ಸಾರಾಂಶ
ಬ್ಯಾಡಗಿ: ಪೌರ ಕಾರ್ಮಿಕರಿಲ್ಲದೇ ಸ್ವಚ್ಛ ಸಮಾಜ ಊಹಿಸಲು ಸಾಧ್ಯವಿಲ್ಲ, ಪೌರಕಾರ್ಮಿಕ ಅನ್ನೋ ಕಲ್ಪನೆಯನ್ನು ನೀಡಿದ ಪುರಸಭೆ ಉದ್ದೇಶಗಳ ಜೊತೆ ಸಾರ್ವಜನಿಕರು ಕೈಜೋಡಿಸುವಂತೆ ಪುರಸಭೆ ಅಧ್ಯಕ್ಷ ಬಾಲಚಂದ್ರಗೌಡ ಪಾಟೀಲ ಕರೆ ನೀಡಿದರು.
ಪೌರ ಕಾರ್ಮಿಕರ ದಿನಾಚರಣೆ ಅಂಗವಾಗಿ ಪಟ್ಟಣದ ಪುರಸಭೆಯಲ್ಲಿ ಆಯೋಜನೆ ಮಾಡಲಾಗಿದ್ದ ಸನ್ಮಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ಪೌರಕಾರ್ಮಿಕರು ಜನರ ಸ್ವಾಸ್ಥ್ಯ ಕಾಪಾಡುವ ವೈದ್ಯರಿದ್ದಂತೆ. ಸಾರ್ವಜನಿಕರ ಆರೋಗ್ಯ ಕಾಪಾಡುವ ವೈದ್ಯರನ್ನು “ವೈದ್ಯೋ ನಾರಾಯಣೋ ಹರಿ” ಎನ್ನುವಂತೆ, ನಮ್ಮ ಸುತ್ತಮುತ್ತಲ ಪ್ರದೇಶವನ್ನು ಪ್ರತಿದಿನ ಸ್ವಚ್ಛಗೊಳಿಸಿ ರೋಗ ಬರದಂತೆ ಸಾರ್ವಜನಿಕರ ಆರೋಗ್ಯ ಕಾಪಾಡುವ ಪೌರಕಾರ್ಮಿಕರು ಸಹ ವೈದ್ಯರಂತಯೇ ಕೆಲಸ ಮಾಡುತ್ತಿದ್ದು ಇವರನ್ನು ಸಹ “ಪೌರಕಾರ್ಮಿಕೋ ನಾರಾಯಣೋ ಹರಿ” ಎನ್ನುವುದರಲ್ಲಿ ತಪ್ಪೇನಿಲ್ಲ ಎಂದರು.
ಉಪಾಧ್ಯಕ್ಷ ಸುಭಾಷ ಮಾಳಗಿ ಮಾತನಾಡಿ, ಸ್ವಚ್ಛತೆ ಎಂಬ ಪದಕ್ಕೆ ಪರ‍್ಯಾಯ ಪದವಿದ್ದರೆ ಅದು ಪೌರ ಕಾರ್ಮಿಕರು ಎಂದರೆ ತಪ್ಪಾಗಲಾರದು. ಪಟ್ಟಣದ ನೈರ್ಮಲ್ಯ ಕಾಪಾಡುವಲ್ಲಿ ಶ್ರಮಿಸುತ್ತಿರುವ ಪೌರ ಕಾರ್ಮಿಕರ ಕಾರ್ಯ ಶ್ಲಾಘನೀಯ, ರಾಜ್ಯ ಸರ್ಕಾರ ಘೋಷಿಸಿದ ಪೌರ ಕಾರ್ಮಿಕರ ಕಲ್ಯಾಣ ಕಾರ್ಯಕ್ರಮಗಳು ಶೇ.100 ರಷ್ಟು ಜಾರಿಗೊಳಿಸುವ ವಿಚಾರದಲ್ಲಿ ಪುರಸಭೆ ಸಿಬ್ಬಂದಿ ಹಿಂದೆ ಬೀಳದಂತೆ ಮನವಿ ಮಾಡಿದರು.ಪುರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಚಂದ್ರಪ್ಪ ಶೆಟ್ಟರ ಮಾತನಾಡಿ, ಗಾಂಧೀಜಿ ಕಂಡ ಸ್ವಚ್ಛ ಭಾರತದ ಕಲ್ಪನೆಯನ್ನು ಸಾಕಾರಗೊಳಿಸುವಲ್ಲಿ ಪೌರಕಾರ್ಮಿಕರ ಪಾತ್ರ ಅತ್ಯಂತ ದೊಡ್ಡದಾಗಿದೆ. ಪೌರಕಾರ್ಮಿಕರು ಸಹ ನಮ್ಮಂತೆ ಮನುಷ್ಯರಾಗಿದ್ದು ಅವರ ಜೊತೆಯಲ್ಲಿ ಸಾರ್ವಜನಿಕರು ಸೌಜನ್ಯದಿಂದ ವರ್ತಿಸಿ ಸಹಕಾರ ನೀಡಿದಲ್ಲಿ ಮಾತ್ರ ಸ್ವಚ್ಛತೆಗೆ ಇನ್ನಷ್ಟು ವೇಗ ಸಿಗಲಿದೆ ಎಂದರು.
