ಕಂಪೌಂಡ್‌ ಗೋಡೆ ಕುಸಿದು ನಾಲ್ವರು ಸಾವು

| Published : Jun 27 2024, 01:06 AM IST

ಸಾರಾಂಶ

ಮಂಗಳವಾರ ರಾತ್ರಿ ಊಟ ಮುಗಿಸಿ ಮನೆಯ ಕೋಣೆಯಲ್ಲಿ ಮಲಗಿದ್ದ ಇಬ್ಬರು ಪುತ್ರಿಯರು ಹಾಗೂ ದಂಪತಿ ಬೆಳಗ್ಗಿನ ಜಾವ ಬಲಿಯಾಗಿದ್ದಾರೆ.

ಕನ್ನಡಪ್ರಭ ವಾರ್ತೆ ಉಳ್ಳಾಲ

ಭಾರಿ ಮಳೆಗೆ ಕಂಪೌಂಡ್ ಗೋಡೆ ಮನೆ ಮೇಲೆ ಉರುಳಿ ಒಂದೇ ಕುಟುಂಬದ ನಾಲ್ವರು ಮಲಗಿದ್ದಲ್ಲೇ ಸಜೀವ ಸಮಾಧಿಯಾಗಿರುವ ಘಟನೆ ಉಳ್ಳಾಲ ತಾಲೂಕಿನ ಮುನ್ನೂರು ಗ್ರಾಮದ ಮದನಿನಗರ ಎಂಬಲ್ಲಿ ಬುಧವಾರ ನಸುಕಿನ ಜಾವ ಸಂಭವಿಸಿದೆ.

ಯಾಸಿರ್ (45), ಅವರ ಪತ್ನಿ ಮರಿಯಮ್ಮ(40) ಮಕ್ಕಳಾದ ರಿಹಾನ (11) ಮತ್ತು ರಿಫಾನ (17) ಮೃತರು. ಅಬೂಬಕ್ಕರ್ ಎಂಬವರಿಗೆ ಸೇರಿದ ಮನೆಯ ಕಂಪೌಂಡ್‌ ಗೋಡೆ ಕುಸಿದು ದುರಂತ ಸಂಭವಿಸಿದೆ. ಹಿರಿಯ ಮಗಳು ಬಕ್ರೀದ್‌ಗೆಂದು ತಾಯಿ ಮನೆಗೆ ಬಂದವರು ಹಬ್ಬ ಮುಗಿಸಿ ಮರುದಿನ ವಾಪಸ್‌ ಗಂಡನ ಮನೆಗೆ ತೆರಳಿದ್ದರು. ಯಾಸೀರ್ ಮಂಗಳೂರಿನ ಬಂದರಿನಲ್ಲಿ ಮಡ್ಡಿ ಆಯಿಲ್ ಕಾರ್ಯನಿರ್ವಹಿಸುತ್ತಿದ್ದರು.

