ನೀತಿ ಸಂಹಿತೆ ಪಾಲನೆ ಕಡ್ಡಾಯ

| Published : Mar 20 2024, 01:22 AM IST

ಸಾರಾಂಶ

ದೇಶದಲ್ಲಿ ಲೋಕಸಭೆ ಚುನಾವಣೆಯ ದಿನಾಂಕ ಘೋಷಣೆಗೊಂಡಿರುವ ಹಿನ್ನೆಯಲ್ಲಿ ಸದ್ಯ ಚುನಾವಣಾ ಮಾದರಿ ನೀತಿ ಸಂಹಿತೆ ಜಾರಿಗೊಂಡಿದೆ. ಕಾರಣ ಎಲ್ಲ ರಾಜಕೀಯ ಪಕ್ಷಗಳು, ಆಯಾ ಪಕ್ಷಗಳ ಮುಖಂಡರು ಪದಾಧಿಕಾರಿಗಳು ನೀತಿ ಸಂಹಿತೆಯನ್ನು ಕಡ್ಡಾಯವಾಗಿ ಪಾಲಿಸುವುದರೊಂದಿಗೆ ಶಾಂತಿಯುತ ಚುನಾವಣೆಯಾಗುವಂತೆ ನೋಡಿಕೊಳ್ಳಬೇಕು ಎಂದು ಮುದ್ದೇಬಿಹಾಳ ವಿಧಾನಸಭಾ ಮತಕ್ಷೇತ್ರ ತಾಲೂಕು ಚುನಾವಣಾ ಅಧಿಕಾರಿ, ಜಿಲ್ಲಾ ಕೃಷಿ ಇಲಾಖೆ ಜಂಟಿ ನಿರ್ದೇಶಕ ಡಾ.ರಾಜಶೇಖರ ವಿಲಿಯಮ್ಸ್ ತಿಳಿಸಿದರು.

ಕನ್ನಡಪ್ರಭ ವಾರ್ತೆ ಮುದ್ದೇಬಿಹಾಳ

ದೇಶದಲ್ಲಿ ಲೋಕಸಭೆ ಚುನಾವಣೆಯ ದಿನಾಂಕ ಘೋಷಣೆಗೊಂಡಿರುವ ಹಿನ್ನೆಯಲ್ಲಿ ಸದ್ಯ ಚುನಾವಣಾ ಮಾದರಿ ನೀತಿ ಸಂಹಿತೆ ಜಾರಿಗೊಂಡಿದೆ. ಕಾರಣ ಎಲ್ಲ ರಾಜಕೀಯ ಪಕ್ಷಗಳು, ಆಯಾ ಪಕ್ಷಗಳ ಮುಖಂಡರು ಪದಾಧಿಕಾರಿಗಳು ನೀತಿ ಸಂಹಿತೆಯನ್ನು ಕಡ್ಡಾಯವಾಗಿ ಪಾಲಿಸುವುದರೊಂದಿಗೆ ಶಾಂತಿಯುತ ಚುನಾವಣೆಯಾಗುವಂತೆ ನೋಡಿಕೊಳ್ಳಬೇಕು ಎಂದು ಮುದ್ದೇಬಿಹಾಳ ವಿಧಾನಸಭಾ ಮತಕ್ಷೇತ್ರ ತಾಲೂಕು ಚುನಾವಣಾ ಅಧಿಕಾರಿ, ಜಿಲ್ಲಾ ಕೃಷಿ ಇಲಾಖೆ ಜಂಟಿ ನಿರ್ದೇಶಕ ಡಾ.ರಾಜಶೇಖರ ವಿಲಿಯಮ್ಸ್ ತಿಳಿಸಿದರು.

