ಸಾರಾಂಶ
ಕನ್ನಡಪ್ರಭ ವಾರ್ತೆ ದೊಡ್ಡಬಳ್ಳಾಪುರ
ತಾಲೂಕಿನ ಹಾಡೋನಹಳ್ಳಿಯಲ್ಲಿರುವ ಬೆಂಗಳೂರು ಗ್ರಾಮಾಂತರ ಜಿಲ್ಲಾ ಕೃಷಿ ವಿಜ್ಞಾನ ಕೇಂದ್ರದಲ್ಲಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧಿಕಾರಿಗಳಿಗೆ ಸಮಗ್ರ ಪೋಷಕಾಂಶ ಹಾಗೂ ಗೊಬ್ಬರ ನಿರ್ವಹಣೆ ಕುರಿತು 15 ದಿನಗಳ ತರಬೇತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.ತರಬೇತಿಯ ಭಾಗವಾಗಿ 25 ವಿವಿಧ ಉಪನ್ಯಾಸಗಳು ಹಾಗೂ ಐದು ಕ್ಷೇತ್ರ ಭೇಟಿಗಳನ್ನು ಏರ್ಪಡಿಸಲಾಗಿತ್ತು. ಜೈವಿಕ ಗೊಬ್ಬರಗಳ ಉತ್ಪಾದನೆ ಘಟಕ ಮತ್ತು ಮೂಡಿಗೆರೆಯಲ್ಲಿನ ಕೃಷಿ ವಿಜ್ಞಾನ ಕೇಂದ್ರ, ತೋಟಗಾರಿಕೆ ಮಹಾವಿದ್ಯಾಲಯದ ವಿವಿಧ ವಿಭಾಗಗಳಿಗೆ ಶಿಬಿರಾರ್ಥಿಗಳನ್ನು ಕರೆದೊಯ್ಯಲಾಗಿತ್ತು.ಕ್ಷೇತ್ರ ಭೇಟಿಗಳಲ್ಲಿ ವಿವಿಧ ಪೋಷಕಾಂಶಗಳ ಕೊರತೆಯ ಲಕ್ಷಣಗಳನ್ನು ಶಿಬಿರಾರ್ಥಿಗಳಿಗೆ ಕ್ಷೇತ್ರ‍್ರದಲ್ಲಿಯೇ ವಿವಿಧ ಬೆಳೆಗಳಲ್ಲಿ ಪ್ರಾಯೋಗಿಕವಾಗಿ ತಿಳಿಸಿಕೊಡಲಾಯಿತು ಮತ್ತು ವಿವಿಧ ರೀತಿಯ ಗೊಬ್ಬರ ಉತ್ಪಾದನೆ ಘಟಕಗಳು ಹಾಗೂ ಗೊಬ್ಬರ ಕಲಬೆರಕೆ, ಮಣ್ಣು ಪರೀಕ್ಷೆಯ ಬಗ್ಗೆ ತಿಳಿಸಿ ಕೊಡಲಾಯಿತು.ಬೆಳೆಗಳ ಉತ್ಪಾದನೆಯಲ್ಲಿ ಸಮಗ್ರ ಪೋಷಕಾಂಶಗಳ ಮಹತ್ವ ಪೋಷಕಾಂಶ ಕೊರತೆಯ ಲಕ್ಷಣಗಳು, ಮಣ್ಣು ಪರೀಕ್ಷೆ ಹಾಗೂ ಬೆಳೆ ಸ್ಪಂದನೆ ಪ್ರಯೋಜನೆ, ರಸಗೊಬ್ಬರ ನಿಯಂತ್ರಣ ಕಾಯ್ದೆಯ ಉದ್ದೇಶಗಳು ಕುರಿತು ವಿವಿಧ ಉಪನ್ಯಾಸಗಳನ್ನು ನೀಡಿದರು.ಕೃಷಿ ವಿಜ್ಞಾನ ಕೇಂದ್ರದ ಪ್ರಾಧ್ಯಾಪಕ ಡಾ. ಪಿ. ವೀರನಾಗಪ್ಪ ಮಾತನಾಡಿ, ಎಲ್ಲಾ ಶಿಬಿರಾರ್ಥಿಗಳಿಗೆ ಕರ್ನಾಟಕದ ಕೃಷಿ ಪರಿಚಯ, ಮಣ್ಣಿನ ಉತ್ಪತ್ತಿ, ಮಣ್ಣಿನ ಪಾರ್ಶ್ವ ದೃಶ್ಯ, ಪದರಗಳು, ಮಣ್ಣಿನ ಜೈವಿಕ, ಬೌತಿಕ ಹಾಗೂ ರಾಸಾಯನಿಕ ಗುಣ, ವಿವಿಧ ರೀತಿಯ ಮಣ್ಣುಗಳು, ಕೃಷಿ ಬೆಳೆಗಳಲ್ಲಿ ಪೋಷಕಾಂಶಗಳ ಪಾತ್ರ ಪೋಷಕಾಂಶವನ್ನು ಪೂರೈಕೆ ಮಾಡಲು ಬೇಕಾಗುವ ಎಲ್ಲಾ ರೀತಿಯ ಸಾವಯವ ಗೊಬ್ಬರ, ರಾಸಾಯನಿಕ ಗೊಬ್ಬರಗಳ ಲೆಕ್ಕಾಚಾರ ಮತ್ತು ಸಿದ್ದಗಣಿತ ಇವುಗಳ ಜೊತೆಗೆ ಮಣ್ಣಿನ ಫಲವತ್ತತೆ, ಮಣ್ಣಿನ ಆರೋಗ್ಯ ಮತ್ತು ರಸಗೊಬ್ಬರ ನಿರ್ವಹಣೆಯ ವಿಷಯಗಳ ಕುರಿತು ಹಲವಾರು ತಜ್ಞರು ಶಿಬಿರಾರ್ಥಿಗಳಿಗೆ ವಿವರಿಸಿದ್ದಾರೆ ಎಂದರು.
