ಸಾರಾಂಶ
ಕನ್ನಡಪ್ರಭ ವಾರ್ತೆ ಶಹಾಪುರ
2023-24ನೇ ಸಾಲಿನಲ್ಲಿ ಜಿಲ್ಲೆಗೆ ಮೈಕ್ರೊ ಮತ್ತು ಮ್ಯಾಕ್ರೋ ಸೇರಿ ₹300 ಕೋಟಿ ಹಂಚಿಕೆಯಾಗಿದ್ದು, 2018ರಿಂದ 23ನೇ ಸಾಲಿನಲ್ಲಿ ಉಳಿದ ಅನುದಾನದಲ್ಲಿ ₹20 ಕೋಟಿ ಅನುದಾನ ಮೈಕ್ರೋ ಮತ್ತು ಮ್ಯಾಕ್ರೋನಲ್ಲಿ ಉಳಿತಾಯ ರೂಪದಲ್ಲಿ ಹಂಚಿಕೆಯಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪಗೌಡ ದರ್ಶನಾಪೂರ ತಿಳಿಸಿದರು.ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಎಂ ಸಿದ್ದರಾಮಯ್ಯ ಅವರು ಜಿಲ್ಲಾ ಸಚಿವರುಗಳ ಸಭೆ ಕರೆದು, ಈ ಬಾರಿ 5 ಸಾವಿರ ಕೋಟಿ ರು. ಅನುದಾನ ನೀಡಲು ಹೇಳಿದ್ದರು. ಅದರಲ್ಲಿ ₹3 ಸಾವಿರ ಕೋಟಿ ಹಂಚಿಕೆಯಾಗಿದೆ. ಅನುದಾನದ ಖರ್ಚಿಗೆ ತಕ್ಕಂತೆ ಮುಂದೆ ಹೆಚ್ಚಿನ ಅನುದಾನ ನೀಡಲು ಸಹ ಭರವಸೆ ನೀಡಿದ್ದಾರೆ ಎಂದರು.
ಜಿಲ್ಲಾ ಮಟ್ಟದ ಸಭೆ ಮಾಡಿ ಕಾಮಗಾರಿ ಪ್ರಾರಂಭಿಸಿ ಕಾಲಮಿತಿಯೊಳಗೆ ಮುಕ್ತಾಯಗೊಳಿಸಲು ತಿಳಿಸಿದ್ದರು. ಮಂಡಳಿ ರಚನೆಯಾಗಿ ಇಲ್ಲಿಯವರೆಗೆ ಡಿಸೆಂಬರ್ ಪ್ರಾರಂಭದ ವರೆಗೆ ₹740 ಕೋಟಿ ಖರ್ಚು ಆಗಿದ್ದು, ಈ ವರ್ಷ ಅಂದರೆ ಮಾರ್ಚ್ ವರೆಗೆ ₹1500 ಕೋಟಿ ಖರ್ಚು ಮಾಡುವ ಉದ್ದೇಶವಿದೆ. ಜ.19ರಂದು ಅಜಯಸಿಂಗ್ ಅವರಿಗೆ ಬರ ಹೇಳಿದ್ದು ಜಿಲ್ಲಾ ಮಟ್ಟದ ಕೆಕೆಆರ್‌ಡಿಬಿ ಸಭೆ ಕರೆಯಲಾಗಿದೆ. ಅದರಲ್ಲಿ ಶಾಸಕರು, ಕಾರ್ಯನಿರ್ವಹಿಸುವ ಏಜೆನ್ಸಿಗಳು ಪಾಲ್ಗೊಳ್ಳಲಿದ್ದಾರೆ ಎಂದರು.ನಗರಕ್ಕೆ ಪ್ರಸಕ್ತ ₹85 ಕೋಟಿ ರು.ಗಳು ಮಂಜೂರಿಯಾಗಿದೆ. ಶೇ.25 ರಷ್ಟು ಅಕ್ಷರ ಅವಿಷ್ಕಾರ ಯೋಜನೆಯ, ಕಲ್ಯಾಣ ಕರ್ನಾಟಕ ಭಾಗದ ಶಾಲೆಗಳ ರಿಪೇರಿಗಾಗಿ ಮಂಜೂರಿಯಾಗಿದೆ. ಕಳೆದ 2022-23 ನೇ ಸಾಲಿನ ಬಿಜೆಪಿ ಸರ್ಕಾರದ ಸಮಯದಲ್ಲಿ ₹ 3 ಸಾವಿರ ಕೋಟಿ ಮಂಜೂರಿಯಾಗಿತ್ತು. ಅದರಲ್ಲಿ ₹1500 ಕೋಟಿ ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿಗೆ ಕ್ರಿಯಾ ಯೋಜನೆ ತಯಾರಿಗೆ ನೀಡಲಾಗಿತ್ತು ಎಂದರು.
