ಯಲ್ಲಮ್ಮನ ಗುಡ್ಡದಲ್ಲಿ ಮೂಲಸೌಕರ್ಯ ಸಮಗ್ರ ಯೋಜನೆ ಸಿದ್ಧ

| Published : May 20 2025, 01:19 AM IST

ಯಲ್ಲಮ್ಮನ ಗುಡ್ಡದಲ್ಲಿ ಮೂಲಸೌಕರ್ಯ ಸಮಗ್ರ ಯೋಜನೆ ಸಿದ್ಧ
Share this Article
  • FB
  • TW
  • Linkdin
  • Email

ಸಾರಾಂಶ

ಉತ್ತರ ಕರ್ನಾಟಕದ ಪ್ರಮುಖ ಶ್ರದ್ಧಾ-ಭಕ್ತಿ ಕೇಂದ್ರ ಸವದತ್ತಿ ಯಲ್ಲಮ್ಮನ ಗುಡ್ಡದಲ್ಲಿ ಭಕ್ತರ ಅನುಕೂಲಕ್ಕಾಗಿ ಮೂಲಸೌಕರ್ಯ ಕಲ್ಪಿಸುವ ಸಮಗ್ರ ಯೋಜನೆ ಸಿದ್ಧಗೊಂಡಿದೆ.

ಕನ್ನಡಪ್ರಭ ವಾರ್ತೆ ಸವದತ್ತಿ

ಉತ್ತರ ಕರ್ನಾಟಕದ ಪ್ರಮುಖ ಶ್ರದ್ಧಾ-ಭಕ್ತಿ ಕೇಂದ್ರ ಸವದತ್ತಿ ಯಲ್ಲಮ್ಮನ ಗುಡ್ಡದಲ್ಲಿ ಭಕ್ತರ ಅನುಕೂಲಕ್ಕಾಗಿ ಮೂಲಸೌಕರ್ಯ ಕಲ್ಪಿಸುವ ಸಮಗ್ರ ಯೋಜನೆ ಸಿದ್ಧಗೊಂಡಿದೆ. ಮುಂದಿನ ದಿನಗಳಲ್ಲಿ ಹೆಚ್ಚಿನ ಸಂಖ್ಯೆಯ ಭಕ್ತರಿಗೆ ಅನುಕೂಲವಾಗಲಿದೆ ಎಂದು ಪ್ರವಾಸೋದ್ಯಮ ಸಚಿವ ಎಚ್.ಕೆ.ಪಾಟೀಲ್ ಹೇಳಿದರು.

ಸುಕ್ಷೇತ್ರ ಯಲ್ಲಮ್ಮಾ ದೇವಸ್ಥಾನದ ಕಲ್ಯಾಣ ಮಂಟಪದ ಸಭಾಂಗಣದಲ್ಲಿ ಸೋಮವಾರ ಪ್ರವಾಸೋದ್ಯಮ ಅಭಿವೃದ್ಧಿ ಮಂಡಳಿಯ ರಾಜ್ಯಮಟ್ಟದ ಸಮಿತಿ ೨ನೇ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ದೇವಸ್ಥಾನದಲ್ಲಿನ ಸ್ವಚ್ಛತೆ, ಟ್ರಾಫಿಕ್ ನಿಯಂತ್ರಣ, ಅತಿಕ್ರಮಣ ತೆರವಿಗೆ ಶ್ರಮಿಸಿದ ಹಾಗೂ ಸಹಕರಿಸಿದ ಎಲ್ಲರಿಗೂ ಅಭಿನಂದಿಸಿದ ಸಚಿವರು, ಮೊದಲನೇ ಸಭೆಯ ಸಲಹೆಯಂತೆ ಕ್ಷೇತ್ರದ ಅಭಿವೃದ್ಧಿಯ ನಕ್ಷೆ ತಯಾರಿಸಲಾಗಿದೆ ಎಂದರು. ಅದರ ಪೂರಕವಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಅನುದಾನ ಬಿಡುಗಡೆಯಾಗಿದ್ದು, ಲೋಕೋಪಯೋಗಿ ಇಲಾಖೆಯಡಿ ರಸ್ತೆ ನಿರ್ಮಾಣ ಸೇರಿ ನಿರೀಕ್ಷೆಯಂತೆ ಎಲ್ಲ ರೀತಿಯಿಂದ ಸಹಕಾರ ದೊರೆಯುತ್ತಿದೆ ಎಂದರು.

