ಸಾರಾಂಶ
ಕನ್ನಡಪ್ರಭ ವಾರ್ತೆ ಗೌರಿಬಿದನೂರು
ಪಂಚಾಯಿತಿ ಮಟ್ಟದ ಅಧಿಕಾರಿಗಳು ಸಾಮೂಹಿಕ ಜವಾಬ್ದಾರಿಯಿಂದ ಕೆಲಸ ನಿರ್ವಹಿಸಿದರೆ ಆದರ್ಶ ಗ್ರಾಮಗಳನ್ನು ನಿರ್ಮಾಣ ಮಾಡಬಹುದು ಎಂದು ಶಾಸಕ ಕೆ. ಎಚ್. ಪುಟ್ಟಸ್ವಾಮಿಗೌಡ ತಿಳಿಸಿದರು.ತಾಲೂಕಿನ ಕಸಬಾ ಹೋಬಳಿಯ ವಿದುರಾಶ್ವತ್ಥ ವೀರಸೌಧದ ಸಭಾಂಗಣದಲ್ಲಿ ಪಂಚಾಯತ್ ರಾಜ್ ಇಲಾಖೆಯ ವತಿಯಿಂದ ಶನಿವಾರ ನರೇಗಾ ದಿನಾಚರಣೆ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಶಾಸಕರು ಮತ್ತು ಗಣ್ಯರು ಸೇರಿ ದೀಪ ಬೆಳಗುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ ನಂತರ ಮಾತನಾಡಿದರು.
ನರೇಗಾದಂಥ ಯೋಜನೆಗಳಿಂದ ಗ್ರಾಮಗಳ ಸರ್ವತೋಮುಖ ಅಭಿವೃದ್ಧಿಗೆ ಪೂರಕವಾಗಿ ಚುನಾಯಿತರಾದ ಜನ ಪ್ರತಿನಿಧಿಗಳು ಕೈ ಜೋಡಿಸಿದರೆ ರಸ್ತೆ, ನೀರು, ಚರಂಡಿ, ಶಾಲೆಯ ಕೆಲಸಗಳಂಥ ಅನೇಕ ಮೂಲಭೂತ ಸೌಲಭ್ಯಗಳಿಂದ ತಮ್ಮ ಹಳ್ಳಿಯ ಸೌಂದರ್ಯವನ್ನು ಸುಂದರವಾಗಿಟ್ಟುಕೊಳ್ಳಬಹುದೆಂದು ತಿಳಿಸಿದರು.ಕೂಲಿಕಾರರಿಗೆ ಕುಡಿಯುವ ನೀರಿನ ವ್ಯವಸ್ಥೆ, ದಣಿವಾರಿಸಿಕೊಳ್ಳಲು ನೆರಳಿನ ವ್ಯವಸ್ಥೆ ಮಾಡುವುದು ನರೇಗಾ ಯೋಜನೆಯಲ್ಲಿದೆ. ಕಾರ್ಮಿಕ ಆಂದೋಲನದ ಸಾಮಾಜಿಕ ಮತ್ತು ಆರ್ಥಿಕ ಸಾಧನೆಗಳನ್ನು ಆಚರಿಸುವ ದಿನ ಇದಾಗಿದ್ದು, ಸಾಕಷ್ಟು ಕಾರ್ಮಿಕ ಹೋರಾಟಗಾರರ ಶ್ರಮದ ಫಲದಿಂದ ಇಂದಿನ ದಿನಗಳಲ್ಲಿ ಸರ್ಕಾರದ ಯೋಜನೆಗಳಲ್ಲಿ ಕಾರ್ಮಿಕರಿಗೆ ಅಧಿಕ ಸೌಲಭ್ಯಗಳು ಸಿಗುವಂತಾಗಿದೆ. ಈ ದಿನವನ್ನು ಅರ್ಥಪೂರ್ಣವಾಗಿ ಆಚರಿಸಿ ಕೂಲಿಕಾರರು ಸಂಭ್ರಮಿಸಬೇಕೆಂದು ತಿಳಿಸಿದರು.
