ಸಾರಾಂಶ
ಈ ಹಿಂದೆ ಮುಖ್ಯಮಂತ್ರಿ ಸಿದ್ದರಾಮಯ್ಯನವರೆ ಒಳಮೀಸಲಾತಿ ನೀಡುವುದಕ್ಕಾಗಿ ಸಂವಿಧಾನಕ್ಕೆ ತಿದ್ದುಪಡಿ ತರಬೇಕೆಂದು ಆಗ್ರಹಿಸಿದ್ದರು. ಆದರೆ ಒಳಮೀಸಲಾತಿ ಕುರಿತು ಇದ್ದ ಗೊಂದಲಗಳಿಗೆ ಸುಪ್ರೀಂಕೋರ್ಟ್ ತೆರೆ ಎಳೆದು ಆದೇಶ ನೀಡಿದ್ದರೂ ಮೀಸಲು ಜಾರಿಗೆ ಮುಖ್ಯಮಂತ್ರಿಗಳು ಮೀನಮೇಷ ಎಣಿಸುತ್ತಿದ್ದಾರೆ.
ಕನ್ನಡಪ್ರಭ ವಾರ್ತೆ ಗುಡಿಬಂಡೆ
ಸುಪ್ರೀಂ ಕೋರ್ಟಿನ ಆದೇಶದಂತೆ ರಾಜ್ಯ ಸರ್ಕಾರ ಕೂಡಲೇ ಒಳಮೀಸಲಾತಿಯನ್ನು ಘೋಷಣೆ ಮಾಡಬೇಕೆಂದು ದಲಿತ ಸಂಘಟನೆಗಳ ಒಕ್ಕೂಟ ಒಳ ಮೀಸಲಾತಿ ಹೋರಾಟ ಸಮಿತಿ ಪಟ್ಟಣದ ಮುಖ್ಯ ರಸ್ತೆಯಲ್ಲಿ ಮೆರವಣಿಗೆ ನಡೆಸಿ, ತಾಲೂಕು ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿ ತಹಸೀಲ್ದಾರ್‌ಗೆ ಮನವಿ ಸಲ್ಲಿಸಿತು.ಈ ವೇಳೆ ದಲಿತ ಸಂಘಟನೆಗಳ ಒಕ್ಕೂಟದ ಎಲ್.ಎನ್.ಈಶ್ವರಪ್ಪ ಮಾತನಾಡಿ, ಸುಪ್ರೀಂಕೋರ್ಟ್ ಒಳಮೀಸಲಾತಿ ಅನುಷ್ಠಾನಗೊಳಿಸಲು ರಾಜ್ಯ ಸರ್ಕಾರಗಳಿಗೆ ಅಧಿಕಾರವಿದೆ ಎಂದು ಆಗಸ್ಟ್‌ನಲ್ಲೇ ಆದೇಶ ನೀಡಿದೆ. ಆದರೆ ಇದುವೆರಗೂ ರಾಜ್ಯ ಸರ್ಕಾರ ಒಳ ಮೀಸಲಾತಿ ಜಾರಿ ಬಗ್ಗೆ ಚಕಾರವೆತ್ತಿಲ್ಲ ಎಂದು ಆರೋಪಿಸಿದರು.
ಹೋರಾಟಕ್ಕೆ ದೊರೆತ ಜಯಒಳಮೀಸಲಾತಿ ಜಾರಿಗಾಗಿ ಕಳೆದ 30 ವರ್ಷಗಳಿಂದಲೂ ಹೋರಾಟ ಮಾಡಿಕೊಂಡು ಬಂದಿದ್ದು ನಮ್ಮ ಹೋರಾಟಕ್ಕೆ ಜಯ ದೊರೆತಿದೆ. ಉಪ ಜಾತಿಗಳಿಗೆ ಒಳ ಮೀಸಲಾತಿ ಇಲ್ಲದೆ ಅಭಿವೃದ್ದಿಯಲ್ಲಿ ಹಿಂದಿವೆ. ಈ ಹಿಂದೆ ಮುಖ್ಯಮಂತ್ರಿ ಸಿದ್ದರಾಮಯ್ಯನವರೆ ಒಳಮೀಸಲಾತಿ ನೀಡುವುದಕ್ಕಾಗಿ ಸಂವಿಧಾನಕ್ಕೆ ತಿದ್ದುಪಡಿ ತರಬೇಕೆಂದು ಆಗ್ರಹಿಸಿದ್ದರು. ಆದರೆ ಒಳಮೀಸಲಾತಿ ಕುರಿತು ಇದ್ದ ಗೊಂದಲಗಳಿಗೆ ಸುಪ್ರೀಂಕೋರ್ಟ್ ತೆರೆ ಎಳೆದು ಆದೇಶ ನೀಡಿದ್ದರೂ ಮುಖ್ಯಮಂತ್ರಿಗಳು ಮೀನಮೇಷ ಎಣಿಸುತ್ತಿದ್ದಾರೆ ಎಂದು ಟೀಕಿಸಿದರು.
ಬಳಿಕ ದಲಿತ ಮುಖಂಡ ಸುಬ್ಬರಾಯಪ್ಪ, ಗಂಗಪ್ಪ, ನಾರಾಯಣಸ್ವಾಮಿ,ರಮಣಪ್ಪ ಸೇರಿದಂತೆ ಹಲವರು ಮಾತನಾಡಿದರು. ಸಮಿತಿಯ ಪ.ಪಂ ಉಪಾಧ್ಯಕ್ಷ ಗಂಗರಾಜು, ದಲಿತ ಮುಖಂಡರಾದ ಚನ್ನರಾಯಪ್ಪ, ಜಿ.ವಿ.ಗಂಗಪ್ಪ, ಗಂಗಾಧರಪ್ಪ, ಬಾವಣ್ಣ, ಎಂ.ಎನ್.ನಾರಾಯಣಪ್ಪ, ಚಲಪತಿ, ಬ್ಯಾಂಕ್ ಸುಬ್ಬರಾಯಪ್ಪ, ನರಸಿಂಹಮೂರ್ತಿ, ಅಶ್ವತ್ಥಪ್ಪ, ವೆಂಕಟೇಶ್, ರಾಮಾಂಜಿ, ರಾಜು, ನರಸಿಂಹಪ್ಪ, ಅಮರಾವತಿ, ಜಗನ್ನಾಥ್, ರಮಣಪ್ಪ, ಕೆ.ಎನ್.ನರಸಿಂಹಪ್ಪ ಸೇರಿದಂತೆ ಹಲವರು ಇದ್ದರು.