ಸಾರಾಂಶ
ಕನ್ನಡಪ್ರಭ ವಾರ್ತೆ ಹಾವೇರಿ
ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಜಗತ್ತಿನಲ್ಲಿ ಯಶಸ್ವಿ ಬದುಕನ್ನು ಕಾಣಬೇಕಾದರೆ ಕಂಪ್ಯೂಟರ್ ಶಿಕ್ಷಣ ಅತ್ಯಂತ ಅವಶ್ಯಕವಾಗಿದೆ ಎಂದು ಹುಕ್ಕೇರಿಮಠದ ಸದಾಶಿವ ಸ್ವಾಮೀಜಿ ಹೇಳಿದರು.ನಗರದ ಸಜ್ಜನರ ಫಂಕ್ಷನ್ ಹಾಲ್‌ನಲ್ಲಿ ಸಾಯಿ ಕಂಪ್ಯೂಟರ್ಸ್ ಆಶ್ರಯದಲ್ಲಿ ಏರ್ಪಡಿಸಲಾಗಿದ್ದ ಪ್ರತಿಭಾ ಪುರಸ್ಕಾರ, ಪಿನ್‌ಸೋರಿಯಸ್ ಲರ್ನಿಂಗ್ ಸೆಂಟರ್ ಮತ್ತು ಟ್ಯಾಲಿ ೪.೦ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿ, ಆಧುನಿಕ ಜಗತ್ತಿನ ಎಲ್ಲ ಸವಾಲುಗಳಿಗೆ ಪರಿಹಾರ ಕಂಪ್ಯೂಟರ್ ಶಿಕ್ಷಣದಿಂದ ಸಿಗುತ್ತದೆ ಎಂದರು.
ಕಾರ್ಯಾಗಾರ ಉದ್ಘಾಟಿಸಿದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಉಪಪ್ರಾಧ್ಯಾಪಕ ಎಂ.ಬಿ. ನಾಗಾಲಾಪುರ ಮಾತನಾಡಿ, ಕಳೆದ ೧೬ ವರ್ಷಗಳಿಂದ ನಾಗರಿಕರಿಗೆ ಮತ್ತು ವಿದ್ಯಾರ್ಥಿಗಳಿಗೆ ಕಂಪ್ಯೂಟರ್ ಶಿಕ್ಷಣ ನೀಡುವುದರ ಜೊತೆಗೆ ಇಂತಹ ಸಮಾಜದ ಜಾಗೃತಿ ಕಾರ್ಯಾಗಾರವನ್ನು ಏರ್ಪಡಿಸುತ್ತಿರುವ ಸಾಯಿ ಕಂಪ್ಯೂಟರ್ಸ್ ಕಾರ್ಯ ಶ್ಲಾಘನೀಯ ಎಂದರು.ಅತಿಥಿಗಳಾಗಿ ಭಾಗವಹಿಸಿದ್ದ ವಿದ್ಯಾರ್ಥಿ ನಿಲಯ ಪಾಲಕಿ ಸರೋಜಾ ಪಾಟೀಲ ಮಾತನಾಡಿ, ವಿಶೇಷವಾಗಿ ಗೃಹಣಿಯರಿಗೆ ಕಂಪ್ಯೂಟರ್ ಜ್ಞಾನ ಇಂದು ಹೆಚ್ಚು ಅವಶ್ಯಕವಾಗಿದೆ. ಸಮಾಜದಲ್ಲಿ ಹೆಚ್ಚಾಗಿ ಆಧುನಿಕ ತಂತ್ರಜ್ಞಾನ ಯಂತ್ರಗಳನ್ನು ಮತ್ತು ಟ್ಯಾಲಿಯಂತಹ ಸಾಫ್ಟ್‌ವೇರ್‌ಗಳನ್ನು ಬಳಸಲಾಗುತ್ತಿದ್ದು, ಅದರ ಸಾಮರ್ಥ್ಯ ನಿರ್ವಹಣೆಯ ಅರಿವು ಮಹಿಳೆಯರಿಗೆ ಇರಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ವ್ಯವಸ್ಥಾಪಕ ಪ್ರದೀಪ ಪಾಟೀಲ ಮಾತನಾಡಿ, ವಿಶೇಷವಾಗಿ ಗ್ರಾಮೀಣ ಪ್ರದೇಶದ ನಾಗರಿಕರಿಗೆ, ವಿದ್ಯಾರ್ಥಿಗಳಿಗೆ, ಹಿರಿಯರಿಗೆ, ಗೃಹಿಣಿಯರಿಗೆ, ವ್ಯಾಪಾರಸ್ಥರಿಗೆ ತಂತ್ರಜ್ಞಾನದ ಬದುಕಿಗೆ ಹೊಂದಿಸಿಕೊಳ್ಳುವ ಶಿಕ್ಷಣ ಕಲಿಸುವುದೇ ಈ ಕಾರ್ಯಾಗಾರದ ಗುರಿಯಾಗಿದೆ ಎಂದರು.ಕಾರ್ಯಕ್ರಮದಲ್ಲಿ ಸಂಸ್ಥೆಯಿಂದ ಶಿಕ್ಷಣ ಪಡೆದು ಸರ್ಕಾರಿ ಹುದ್ದೆಗೆ ಆಯ್ಕೆಯಾದ ವಿದ್ಯಾರ್ಥಿಗಳಾದ ಕೃಷ್ಣ ಮಂದಿ, ಫಕ್ಕೀರೇಶ ರಾಮಣ್ಣನವರ, ಸಮಾಜ ಸೇವೆ ಸಲ್ಲಿಸುತ್ತಿರುವ ಬೋಜರಾಜ ಆಲೂರ ಹಾಗೂ ಭಾರತೀಯ ಸೇನೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ರಮೇಶ ಅವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಶಿವಾನಂದ ಕುಂಕದ, ಜಗದೀಶ ಚೌಟಗಿ, ಎಸ್.ಬಿ. ದೊಡ್ಡಮನಿ, ಚಂದ್ರಶೇಖರ ಸುತ್ತೂರಮಠ, ರೋಹಿತ ಹಾವೇರಿ, ಸುರಜ, ಮಮತಾ ಇತರರು ಇದ್ದರು.ದಿವ್ಯಾ ಮತ್ತು ಸಂಗೀತಾ ನಿರೂಪಿಸಿದರು. ಅರುಣಾ ಸ್ವಾಗತಿಸಿ, ದಿವ್ಯಾ ಕಬ್ಬೂರು ವಂದಿಸಿದರು.