ನಿಗಧಿತ ಅವಧಿಯೊಳಗೆ ಕಾಮಗಾರಿಗಳು ಮುಗಿಸಿ

| Published : Sep 07 2024, 01:36 AM IST

ಸಾರಾಂಶ

ಕಮಲನಗರ ಪಟ್ಟಣದ ತಾಲೂಕು ಪಂಚಾಯತ ಸಭಾಂಗಣದಲ್ಲಿ ಗುರುವಾರ ನಡೆದ ಪ್ರಗತಿ ಪರಿಶೀಲನೆ ಸಭೆಯಲ್ಲಿ ತಾಪಂ ಅಧಿಕಾರಿ ಮಾಣಿಕರಾವ್‌ ಪಾಟೀಲ ಸೇರಿ ಅಧಿಕಾರಿಗಳು ಭಾಗವಹಿಸಿದ್ದರು.

ಕನ್ನಡಪ್ರಭ ವಾರ್ತೆ ಕಮಲನಗರ

ನಿಗಧಿತ ಅವಧಿಯೊಳಗೆ ಕಾಮಗಾರಿಗಳು ಮುಗಿಸಬೇಕು ಎಂದು ಅಧಿಕಾರಿಗಳಿಗೆ ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಮಾಣಿಕರಾವ್‌ ಪಾಟೀಲ್ ಸೂಚನೆ ನೀಡಿದರು.

ಪಟ್ಟಣದ ತಾಪಂ ಸಭಾಂಗಣದಲ್ಲಿ ಗುರುವಾರ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿ, ಕರ ವಸೂಲಾತಿ ಕಡಿಮೆ ಇರುವ ಗ್ರಾಮ ಪಂಚಾಯತಗಳು ಹೆಚ್ಚಿನ ಪ್ರಗತಿ ಸಾಧಿಸಬೇಕು ಎಂದು ಪಾಟೀಲ ಹೇಳಿದರು.

ಗ್ರಂಥಾಲಯಗಳು ಇರುವ ಎಲ್ಲಾ ಗ್ರಾಮ ಪಂಚಾಯತಗಳಲ್ಲಿ ಇಂಟರ್ನೆಟ್, ಇನ್‌ವೇಟರ್ ವ್ಯವಸ್ಥೆ ಮಾಡಿಕೊಳ್ಳಬೇಕು ಹಾಗೂ 15ನೇ ಹಣಕಾಸಿನಲ್ಲಿ ಯಾವ ಕಾಮಗಾರಿಗೆ ಕಾಯ್ದಿರಿಸಿದೆಯೋ ಅದೇ ಕಾಮಗಾರಿಗಳಿಗೆ ಉಪಯೋಗಿಸಿ, ಕಾಮಗಾರಿಗಳ ವಿವರಗಳನ್ನು ಸಲ್ಲಿಸಬೇಕು, ಬಯೋಮೆಟ್ರಿಕ್ ಹಾಜರಾತಿ ಶೇ.100ರಷ್ಟು ಇರಬೇಕು. ಶಾಲೆ ಬಿಟ್ಟ ಮಕ್ಕಳ ಸಮೀಕ್ಷೆಯನ್ನು ಈಗಾಗಲೇ ಎನ್‌ಆರ್‌ಎಲ್‌ಎಮ್ ಸಂಘದವರು ಮಾಡುತ್ತಿದ್ದು, ಅದರ ಮೇಲ್ವಿಚಾರಣೆ ಮಾಡಬೇಕು ಎಂದು ತಿಳಿಸಿದರು.

ತಾಲೂಕು ನೋಡಲ್ ಅಧಿಕಾರಿ ಶ್ರೀನಿವಾಸ ಮಾತನಾಡಿದರು. ಸಭೆಯಲ್ಲಿ ಉದ್ಯೋಗ ಖಾತ್ರಿ ಯೋಜನೆ, ಸ್ವಚ್ಛ ಭಾರತ ಮಿಷನ್, ಕುಡಿಯುವ ನೀರು ಮತ್ತು ನೈರ್ಮಲ್ಯ ಸೇರಿದಂತೆ ಇತರೆ ವಿಷಯಗಳ, ಬೂದು ನೀರು ನಿರ್ವಹಣೆ, ವೈಯಕ್ತಿಕ ಶೌಚಾಲಯ, ಗ್ರಾಮ ಆರೋಗ್ಯ ಅಭಿಯಾನ ಕುರಿತು ಸಭೆಯಲ್ಲಿ ಚರ್ಚಿಸಿದರು.

ಈ ಸಂದರ್ಭದಲ್ಲಿ ತಾಪಂ ಸಹಾಯಕ ನಿರ್ದೇಶಕರಾದ ಹಣಮಂತರಾಯ ಕೌಟಗೆ, ತಾಲೂಕಿನ ಗ್ರಾಪಂ ಪಿಡಿಒಗಳಾದ ದತ್ತಾತ್ರಿ, ಪ್ರಶಾಂತ, ವಿಜಯಕುಮಾರ್, ಮಲ್ಲೇಶ, ನಿರ್ಮಲಾ ಸೇರಿ ತಾಪಂ ಸಿಬ್ಬಂದಿಗಳು ಹಾಜರಿದ್ದರು.