ಕನ್ನಡಿಗರಿಗೆ ಕಡ್ಡಾಯ ಉದ್ಯೋಗ:ಜು.1ಕ್ಕೆ ಕರವೇ ಬೃಹತ್‌ ಚಳವಳಿ

| Published : Jun 27 2024, 01:32 AM IST / Updated: Jun 27 2024, 06:10 AM IST

Kannada flag
ಕನ್ನಡಿಗರಿಗೆ ಕಡ್ಡಾಯ ಉದ್ಯೋಗ:ಜು.1ಕ್ಕೆ ಕರವೇ ಬೃಹತ್‌ ಚಳವಳಿ
Share this Article
  • FB
  • TW
  • Linkdin
  • Email

ಸಾರಾಂಶ

ಕನ್ನಡಿಗರಿಗೆ ಕಡ್ಡಾಯ ಉದ್ಯೋಗ ಮೀಸಲಾತಿ ಕಲ್ಪಿಸಲು ಸರೋಜಿನಿ ಮಹಿಷಿ ವರದಿ ಜಾರಿ ತರುವಂತೆ ಆಗ್ರಹಿಸಿ ಜುಲೈ 1 ರಂದು ರಾಜ್ಯಾದ್ಯಂತ ಚಳವಳಿಗೆ ಕರ್ನಾಟಕ ರಕ್ಷಣಾ ವೇದಿಕೆ (ಕರವೇ) ಕರೆ ನೀಡಿದೆ.

 ಬೆಂಗಳೂರು : ಕನ್ನಡಿಗರಿಗೆ ಕಡ್ಡಾಯ ಉದ್ಯೋಗ ಮೀಸಲಾತಿ ಕಲ್ಪಿಸಲು ಸರೋಜಿನಿ ಮಹಿಷಿ ವರದಿ ಜಾರಿ ತರುವಂತೆ ಆಗ್ರಹಿಸಿ ಜುಲೈ 1 ರಂದು ರಾಜ್ಯಾದ್ಯಂತ ಚಳವಳಿಗೆ ಕರ್ನಾಟಕ ರಕ್ಷಣಾ ವೇದಿಕೆ (ಕರವೇ) ಕರೆ ನೀಡಿದೆ.

ಬುಧವಾರ ಈ ಕುರಿತು ಕರವೇ ರಾಜ್ಯಾಧ್ಯಕ್ಷ ಟಿ.ಎ.ನಾರಾಯಣಗೌಡ ಅವರು ಹೇಳಿಕೆ ನೀಡಿದ್ದು, ಕನ್ನಡ ನಾಮಫಲಕ ಚಳವಳಿಯ ನಂತರ ಕರ್ನಾಟಕದ ನೆಲದಲ್ಲಿ ಕನ್ನಡಿಗರಿಗೇ ಉದ್ಯೋಗ ಎಂಬ ಘೋಷಣೆಯೊಂದಿಗೆ ರಕ್ಷಣಾ ವೇದಿಕೆ ರಾಜ್ಯಾದ್ಯಂತ ಚಳವಳಿ ಆರಂಭಿಸಲಿದೆ. ಜು.1ರಂದು ರಾಜ್ಯಾದ್ಯಂತ ಬೃಹತ್‌ ಧರಣಿ ಸತ್ಯಾಗ್ರಹ ನಡೆಸಲಿದ್ದು ಕರವೇಯ ಸಾವಿರಾರು ಕಾರ್ಯಕರ್ತರು ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದ್ದಾರೆ.