ಮಂಗಳವಾರ ರಾತ್ರಿ ಊಟ ಮುಗಿಸಿ ಮನೆಯ ಕೋಣೆಯಲ್ಲಿ ಮಲಗಿದ್ದ ಇಬ್ಬರು ಪುತ್ರಿಯರು ಹಾಗೂ ದಂಪತಿ ಬೆಳಗ್ಗಿನ ಜಾವ ಬಲಿಯಾಗಿದ್ದಾರೆ. ರಾತ್ರಿಯಿಡೀ ಭಾರಿ ಮಳೆ ಸುರಿದ ಪರಿಣಾಮ ಕಂಪೌಂಡ್ ಗೋಡೆ ಹಾಗೂ ಎರಡು ಅಡಕೆ ಮರಗಳು ಯಾಸಿರ್ ಅವರ ಮನೆ ಮೇಲೆ ಉರುಳಿಬಿದ್ದಿದೆ. ರಿಹಾನಾ ಹಾಗೂ ರಿಫಾನ ನಗರದ ಖಾಸಗಿ ಶಿಕ್ಷಣ ಸಂಸ್ಥೆಯಲ್ಲಿ ಶಾಲೆ ಹಾಗೂ ಕಾಲೇಜಿಗೆ ಹೋಗುತ್ತಿದ್ದರು. ಆರು ವರ್ಷಗಳ ಹಿಂದೆ ಮನೆ ಖರೀದಿಸಿದ್ದ ಇವರು ಒಂದು ವರ್ಷ ಮನೆಯನ್ನು ಲೀಸ್‌ಗೆ ನೀಡಿದ್ದರು. ಆರು ತಿಂಗಳ ಹಿಂದಷ್ಟೇ ಈ ಮನೆಗೆ ವಾಪಸ್ಸಾಗಿದ್ದರು. ಎರಡು ವರ್ಷಗಳ ಹಿಂದೆಯೂ ಮನೆ ಮೇಲೆ ಇದೇ ರೀತಿ ಕಂಪೌಂಡ್ ಕುಸಿದಿತ್ತು, ಆದರೆ ಅದೃಷ್ಟವಶಾತ್‌ ಯಾವುದೇ ಪ್ರಾಣಾಪಾಯವಾಗಿರಲಿಲ್ಲ. ಕಾರ್ಯಾಚರಣೆ: ಮೂರು ಗಂಟೆಗಳ ಕಾಲ ನಿರಂತರ ಕಾರ್ಯಾಚರಣೆ ಬಳಿಕ ನಾಲ್ಕು ಮೃತದೇಹಗಳನ್ನು ಹೊರತೆಗೆಯಲಾಗಿದೆ. ಸ್ಥಳೀಯರು ಮೂರು ಮೃತದೇಹಗಳನ್ನು ಅವಶೇಷಗಳಡಿಯಿಂದ ಹೊರತೆಗೆದರೆ ಅಗ್ನಿಶಾಮಕ ದಳ ಸ್ಥಳೀಯರ ಜೊತೆ ಎರಡು ಗಂಟೆ ಕಾರ್ಯಾಚರಣೆ ನಡೆಸಿ ಕೊನೆಯ ಮೃತದೇಹವನ್ನು ಹೊರತೆಗೆದಿದ್ದಾರೆ. ಸರ್ಕಾರದಿಂದ ಕುಟುಂಬಕ್ಕೆ ಗರಿಷ್ಠ ಪರಿಹಾರ: ಖಾದರ್ಕುತ್ತಾರು ಮದನಿನಗರ ಘಟನಾ ಸ್ಥಳಕ್ಕೆ ಕ್ಷೇತ್ರದ ಶಾಸಕ, ವಿಧಾನಸಭೆ ಸ್ಪೀಕರ್‌ ಯು.ಟಿ. ಖಾದರ್‌ ಭೇಟಿ ನೀಡಿದರು. ಬಳಿಮ ಮಾಧ್ಯಮದ ಜೊತೆಗೆ ಮಾತನಾಡಿದ ಅವರು, ಇದೊಂದು ಅತ್ಯಂತ ನೋವಿನ ಸಂಗತಿ. ಯಾಸೀರ್ ಕುಟುಂಬಸ್ಥರ ನೋವಿನ ಜೊತೆಗೆ ಎಲ್ಲರೂ ಇದ್ದೇವೆ, ಮತ್ತೆ ಇಂತಹ ಘಟನೆ ಮರುಕಳಿಸದಂತೆ ಜಿಲ್ಲಾಧಿಕಾರಿ, ಸಿಇಒ ಜೊತೆಗೆ ಚರ್ಚಿಸಿ ತಾತ್ಕಾಲಿಕ ಪರಿಹಾರ ತಕ್ಷಣ ಕ್ರಮಕೈಗೊಳ್ಳಲಾಗುವುದು ಎಂದರು.

ಈ ಘಟನೆಗೆ ಪರಿಹಾರ ನೀಡುವ ಸಂಬಂಧ ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರೊಂದಿಗೆ ಸಂಪರ್ಕಿಸಿ ಸರ್ಕಾರದಿಂದ ಸಾಧ್ಯವಾದಷ್ಟು ಪರಿಹಾರ ನೀಡುವ ಕುರಿತು ಚರ್ಚಿಸಲಾಗಿದೆ. ಮದನಿನಗರದ ಎಲ್ಲ ಯುವಕರು, ಗ್ರಾ.ಪಂ. ಸದಸ್ಯರ ಕಾರ್ಯಾಚರಣೆ ಶ್ಲಾಘಿಸುತ್ತೇನೆ. ಯಾಸೀರ್‌ ಅವರ ಹಿರಿಯ ಮಗಳು ಬಂದ ತಕ್ಷಣ ಗೌರವಪೂರ್ವಕವಾಗಿ ಎಲ್ಲರೂ ಸೇರಿಕೊಂಡು ಅಂತ್ಯಸಂಸ್ಕಾರ ನಡೆಸಲಾಗುವುದು ಎಂದು ಖಾದರ್‌ ಹೇಳಿದರು.