ಶಿಬಿರಾರ್ಥಿಗಳಿಗೆ ನ್ಯಾನೋ ಹಾಗೂ ರಾಸಾಯನಿಕ ಗೊಬ್ಬರಗಳಲ್ಲಿ ಕಲಬೆರಿಕೆ ಕಂಡುಹಿಡಿಯುವ ವಿಧಾನ, ಹನಿ ರಸಾವರಿ ತಾಂತ್ರಿಕತೆ, ಸಮಗ್ರ ಪೋಷಕಾಂಶಗಳ ನಿರ್ವಹಣೆ ಸಂವಹನ ಕೌಶಲ್ಯಗಳು ಮತ್ತು ಸಾಮಾಜಿಕ ಮಾಧ್ಯಮಗಳ ಕುರಿತು ಮಾಹಿತಿ ನೀಡಿದರು.ವಿಜ್ಞಾನಿ ಡಾ.ಎ.ಜೆ.ಚಂದ್ರೇಗೌಡ ಮಾತನಾಡಿ, ಎಲ್ಲಾ ಶಿಬಿರಾರ್ಥಿಗಳು ವಿಜ್ಞಾನಿಗಳ ನಿಕಟ ಸಂಪರ್ಕದಿಂದ ಮಾತ್ರ ರೈತರಿಗೆ ನೆರವಾಗಲು ಅನುಕೂಲವಾಗುವುದರ ಜೊತೆಗೆ ವ್ಯವಸಾಯದಲ್ಲಿ ನೋಡಿ ಕಲಿ- ಮಾಡಿ ನಲಿ ಎಂಬಂತೆ ರೈತರಾದಲ್ಲಿ ಮಾತ್ರ ಅವರ ಕಷ್ಟ ತಿಳಿಯಲು ಸಾಧ್ಯ. ಹಾಗೆಯೇ ದೈನಂದಿನ ವ್ಯವಹಾರದಲ್ಲಿ ನೈತಿಕತೆಯನ್ನು ಅಳವಡಿಸಿಕೊಳ್ಳುವಂತೆ ಸಲಹೆ ನೀಡಿದರು.
ಶಿಬಿರಾರ್ಥಿ ಚಂದ್ರ,ಟಿ.ಪಿ ಮಾತನಾಡಿ, 15 ದಿನಗಳ ತರಬೇತಿ ವೈಜ್ಞಾನಿಕವಾಗಿದ್ದು ಇದರಿಂದ ಹಲವು ವಿಷಯಗಳ ಜೊತೆ ಕ್ಷೇತ್ರ ಸಮಸ್ಯೆಗಳನ್ನು ತಿಳಿದುಕೊಂಡಿರುವುದಾಗಿ ತಿಳಿಸಿದರು. ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಡಾ.ಹನುಮಂತರಾಯ ಮತ್ತಿತರರು ಉಪಸ್ಥಿತರಿದ್ದರು.ಫೋಟೋ-9ಕೆಡಿಬಿಪಿ1-
ದೊಡ್ಡಬಳ್ಳಾಪುರ ತಾಲೂಕಿನ ಹಾಡೋನಹಳ್ಳಿಯ ಕೃಷಿ ವಿಜ್ಞಾನ ಕೇಂದ್ರದಲ್ಲಿ ಸಮಗ್ರ ಪೋಷಕಾಂಶ ಹಾಗೂ ಗೊಬ್ಬರ ನಿರ್ವಹಣೆ ಕುರಿತು 15 ದಿನಗಳ ತರಬೇತಿ ಕಾರ್ಯಕ್ರಮ ನಡೆಯಿತು.