ಸಾರಾಂಶ
ಗದುಗಿನ ವೀರೇಶ್ವರ ಪುಣ್ಯಾಶ್ರಮದ ಸಂಗೀತ ಮಕ್ಕಳಿಗೆ ಇಲ್ಲಿ ವರೆಗೆ ಗದಗ ಜಿಲ್ಲಾ ಪರೀಕ್ಷಾ ಕೇಂದ್ರವಾಗಿತ್ತು, ಈಗ ಹುಬ್ಬಳ್ಳಿಗೆ ಸ್ಥಳಾಂತರಿಸಿದ್ದು ಖಂಡನೀಯ
ಗದಗ: ಸಂಗೀತ ಪರೀಕ್ಷೆಗಳನ್ನು ಗದಗ ಜಿಲ್ಲಾ ಕೇಂದ್ರದಲ್ಲಿ ನಡೆಸುವಂತೆ ಒತ್ತಾಯಿಸಿ ಸಮತಾ ಸೇನಾ ಸಂಘಟನೆಯ ಜಿಲ್ಲಾ ಘಟಕದ ಅಧ್ಯಕ್ಷ ಕಿರಣ ಗಾಮನಗಟ್ಟಿ ನೇತೃತ್ವದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲರಿಗೆ ಮನವಿ ಸಲ್ಲಿಸಲಾಯಿತು.
ಗದುಗಿನ ವೀರೇಶ್ವರ ಪುಣ್ಯಾಶ್ರಮ ಹಾಗೂ ಸಂಗೀತ ಮಹಾವಿದ್ಯಾಲಯ ದೇಶಕ್ಕೆ ಮಾದರಿ ಸಂಸ್ಥೆಯಾಗಿದ್ದು, ಅಂಧ, ಅನಾಥ, ನಿರ್ಗತಿಕ ಹಾಗೂ ಬಡ ಮಕ್ಕಳು ಆಶ್ರಯ ಪಡೆದು ಶಿಕ್ಷಣ ಹಾಗೂ ವಸತಿ ಸೌಲಭ್ಯ ಪಡೆಯುತ್ತಿದ್ದಾರೆ. ಶ್ರೀಮಠದಲ್ಲಿ ಜಾತಿ-ಬೇಧ ಭಾವವಿಲ್ಲದೆ ಲಕ್ಷಾಂತರ ಮಕ್ಕಳು ಈ ಸಂಸ್ಥೆಯಲ್ಲಿ ಆಶ್ರಯ ಪಡೆದು ಈಗ ಅತ್ಯುತ್ತಮ ಸಂಗೀತಗಾರರು, ಶಿಕ್ಷಕರಾಗಿ, ಕಲಾವಿದರಾಗಿ ಈ ನಾಡಿನ ಸೇವೆ ಸಲ್ಲಿಸುತ್ತಿದ್ದಾರೆ.ಲಿಂಗೈಕ್ಯ ಡಾ. ಪಂಡಿತ ಪುಟ್ಟರಾಜ ಗವಾಯಿಗಳು ನಡೆದಾಡುವ ದೇವರೆಂದೇ ಹೆಸರಾದ ಈ ಸಂಸ್ಥೆಯಲ್ಲಿ ಕಲಿತ ವಿದ್ಯಾರ್ಥಿಗಳು ರಾಷ್ಟ್ರ, ರಾಜ್ಯಮಟ್ಟದಲ್ಲಿ ಉತ್ತಮ ಸಾಧನೆ ಮಾಡಿದ್ದಾರೆ. ಇಷ್ಟೆಲ್ಲಾ ಸುಪ್ರಸಿದ್ಧ ಸಂಗೀತ ಸೇವೆ ಸಲ್ಲಿಸುತ್ತಿರುವ ಗದುಗಿನ ವೀರೇಶ್ವರ ಪುಣ್ಯಾಶ್ರಮದ ಸಂಗೀತ ಮಕ್ಕಳಿಗೆ ಇಲ್ಲಿ ವರೆಗೆ ಗದಗ ಜಿಲ್ಲಾ ಪರೀಕ್ಷಾ ಕೇಂದ್ರವಾಗಿತ್ತು, ಈಗ ಹುಬ್ಬಳ್ಳಿಗೆ ಸ್ಥಳಾಂತರಿಸಿದ್ದು ಖಂಡನೀಯ.
ಈ ಸಂಸ್ಥೆಯಲ್ಲಿ ಸಂಗೀತ ಅಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳು ಅಂಧರು, ಅಂಗವಿಕಲರು, ಅನಾಥರು, ಬಡ ಮಕ್ಕಳಾಗಿದ್ದು ಗದಗ ಜಿಲ್ಲೆಯಿಂದ ಬೇರೆ ಜಿಲ್ಲೆಗೆ ಪರೀಕ್ಷಾ ಕೇಂದ್ರ ಮಾಡಿದ್ದರಿಂದ ಅವರೆಲ್ಲಾ ಪರೀಕ್ಷೆಗೆ ಹಾಜರಾಗಲು ಸಾಧ್ಯವಾಗುವುದಿಲ್ಲ. ಕಾರಣ ಗದಗ ನಗರದಲ್ಲಿ ಈ ಮೊದಲು ನಡೆಯುವಂತೆ ಸಂಗೀತ ಪರೀಕ್ಷೆ ನಡೆಸಿ ಅಂಧ, ಅನಾಥರ ಬಾಳಿಗೆ ಬೆಳಕಾಗುವ ನಿರ್ಧಾರ ಕೈಗೊಳ್ಳಬೇಕು ಎಂದು ಮನವಿಯಲ್ಲಿ ಒತ್ತಾಯಿಸಿದರು. ಈ ವೇಳೆ ಸಂಘಟನೆ ಪದಾಧಕಾರಿಗಳು ಇದ್ದರು.