ಸಾರಾಂಶ
ಕನ್ನಡಪ್ರಭ ವಾರ್ತೆ ಮಡಿಕೇರಿ
ಪರಿಶಿಷ್ಟ ಜಾತಿಯಲ್ಲಿ ಒಳ ಮೀಸಲಾತಿ ವರ್ಗೀಕರಣ ಸಂಬಂಧ ಮೇ 5 ರಿಂದ ನಡೆಯುತ್ತಿರುವ ಪರಿಶಿಷ್ಟ ಜಾತಿಗಳ ಸಮಗ್ರ ಸಮೀಕ್ಷೆಯನ್ನು ಕಾಲಮಿತಿಯಲ್ಲಿ ಪೂರ್ಣಗೊಳಿಸುವಂತೆ ಜಿಲ್ಲಾಧಿಕಾರಿ ವೆಂಕಟ್ ರಾಜಾ ಅವರು ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಪರಿಶಿಷ್ಟ ಜಾತಿ ಸಮಗ್ರ ಸಮೀಕ್ಷೆ ಸಂಬಂಧ ಶುಕ್ರವಾರ ನಡೆದ ಸಭೆಯಲ್ಲಿ ಮಾಹಿತಿ ಪಡೆದು ಅವರು ಮಾತನಾಡಿದರು. ನ್ಯಾಯಮೂರ್ತಿ ಎಚ್.ಎನ್.ನಾಗಮೋಹನ ದಾಸ್ ಅವರ ಏಕಸದಸ್ಯ ವಿಚಾರಣಾ ಆಯೋಗದಿಂದ ನಡೆಯುತ್ತಿರುವ ಪರಿಶಿಷ್ಟ ಜಾತಿಗಳ ಸಮಗ್ರ ಸಮೀಕ್ಷೆ ಸಂಬಂಧ ಈಗಾಗಲೇ ನಿಯೋಜಿಸಿರುವ ಗಣತಿದಾರರು ತಮ್ಮ ವ್ಯಾಪ್ತಿಯಲ್ಲಿ ಪರಿಶಿಷ್ಟ ಜಾತಿಯವರು ವಾಸಿಸುವ ಮನೆಗಳಿಗೆ ತೆರಳಿ ಮಾಹಿತಿ ಪಡೆದು ಸಮೀಕ್ಷೆ ಕೈಗೊಳ್ಳಬೇಕು. ಯಾವುದೇ ಕಾರಣಕ್ಕೂ ನಿರ್ಲಕ್ಷ್ಯ ವಹಿಸಬಾರದು ಎಂದು ಸೂಚಿಸಿದರು. ಕಠಿಣ ಕ್ರಮ:ಪರಿಶಿಷ್ಟ ಜಾತಿಯ ಸಮಗ್ರ ಸಮೀಕ್ಷೆಗೆ ನಿರ್ಲಕ್ಷ್ಯ ವಹಿಸಿದಲ್ಲಿ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ವೆಂಕಟ್ ರಾಜಾ ಅವರು ಎಚ್ಚರಿಸಿದರು. ಗಣತಿದಾರರ ಜೊತೆ ಮೇಲ್ವಿಚಾರಕರು ಸಹ ಸಮೀಕ್ಷೆ ಕಾರ್ಯದಲ್ಲಿ ತೊಡಗಿಸಿಕೊಂಡು ಸಮೀಕ್ಷೆಯ ಪ್ರಗತಿ ಸಾಧಿಸಬೇಕು. ಪರಿಶಿಷ್ಟ ಜಾತಿ ಕುಟುಂಬ ಸಮೀಕ್ಷೆಯಿಂದ ಬಿಟ್ಟು ಹೋಗದಂತೆ ಗಮನಹರಿಸಬೇಕು ಎಂದು ಜಿಲ್ಲಾಧಿಕಾರಿ ಅವರು ಹೇಳಿದರು. ಮೊಬೈಲ್ ಅಪ್ಲಿಕೇಷನ್ ಮೂಲಕ ಮಾಹಿತಿ ತುಂಬಬೇಕು. ಇದು ಸರಳ ವಿಧಾನವಾಗಿದ್ದು, ಆಸಕ್ತಿ ವಹಿಸಿದಲ್ಲಿ ಸುಗಮವಾಗಿ ಹಾಗೂ ಸುಲಲಿತವಾಗಿ ಸಮೀಕ್ಷೆ ಕಾರ್ಯವನ್ನು ಕೈಗೊಳ್ಳಬಹುದಾಗಿದೆ. ಆ ನಿಟ್ಟಿನಲ್ಲಿ ಇಚ್ಛಾಶಕ್ತಿ ವಹಿಸಬೇಕು ಎಂದು ವೆಂಕಟ್ ರಾಜಾ ಅವರು ಹೇಳಿದರು.ಕ್ಷೇತ್ರ ಶಿಕ್ಷಣಾಧಿಕಾರಿಗಳು ಮತ್ತು ತಾಲೂಕು ಸಮಾಜ ಕಲ್ಯಾಣಾಧಿಕಾರಿಗಳ ಜೊತೆಗೂಡಿ ಇಡೀ ಪರಿಶಿಷ್ಟ ಜಾತಿಯ ಸಮಗ್ರ ಸಮೀಕ್ಷೆ ಸಂಬಂಧಿಸಿದಂತೆ ಮೇಲ್ವಿಚಾರಣೆ ವಹಿಸಬೇಕು. ಆ ನಿಟ್ಟಿನಲ್ಲಿ ಹೆಚ್ಚಿನ ಮುತುವರ್ಜಿ ವಹಿಸುವಂತೆ ಜಿಲ್ಲಾಧಿಕಾರಿ ಅವರು ಸೂಚಿಸಿದರು. ಸಂಪೂರ್ಣ ಪ್ರಗತಿ ಸಾಧಿಸಬೇಕು:
