ಸಾರಾಂಶ
ಹರಪನಹಳ್ಳಿ ತಾಲೂಕಿನ ಜನತೆಯ ಬಹುದಿನಗಳ ಬೇಡಿಕೆಯಾಗಿರುವ ಅಪೂರ್ಣಗೊಂಡು ನನೆಗುದಿಗೆ ಬಿದ್ದಿರುವ ಗರ್ಭಗುಡಿ ಬ್ರಿಡ್ಜ್ ಕಂ ಬ್ಯಾರೇಜು ಕಾಮಗಾರಿಯನ್ನು ಶೀಘ್ರ ಆರಂಭಿಸಿ ಪೂರ್ಣಗೊಳಿಸಲು ಕ್ರಮ ಕೈಗೊಳ್ಳುತ್ತೇವೆ.
ಕನ್ನಡಪ್ರಭ ವಾರ್ತೆ ಹರಪನಹಳ್ಳಿ
ಹರಪನಹಳ್ಳಿ ತಾಲೂಕಿನ ಜನತೆಯ ಬಹುದಿನಗಳ ಬೇಡಿಕೆಯಾಗಿರುವ ಅಪೂರ್ಣಗೊಂಡು ನನೆಗುದಿಗೆ ಬಿದ್ದಿರುವ ಗರ್ಭಗುಡಿ ಬ್ರಿಡ್ಜ್ ಕಂ ಬ್ಯಾರೇಜು ಕಾಮಗಾರಿಯನ್ನು ಶೀಘ್ರ ಆರಂಭಿಸಿ ಪೂರ್ಣಗೊಳಿಸಲು ಕ್ರಮ ಕೈಗೊಳ್ಳುತ್ತೇವೆ ಎಂದು ಸಣ್ಣ ನೀರಾವರಿ ಸಚಿವ ಎನ್.ಎಸ್. ಬೋಸರಾಜ ತಿಳಿಸಿದರು.ಗರ್ಭಗುಡಿ ಬ್ರಿಡ್ಜ್ ಕಂ ಬ್ಯಾರೇಜು ಕಾಮಗಾರಿ ಸ್ಥಳಕ್ಕೆ ಸೋಮವಾರ ಭೇಟಿ ನೀಡಿ ಪರಿಶೀಲಿಸಿ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಈ ಯೋಜನೆಯ ಗುತ್ತಿಗೆದಾರರು ₹4 ಕೋಟಿ ಬಾಕಿ ಹಣ ಬರಬೇಕಿದೆ ಎಂಬುದು ಸೇರಿದಂತೆ ಇತರೆ ಕಾರಣ ನೀಡಿ ಕಾಮಗಾರಿ ಸ್ಥಗಿತಗೊಳಿಸಿದ್ದಾರೆ ಎಂದರು.
ಬಾಕಿ ಹಣ ನೀಡಿದ ನಂತರ ಕಾಮಗಾರಿ ಮುಂದುವರೆಸುತ್ತೇವೆ ಎಂದು ಹೇಳುತ್ತಾರೆ. ಶಾಸಕಿ ಎಂ.ಪಿ. ಲತಾ ಅವರು ಈ ಕುರಿತು ಮುಖ್ಯಮಂತ್ರಿಗಳ ಗಮನಕ್ಕೂ ತಂದಿದ್ದಾರೆ. ನನಗೂ ಸಾಕಷ್ಟು ಬಾರಿ ಹೇಳಿದ್ದಾರೆ ಆದಕ್ಕಾಗಿ ಇಂದು ವೀಕ್ಷಣೆ ಮಾಡಲು ಬಂದಿದ್ದೇನೆ ಎಂದು ತಿಳಿಸಿದರು.ಇನ್ನೊಮ್ಮೆ ಗುತ್ತಿಗೆದಾರರ ಬಳಿ ಮಾತನಾಡುತ್ತೇವೆ, ಸರಿಹೋಗದಿದ್ದರೆ ಏನು ಮಾಡಬೇಕೊ ಯೋಚಿಸಿ ಒಟ್ಟಿನಲ್ಲಿ ಗರ್ಭಗುಡಿ ಬ್ರಿಡ್ಜ್ ಕಂ ಬ್ಯಾರೇಜು ಕಾಮಗಾರಿ ಪೂರ್ಣಗೊಳಿಸಲು ಕ್ರಮ ತೆಗೆದುಕೊಳ್ಳುತ್ತೇವೆ ಎಂದರು.
ಶಾಸಕಿ ಎಂ.ಪಿ. ಲತಾ ಮಲ್ಲಿಕಾರ್ಜುನ, ಪುರಸಭಾ ಅಧ್ಯಕ್ಷೆ ಎಂ.ಪಾತೀಮಾಭಿ, ಗೌತಮಪ್ರಭು, ಸದಸ್ಯರಾದ ಲಾಟಿದಾದಾಪೀರ, ಜಾಕೀರ, ತಾಪಂ ಮಾಜಿ ಸದಸ್ಯರಾದ ಹುಲ್ಲಿಕಟ್ಟಿ ಚಂದ್ರಪ್ಪ, ಮೈದೂರು ರಾಮಣ್ಣ, ಜಾಹಿದ್, ಎಂ.ವಿ. ಕೃಷ್ಣ, ಜಯಲಕ್ಷ್ಮಿ, ಗಾಯತ್ರಮ್ಮ, ಸಣ್ಣ ನೀರಾವರಿ ಎಇಇ ಮುರಳಿ, ಮತ್ತೂರು ಬಸವರಾಜ, ಸಾಸ್ವಿಹಳ್ಳಿ ನಾಗರಾಜ, ಪ್ರಸಾದ್ ಕಾವಡಿ ಇತರರು ಇದ್ದರು.