ಕಾರ್ಯನಿರ್ವಾಹಕ ಅಧಿಕಾರಿ ಜಿ. ಕೆ. ಹೊನ್ನಯ್ಯ ಮಾತನಾಡಿ, ನರೇಗಾ ಯೋಜನೆ ಅಡಿ ಕಳೆದ ಮೂರು ವರ್ಷಗಳಲ್ಲಿ 280 ಶಾಲೆಗಳಿಗೆ ಕಾಂಪೌಂಡ್ ನಿರ್ಮಾಣ ಮಾಡಲಾಗಿದೆ, 58 ಅಂಗನವಾಡಿಗಳನ್ನು ನಿರ್ಮಾಣ ಮಾಡಲಾಗಿದೆ. ಪ್ರಸಕ್ತ ಸಾಲಿನಲ್ಲಿ ತಾಲೂಕಿನಲ್ಲಿ 37 ಕೋಟಿ ನರೇಗಾ ಹಣವನ್ನು ವೈಯಕ್ತಿಕ ಮತ್ತು ಸಮುದಾಯದ ಕಾಮಗಾರಿಗಳಿಗೆ ವಿನಿಯೋಗಿಸಲಾಗಿದೆ. ಹಳ್ಳಿಗಳಲ್ಲಿ ಚರಂಡಿ, ಶಾಲಾ ಕಾಂಪೌಂಡ್, ಕೆರೆ, ಕಾಲುವೆ, ಅರಣ್ಯ, ನೀರಿನ ಮೂಲಗಳನ್ನು ಹೆಚ್ಚಿಸುವ ಸಮುದಾಯದ ಮತ್ತು ವೈಯಕ್ತಿಕ ಕೆಲಸಗಳನ್ನು ಗ್ರಾಮೀಣ ಭಾಗದ ಜನರಿಗೆ ಒದಗಿಸುವುದು ಯೋಜನೆಯ ಉದ್ದೇಶವಾಗಿದೆ ಎಂದು ತಿಳಿಸಿದರು.ಗ್ರಾಪಂಗಳಲ್ಲಿ ಅತ್ಯುತ್ತಮ ಕೆಲಸ ನಿರ್ವಹಿಸಿದ ಜಲ ಸಂರಕ್ಷಣೆ, ಅನುಷ್ಠಾನ ಇಲಾಖೆ, ತೆರಿಗೆ ವಸೂಲಿ, ತೋಟಗಾರಿಕೆ ಇಲಾಖೆ. ಪಿಡಿಒ, ಸಿಬ್ಬಂದಿ, ಮಹಿಳಾ ರೈತ ಸೇರಿದಂತೆ ಉತ್ತಮವಾಗಿ ಕೆಲಸ ನಿರ್ವಹಿಸಿದ ಮತ್ತು ನರೇಗಾ ಯೋಜನೆಯನ್ನು ಸದ್ಬಳಕೆ ಮಾಡಿಕೊಂಡ ಫಲಾನುಭವಿಗಳಿಗೆ ಸನ್ಮಾನ ಮಾಡಲಾಯಿತು.
ತಹಸೀಲ್ದಾರ್ ಮಹೇಶ್.ಎಸ್.ಪತ್ರಿ, ತಾಪಂ ಇಒ ಜೆ.ಕೆ.ಹೊನ್ನಯ್ಯ, ಪೌರಾಯುಕ್ತೆ ಡಿ.ಎಂ.ಗೀತಾ, ತಾಲೂಕಿನ ಎಲ್ಲಾ ಗ್ರಾಪಂಗಳ ಪಿಡಿಒಗಳು , ಕಾರ್ಯದರ್ಶಿಗಳು, ನೌಕರ ಬಂಧುಗಳು, ಸಹಾಯಕ ನಿರ್ದೇಶಕ ಕರಿಯಪ್ಪ, ಅರಣ್ಯ ಇಲಾಖೆ ಚಂದ್ರಶೇಖರ್ ರೆಡ್ಡಿ, ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ಕಿರಣ್, ಕೃಷಿಕ ಸಮಾಜದ ಅಧ್ಯಕ್ಷ ಪ್ರಭಾಕರ್ ರೆಡ್ಡಿ, ಜಲಾನಯನ ಇಲಾಖೆ ಮಕ್ಬುಲ್ ಹುಸೇನ್, ಗ್ರಾಮಾಂತರ ಪಿಎಸ್ಐ ರಮೇಶ್ ಗುಗ್ಗರಿ, ಪಂಚಾಯಿತಿ ಅಧ್ಯಕ್ಷರು ಮತ್ತು ಉಪಾಧ್ಯಕ್ಷರು, ವಿವಿಧ ಇಲಾಖೆಗಳ ಸಿಬ್ಬಂದಿ ಭಾಗವಹಿಸಿದ್ದರು.