ಸಾರಾಂಶ
ಮತ ಬೇಧವಿಲ್ಲದೇ ಪ್ರತಿಯೊಬ್ಬರೂ ಭಗವದ್ಗೀತೆ ಓದಿ, ಅರ್ಥೈಸಿಕೊಳ್ಳುವುದರೊಂದಿಗೆ ಧರ್ಮಾಚರಣೆಗೆ ಮುಂದಾಗಬೇಕು.ಭಗವದ್ಗೀತಾ ಅಭಿಯಾನದಲ್ಲಿ ಅಧ್ಯಾಪಕ ವಿ.ನಾಗರಾಜ
ಕನ್ನಡಪ್ರಭ ವಾರ್ತೆ ಯಲ್ಲಾಪುರ
ವೇದ, ಧರ್ಮವನ್ನು ಸರಳವಾಗಿ ಪ್ರತಿಯೊಬ್ಬರೂ ಅರ್ಥೈಸಿಕೊಳ್ಳಲೆಂದೇ ಭಗವದ್ಗೀತೆ ರಚಿತವಾಗಿದೆ. ಅರ್ಜುನನನ್ನು ನಿಮಿತ್ತವಾಗಿಸಿಕೊಂಡು ಶ್ರೀಕೃಷ್ಣ ಗೀತೆಯ ಮೂಲಕ ಲೋಕಕ್ಕೆ ಧರ್ಮದ ಸಂದೇಶ ನೀಡಿದ್ದಾನೆ ಎಂದು ಅಧ್ಯಾಪಕ ವಿ.ನಾಗರಾಜ ಭಟ್ಟ ಕೋಣೆಮನೆ ಹೇಳಿದರು.ಅವರು ತಾಲೂಕಿನ ಬೆಳಖಂಡದ ಗೋಪಾಲಕೃಷ್ಣ ದೇವಸ್ಥಾನದಲ್ಲಿ ಇತ್ತೀಚೆಗೆ ಹಮ್ಮಿಕೊಂಡಿದ್ದ ಭಗವದ್ಗೀತಾ ಅಭಿಯಾನದಲ್ಲಿ ಗೀತೆಯ ಮಹತ್ವದ ಕುರಿತು ಮಾತನಾಡಿದರು. ಗೀತೆಯಲ್ಲಿ ಧರ್ಮ-ಅಧರ್ಮಗಳ ಕುರಿತಂತೆ ವಿವರವಾಗಿ ತಿಳಿಸಲಾಗಿದೆ.ಜಾತಿ, ಮತ ಬೇಧವಿಲ್ಲದೇ ಪ್ರತಿಯೊಬ್ಬರೂ ಅದನ್ನು ಓದಿ, ಅರ್ಥೈಸಿಕೊಳ್ಳುವುದರೊಂದಿಗೆ ಧರ್ಮಾಚರಣೆಗೆ ಮುಂದಾಗಬೇಕು ಎಂದರು.ಸ್ವರ್ಣವಲ್ಲೀ ಶ್ರೀಗಳು ಕಳೆದ ೧೬ ವರ್ಷಗಳಿಂದ ಗೀತಾಭಿಯಾನದ ಮೂಲಕ ರಾಜ್ಯಾದ್ಯಂತ ಗೀತೆಯ ಮಹತ್ವ ಸಾರುವ ಮಹತ್ಕಾರ್ಯದಲ್ಲಿ ತೊಡಗಿದ್ದಾರೆ ಎಂದ ಅವರು, ಭಗವದ್ಗೀತೆಯ ಪಠಣವನ್ನು ಅಭಿಯಾನದ ಕಾರ್ಯಕ್ರಮಗಳಿಗೆ ಮಾತ್ರ ಸೀಮಿತಗೊಳಿಸಬಾರದು. ಪ್ರತಿ ನಿತ್ಯ ಮನೆಯಲ್ಲಿ ಗೀತಾಪಠಣ ನಡೆದರೆ ಮಾತ್ರ ಅಭಿಯಾನದ ಉದ್ದೇಶ ಸಾರ್ಥಕವಾಗುತ್ತದೆ ಎಂದರು.ಕಾವೇರಿ ಭಾಗ್ವತ ಹಾಗೂ ಕೇಂದ್ರ ಮಾತೃ ಮಂಡಳಿ ಸಂಚಾಲಕಿ ನಾಗರತ್ನಾ ಭಟ್ಟ ಮಾರ್ಗದರ್ಶನದಲ್ಲಿ ಗೀತೆಯ ೧೦ನೇ ಅಧ್ಯಾಯ ಪಠಿಸಲಾಯಿತು. ವೆಂಕಟ್ರಮಣ ಭಟ್ಟ ಕಬ್ಬಿನಕುಂಬ್ರಿ, ಸುಬ್ರಾಯ ಕೋಣೆಮನೆ, ನಾರಾಯಣ ಭಟ್ಟ ಬೆಳಖಂಡ, ನಾರಾಯಣ ಭಟ್ಟ ಮರಿಯನಪಾಲ, ತಿಮ್ಮಣ್ಣ ಭಟ್ಟ ಮೊಟ್ಟೆಪಾಲ, ಭಾಗೀರಥಿ ಭಟ್ಟ, ಗೀತಾ ಭಟ್ಟ, ಭಾಗೀರಥಿ ಭಟ್ಟ ಹೆಗಡೆಮನೆ, ಅನ್ನಪೂರ್ಣ ಹೆಗಡೆ, ಲಕ್ಷ್ಮಿ ಭಟ್ಟ ಕುಂಟೆಮನೆ, ಸರಸ್ವತಿ ಹೆಗಡೆ, ಮಹಾದೇವಿ ಭಟ್ಟ, ಸುಬ್ಬಿ ಭಟ್ಟ, ಪಾರ್ವತಿ ಕೋಣೆಮನೆ ಮತ್ತಿತರರು ಭಾಗವಹಿಸಿದ್ದರು.