ಸಾರಾಂಶ
ಕನ್ನಡಪ್ರಭ ವಾರ್ತೆ ಗುಡಿಬಂಡೆ
ಇಂದಿನ ತಂತ್ರಜ್ಞಾನ ಯುಗದಲ್ಲಿ ಪ್ರತಿಯೊಬ್ಬ ವಿದ್ಯಾರ್ಥಿಗೂ ಕಂಪ್ಯೂಟರ್ ಜ್ಞಾನ ಅತ್ಯಗತ್ಯವಾಗಿದ್ದು, ಮಕ್ಕಳು ಕಂಪ್ಯೂಟರ್ ಶಿಕ್ಷಣವನ್ನು ಪಡೆದುಕೊಳ್ಳಬೇಕೆಂದು ಶಾಸಕ ಸುಬ್ಬಾರೆಡ್ಡಿ ಸಲಹೆ ನೀಡಿದರು.ಪಟ್ಟಣದ ಸರ್ಕಾರಿ ಬಾಲಕರ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಚಿಕ್ಕಬಳ್ಳಾಪುರದ ಸಮಾನ ಮನಸ್ಕರ ಸಂರಕ್ಷಣಾ ವೇದಿಕೆ, ಬೆಂಗಳೂರಿನ ಸೋನೋ ವಿಷನ್ ಎಟೋಸ್ ಟೆಕ್ನಿಕಲ್ ಸರ್ವೀಸ್ ಪ್ರೈ. ಲಿಮಿಟೆಡ್ ರವರುಗಳ ಸಂಯುಕ್ತಾಶ್ರಯದಲ್ಲಿ ಸರ್ಕಾರಿ ಶಾಲೆಗಳಿಗೆ ಉಚಿತ ಕಂಪ್ಯೂಟರ್ ವಿತರಣಾ ಸಮಾರಂಭದಲ್ಲಿ ಮಾತನಾಡಿದರು.
ಕಂಪ್ಯೂಟರ್ ಶಿಕ್ಷಣ ಪಡೆಯಿರಿಇಂದಿನ ಕಾಲದಲ್ಲಿ ಫಸ್ಟ್ ಕ್ಲಾಸ್ ಡಿಗ್ರಿಗಳನ್ನು ಪಡೆದುಕೊಂಡವರಿಗೂ ಕಂಪ್ಯೂಟರ್ ಶಿಕ್ಷಣ ಇಲ್ಲದಿದ್ದರೆ ಉದ್ಯೋಗ ಸಿಗುವುದಿಲ್ಲ. ಕಂಪ್ಯೂಟರ್ ಶಿಕ್ಷಣ ಇಲ್ಲದವನು ಅವಿದ್ಯಾವಂತ ಎಂತಲೇ ಕರೆಯುತ್ತಾರೆ. ಈ ನಿಟ್ಟಿನಲ್ಲಿ ಅನೇಕ ದಾನಿಗಳು ಸರ್ಕಾರಿ ಶಾಲೆಗಳಿಗೆ ಕಂಪ್ಯೂಟರ್ ಗಳನ್ನು ದಾನ ನೀಡುತ್ತಿದ್ದಾರೆ. ವಿದ್ಯಾರ್ಥಿಗಳಾದ ತಾವುಗಳು ಈ ಕಂಪ್ಯೂಟರ್ ಗಳನ್ನು ಬಳಸಿಕೊಂಡು ಜ್ಞಾನ ಬೆಳೆಸಿಕೊಳ್ಳಬೇಕು. ಅದೇ ರೀತಿ ಕಂಪ್ಯೂಟರ್ ಮೂಲಕ ಶಿಕ್ಷಣ ನೀಡಲು ಶಿಕ್ಷಕರಿಗೂ ತರಬೇತಿ ನೀಡಬೇಕು ಎಂದರು.ಬಳಿಕ ಸೋನೋ ವಿಷನ್ ಎಟೋಸ್ ಟೆಕ್ನಿಕಲ್ ಸರ್ವೀಸ್ ಪ್ರೈ. ಲಿಮಿಟೆಡ್ ನ ಮ್ಯಾನೇಜರ್ ಯೂಸಪ್ ಬಾಸಿತ್ ಮಾತನಾಡಿ, ಸರ್ಕಾರಿ ಶಾಲೆಗಳ ಮಕ್ಕಳಿಗೆ ಕಂಪ್ಯೂಟರ್ ಶಿಕ್ಷಣ ಸಿಗುವುದು ತುಂಬಾನೆ ಕಷ್ಟಕರವಾಗಿದೆ. ಆದ್ದರಿಂದ ಸಂಘ ಸಂಸ್ಥೆಗಳ ಸಹಯೋಗದೊಂದಿಗೆ ನಮ್ಮ ಕಂಪನಿ ವತಿಯಿಂದ ಈಗ ಕಂಪ್ಯೂಟರ್ ಗಳನ್ನು ವಿತರಣೆ ಮಾಡಿದ್ದೇವೆ ಎಂದರು.
ಬಳಿಕ ಬಿಇಒ ಕೃಷ್ಣಪ್ಪ, ಪರಿಸರ ವೇದಿಕೆಯ ಗುಂಪು ಮರದ ಆನಂದ್ ಮಕ್ಕಳಿಗೆ ಕಂಪ್ಯೂಟರ್ ಶಿಕ್ಷಣದ ಮಹತ್ವ ತಿಳಿಸಿದರು. ಈ ಸಂದರ್ಭದಲ್ಲಿ ಪ.ಪಂ ಅಧ್ಯಕ್ಷ ವಿಕಾಸ್, ಉಪಾಧ್ಯಕ್ಷ ಗಂಗರಾಜು, ಸರ್ಕಲ್ ಇನ್ಸ್ ಪೆಕ್ಟರ್ ನಯಾಜ್ ಬೇಗ್, ಸರ್ಕಾರಿ ನೌಕರರ ಸಂಘದ ಕೆ.ವಿ.ನಾರಾಯಣಸ್ವಾಮಿ ಮತ್ತಿತರರು ಉಪಸ್ಥಿತರಿದ್ದರು.