ಸಾರಾಂಶ
ಕನ್ನಡಪ್ರಭ ವಾರ್ತೆ ಚಿಂಚೋಳಿ
ರಾಜ್ಯ ಸರ್ಕಾರ ಜಾರಿಗೆ ತಂದಿರುವ ಕಂದಾಯ ಇಲಾಖೆಯ ದಾಖಲೆಗಳ ಗಣಕೀಕರಣ ಯೋಜನೆಗೆ ಚಿಂಚೋಳಿ ತಾಲೂಕು ಆಯ್ಕೆಯಾಗಿದ್ದು, ಕಂದಾಯ ಇಲಾಖೆಗೆ ಸಂಬಂಧಿಸಿದ ಎಲ್ಲ ದಾಖಲೆಗಳನ್ನು ಗಣಕೀಕರಣಗೊಳಿಸುವ ಕಾರ್ಯ ಚುರುಕಿನಿಂದ ನಡೆಯಬೇಕು ಎಂದು ರಾಜ್ಯ ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ರಾಜೇಂದ್ರಕುಮಾರ ಕಠಾರಿಯಾ ಕಂದಾಯ ಅಧಿಕಾರಿಗಳಿಗೆ ಸೂಚನೆ ನೀಡಿದರು.ಚಿಂಚೋಳಿ ತಹಸೀಲ್ದಾರ್ ಕಚೇರಿಗೆ ಅನಿರೀಕ್ಷಿತವಾಗಿ ಭೇಟಿ ನೀಡಿದ ಅವರು, ಕಂದಾಯ ಇಲಾಖೆಗೆ ಸಂಬಂಧಿಸಿದ ವಿವಿಧ ದಾಖಲೆಗಳ ಗಣಕೀಕರಣಗೊಳಿಸುವ ಕಾರ್ಯವನ್ನು ಪರಿಶೀಲಿಸಿ ತಾಲೂಕು ಕಂದಾಯ ಇಲಾಖೆಯ ೧೮೦೦ ದಾಖಲೆಗಳಲ್ಲಿ ೧೩೫೦ (ರಜಿಸ್ಟ್ರರ್ ಫೈಲ್) ದಾಖಲೆಗಳು ಅಪ್ಲೋಡ್ ಆಗಿವೆ. ದಾಖಲೆಗಳ ಗಣಿಕೀಕರಣ ಕೆಲಸವು ಅತ್ಯಂತ ನಿಧಾನಗತಿಯಲ್ಲಿ ನಡೆಯುತ್ತಿದೆ ೩ ತಿಂಗಳಲ್ಲಿ ಎಲ್ಲವು ದಾಖಲಿಸಬೇಕಾಗಿದೆ. ಆದರೆ ೪೫ ದಿನಗಳು ಕಳೆದರು ಸಹಾ ನಿರೀಕ್ಷಿತ ಪ್ರಮಾಣದಲ್ಲಿ ಕೆಲಸವಾಗಿಲ್ಲವೆಂದು ಅಸಮಾಧಾನಗೊಂಡರು.
ತಾಲೂಕು ಕಂದಾಯ ಇಲಾಖೆಯಲ್ಲಿ ಪಹಾಣಿ, ಭೂಮಿ, ಆರ್.ಟಿ.ಸಿ. ಒತ್ತುವರಿ ಜಮೀನು ಇನ್ನಿತರ ದಾಖಲೆಗಳಲ್ಲಿ ೧೨ ಸಾವಿರ ದಾಖಲೆಗಳು ಗಣಕೀಕರಣ ಮುಗಿದಿದೆ. ೧೨ ಲಕ್ಷ ಪುಟಗಳಲ್ಲಿ ಈಗಾಗಲೇ ೩.೫೦ ಲಕ್ಷ ಪುಟಗಳು ಅಪ್ಲೋಡ್ ಮಾಡಲಾಗಿದೆ. ಇದರಲ್ಲಿ ೮.೫೦ ಲಕ್ಷ ಪ್ರತಿಗಳನ್ನು ಗಣಕಯಂತ್ರದಲ್ಲಿ ಅಳವಡಿಸುವ ಪ್ರಕ್ರಿಯೆ ನಡೆಯುತ್ತಿದೆ ಎಂದು ಸೇಡಂ ಸಹಾಯಕ ಅಯುಕ್ತ ಆಶಪ್ಪ ಪೂಜಾರಿ ಅಧಿಕಾರಿಗಳಿಗೆ ಮಾಹಿತಿ ನೀಡಿದರು.ಗಣಕೀಕರಣಗೊಳಿಸುವ ಕಾರ್ಯದಲ್ಲಿ ಏಜಿನ್ಸಿ ಮುಖಾಂತರ ೧೦ ಸಿಬ್ಬಂದಿಗಳನ್ನು ಕೆಲಸಕ್ಕೆ ತೆಗೆದುಕೊಳ್ಳಲಾಗಿದೆ. ಆದರೆ ಎರಡು ತಿಂಗಳಿಂದ ಸಂಬಳ ನೀಡಿಲ್ಲ ಎಂದು ತಿಳಿಸಿದ ನಂತರ ಎಲ್ಲ ಕಂದಾಯ ಇಲಾಖೆ ನೌಕರರ ವೇತನ ಬಿಡುಗಡೆಗೊಳಿಸಲಾಗಿದೆ. ಯಾಕೆ ನೀವು ವೇತನ ಮಂಜೂರಿಗೊಳಿಸಿಲ್ಲ ಎಂದು ಕಲಬುರಗಿ ಜಿಲ್ಲಾ ಅಪರ ಜಿಲ್ಲಾಧಿಕಾರಿ ರಾಯಪ್ಪ ಹುಣಸಗಿ ಅವರನ್ನು ಪ್ರಶ್ನಿಸಿದರು. ದಿನಗೂಲಿ ನೌಕರರು ಎಜೆನ್ಸಿ ಮೂಲಕ ಕೆಲಸ ಮಾಡುತ್ತಿದ್ದಾರೆ ಎಜೆನ್ಸಿ ಅವರು ವೇತನ ಕೊಟ್ಟಿಲ್ಲ ಇದನ್ನು ಕೂಡಲೇ ಸರಿಪಡಿಸಿಕೊಳ್ಳಲಾಗುವುದು ಎಂದು ಹೇಳಿದರು.
ಸೇಡಂ ಸಹಾಯಕ ಆಯುಕ್ತ ಆಶಪ್ಪ ಪೂಜಾರಿ, ತಹಸೀಲ್ದಾರ್ ಮಲ್ಲಿಕಾರ್ಜುನ ಅರಕೇರಾ, ಗ್ರೇಡ-೨ತಹಸೀಲ್ದಾರ ವೆಂಕಟೇಶ ದುಗ್ಗನ, ಸಿಬ್ಬಂದಿ ರಘುನಾಥ, ಸುಭಾಷ ನಿಡಗುಂದಾ, ರವಿಕುಮಾರ ಪಾಟೀಲ ಚಿಟ್ಟಾ, ಉಮೇಶ, ಭೀಮರೆಡ್ಡಿ ಮುನ್ನುರ, ಗ್ರಾಮಲೆಕ್ಕಿಗ ಶಿವಾಜಿ ಚವ್ಹಾಣ ಇತರಿದ್ದರು.