ಸಾರಾಂಶ
ಸಿಂಧನೂರು ನಗರದ ಪಿಡಬ್ಲ್ಯೂಡಿ ಕ್ಯಾಂಪಿನಲ್ಲಿರುವ ನೀರಾವರಿ ಇಲಾಖೆಯ ಕಾರ್ಯಪಾಲಕ ಎಂಜನಿಯರ್ ಕಚೇರಿಯ ಮುಂದೆ ರೈತರು ಪ್ರತಿಭಟನೆ ನಡೆಸಿದರು.
ನೀರಾವರಿ ಇಲಾಖೆ ಕಚೇರಿ ಮುಂದೆ ರೈತರ ಪ್ರತಿಭಟನೆಕನ್ನಡಪ್ರಭ ವಾರ್ತೆ ಸಿಂಧನೂರು
ತಾಲೂಕಿನ ಜವಳಗೇರಾ ಗ್ರಾಮ ಬಳಿಯಿರುವ 54ನೇ ವಿತರಣಾ ಕಾಲುವೆಗೆ ಸಮರ್ಪಕ ನೀರು ಹರಿಸುವ ಮೂಲಕ ಸಸಿಮಡಿ ಉಳಿಸಬೇಕು ಎಂದು ಒತ್ತಾಯಿಸಿ ರೈತರು ಸೋಮವಾರ ನಗರದ ಪಿಡಬ್ಲ್ಯೂಡಿ ಕ್ಯಾಂಪಿನಲ್ಲಿರುವ ನೀರಾವರಿ ಇಲಾಖೆಯ ಕಚೇರಿಯ ಮುಂದೆ ಪ್ರತಿಭಟನೆ ನಡೆಸಿದರು.ಈ ವೇಳೆ ಜೆಡಿಎಸ್ ತಾಲೂಕು ಘಟಕದ ಅಧ್ಯಕ್ಷ ಬಸವರಾಜ ನಾಡಗೌಡ ಮಾತನಾಡಿ, 54ನೇ ವಿತರಣಾ ಕಾಲುವೆಯಲ್ಲಿ ಅಲ್ಪಪ್ರಮಾಣದ ನೀರಿರುವ ಕಾರಣ ಕೆಳಭಾಗದ ಜಮೀನುಗಳಿಗೆ ನೀರು ಹರಿಯುತ್ತಿಲ್ಲ. ರೈತರು ಎರಡನೇ ಬೆಳೆಗಾಗಿ ಹಾಕಿಕೊಂಡಿರುವ ಸಸಿಮಡಿಗೆ ಒಣಗುತ್ತಿವೆ ಎಂದು ಹೇಳಿದರು.
ತುಂಗಭದ್ರಾ ಜಲಾಶಯದಿಂದ ಎಡದಂಡೆ ನಾಲೆಗೆ 2 ಸಾವಿರ ಕ್ಯುಸೆಕ್ ನೀರು ಹರಿಸಿದ್ದು, ಇದು 54ನೇ ಕಾಲುವೆ ತಲುಪುತ್ತಿಲ್ಲ. ಹೀಗಾಗಿ ಮಾಜಿ ಸಚಿವ ವೆಂಕಟರಾವ್ ನಾಡಗೌಡ ಅವರು ತುಂಗಭದ್ರಾ ಜಲಾಶಯದ ನೀರಾವರಿ ಸಲಹಾ ಸಮಿತಿ ಅಧ್ಯಕ್ಷರಾದ ಸಚಿವ ಶಿವರಾಜ ತಂಗಡಗಿ ಮತ್ತು ಮುಖ್ಯ ಎಂಜಿನಿಯರ್ ಅವರೊಂದಿಗೆ ಮೊಬೈಲ್ ಕರೆಯಲ್ಲಿ ಮಾತನಾಡಿ ಕೂಡಲೇ 3,500 ಕ್ಯುಸೆಕ್‌ನಂತೆ ನೀರು ಹರಿಸುವ ಮೂಲಕ ರೈತರ ಹಿತಕಾಯಬೇಕು ಎಂದು ಮನವಿ ಮಾಡಿದ್ದಾರೆ. ಹೀಗಾಗಿ ರೈತರ ಜಮೀನುಗಳಿಗೆ ನೀರು ಹರಿಸಬೇಕು ಎಂದು ಒತ್ತಾಯಿಸಿದರು.ಇಇ ಸತ್ಯನಾರಾಯಣ ಶೆಟ್ಟಿ ಹಾಗೂ ಎಇಇ ದಾವೂದ್ ರೈತರ ಮನವಿ ಪತ್ರ ಸ್ವೀಕರಿಸಿದರು. ಜೆಡಿಎಸ್ ಯುವ ಘಟಕದ ಕಾರ್ಯದರ್ಶಿ ಸೈಯ್ಯದ್ ಆಸೀಫ್, ರೈತರಾದ ರಾಮಕೃಷ್ಣ ಬಾಲಯ್ಯಕ್ಯಾಂಪ್, ಹರಿಕಿಶೋರ ರೆಡ್ಡಿ ರೈತನಗರ ಕ್ಯಾಂಪ್, ಬಸವರಾಜ, ವೀರೇಶಸ್ವಾಮಿ, ಯಂಕೋಬ, ಆಂಜನೇಯ, ತಿಪ್ಪಣ್ಣ, ಚಂದ್ರು, ಪ್ರಭಾಕರ್, ಪೇರರೆಡ್ಡಿ, ಕಿಟ್ಟಯ್ಯ, ಜೆ.ಶ್ರೀನಿವಾಸ ಇದ್ದರು.