ಸಮತಟ್ಟಾದ ಪ್ರದೇಶದಲ್ಲೂ ಪ್ರಕೃತಿ ವಿಕೋಪಗಳು ನಡೆದಿದೆ. ಎಲ್ಲರಿಗೂ ಇದು ಎಚ್ಚರಿಕೆಯ ಸಂದೇಶ. ಎತ್ತರ ಪ್ರದೇಶದಲ್ಲಿ ಮನೆಕಟ್ಟುವವರು ಕೆಳಗಿನ ಮನೆಯವರ ಬಗ್ಗೆ ಕಾಳಜಿ ವಹಿಸಬೇಕು ಎಂದ ಖಾದರ್‌, ದುರಂತ ನಡೆದ ಸ್ಥಳದ ಮೇಲಿನ ಮನೆಯೂ ಆತಂಕದಲ್ಲಿದ್ದು, ಮಣ್ಣು ತೆಗೆದಲ್ಲಿ ಅದು ಬೀಳುವ ಸಾಧ್ಯತೆಯಿದೆ. ಮರಳು ಚೀಲಗಳು ತಾತ್ಕಾಲಿಕ ಪರಿಹಾರವಾಗಿದೆ. ಸರ್ಕಾರದ ನಿಯಮ ಮೀರಿ ಮನೆ ನಿರ್ಮಿಸದಂತೆ ಸ್ಥಳೀಯಾಡಳಿತ ಎಚ್ಚರಿಕೆ ವಹಿಸಬೇಕು ಎಂದರು.

ಘಟನಾ ಸ್ಥಳಕ್ಕೆ ಭೇಟಿ ನೀಡಿದ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್‌ ಮಾತನಾಡಿ, ಪ್ರಕೃತಿ ವಿಕೋಪದಿಂದ ಸಂಭವಿಸಿದ ಘಟನೆಗೆ ಜಿಲ್ಲಾಡಳಿತದಿಂದ ಎಲ್ಲ ರೀತಿಯ ಸಹಕಾರ ಕುಟುಂಬಸ್ಥರಿಗೆ ನೀಡಲಾಗುವುದು. ಎಲ್ಲ ಮೃತದೇಹಗಳನ್ನು ಸ್ಥಳೀಯ ಖಾಸಗಿ ಆಸ್ಪತ್ರೆಯಲ್ಲಿ ಇರಿಸಲಾಗಿದೆ. ಕೇರಳದಲ್ಲಿರುವ ಅವರ ಪುತ್ರಿ ಬಂದ ಮೇಲೆ ಅಂತಿಮ ಸಂಸ್ಕಾರ ನಡೆಸಲಾಗುವುದು. ಪರಿಹಾರ ಕ್ರಮದ ಕುರಿತು ಅಧಿಕಾರಿಗಳ ಜೊತೆಗೆ ಚರ್ಚಿಸಲಾಗುವುದು ಎಂದರು.

ಸರ್ಕಾರ ಮುಂಜಾಗ್ರತಾ ಕ್ರಮ ವಹಿಸಬೇಕು- ನಳಿನ್ ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್ ಘಟನಾ ಸ್ಥಳಕ್ಕೆ ಭೇಟಿ ನೀಡಿ ಮಾತನಾಡಿ, ಜಿಲ್ಲೆಯ ಮದನಿನಗರದಲ್ಲಿ ಮೃತಪಟ್ಟವರ ಆತ್ಮಕ್ಕೆ ಸದ್ಗತಿ ಬಯಸುತ್ತೇನೆ. ಇದು ವಸತಿ ಪ್ರದೇಶವಾಗಿದ್ದು, ಮುಂಜಾಗ್ರತಾ ಕ್ರಮವನ್ನು ಸರಕಾರ ವಹಿಸಬೇಕಿದೆ. ಮನೆಗಳಿಗೆ ತಕ್ಷಣ ಪರಿಹಾರವನ್ನು ಸರ್ಕಾರ ನೀಡಬೇಕು. ನಾಲ್ಕು ಜೀವಗಳು ಬಲಿಯಾದ ಪ್ರದೇಶದಲ್ಲಿ ಇನ್ನಷ್ಟು ಮನೆಗಳಿದ್ದು, ತಕ್ಷಣದಿಂದ ಸರಕಾರ ಮುಂಜಾಗ್ರತಾ ಕ್ರಮ ಅನುಸರಿಸಬೇಕಿದೆ ಎಂದರು.