ಪಟ್ಟಣದ ತಾಲೂಕಾಡಳಿತ ಭವನದ ಮುಖ್ಯ ಕಚೇರಿಯಲ್ಲಿ ನಡೆದ ಸರ್ವ ಪಕ್ಷಗಳ ರಾಜಕೀಯ ಪಕ್ಷಗಳ ಮುಖಂಡರುಗಳ ಸಭೆ ನಡೆಸಿ ಮಾದರಿ ನೀತಿ ಸಂಹಿತೆ ಪಾಲನೆ ಕುರಿತು ಉಪಯುಕ್ತ ಮಾಹಿತಿ ನೀಡಿದ ಅವರು, ಈಗಾಗಲೇ ತಮಗೆಲ್ಲ ತಿಳಿದಿರುವಂತೆ ಚುನಾವಣೆಯ ನಿಯಮಗಳನ್ನು ಪಾಲಿಸಲು ಮುಂದಾಗಬೇಕು. ಈ ವೇಳೆ ಮದುವೆ, ಮುಂಜಿವೆ, ಜಾತ್ರೆ, ಸಭೆ ಸಮಾರಂಭಗಳನ್ನು ನಡೆಸುವವರು ಚುನಾವಣಾ ಆಯೋಗದಿಂದ ಪರವಾನಿಗೆ ಪಡೆದುಕೊಳ್ಳುಬೇಕು ಎಂದ ಅವರು, ನೀತಿ ಸಂಹಿತೆ ಮಾಹಿತಿ ಪಡೆದುಕೊಳ್ಳಲು ದೂರುಗಳನ್ನು ನೀಡಲು ಏಕಗವಾಕ್ಷಿ ಎನ್ನುವ ವಿನೂತನ ನಿಯಮ ಆರಂಭಿಸಲಾಗಿದೆ. ಅದಲ್ಲದೇ ಸುವಿಧಾ ತಂತ್ರಾಂಶವನ್ನು ಬಳಸಿಕೊಳ್ಳಬಹುದಾಗಿದೆ. ಚುನಾವಣಾ ವೆಚ್ಚ ಪರಿವೀಕ್ಷಣಾ ತಂಡ ಸೇರಿದಂತೆ ಚೇಕ್ ಪೋಸ್ಟ್‌ಗಳಲ್ಲಿ ಪರಿವೀಕ್ಷಣಾ ತಂಡವೂ ಅಕ್ರಮ ನಡೆಯದಂತೆ ಜಾಗೃತಿ ವಹಿಸಿರುತ್ತದೆ ಎಂದು ಮಾಹಿತಿ ನೀಡಿದರು.

ತಹಸೀಲ್ದಾರ್ ಬಸವರಾಜ ನಾಗರಾಳ ಮಾತನಾಡಿ, ಸದ್ಯ ಲೋಕಸಭಾ ಚುನಾವಣೆಯನ್ನು ಮತಕ್ಷೇತ್ರದಲ್ಲಿ ಯಾವುದೇ ಗೊಂದಲ ಹಾಗೂ ಅಕ್ರಮಗಳು ನಡೆಯದಂತೆ ಕ್ರವ ವಹಿಸಲಾಗಿದೆ. ವ್ಯವಸ್ಥಿತವಾಗಿ ನಡೆಸಲು ಸಕಲ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಈ ನಿಟ್ಟಿನಲ್ಲಿ ನಿಷ್ಪಕ್ಷಪಾತದಿಂದ ಚುನಾವಣೆ ನಡೆಸಲು ಮತಕ್ಷೇತ್ರದ ರಾಜಕೀಯ ಪಕ್ಷಗಳ ಮುಖಂಡರು, ಕಾರ್ಯಕರ್ತರು, ಚುನಾವಣಾ ಕರ್ತವ್ಯ ನಿರ್ವಹಿಸುವ ಸಿಬ್ಬಂದಿಗಳೊಂದಿಗೆ ಸಹಕಾರ ನೀಡುವುದು ಅತ್ಯಗತ್ಯವಾಗಿದೆ. ಜೊತೆಗೆ ಚುನಾವಣಾ ವೇಳೆ ಮತದಾರರಿಗೆ ಮತ್ತು ವಿಶೇಷಚೇತನ, ವಯೋವೃದ್ಧ ಮತದಾರರಿಗೆ ಯಾವುದೇ ತೊಂದರೆಯಾಗದಂತೆ ಮತ್ತು ಚುನಾವಣಾ ಕರ್ತವ್ಯದಲ್ಲಿರುವ ಮತಗಟ್ಟೆ ಸಿಬ್ಬಂದಿಗಳಿಗೆ ಯಾವುದೇ ತೊಂದರೆಯಾಗದಂತೆ ಶುದ್ಧ ಕುಡಿಯುವ ನೀರು, ವಿದ್ಯುತ್ ಸಂಪರ್ಕ, ಶೌಚಾಲಯ ಸೇರಿದಂತೆ ಮೂಲಭೂತ ಸೌಲಭ್ಯಗಳನ್ನು ಒದಗಿಸಲಾಗುವುದು ಎಂದರು.