ಇತ್ತೀಚಿನ ದಿನಗಳಲ್ಲಿ ದೇಶದ ಇತರೆ ರಾಜ್ಯಗಳಿಂದ ಉದ್ಯೋಗ ಅರಸಿ ಬೆಂಗಳೂರಿನಂತಹ ದೊಡ್ಡ ನಗರಗಳಿಗೆ ವಲಸೆ ಬರುವವರ ಸಂಖ್ಯೆ ಹೆಚ್ಚಾಗಿದೆ. ಇದರಿಂದ ಸ್ಥಳೀಯ ಕನ್ನಡಿಗರಿಗೆ ಉದ್ಯೋಗ ಕೊರತೆ ಎದುರಾಗುತ್ತಿದೆ. ರಾಜ್ಯದ ಎಲ್ಲ ಖಾಸಗಿ ವಲಯದ ಉದ್ಯೋಗದಲ್ಲಿ ಬಹುತೇಕ ಹೊರ ರಾಜ್ಯದವರೇ ಹೆಚ್ಚಿದ್ದಾರೆ. ಇದರಿಂದ ಕರ್ನಾಟಕದಲ್ಲಿ ನಿರುದ್ಯೋಗ ತೀವ್ರ ಸ್ವರೂಪ ಪಡೆದಿದೆ. ಹೀಗಾಗಿ ಖಾಸಗಿ ವಲಯದಲ್ಲಿ ಕನ್ನಡಿಗರಿಗೆ ಉದ್ಯೋಗ ಒದಗಿಸಬೇಕೆನ್ನುವ ಸರೋಜಿನಿ ಮಹಿಷಿ ವರದಿಯನ್ನು ಜಾರಿಗೆ ತರಲು ರಾಜ್ಯ ಸರ್ಕಾರದ ಮೇಲೆ ಒತ್ತಡ ತರಲಾಗುವುದು ಎಂದು ಹೇಳಿದ್ದಾರೆ.

ರಾಜ್ಯ ಸರ್ಕಾರ ಬಲಿಷ್ಠ ಕಾನೂನು ರೂಪಿಸಿ, ರಾಜ್ಯದ ಎಲ್ಲ ಖಾಸಗಿ ಸಂಸ್ಥೆಗಳಲ್ಲಿ ‘ಸಿ’ ಮತ್ತು ‘ಡಿ’ ದರ್ಜೆಯ ಶೇ.100 ರಷ್ಟು ಹುದ್ದೆಗಳು ಹಾಗೂ ಇತರೆ ಹುದ್ದೆಗಳಲ್ಲಿ ಶೇ.80 ರಷ್ಟು ಸ್ಥಾನವನ್ನು ಕನ್ನಡಿಗರಿಗೆ ಮೀಸಲಿಡಬೇಕು. ಕೇಂದ್ರ ಸರ್ಕಾರದ ಇಲಾಖೆಗಳು ಹಾಗೂ ಸಾರ್ವಜನಿಕ ವಲಯದ ಘಟಕಗಳಲ್ಲಿರುವ ‘ಸಿ’ ಮತ್ತು ‘ಡಿ’ ದರ್ಜೆಯ ಹುದ್ದೆಗಳಿಗೆ ಶೇ. 100ರಷ್ಟು ಹಾಗೂ ಇತರೆ ದರ್ಜೆಯ ಹುದ್ದೆಗಳಿಗೆ ಶೇ.90 ರಷ್ಟು ಕನ್ನಡಿಗರಿಗೆ ಮೀಸಲಾತಿ ಕಲ್ಪಿಸಿಕೊಡಬೇಕು.

ಕನ್ನಡಿಗರಿಗೆ ಉದ್ಯೋಗ ಮೀಸಲಾತಿ ಕಲ್ಪಿಸಲು ವಿಫಲರಾಗುವ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸುವ ನಿಯಮ ಜಾರಿಗೆ ತರಬೇಕು. ಹದಿನೈದು ವರ್ಷಗಳಿಂದ ಕರ್ನಾಟಕದಲ್ಲಿ ನೆಲೆಸಿದವರಿಗೆ ಕನ್ನಡ ಬರವಣಿಗೆಯ ಪರೀಕ್ಷೆ ನೀಡಿ ಉತ್ತೀರ್ಣರಾದವರಿಗೆ ಕನ್ನಡಿಗರೆಂದು ಪರಿಗಣಿಸಬೇಕು. ರಾಜ್ಯ ಸರ್ಕಾರ ರೂಪಿಸುವ ಕಾನೂನುಗಳನ್ನು ಜಾರಿಗೊಳಿಸುವ ಅಧಿಕಾರ ಕನ್ನಡ ಅಭಿವೃದ್ದಿ ಪ್ರಾಧಿಕಾರಕ್ಕೆ ನೀಡಬೇಕೆಂಬುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸುವುದಾಗಿ ತಿಳಿಸಿದ್ದಾರೆ.