ಸಾರಾಂಶ
ಇಲ್ಲಿನ ಶ್ರೀ ಸಿದ್ಧಾರೂಢ ಸ್ವಾಮಿ ರೈಲು ನಿಲ್ದಾಣದ ಪುನರಾಭಿವೃದ್ಧಿ ಸೇರಿದಂತೆ ಹಲವಾರು ರೈಲ್ವೆ ಅಭಿವೃದ್ಧಿ ಕಾಮಗಾರಿಗಳ ಪ್ರಗತಿ ಕುರಿತು ನೈಋತ್ಯ ರೈಲ್ವೆ ಮಹಾಪ್ರಭಂದಕರೊಂದಿಗೆ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಸಭೆ ನಡೆಸಿದರು.
ಕನ್ನಡಪ್ರಭ ವಾರ್ತೆ ಹುಬ್ಬಳ್ಳಿ
ಧಾರವಾಡ ಲೋಕಸಭಾ ವ್ಯಾಪ್ತಿಯೊಳಗೆ ಕೈಗೊಂಡಿರುವ ಹಲವಾರು ರೈಲ್ವೆ ಮೇಲ್ಸೇತುವೆ ಹಾಗೂ ಕೆಳಸೇತುವೆಗಳ ಕಾಮಗಾರಿಗಳನ್ನು ತ್ವರಿತವಾಗಿ ಪೂರ್ಣಗೊಳಿಸುವಂತೆ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅಧಿಕಾರಿಗಳಿಗೆ ಸೂಚನೆ ನೀಡಿದರು.ಮಂಗಳವಾರ ಇಲ್ಲಿನ ಶ್ರೀ ಸಿದ್ಧಾರೂಢ ಸ್ವಾಮಿ ರೈಲು ನಿಲ್ದಾಣದ ಪುನರಾಭಿವೃದ್ಧಿ ಸೇರಿದಂತೆ ಹಲವಾರು ರೈಲ್ವೆ ಅಭಿವೃದ್ಧಿ ಕಾಮಗಾರಿಗಳ ಪ್ರಗತಿ ಕುರಿತು ನೈಋತ್ಯ ರೈಲ್ವೆ ಮಹಾಪ್ರಭಂದಕರೊಂದಿಗೆ ಸಭೆ ನಡೆಸಿ ಮಾತನಾಡಿದರು.
ಇತ್ತೀಚೆಗೆ ಹುಬ್ಬಳ್ಳಿ ರೈಲು ನಿಲ್ದಾಣದಲ್ಲಿ ಕಳ್ಳತನದ ಪ್ರಕರಣಗಳು ಹೆಚ್ಚಾಗುತ್ತಿರುವ ಬಗ್ಗೆ ಸಾರ್ವಜನಿಕರಿಂದ ಬಂದ ದೂರುಗಳ ಹಿನ್ನೆಲೆಯಲ್ಲಿ ರೈಲ್ವೆ ಸುರಕ್ಷತಾ ಪಡೆ, ರೈಲ್ವೆ ಪೊಲೀಸ್ ಹಾಗೂ ಇತರೆ ಭದ್ರತಾ ಅಧಿಕಾರಿಗಳಿಗೆ ಪ್ರಯಾಣಿಕರ ಹಾಗೂ ಅವರೊಂದಿಗೆ ಇರುವ ಸರಕುಗಳ ಸುರಕ್ಷತೆಯ ಬಗ್ಗೆ ಹೆಚ್ಚಿನ ನಿಗಾ ವಹಿಸಲು ಕಟ್ಟುನಿಟ್ಟಿನ ಆದೇಶ ನೀಡಿದರಲ್ಲದೇ ಕಳ್ಳತನದ ಪ್ರಕರಣಗಳ ತನಿಖೆಯನ್ನು ಸೂಕ್ತ ಸಮಯದಲ್ಲಿ ಕೈಗೊಂಡು ಕಳೆದುಕೊಂಡವರಿಗೆ ಆದಷ್ಟು ಬೇಗ ನ್ಯಾಯ ದೊರಕಿಸಿಕೊಡುವಂತೆ ಸೂಚನೆ ನೀಡಿದರು.ಹೊಸದಾಗಿ ನೇಮಕಾತಿ ಹೊಂದಿ ಆದೇಶಗಳಿಗೆ ನಿರೀಕ್ಷೆಯಲ್ಲಿರುವ ಡಿ-ಗ್ರೂಪ್ ಅಭ್ಯರ್ಥಿಗಳಿಗೆ ಬೇಗನೇ ನೇಮಕಾತಿ ಆದೇಶ ಪತ್ರ ನೀಡಲು ಮತ್ತು ಹುಬ್ಬಳ್ಳಿ-ವಾರಣಾಸಿ ರೈಲು ವಾರದಲ್ಲಿ 2 ಬಾರಿ ಓಡಿಸುವ ಎಕ್ಸಪ್ರೆಸ್ ರೈಲುಗಳಿಗೆ ಕೆಲವು ನಿಲ್ದಾಣಗಳಲ್ಲಿ ನಿಲುಗಡೆ, ಕುಂದಗೋಳ ಮೇಲ್ಸೇತುವೆ ಪಕ್ಕದ ಸರ್ವೀಸ್ ರೋಡ್ ನಿರ್ಮಾಣ, ಅಣ್ಣಿಗೇರಿ ನಿಲ್ದಾಣದ ಹತ್ತಿರ ಮೇಲ್ಸೇತುವೆ ನಿರ್ಮಾಣ, ಧಾರವಾಡ ವಿವಿ ಹಾಗೂ ತಪೋವನದ ಹತ್ತಿರ ಕೆಳಸೇತುವೆ ನಿರ್ಮಾಣ, ಕೋವಿಡ್ ಸಮಯದಲ್ಲಿ ಸ್ಥಗಿತಗೊಂಡಿದ್ದ ರೈಲ್ವೆ ಓಡಾಟಗಳ ಪುನರಾರಂಭ ಇತ್ಯಾದಿ ಅನೇಕ ವಿಷಯಗಳ ಕುರಿತು ಚರ್ಚಿಸಲಾಯಿತು.
ಈ ವೇಳೆ ಶಾಸಕ ಮಹೇಶ ಟೆಂಗಿನಕಾಯಿ, ನೈಋತ್ಯ ರೈಲ್ವೆ ಮಹಾಪ್ರಬಂಧಕ ಸಂಜೀವ ಕಿಶೋರ್ ಸೇರಿದಂತೆ ನೈಋತ್ಯ ರೈಲ್ವೆಯ ಹಲವಾರು ಹಿರಿಯ ಅಧಿಕಾರಿಗಳು ಹಾಗೂ ಪೊಲೀಸ್ ಅಧಿಕಾರಿಗಳು ಇದ್ದರು.