆದ್ದಾರಿ 167 ರಲ್ಲಿ ಸಂಚರಿಸಲು ಟೋಲ್ ಕಟ್ಟಬೇಕಾಗಿ ಬರಬಹುದು. ಇದನ್ನು ತಪ್ಪಿಸಲು ಸಹ ಈ ರಸ್ತೆ ಸಹಕಾರಿಯಾಗಲಿದೆ ಎಂದರು.ಈ ವೇಳೆ ನಿರ್ಮಿತಿ ಕೇಂದ್ರದ ಎಂಜಿನಿಯರ್ ಕಿರಣಕುಮಾರ, ಗ್ರಾಮೀಣ ಕುಡಿಯುವ ನೀರು ಸರಬರಾಜು ಇಲಾಖೆಯ ಎಂಜಿನಿಯರ್ ಐರೆಡ್ಡಿ, ಲೋಕೋಪಯೋಗಿ ಇಲಾಖೆಯ ಎಂಜಿನೀಯರ್ ಶ್ರೀಧರ್, ತಾಪಂ ಅಧಿಕಾರಿ ಬಸವರಾಜ ಶರಭೈ, ಮುಖಂಡರಾದ ಮಲ್ಲಣ್ಣಗೌಡ ಕೌಳೂರು, ರವಿಗೌಡ ಕಾರಡ್ಡಿ ಮಲ್ಹಾರ, ಬಸ್ಸರೆಡ್ಡಿ ಗೌಡ ಹೆಗ್ಗಣಗೇರಾ, ಗ್ರಾಪಂ ಮಾಜಿ ಅಧ್ಯಕ್ಷ ಶರಣಗೌಡ ಕಾರಡ್ಡಿ, ಲಕ್ಷ್ಮಣ ನಾಯಕ ಕೂಡ್ಲೂರ, ಸಿದ್ದಲಿಂಗರೆಡ್ಡಿ ಮಲ್ಹಾರ, ಅಲ್ಲಾವುದ್ದಿನ್ ನೀಲಹಳ್ಳಿ ಸೇರಿದಂತೆ ಇತರರಿದ್ದರು. ಸಾಬರೆಡ್ಡಿ ನಿರೂಪಿಸಿ, ವಂದಿಸಿದರು.