ಈ ಸಂದರ್ಭ ಜಿಲ್ಲಾ ಬಿಜೆಪಿ ಅಧ್ಯಕ್ಷ ಸತೀಶ್ ಕುಂಪಲ, ಮಂಗಳೂರು ಕ್ಷೇತ್ರ ಪ್ರಭಾರ ಅಧ್ಯಕ್ಷ ಹೇಮಂತ್ ಶೆಟ್ಟಿ ದೇರಳಕಟ್ಟೆ, ಮುಖಂಡ ಸಂತೋಷ್ ರೈ ಬೋಳಿಯಾರ್ ಉಪಸ್ಥಿತರಿದ್ದರು. ನಾಲ್ವರ ಪ್ರಾಣ ಬಲಿ ಪಡೆಯಿತಾ ಅಡಕೆ ಗಿಡ...?

ಅಬೂಬಕ್ಕರ್ ಮನೆಯ ಹಿಂಭಾಗದಲ್ಲೇ ಬೆಳೆದಿದ್ದ ಎರಡು ಅಡಕ ಗಿಡಗಳು ನಾಲ್ವರ ಪ್ರಾಣಕ್ಕೆ ಕುತ್ತು ತಂದಿವೆ. ಮೇಲ್ಭಾಗದ ಕಂಪೌಂಡ್ ಗೋಡೆಗೆ ತಾಗಿ ಬೆಳೆದಿದ್ದ ಅಡಕೆ ಗಿಡ ಭಾರೀ ಗಾಳಿ ಮಳೆಗೆ ಅಲುಗಾಡಿದ ಪರಿಣಾಮ ಮಣ್ಣು ಸಡಿಲಗೊಂಡಿದೆ. ಜೊತೆಗೆ ಮಳೆ ನೀರು ಶೇಖರಣೆಗೊಂಡ ಪರಿಣಾಮ ಮತ್ತಷ್ಟು ಮೃದುವಾಗಿ ಕಂಪೌಂಡ್ ವಾಲ್ ಕುಸಿದು ಮನೆಯ ಮೇಲೆ ಉರುಳಿ ಬಿದ್ದ ಪರಿಣಾಮ ನಾಲ್ವರ ಜೀವವೇ ಬಲಿಯಾಗಿದೆ.

