ಸಾರಾಂಶ
ಅಧಿಕಾರಿಗಳು ಸಭೆಗೆ ಬರುವ ಪೂರ್ವದಲ್ಲಿ ತಮ್ಮ ಇಲಾಖೆಗೆ ಸಂಬಂಧಿಸಿದ ಸಮಗ್ರ ಮಾಹಿತಿಯೊಂದಿಗೆ ಹಾಜರಾಗಬೇಕು. ಮಾಹಿತಿ ಇಲ್ಲದೆ ಹಾಜರಾದಲ್ಲಿ ಅಂತಹ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು.
ಅಣ್ಣಿಗೇರಿ:
ಕೈಗೊಂಡ ಕಾಮಗಾರಿಗಳನ್ನು ಅಧಿಕಾರಿಗಳು ಶೀಘ್ರವೇ ಪೂರ್ಣಗೊಳಿಸಬೇಕು. ನಿರ್ಲಕ್ಷ್ಯ, ವಿಳಂಬ ಮಾಡಿದರೆ ಸೂಕ್ತ ಕ್ರಮಕೈಗೊಳ್ಳಲಾಗುವುದು ಎಂದು ಶಾಸಕ ಎನ್.ಎಚ್. ಕೋನರಡ್ಡಿ ಎಚ್ಚರಿಸಿದರು.ಅವರು ಇಲ್ಲಿನ ಪಟ್ಟಣ ಪಂಚಾಯಿತಿಯಲ್ಲಿ ಸೋಮವಾರ ಹಮ್ಮಿಕೊಳ್ಳಲಾಗಿದ್ದ ಮಾಸಿಕ ಕೆಡಿಪಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಅಧಿಕಾರಿಗಳು ಸಭೆಗೆ ಬರುವ ಪೂರ್ವದಲ್ಲಿ ತಮ್ಮ ಇಲಾಖೆಗೆ ಸಂಬಂಧಿಸಿದ ಸಮಗ್ರ ಮಾಹಿತಿಯೊಂದಿಗೆ ಹಾಜರಾಗಬೇಕು. ಮಾಹಿತಿ ಇಲ್ಲದೆ ಹಾಜರಾದಲ್ಲಿ ಅಂತಹ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಆರೋಗ್ಯ ಇಲಾಖೆಯು ಪಟ್ಟಣ ಸೇರಿದಂತೆ ತಾಲೂಕಿನಲ್ಲಿ ಅದರಲ್ಲೂ ಗ್ರಾಮೀಣ ಪ್ರದೇಶದಲ್ಲಿ ಸಾಂಕ್ರಾಮಿಕ ರೋಗಗಳು ಹರಡದಂತೆ ಅಗತ್ಯ ಮುಂಜಾಗೃತಾ ಕ್ರಮಕೈಗೊಳ್ಳುವಂತೆ ಸೂಚನೆ ನೀಡಿದರು.ಲೋಕೋಪಯೋಗಿ ಹಾಗೂ ನಗರಸಭೆ ವತಿಯಿಂದ ಚರಂಡಿ, ಶೌಚಾಲಯ, ನೀರಿನ ಟ್ಯಾಂಕ್‌ಗಳ ನಿರ್ವಹಣೆ ಮಾಡಬೇಕು. ಪಟ್ಟಣದಲ್ಲಿ ಸಿಸಿ ಕ್ಯಾಮೆರಾಗಳ ನಿರ್ವಹಣೆ ಸಮರ್ಪಕವಾಗುತ್ತಿಲ್ಲ. ಇನ್ನು ಮುಂದಾದರೂ ಸಂಬಂಧಿಸಿದ ಅಧಿಕಾರಿಗಳು ನಿರ್ವಹಣೆಗೆ ಹೆಚ್ಚಿನ ಒತ್ತು ನೀಡಬೇಕೆಂದು ತಾಕೀತು ಮಾಡಿದರು.
ಸಾರಿಗೆ ವ್ಯವಸ್ಥೆಗೆ ಸಂಬಂಧಿಸಿದಂತೆ ಯಾವುದೇ ನಿಲ್ದಾಣಗಳಲ್ಲಿ ವಿದ್ಯಾರ್ಥಿಗಳು ಇದ್ದಲ್ಲಿ ಕಡ್ಡಾಯವಾಗಿ ಬಸ್ ನಿಲುಗಡೆಗೆ ಕ್ರಮಕೈಗೊಳ್ಳಬೇಕು. ಸಾರ್ವಜನಿಕರ ಸೇವೆಗೆ ಸಾರಿಗೆ ಸಂಸ್ಥೆ ಸದಾ ಸ್ಪಂದಿಸಬೇಕೆಂದು ಸೂಚಿಸಿದರು.ಮಳೆಗಾಲ ಆರಂಭವಾಗಿದ್ದು, ಅಗತ್ಯ ಮುಂಜಾಗೃತಾ ಕ್ರಮಗಳ ಸಿದ್ಧತೆಗಳನ್ನು ಆಯಾ ಗ್ರಾಪಂ ಕೈಗೊಳ್ಳಬೇಕು. ಹಳ್ಳಿಗಳಲ್ಲಿ ನೀರಿನ ಸಮಸ್ಯೆ ಬಾರದಂತೆ ಕ್ರಮಕೈಗೊಳ್ಳಬೇಕು ಎಂದರು.
ಅಣ್ಣಿಗೇರಿ ಹಾಗೂ ನವಲಗುಂದ ತಾಲೂಕುಗಳ ಅಭಿವೃದ್ಧಿಗಾಗಿ ಸಚಿವ ಸತೀಶ ಜಾರಕಿಹೊಳಿ ಅವರು ₹ 20 ಕೋಟಿ ಬಿಡುಗಡೆ ಮಾಡಿದ್ದಾರೆ. ಅಣ್ಣಿಗೇರಿ ಪಟ್ಟಣದ ಸರ್ಕಾರಿ ಶಾಲೆಯ ಅಭಿವೃದ್ಧಿಗೆ ₹ 20 ಲಕ್ಷ ಮೀಸಲಾಗಿಡಲಾಗಿದೆ. ಮುಖ್ಯಮಂತ್ರಿಗಳ ವಿಶೇಷ ಅನುದಾನದಲ್ಲಿ ಶಾಸಕರ ವ್ಯಾಪ್ತಿಗೆ ಒಳಪಟ್ಟ ₹1 ಕೋಟಿ ಅನುದಾನವನ್ನು ಸರ್ಕಾರ ಬಿಡುಗಡೆ ಮಾಡಿದೆ. ಪಂಪ ಭವನ ಅಭಿವೃದ್ಧಿಗೆ ₹50 ಲಕ್ಷ, ಪದವಿಪೂರ್ವ ಕಾಲೇಜು ಅಭಿವೃದ್ಧಿಗೆ ₹ 2 ಕೋಟಿ ಬಿಡುಗಡೆ ಮಾಡಲಾಗಿದೆ ಎಂದರು.ಈ ವೇಳೆ ಜಿಪಂ, ತಾಪಂ ಇಲಾಖೆಯ ಅಧಿಕಾರಿಗಳು ಪಾಲ್ಗೊಂಡಿದ್ದರು.