ಕೆಕೆಆರ್‌ಡಿಬಿ ಯೋಜನೆಯಡಿಯಲ್ಲಿ ಬಹುತೇಕ ಕಾಮಗಾರಿ ಕೆಲಸಗಳು ಮುಗಿದಿವೆ. ಈ ವರ್ಷ ಹಣ ಒದಗಿಸಿದ್ದು ₹೩ ಸಾವಿರ ಕೋಟಿ ಕೆಕೆಆರ್‌ಡಿಬಿಯಲ್ಲಿ ಕ್ರಿಯಾ ಯೋಜನೆ ತಯಾರಿಸಿ ಕೆಲಸ ಪ್ರಾರಂಭಿಸಲು ತಿಳಿಸಿದ್ದಾರೆ. ಅದಕ್ಕಾಗಿ ಅಧಿಕಾರಿಗಳು ವೇಗದಲ್ಲಿ ಕಾಮಗಾರಿಗಳನ್ನು ಮಾಡಿ ಮುಗಿಸಿದ್ದಲ್ಲಿ, ಮತ್ತಷ್ಟು ಹೆಚ್ಚಿನ ಅನುದಾನ ಪಡೆಯಲು ಸಾಧ್ಯವಾಗುತ್ತದೆ ಎಂದರು.ಶೇ.90 ರಷ್ಟು ಅಂದಾಜು ಪಟ್ಟಿ ತಯಾರಾಗಿದೆ. ಅದರಲ್ಲಿ ಶಾಲೆ ಕೋಣೆಗಳ ರಿಪೇರಿ, ಶೌಚಾಲಯ, ರಸ್ತೆ, ಕಂಪೌಂಡ್ ವಾಲ್, ವಿಜ್ಞಾನ ಶಿಕ್ಷಕರಿಗೆ ಲ್ಯಾಪ್‌ಟಾಪ್ ನೀಡುವ ಯೋಜನೆಯ ಅಂದಾಜು ಪಟ್ಟಿ ತಯಾರಾಗಿದೆ. ₹4.5 ಕೋಟಿ ವೆಚ್ಚದಲ್ಲಿ ನಾಗರಕೆರೆ, ಮಾವಿನಕೆರೆ ನೀರು ತುಂಬವ ಕೆಲಸ ಪ್ರಾರಂಭವಾಗಿದೆ. ಅದರಲ್ಲಿ ಮಾವಿನಕೆರೆ ಅಭಿವೃವೃದ್ಧಿಗೆ ₹2 ಕೋಟಿ ಮಂಜೂರಾಗಿದೆ. ನಾಗರಕೆರೆ ಸೋರಿಕೆ ತಡೆಗೆ ₹1 ಕೋಟಿ ಟೆಂಡರ್ ಹಂತದಲ್ಲಿದೆ. ಇಷ್ಟೇಲ್ಲಾ ಆದರೆ ಬೇಸಿಗೆ ಕಾಲದಲ್ಲಿ ನೀರಿನ ತೊಂದರೆ ಆಗುವುದಿಲ್ಲ. ₹7 ಕೋಟಿ ವೆಚ್ಚದಲ್ಲಿ ಜೇವರ್ಗಿ ಯಿಂದ ಹತ್ತಿಗುಡೂರ ವರೆಗೆ ರಾಷ್ಟ್ರೀಯ ಹೆದ್ದಾರಿ ರಸ್ತೆಗೆ ಟೆಂಡರ್ ಕರೆಯಲಾಗಿದೆ ಎಂದು ಸಚಿವರು ವಿವರಿಸಿದರು.