ಮೇ17 ರವರೆಗೆ ನಡೆಯುವ ಮನೆ ಮನೆ ಸಮೀಕ್ಷೆ ಸಂಬಂಧ ಸಂಪೂರ್ಣ ಪ್ರಗತಿ ಸಾಧಿಸಬೇಕು. ಸಮಗ್ರ ಸಮೀಕ್ಷೆ ಸಂಬಂಧಿಸಿದಂತೆ ಪ್ರತೀ ನಿತ್ಯ ತಾಲೂಕುವಾರು ಮಾಹಿತಿ ಒದಗಿಸುವಂತೆ ತಾಲೂಕು ಸಮಾಜ ಕಲ್ಯಾಣಾಧಿಕಾರಿ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಯವರಿಗೆ ಜಿಲ್ಲಾಧಿಕಾರಿ ಅವರು ನಿರ್ದೇಶನ ನೀಡಿದರು. ನ್ಯಾಯಮೂರ್ತಿ ಎಚ್.ಎನ್.ನಾಗಮೋಹನದಾಸ್ ಅವರ ವಿಚಾರಣಾ ಆಯೋಗವು ಸಮಗ್ರ ಸಮೀಕ್ಷೆ ಸಂಬಂಧ ಪುಸ್ತಕ ಹೊರತಂದಿದ್ದು, ಅದನ್ನು ಅಧ್ಯಯನ ಮಾಡಿಕೊಂಡು ಸಮೀಕ್ಷೆ ಕೈಗೊಳ್ಳಬೇಕು ಎಂದು ತಿಳಿಸಿದರು. ಕ್ಷೇತ್ರ ಶಿಕ್ಷಣಾಧಿಕಾರಿಗಳು ಹಾಗೂ ಶಾಲಾ ಶಿಕ್ಷಣ ಉಪ ನಿರ್ದೇಶಕರು ಪ್ರತಿ ದಿನ ಗಣತಿದಾರರ ಮೇಲ್ವಿಚಾರಕರ ಜೊತೆ ಸಂಪರ್ಕವನ್ನು ಸಾಧಿಸಿ ಗಣತಿದಾರರು ಗಣತಿ ಕಾರ್ಯ ಕೈಗೊಳ್ಳುತ್ತಿರುವ ಬಗ್ಗೆ ಖಾತ್ರಿಪಡಿಸಿಕೊಳ್ಳುವಂತೆ ಹಾಗೂ ಪರಿಶೀಲಿಸುವಂತೆ ಜಿಲ್ಲಾಧಿಕಾರಿ ಅವರು ಕಟ್ಟುನಿಟ್ಟಿನ ಸೂಚನೆ ನೀಡಿದರು. ಸಭೆಯ ಆರಂಭದಲ್ಲಿ ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕರಾದ ಶೇಖರ್ ಅವರು ಪರಿಶಿಷ್ಟ ಜಾತಿಯ ಕುಟುಂಬಗಳ ಸಮೀಕ್ಷೆಗಾಗಿ ಮನೆಮನೆಗೆ ತೆರಳುತ್ತಿರುವ ಗಣಿತಿದಾರರಿಗೆ ಸಂಬಂಧಪಟ್ಟ ಮತಗಟ್ಟೆಗಳ ಮತಗಟ್ಟೆ ಅಧಿಕಾರಿ (ಬಿಎಲ್‌ಓ) ಗಳು ಮನೆಗಳನ್ನು ಗುರುತಿಸಲು ಸಹಕರಿಸಬೇಕೆಂದು ಕೋರಿದರು. ಸರ್ಕಾರದ ನಿರ್ದೇಶನದಂತೆ ಸಮೀಕ್ಷೆ:ಸರ್ಕಾರದ ನಿರ್ದೇಶನದಂತೆ ಸಮೀಕ್ಷೆ ಮಾಡಬೇಕಿದ್ದು, ಆ ದಿಸೆಯಲ್ಲಿ ಈಗಾಗಲೇ ಬೂತ್‌ಮಟ್ಟದಲ್ಲಿ ನಿಯೋಜಿಸಿರುವ ಗಣತಿದಾರರು ಪರಿಶಿಷ್ಟ ಜಾತಿ ಕುಟುಂಬದವರ ಮನೆ ಮನೆಗೆ ತೆರಳಿ ಸಮಗ್ರ ಸಮೀಕ್ಷೆ ಕೈಗೊಳ್ಳಬೇಕು. ಜಾತಿ, ಉಪಜಾತಿ ಮತ್ತು ಮೂಲ ಉಪಜಾತಿ ನಮೂದು ಮಾಡಬೇಕು ಎಂದು ಹೇಳಿದರು.