ಸಾರಾಂಶ
ತಾವು ಮೊದಲ ಬಾರಿಗೆ ಶಾಸಕರಾದಾಗ ಬಿಜೆಪಿ ಅಧಿಕಾರದಲ್ಲಿದ್ದರೂ ಕೋಟ್ಯಂತರ ರುಪಾಯಿ ಅನುದಾನ ತಂದು ಕ್ಷೇತ್ರವನ್ನು ಅಭಿವೃದ್ಧಿಪಡಿಸಿದ್ದಾರೆ.
ಕಂಪ್ಲಿ: ಶಾಸಕ ಜೆ.ಎನ್. ಗಣೇಶ್ ಅವರಿಗೆ ಸಚಿವ ಸ್ಥಾನ ನೀಡಲು ಹೈಕಮಾಂಡ್ ಮುಂದಾಗಲಿ ಎಂದು ಕಂಪ್ಲಿ ಪುರಸಭೆ ಸದಸ್ಯ ಕೆ.ಎಸ್. ಚಾಂದ್ ಬಾಷಾ ಒತ್ತಾಯಿಸಿದರು.
ಪಟ್ಟಣದ ಬಳ್ಳಾರಿ ರಸ್ತೆಯಲ್ಲಿರುವ ಜಿ.ಕೆ. ಟವರ್ ಹೋಟೆಲ್ ನ ಸಭಾಂಗಣದಲ್ಲಿ ಪುರಸಭೆ ಸದಸ್ಯ ಕೆ.ಎಸ್. ಚಾಂದಬಾಷಾ ನೇತೃತ್ವದ ನಡೆದ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದರು.ಶಾಸಕ ಜೆ.ಎನ್. ಗಣೇಶ್ ಕಂಪ್ಲಿ ವಿಧಾನಸಭಾ ಕ್ಷೇತ್ರದ ಚುನಾವಣೆಯಲ್ಲಿ ಸ್ಪರ್ಧಿಸಿ ಪ್ರಬಲ ನಾಯಕರಾಗಿದ್ದ ಮಾಜಿ ಸಚಿವ ಬಿ.ಶ್ರೀರಾಮುಲು ಅಳಿಯ ಟಿ.ಎಚ್. ಸುರೇಶ್ ಬಾಬು ಅವರನ್ನು ಸೋಲಿಸಿ ಅತ್ಯಧಿಕ ಬಹುಮತಗಳಲ್ಲಿ ಎರಡು ಬಾರಿ ಶಾಸಕರಾಗಿ ಗೆಲುವು ಕಂಡಿದ್ದಾರೆ.
ತಾವು ಮೊದಲ ಬಾರಿಗೆ ಶಾಸಕರಾದಾಗ ಬಿಜೆಪಿ ಅಧಿಕಾರದಲ್ಲಿದ್ದರೂ ಕೋಟ್ಯಂತರ ರುಪಾಯಿ ಅನುದಾನ ತಂದು ಕ್ಷೇತ್ರವನ್ನು ಅಭಿವೃದ್ಧಿಪಡಿಸಿದ್ದಾರೆ. ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿದ್ದ ಈ.ತುಕಾರಾಂ ಗೆಲುವಿಗೆ ಶ್ರಮಿಸಿದ್ದಾರೆ. ಇದೀಗ ನಾನಾ ಕಾರಣಗಳಿಂದಾಗಿ ಬಿ.ನಾಗೇಂದ್ರ ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ಆ ಸ್ಥಾನಕ್ಕೆ ಬಳ್ಳಾರಿ ಜಿಲ್ಲೆಯ ಕಂಪ್ಲಿ ವಿಧಾನಸಭಾ ಕ್ಷೇತ್ರದ ಶಾಸಕ ಜೆ.ಎನ್.ಗಣೇಶ್ ಅವರನ್ನು ಸಚಿವರನ್ನಾಗಿ ಮಾಡಿ ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವರನ್ನಾಗಿ ನೇಮಕಗೊಳಿಸಿ ಜಿಲ್ಲೆಗೆ ನ್ಯಾಯ ಒದಗಿಸಬೇಕೆಂದು ಒತ್ತಾಯಿಸಿದರು.ಈ ಸಂದರ್ಭದಲ್ಲಿ ಗ್ರಾಪಂ ಸದಸ್ಯರಾದ ಎಚ್.ಕುಮಾರಸ್ವಾಮಿ, ನೆಣಕಿ ಗಿರೀಶ್, ಪ್ರಮುಖರಾದ ಎಚ್.ಜಗದೀಶ, ಎಚ್.ಕುಮಾರಸ್ವಾಮಿ, ಎಚ್.ಹನುಮಂತಪ್ಪ, ಅಹಿಂದ ಕರ್ನಾಟಕ ಸಾಮಾಜಿಕ ಜಾಲತಾಣ ಬಳ್ಳಾರಿ ಪ್ರಧಾನ ಕಾರ್ಯದರ್ಶಿ ಎಸ್.ಚೇತನಕುಮಾರ ಸೇರಿದಂತೆ ಅನೇಕರಿದ್ದರು.