ಸಾರಾಂಶ
ಕನ್ನಡಪ್ರಭ ವಾರ್ತೆ ಹನೂರು
ಮಲೆ ಮಹದೇಶ್ವರ ಬೆಟ್ಟದಲ್ಲಿ ನಡೆಯುತ್ತಿರುವ ವಿವಿಧ ಕಾಮಗಾರಿಗಳನ್ನು ತುರ್ತಾಗಿ ಪೂರ್ಣಗೊಳಿಸಿ ಎಂದು ಅಧಿಕಾರಿಗಳು ಮತ್ತು ಗುತ್ತಿಗೆದಾರರಿಗೆ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ ಕಾರ್ಯದರ್ಶಿ ರಘು ಸೂಚನೆ ನೀಡಿದರು.ಹನೂರು ತಾಲೂಕಿನ ಮಲೆ ಮಹದೇಶ್ವರ ಬೆಟ್ಟದ ಶ್ರೀ ಕ್ಷೇತ್ರದ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ನಡೆಯುತ್ತಿರುವ ವಿವಿಧ ಕಾಮಗಾರಿಗಳಾದ 512 ಕೊಠಡಿಯ ಮೊದಲನೇ ಹಂತ ಹಾಗೂ ಎರಡನೇ ಹಂತದ ಕಾಮಗಾರಿಯನ್ನು ತುರ್ತಾಗಿ ಗುತ್ತಿಗೆದಾರರು ಪೂರ್ಣಗೊಳಿಸಿ ಅನುಕೂಲ ಕಲ್ಪಿಸುವಂತೆ ಸೂಚನೆ ನೀಡಿದರು.ತೆಪ್ಪೋತ್ಸವಕ್ಕೆ ಕಾಮಗಾರಿ ಪೂರ್ಣಗೊಳಿಸಿ:ಮಲೆ ಮಹದೇಶ್ವರ ಬೆಟ್ಟದಲ್ಲಿ ನಡೆಯುತ್ತಿರುವ ದೊಡ್ಡಕೆರೆ ಕಾಮಗಾರಿಯನ್ನು ಹಲವು ದಿನಗಳಿಂದ ತೆಪ್ಪೋತ್ಸವ ಸ್ಥಗಿತಗೊಂಡಿರುವುದರಿಂದ, ಈ ಬಾರಿ ದಸರಾ ವಿಶೇಷ ದಿನಗಳಲ್ಲಿ ತೆಪ್ಪೋತ್ಸವ ನಡೆಸಲು ಕಾಮಗಾರಿ ಪೂರ್ಣಗೊಳಿಸಿ ಅನುಕೂಲ ಮಾಡಬೇಕಾಗಿ ಅಧಿಕಾರಿ ಮತ್ತು ಗುತ್ತಿಗೆದಾರರಿಗೆ ತಿಳಿಸಿದರು.
ಮೆಟ್ಟಿಲು ಕಾಮಗಾರಿ ಪರಿಶೀಲನೆ:ಮಹದೇಶ್ವರ ಬೆಟ್ಟಕ್ಕೆ ಪಾದಯಾತ್ರೆಯ ಮೂಲಕ ಬರುವ ಮೆಟ್ಟಿಲುಗಳ ಕಾಮಗಾರಿ ಪೂರ್ಣಗೊಳಿಸಲು ಸಂಬಂಧಪಟ್ಟ ಗುತ್ತಿಗೆದಾರರಿಗೆ ತಿಳಿಸಿದರು. ಈ ಸಂದರ್ಭದಲ್ಲಿ ಮಲೆ ಮಹದೇಶ್ವರ ಬೆಟ್ಟ ಸಮೀಪದಲ್ಲಿ ನಡೆಯುತ್ತಿರುವ ಅಕ್ಕಪಕ್ಕದ ಮನೆಗಳ ಮುಂಭಾಗ ಮೆಟ್ಟಿಲು ಕಾಮಗಾರಿ ಸ್ಥಗಿತಗೊಳಿಸಿ ಓಡಾಡಲು ಸಾರ್ವಜನಿಕರಿಗೆ ಮನೆಗಳು ಇರುವುದರಿಂದ ಕಾಂಕ್ರೀಟ್ ರಸ್ತೆ ವ್ಯವಸ್ಥೆ ಕಲ್ಪಿಸುವಂತೆ ನಿವಾಸಿಗಳು ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ರಘು ಅವರನ್ನು ಮನವಿ ಮಾಡಿದರು. ಇದಕ್ಕೆ ಪ್ರತಿಕ್ರಿಯಿಸಿದ ರಘು ಮೆಟ್ಟಿಲು ಕಾಮಗಾರಿ ಹೊರತುಪಡಿಸಿ ಕಾಂಕ್ರೀಟ್ ರಸ್ತೆ ಮಾಡಬೇಕಾದರೆ ಪ್ರತ್ಯೇಕ ಎಸ್ಟಿಮೆಂಟ್ ಮಾಡಬೇಕಾಗಿರುವುದರಿಂದ ಸಂಬಂಧಪಟ್ಟ ಅಧಿಕಾರಿಗಳು ಇದರ ಬಗ್ಗೆ ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ತಿಳಿಸಿದರು.
ಸರತಿ ಸಾಲಿನ ಕಾಮಗಾರಿ ವಿಳಂಬ:ಮಾದೇಶ್ವರ ಬೆಟ್ಟದಲ್ಲಿ ದೇವಾಲಯ ಮತ್ತು ಸುತ್ತಮುತ್ತಲಿನ ಮಾದಪ್ಪನ ಭಕ್ತರು ದೇವರ ದರ್ಶನ ಮಾಡಲು ಬರುವ ಸರತಿಸಾಲಿನ ಕಾಮಗಾರಿಯನ್ನು ಪೂರ್ಣಗೊಳಿಸಲು ಹೆಚ್ಚು ಸಿಬ್ಬಂದಿಯನ್ನು ನಿಯೋಜನೆಗೊಳಿಸಿ, ತುರ್ತಾಗಿ ಕ್ರಮ ಕೈಗೊಳ್ಳುವಂತೆ ಗುತ್ತಿಗೆದಾರರು ಮತ್ತು ಅಧಿಕಾರಿಗಳಿಗೆ ತಾಕೀತು ಮಾಡಿದರು. ಇದೇ ಸಂದರ್ಭದಲ್ಲಿ ಎಇಇ ಚಿನ್ನಣ್ಣ, ಎಇ ಸತೀಶ್, ಪ್ರಾಧಿಕಾರದ ಎಇ ಸೆಲ್ವ ಗಣಪತಿ ಇನ್ನಿತರ ಸಿಬ್ಬಂದಿ ಉಪಸ್ಥಿತರಿದ್ದರು.