ಯಲ್ಲಮ್ಮನಗುಡ್ಡದಲ್ಲಿ ಮಾದರಿಯಾದಂತ ಅಭಿವೃದ್ಧಿಗೆ ಒತ್ತು ನೀಡಲಾಗುತ್ತಿದೆ. ಕೇಬಲ್ ಕಾರ್ ವ್ಯವಸ್ಥೆ, ವಿಶಾಲವಾದ ಪಾರ್ಕಿಂಗ್ ವ್ಯವಸ್ಥೆ, ಕ್ಯೂ ಕಾಂಪ್ಲೆಕ್ಸ್, ಉಳಿದುಕೊಳ್ಳಲು ವ್ಯವಸ್ಥೆ, ಗೌರವ ಘಟಕ, ಚಕ್ಕಡಿ ಕಟ್ಟಿಕೊಂಡು ಬರುವವರಿಗೆ ಪಶು ಆಹಾರಕ್ಕಾಗಿ ಮೇವು ದಾಸೋಹ ಸಂಕೀರ್ಣ, ರಿಂಗ್ ರಸ್ತೆ, ವಯಸ್ಸಾದವರಿಗೆ ದರ್ಶನಕ್ಕೆ ವ್ಯವಸ್ಥೆ ಮುಂತಾದವು ಸೇರಿದಂತೆ ಎಲ್ಲಾ ಮೂಲಸೌಕರ್ಯ ಕಲ್ಪಿಸಲು ಸ್ಥಳ ಹಾಗೂ ನೀಲಿನಕ್ಷೆ ಕುರಿತು ಜಿಲ್ಲಾಧಿಕಾರಿಯಿಂದ ಮಾಹಿತಿ ಪಡೆದರು.

ಶಾಸಕ ವಿಶ್ವಾಸ ವೈದ್ಯ ಮಾತನಾಡಿ, ರೇಣುಕಾ ಯಲ್ಲಮ್ಮ ದೇವಸ್ಥಾನಕ್ಕೆ ಬರುವ ಭಕ್ತರಿಗೆ ಅಗತ್ಯ ಮೂಲಸೌಕರ್ಯಕ್ಕೆ ವ್ಯವಸ್ಥೆ ಕಲ್ಪಿಸಲಾಗುವುದು. ದೇವಸ್ಥಾನ ಪ್ರಾಧಿಕಾರ ಹಾಗೂ ಪ್ರವಾಸೋದ್ಯಮ ಪ್ರಾಧಿಕಾರದಿಂದ ಭಕ್ತರು ಪ್ರವಾಸಿಗರ ಪ್ರಮಾಣ ಮತ್ತಷ್ಟು ಹೆಚ್ಚಾಗಲಿದೆ. ಹಲವಾರು ವರ್ಷಗಳಿಂದ ಕ್ಷೇತ್ರದಲ್ಲಿ ವ್ಯಾಪಾರ ನಡೆಸಿಕೊಂಡು ಬಂದ ವ್ಯಾಪಾರಸ್ಥರಿಗೆ ಕೊಟ್ಟ ಮಾತಿನಂತೆ ಅವಕಾಶ ಕಲ್ಪಿಸಿಕೊಡಬೇಕಿದೆ ಎಂದರು.

ಲೋಕೋಪಯೋಗಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವರಾದ ಸತೀಶ್ ಜಾರಕಿಹೊಳಿ, ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್, ಪೊಲೀಸ್ ವರಿಷ್ಠಾಧಿಕಾರಿ ಡಾ.ಭೀಮಾ ಶಂಕರ್ ಗುಳೇದ್, ಯಲ್ಲಮ್ಮ ದೇವಸ್ಥಾನ ಪ್ರಾಧಿಕಾರ ಕಾರ್ಯದರ್ಶಿ ಅಶೋಕ ದುಡಗುಂಟಿ, ಪ್ರವಾಸೋದ್ಯಮ ಕಾರ್ಯದರ್ಶಿ ಗೀತಾ ಕೌಲಗಿ, ತಹಸೀಲ್ದಾರ್ ಮಲ್ಲಿಕಾರ್ಜುನ ಹೆಗ್ಗಣ್ಣವರ, ತಾಪಂ ಇಒ ಆನಂದ ಬಡಕುಂದ್ರಿ, ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.