ಪುರಸಭೆ ಮುಖ್ಯಾಧಿಕಾರಿ ವಿನಯಕುಮಾರ ಹೊಳೆಯಪ್ಪಗೋಳ ಮಾತನಾಡಿ, ಪಟ್ಟಣದ ನೈರ್ಮಲ್ಯ ಮತ್ತು ಸೌಂದರ್ಯ ಕಾಪಾಡುವಲ್ಲಿ ಪೌರ ಕಾರ್ಮಿಕರ ಕಾರ್ಯ ಅತ್ಯಂತ ಮಹತ್ವದ್ದಾಗಿದೆ, ಸಾಮಾನ್ಯ ಮತ್ತು ಮಾಸ್ಟರ್ ಆರೋಗ್ಯ ತಪಾಸಣೆಗಳನ್ನು ನಿಯಮಿತವಾಗಿ ನಡೆಸಲಾಗುತ್ತಿದೆ. ಪೌರಕಾರ್ಮಿಕರು ಜೀವ ವಿಮೆ, ಅಪಘಾತ ವಿಮೆ ಮತ್ತು ಆರೋಗ್ಯ ವಿಮೆ ನೀಡಲಾಗಿದೆ. ಪೌರಕಾರ್ಮಿಕ ಗೃಹಭಾಗ್ಯದಡಿ ಪಕ್ಕಾ ವಸತಿ ಕಲ್ಪಿಸಲಾಗಿದ್ದು ಸದರಿ ಕೆಲಸ ಚಾಲ್ತಿಯಲ್ಲಿದೆ. ಕೈಗವಸು, ಮುಖವಾಡ, ಗಂಬೂಟ್‌ಗಳು, ಅಪ್ರಾನ್‌ಗಳು, ರೇನ್‌ಕೋಟ್‌ಗಳಂತಹ ಸುರಕ್ಷತಾ ಸಮವಸ್ತ್ರ ಇತ್ಯಾದಿಗಳನ್ನು ನಿಯಮಿತವಾಗಿ ನೀಡಲಾಗುತ್ತದೆ ಎಂದರು.ಈ ಸಂದರ್ಭದಲ್ಲಿ, ಪುರಸಭೆ ಸದಸ್ಯರಾದ ಬಸವರಾಜ ಛತ್ರದ, ರಾಮಣ್ಣ ಕೋಡಿಹಳ್ಳಿ, ಫಕ್ಕಿರಮ್ಮ ಚಲವಾದಿ, ಕಲಾವತಿ ಬಡಿಗೇರ, ಗಾಯತ್ರಿ ರಾಯ್ಕರ, ಕವಿತಾ ಸೊಪ್ಪಿನಮಠ, ಸರೋಜಾ ಉಳ್ಳಾಗಡ್ಡಿ, ಶಿವರಾಜ ಅಂಗಡಿ, ಶಂಕರ ಕುಸಗೂರ, ವಿನಾಯಕ ಹಿರೇಮಠ, ಈರಣ್ಣ ಬಣಕಾರ, ಹನುಮಂತಪ್ಪ ಮ್ಯಾಗೇರಿ, ಮಹಬೂಬ ಅಗಸನಹಳ್ಳಿ ಸೇರಿದಂತೆ ಆಶ್ರಯ ಸಮಿತಿ ಅಧ್ಯಕ್ಷ ಮುನಾಫಸಾಬ್ ಎರೇಶಿಮಿ, ದುರ್ಗೇಶ ಗೋಣೆಮ್ಮನವರ, ಗಿರೀಶ ಇಂಡಿಮಠ, ಮಜೀದ ಮುಲ್ಲಾ ಸೇರಿದಂತೆ ವ್ಯವಸ್ಥಾಪಕರಾದ ಎನ್.ಟಿ. ಹೊಸಮನಿ, ಹರೀಶಕುಮಾರ, ತಬಸ್ಸುಮ ಬಾನು, ಮಾಲತೇಶ ಹಳ್ಳಿ ಸೇರಿದಂತೆ ಪುರಸಭೆ ಸಿಬ್ಬಂದಿ ಭಾಗವಹಿಸಿದ್ದರು.ಪೌರಕಾರ್ಮಿಕರ ದಿನಾಚರಣೆ ಅಂಗವಾಗಿ ಪಟ್ಟಣದ ತಾಲೂಕು ಕ್ರೀಡಾಂಗಣದಲ್ಲಿ ಕಾರ್ಮಿಕರಿಗಾಗಿ, ಮ್ಯೂಸಿಕಲ್ ಚೇರ್, ಕ್ರಿಕೆಟ್ ಸೇರಿದಂತೆ ವಿವಿಧ ಕ್ರೀಡೆಗಳನ್ನು ಆಯೋಜಿಸಲಾಗಿತ್ತು. ಇದೇ ಸಂದರ್ಭದಲ್ಲಿ ಅತ್ಯುತ್ತಮವಾಗಿ ಸೇವೆಸಲ್ಲಿಸಿದ ಪಟ್ಟಣದ ಪೌರ ಕಾರ್ಮಿ ಕರನ್ನು ಸನ್ಮಾನಿಸಿ ಗೌರವಿಸಲಾಯಿತು.