ಒಬ್ಬಳ ಕೈ ಅಲುಗಾಡ್ತಿತ್ತು, ಆದರೆ ಪ್ರಾಣ ಉಳಿಸಲು ಆಗಲಿಲ್ಲಅಗ್ನಿಶಾಮಕ, ಪೊಲೀಸರು ಬರುವ ಮೊದಲೇ ಸ್ಥಳೀಯರು ಕಾರ್ಯಾಚರಣೆ ನಡೆಸಿದ್ದರು. ಸ್ಥಳೀಯ ಯುವಕರ ತಂಡ ನಾಲ್ವರ ಪ್ರಾಣ ಉಳಿಸಲು ಸತತ ಮೂರ್ನಾಲ್ಕು ಗಂಟೆ ಹೋರಾಡಿದೆ. ಬೆಳಗ್ಗೆ ಆರು ಗಂಟೆಗೆ ಭಾರೀ ಶಬ್ದ ಕೇಳಿ ಹೊರಗೆ ಬಂದು ನೋಡಿದೆವು. ಆಗ ಮನೆಯ ಮೇಲೆ ಗೋಡೆ ಕುಸಿದು ಬಿದ್ದಿತ್ತು. ತಕ್ಷಣ ಸ್ಥಳೀಯರೆಲ್ಲ ಸೇರಿ ಮನೆಯ ಬಾಗಿಲು ಒಡೆದೆವು. ಒಳಗೆ ಹೋದಾಗ ನಮಗೆ ಕರೆಂಟ್ ಶಾಕ್ ಹೊಡೆಯಿತು. ಮಳೆ ನೀರು ನುಗ್ಗಿ ವಯರಿಂಗ್‌ನಲ್ಲಿ ಕರೆಂಟ್ ಶಾಕ್‌ ಆಗ್ತಿತ್ತು. ಬಳಿಕ ನಮ್ಮಲ್ಲೇ ಇದ್ದ ಎಲೆಕ್ಟ್ರಿಶಿಯನ್‌ ಒಬ್ಬರು ಲೈನ್ ಆಫ್ ಮಾಡಿದ್ರು. ಆ ಬಳಿಕ ನಾವು ಕಾರ್ಯಾಚರಣೆ ನಡೆಸಲು ಶುರು ಮಾಡಿದೆವು. ಮೂವರು ಹಾಲ್‌ನಲ್ಲಿ ಮಲಗಿದ್ದರು. ಒಬ್ಬಳು ಕೋಣೆಯಲ್ಲಿ ಇದ್ದಳು. ನಾವು ಮೊದಲು ಮೂವರನ್ನು ಮಣ್ಣಿನ ಅಡಿಯಿಂದ ತೆಗೆದಾಗ ಬಾಲಕಿಯ ಕೈ ಅಲುಗಾಡ್ತಿತ್ತು. ಆದರೆ ರಸ್ತೆ ಕಿರಿದಾಗಿ ಆಂಬುಲೆನ್ಸ್ ಬರಲಾಗದೆ ಆಸ್ಪತ್ರೆಗೆ ಸಾಗಿಸುವ ದಾರಿ ಮಧ್ಯೆ ಮೃತಪಟ್ಟಿದ್ದಾಳೆ. ನಾವು ಮೂರು ಮೃತದೇಹ ಹೊರ ತೆಗೆದ ಬಳಿಕ ಅಗ್ನಿಶಾಮಕ, ಪೊಲೀಸರು ಬಂದರು. ನಾಲ್ಕನೇ ಮೃತದೇಹ ಸ್ವಲ್ಪ ತಡವಾಗಿ ತೆಗೆದೆವು. ಕಳೆದ ಬಾರಿಯೂ ಇದೇ ಗೋಡೆ ಬಿದ್ದು ಈ ಮನೆಗೆ ಹಾನಿ ಆಗಿತ್ತು. ಆದರೆ ಆಗ ಅವರು ಇರಲಿಲ್ಲ, ಮಂಗಳೂರಿನಲ್ಲಿ ವಾಸ ಇದ್ರು ಎಂದು ಕಾರ್ಯಾಚರಣೆ ನಡೆಸಿದ ವ್ಯಕ್ತಿ ತಿಳಿಸಿದ್ದಾರೆ. ಬಕ್ರೀದ್‌ ಹಬ್ಬಕ್ಕೆ ಬಂದು ಹೋಗಿದ್ದ ಹಿರಿಯ ಮಗಳು

ಮೃತ ಯಾಸೀರ್ ಅವರ ದೊಡ್ಡ ಮಗಳು ರಶೀನಾಳನ್ನ ಕೇರಳ ಭಾಗಕ್ಕೆ ಮದುವೆ ಮಾಡಿ ಕೊಡಲಾಗಿತ್ತು. ಬಕ್ರೀದ್ ಹಿನ್ನೆಲೆಯಲ್ಲಿ ತಂದೆಯ ಮನೆಗೆ ರಶೀನಾ ಬಂದಿದ್ದರು. ಮನೆಯವರ ಜೊತೆ ಸಂತೋಷವಾಗಿ ಕಾಲಕಳೆದಿದ್ದ ರಶೀನಾ ಹಬ್ಬ ಮುಗಿಸಿ ಮರುದಿನ ಗಂಡನ ಮನೆಗೆ ಹೋಗಿದ್ದರು. ಈಗ ಹೆತ್ತವರು, ಸಹೋದರಿಯರಿಲ್ಲದ ಮನೆಗೆ ಬರುವಂತಾಗಿದೆ. ಮಂಗಳವಾರ ರಾತ್ರಿ ಪಕ್ಕದ ಮನೆಯಲ್ಲಿ ಕೆಲಹೊತ್ತು ಮಾತನಾಡಿದ್ದ ಮರಿಯಮ್ಮ ದಂಪತಿ ಬಳಿಕ ಮಕ್ಕಳ ಜೊತೆ ಊಟ ಮುಗಿಸಿ ನಿದ್ದೆಗೆ ಜಾರಿದ್ದರು. ಆದರೆ ವಿಧಿಯಾಟ ಬೇರೆಯೇ ಆಗಿದ್ದು, ಆ ನಾಲ್ವರು ಮತ್ತೆ ಮೇಲೆ ಏಳಲೇ ಇಲ್ಲ.