ಮತಕ್ಷೇತ್ರದಲ್ಲಿ ೧೧೯೩೯ ಪುರುಷ, ೧೧೦೦೩೦ ಮಹಿಳೆ ಮತ್ತು ೨೦ ಇತರೆ ಸೇರಿ ಒಟ್ಟು ೨೨೧೯೯೩ ಮತದಾರರಿದ್ದಾರೆ. ೨೪೫ ಮತಗಟ್ಟೆ ಸ್ಥಾಪಿಸಲಾಗಿದೆ. ತಂಗಡಗಿ, ನಾರಾಯಣಪುರ ಚೆಕ್‌ಪೋಸ್ಟ್ ಮತ್ತು-ಮಿಣಜಗಿ ಕ್ರಾಸ್ ಸೇರಿ ಮೂರು ಕಡೆಗಳಲ್ಲಿ ಚೆಕ್‌ಪೋಸ್ಟ್ ಪ್ರಾರಂಭಿಸಲಾಗಿದೆ. ೦೮೩೫೬-೨೨೦೨೨೭, ೯ ಎಫ್‌ಎಸ್ ತಂಡ, ೨೦ ಜನ ಸೆಕ್ಟರ್ ಆಫೀಸರ್, ೯ ಎಸ್ ಎಸ್‌ಟಿ, ೩ ವಿಎಸ್‌ಟಿ ತಂಡ ೫ ಕ್ರಿಟಿಕಲ್ ಮತಗಟ್ಟೆಗಳು, ಮಿಣಜಗಿಯ ಮತಗಟ್ಟೆ ಸಂಖ್ಯೆ ೨ (ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕೊಠಡಿ ಸಂಖ್ಯೆ-೨), ಕಾಳಗಿಯ ಮತಗಟ್ಟಿ ಸಂಖ್ಯೆ ೧೬೯ (ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯ ಬಲಭಾಗದ ಒಂದನೇ ಕೊಠಡಿ), ತಂಗಡಗಿಯ ಮತಗಟ್ಟೆ ಸಂಖ್ಯೆ ೨೨೫ (ಸರ್ಕಾರಿ ಕನ್ನಡ ಗಂಡು ಮಕ್ಕಳ ಹಿರಿಯ ಪ್ರಾಥಮಿಕ ಶಾಲೆಯ ಬಲಬಾಗದ ಕೊಠಡಿ ಸಂಖ್ಯೆ-೩), ತಾಳಿಕೋಟೆ ಪಟ್ಟಣದ ಮತಗಟ್ಟೆ ಸಂಖ್ಯೆ ೩೦ (ಸರ್ಕಾರಿ ಉರ್ದು ಬಾಲಕಿಯರ ಹಿರಿಯ ಪ್ರಾಥಮಿಕ ಶಾಲೆಯ ಕೊಠಡಿ ಸಂಖ್ಯೆ-೩) ಮತ್ತು ಕೋಳೂರನ ಮತಗಟ್ಟೆ ಸಂಖ್ಯೆ ೨೦೮ (ಸರ್ಕಾರಿ ಮಾದರಿ ಹಿರಿಯ ಪ್ರಾತಮಿಕ ಶಾಲೆಯ ಹಳ ಕಟ್ಟಡದ ಎಡಭಾಗದ ಕೊಠಡಿ ಸಂಖ್ಯೆ-೬) ಇವುಗಳನ್ನು ಕ್ರಿಟಿಕಲ್ ಮತಗಟ್ಟೆಗಳೆಂದು ಗುರ್ತಿಸಲಾಗಿದೆ ಎಂದು ತಿಳಿಸಿದರು.

ಅಭ್ಯರ್ಥಿಗೆ ₹೯೫ ಲಕ್ಷ ಖರ್ಚಿನ ಮಿತಿ ಇದೆ. ಮತಕ್ಷೇತ್ರದಲ್ಲಿ ಏನೇ ಖರ್ಚು ಮಾಡಿದರೂ ಅದು ಸಂಬಂಧಿಸಿದ ಪಕ್ಷದ ಅಭ್ಯರ್ಥಿಗಳ ಲೆಕ್ಕದ ಖಾತೆಗೆ ಆಗುತ್ತದೆ. ಚೆಕ್ ಪೋಸ್ಟ್‌ಗಳಲ್ಲಿ ವಾಹನಗಳ ತಪಾಸಣೆ ನಡೆಸುವುದರಿಂದ ಪ್ರಯಾಣಿಕರು ₹೫೦,೦೦೦ಕ್ಕಿಂತ ಹೆಚ್ಚಿನ ನಗದು ಸಾಗಿಸುವಂತಿಲ್ಲ. ಹೆಚ್ಚಿನ ನಗದು ಇದ್ದಲ್ಲಿ ಅದಕ್ಕೆ ದಾಖಲೆ ಅಗತ್ಯ ಎಂದರು.

ಈ ವೇಳೆ ಬಿಜೆಪಿ ಮಂಡಲ ಅಧ್ಯಕ್ಷ ಜಗದೀಶ ಪಂಪಣ್ಣವರ, ಪ್ರಧಾನ ಕಾರ್ಯದರ್ಶಿ ಲಕ್ಷ್ಮಣ ಬಿಟ್ಟೂರ, ಕಾಂಗ್ರೆಸ್‌ನ ಗೋಪಿ ಮಡಿವಾಳರ, ಜೆಡಿಎಸ್ ಪ್ರತಿನಿಧಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು.