ಹಾಲು ಉತ್ಪಾದಕರು ಕಡ್ಡಾಯ ವಿಮೆ ಮಾಡಿಸಿ

| Published : Jun 23 2024, 02:07 AM IST

ಸಾರಾಂಶ

ಪಾಂಡವಪುರ ತಾಲೂಕಿನ ಮೇಲುಕೋಟೆ ಡೇರಿ ಹಾಲು ಉತ್ಪಾದಕರಿಗೆ ಮನ್ಮುಲ್ ನಿರ್ದೇಶಕ ಕಾಡೇನಹಳ್ಳಿ ರಾಮಚಂದ್ರು ಸಬ್ಸಿಡಿ ದರದಲ್ಲಿ ರಬ್ಬರ್ ಮ್ಯಾಟ್ ವಿತರಿಸಿದರು.

ಕನ್ನಡಪ್ರಭ ವಾರ್ತೆ ಪಾಂಡವಪುರಮನ್ಮುಲ್ ವತಿಯಿಂದ ಗುಂಪು ವಿಮೆ ಯೋಜನೆ ಜಾರಿಗೆ ತಂದಿದ್ದು ಹಾಲು ಉತ್ಪಾದಕರು ಹಾಗೂ ಷೇರುದಾರು ಕಡ್ಡಾಯವಾಗಿ ವಿಮೆ ಮಾಡಿಸಬೇಕೆಂದು ನಿರ್ದೇಶಕ ಕಾಡೇನಹಳ್ಳಿ ರಾಮಚಂದ್ರು ಮನವಿ ಮಾಡಿದರು.ತಾಲೂಕಿನ ಮೇಲುಕೋಟೆ ಹಾಲು ಉತ್ಪಾದಕರ ಸಹಕಾರ ಸಂಘದ ಹಾಲು ಉತ್ಪಾದಕರಿಗೆ ಒಕ್ಕೂಟದಿಂದ ಸಬ್ಸಿಡಿ ದರದಲ್ಲಿ ನೀಡಲಾಗುವ ರಬ್ಬರ್ ಮ್ಯಾಟ್‌ಗಳನ್ನು ಶನಿವಾರ ವಿತರಿಸಿ ಬಳಿಕ ಮಾತನಾಡಿದರು. ಗುಂಪು ವಿಮೆಗೆ ಒಳಪಡಲು ಹಾಲು ಉತ್ಪಾದಕರು 200 ರು. ಹಾಗೂ ಷೇರುದಾರರು 400 ರೂ, ಪಾವತಿಸಬೇಕು. ವಿಮೆ ಪಡೆದ ಕುಟುಂಬದ ಸದಸ್ಯರು ಆಕಸ್ಮಿಕ ಮರಣ ಹೊಂದಿದ್ದಲ್ಲಿ 50 ಸಾವಿರ ರು. ವಿಮೆ ಹಣ ಪಡೆಯಬಹುದು. ಈ ಹಣ ಕಷ್ಟ ಕಾಲದಲ್ಲಿ ನೆರವಿಗೆ ಬರುತ್ತದೆ. ಆದರೆ ಉತ್ಪಾದಕರು ವಿಮೆ ಮಾಡಿಸಲು ನಿರ್ಲಕ್ಷ್ಯ ತೋರುತ್ತಿರುವುದು ಸರಿಯಲ್ಲ ಎಂದರು.ಜೂ.21 ರಿಂದ ಜು.20 ರವರೆಗೆ ಒಕ್ಕೂಟದಿಂದ ವಿಮೆ ಮಾಡಿಸಲಾಗುತ್ತಿದ್ದು, ಡೇರಿ ಕಾರ್ಯದರ್ಶಿಗಳು ಉತ್ಪಾದಕರಿಗೆ ವಿಮೆ ಬಗ್ಗೆ ಅರಿವು ಮೂಡಿಸಿ ಪ್ರತಿಯೊಬ್ಬರನ್ನು ವಿಮೆ ವ್ಯಾಪ್ತಿಗೆ ತರಬೇಕು. ಅದೇ ರೀತಿ ರಾಸುಗಳಿಗೂ ಕೂಡ ವಿಮೆ ಮಾಡಿಸಬೇಕು ಎಂದು ಸಲಹೆ ನೀಡಿದರು.ರಾಸುಗಳ ಆರೋಗ್ಯ ದೃಷ್ಟಿಯಿಂದ ಮನ್ಮುಲ್ ಸಬ್ಸಿಡಿ ದರದಲ್ಲಿ ರಬ್ಬರ್ ಮ್ಯಾಟ್‌ಗಳನ್ನು ವಿತರಿಸುತ್ತಿದೆ. ಮ್ಯಾಟ್‌ಗಳಿಗೆ ರೈತರಿಂದ ಬೇಡಿಕೆ ಹೆಚ್ಚಿದ್ದು ಹಂತ ಹಂತವಾಗಿ ಎಲ್ಲರಿಗೂ ವಿತರಿಸಲಾಗುವುದು. ಒಕ್ಕೂಟದ ನಿರ್ದೇಶಕನಾಗಿ ಈವರೆಗೂ 10 ಸಾವಿರ ಮ್ಯಾಟ್ ವಿತರಣೆ ಮಾಡಿದ್ದೇನೆ ಎಂದರು.ರಬ್ಬರ್ ಮ್ಯಾಟ್ ದರ 3280 ರೂ,ಗಳಿದ್ದು ಉತ್ಪಾದಕರು ಶೇ.50 ರಷ್ಟು ಒಕ್ಕೂಟದ ಸಬ್ಸಿಡಿ ಹಣ ಕಳೆದು 1640 ರೂ,ಗಳನ್ನು ಪಾವತಿಸಿ ಮ್ಯಾಟ್ ಪಡೆಯಬಹುದು. ಇದರ ಜತೆಗೆ ಒಕ್ಕೂಟ ಸಬ್ಸಿಡಿ ದರದಲ್ಲಿ ಹಾಲು ಕರೆಯುವ ಯಂತ್ರ, ಮೇವು ಕತ್ತರಿಸುವ ಯಂತ್ರಗಳನ್ನು ನೀಡುತ್ತಿದೆ. ರೈತರು ಒಕ್ಕೂಟ ನೀಡುವ ಎಲ್ಲ ಸವಲತ್ತುಗಳನ್ನು ಪಡೆದುಕೊಂಡು ಗುಣಮಟ್ಟದ ಹಾಲು ಪೂರೈಕೆ ಮಾಡಬೇಕು. ಇದರಿಂದ ಡೇರಿ ಮತ್ತು ಒಕ್ಕೂಟದ ಅಬಿವೃದ್ಧಿ ಸಾಧ್ಯವಾಗುತ್ತದೆ ಎಂದರು.ಡೇರಿ ಕಾರ್ಯದರ್ಶಿಗಳು ಹೆಚ್ಚಿನ ಹಾಲು ಪೂರೈಸುವ ಮತ್ತು ಗುಣಮಟ್ಟದ ಹಾಲು ಉತ್ಪಾದಕರಿಗೆ ಮೊದಲ ಆದ್ಯತೆಯಲ್ಲಿ ಮ್ಯಾಟ್ ವಿತರಿಸಬೇಕು. ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿಯಲ್ಲಿ ಗರಿಷ್ಠ ಅಂಕ ಗಳಿಸಿದ ಹಾಲು ಉತ್ಪಾದಕರ ಮಕ್ಕಳಿಗೆ ಮನ್ಮುಲ್ ವತಿಯಿಂದ ಮಂಡ್ಯದಲ್ಲಿ ಪ್ರತಿಭಾ ಪುರಸ್ಕಾರ ನೀಡಲಾಗುತ್ತಿದ್ದು, ಪಾಲಕರು ಹೆಚ್ಚು ಅಂಕಗಳಿಸಿದ ತಮ್ಮ ಮಕ್ಕಳ ಹೆಸರನ್ನು ಡೇರಿ ಕಾರ್ಯದರ್ಶಿ ಅವರಲ್ಲಿ ನೊಂದಾಯಿಸುವಂತೆ ತಿಳಿಸಿದರು.ಈ ವೇಳೆ ಮನ್ಮುಲ್ ಉಪವ್ಯವಸ್ಥಾಪಕ ಆರ್.ಪ್ರಸಾದ್, ಮಾರ್ಗವಿಸ್ತರಣಾಧಿಕಾರಿ ಪ್ರಜ್ವಲ್, ನಿರ್ದೇಶಕರಾದ ವೀರಪ್ಪ, ಬಲರಾಮು, ನಂದಕುಮಾರ್, ಮಂಜುಳಾ, ಗೀತಾ ಯೋಗನರಸಿಂಹೇಗೌಡ ಇತರರು ಇದ್ದರು.