ಕ್ಷೇತ್ರ ಶಿಕ್ಷಣಾಧಿಕಾರಿ ದೊಡ್ಡೇಗೌಡ ಅವರು ಮಾತನಾಡಿ ಪರಿಶಿಷ್ಟ ಜಾತಿ ಸಮಗ್ರ ಸಮೀಕ್ಷೆ ಸಂಬಂಧಿಸಿದಂತೆ ಕ್ಷೇತ್ರ ಪ್ರಚಾರದಲ್ಲಿನ ಕಾರ್ಯದ ಬಗ್ಗೆ ಮಾಹಿತಿ ನೀಡಿ ಅಂತರ್ಜಾಲ ಸಮಸ್ಯೆ ಇದೆ ಎಂದು ತಿಳಿಸಿದರು. ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿ ವ್ಯಾಪ್ತಿಗಳಲ್ಲೂ ಸಹ ಪೌರಾಯುಕ್ತರು, ಮುಖ್ಯಾಧಿಕಾರಿಗಳು ಪರಿಶಿಷ್ಟ ಜಾತಿಯವರ ಬಡಾವಣೆಯಲ್ಲಿ ಸಮೀಕ್ಷೆ ಕೈಗೊಳ್ಳುವಂತಾಗಲು ಸಹಕರಿಸಬೇಕು. ಯಾವುದೇ ಕಾರಣದಿಂದ ಪರಿಶಿಷ್ಟ ಜಾತಿ ಕುಟುಂಬಗಳು ಬಿಟ್ಟು ಹೋಗದಂತೆ ಎಚ್ಚರವಹಿಸಬೇಕು ಎಂದು ಸೂಚಿಸಿದರು. ಸಭೆಯಲ್ಲಿ ತಹಸೀಲ್ದಾರರು, ತಾ.ಪಂ.ಇಒಗಳು, ಕ್ಷೇತ್ರ ಶಿಕ್ಷಣಾಧಿಕಾರಿಗಳು, ತಾಲೂಕು ಸಮಾಜ ಕಲ್ಯಾಣಾಧಿಕಾರಿಗಳು, ಸ್ಥಳೀಯ ಸಂಸ್ಥೆಗಳ ಮುಖ್ಯಾಧಿಕಾರಿಗಳು ಇತರರು ಇದ್ದರು.ಗಣತಿದಾರರು ಮನೆ ಮನೆಗೆ ತೆರಳಿ ಸಮೀಕ್ಷೆ ಮಾಡಬೇಕು. ಬಿಎಲ್‌ಒಗಳು ಸಮೀಕ್ಷೆ ಸಂಬಂಧ ಅಗತ್ಯ ಸಹಕಾರ ನೀಡಬೇಕು. ಬಡಾವಣೆ ಪ್ರದೇಶ ಮನೆಗಳ ಬಗ್ಗೆ ನಿಖರ ಮಾಹಿತಿ ನೀಡುವಂತಾಗಬೇಕು. ಆಶಾ ಕಾರ್ಯಕರ್ತರು ಸಹ ಕೈಜೋಡಿಸಬೇಕು ಎಂದು ಶೇಖರ್ ಅವರು ಮನವಿ ಮಾಡಿದರು.
ಹೆಚ್ಚುವರಿ ಜಿಲ್ಲಾಧಿಕಾರಿ ಆರ್.ಐಶ್ವರ್ಯ, ಉಪ ವಿಭಾಗಾಧಿಕಾರಿ ವಿನಾಯಕ ನರ್ವಡೆ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ದಿನೇಶ್ ಕುಮಾರ್, ಶಾಲಾ ಶಿಕ್ಷಣ ಇಲಾಖೆ ಉಪ ನಿರ್ದೇಶಕರಾದ ರಂಗಧಾಮಪ್ಪ, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಉಪ ನಿರ್ದೇಶಕರಾದ ನಟರಾಜು, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕರಾದ ಬಿ.ಬಸಪ್ಪ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಸತೀಶ್ ಕುಮಾರ್, ತಹಸೀಲ್ದಾರರು, ತಾ.ಪಂ.ಇಒಗಳು ಕ್ಷೇತ್ರ ಶಿಕ್ಷಣಾಧಿಕಾರಿಗಳು, ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು ಇತರರು ಇದ್ದರು.