ಎಲ್ಲ ದಾಖಲೆಗಳನ್ನು ತುರ್ತಾಗಿ ಗಣಕೀಕರಣಗೊಳಿಸಿ

| Published : Jan 14 2025, 01:05 AM IST

ಸಾರಾಂಶ

ಗುಂಡ್ಲುಪೇಟೆಯಲ್ಲಿ ಭೂ ಸುರಕ್ಷಾ ಯೋಜನೆಯಡಿ ಭೂ ದಾಖಲೆಗಳ ಗಣಕೀಕರಣವನ್ನು ಶಾಸಕ ಎಚ್.ಎಂ.ಗಣೇಶ್‌ ಪ್ರಸಾದ್‌ ಉದ್ಘಾಟಿಸಿದರು.

ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ

ತಾಲೂಕು ಕಚೇರಿ, ಸರ್ವೆ ಮತ್ತು ನೋಂದಣಿ ಇಲಾಖೆಗಳ ಎಲ್ಲ ಭೂ ದಾಖಲೆಗಳ ಡಿಜಿಟಲೀಕರಣಕ್ಕೆ ಶಾಸಕ ಎಚ್.ಎಂ.ಗಣೇಶ್‌ ಪ್ರಸಾದ್‌ ಚಾಲನೆ ನೀಡುವ ಮೂಲಕ ಭೂ ಸುರಕ್ಷಾ ಯೋಜನೆ ಉದ್ಘಾಟಿಸಿದರು.

ಪಟ್ಟಣದ ತಾಲೂಕು ಕಚೇರಿಯ ಅಭಿಲೇಖಾಲಯ ಶಾಖೆಯಲ್ಲಿ ನಡೆದ ಸಮಾರಂಭದಲ್ಲಿ ಮಾತನಾಡಿ, ರಾಜ್ಯ ಸರ್ಕಾರದ ಆದೇಶದಂತೆ ಭೂ ಸುರಕ್ಷಾ ಯೋಜನೆಯಡಿ ಕಂದಾಯ ದಾಖಲೆಗಳನ್ನು ಗಣಕೀಕರಣ ಮಾಡಲಾಗಿದೆ ಎಂದರು. ಹಳೆಯ ದುಸ್ಥಿತಿಯಲ್ಲಿರುವ ಭೂ ದಾಖಲೆಗಳನ್ನು ಶಾಶ್ವತ ಡಿಜಿ ದಾಖಲೆಯಾಗಲಿವೆ. ರೆಕಾರ್ಡ್‌ ರೂಂಗಳಿಂದ ಪಡೆದುಕೊಳ್ಳಲು ಇರುವ ತೊಂದರೆ ನಿವಾರಣೆ ಆಗಲಿದೆ. ಹಳೆಯ ದಾಖಲೆಗಳ ಸಂರಕ್ಷಣೆ ಹಾಗೂ ಕಳವಾಗಲು, ತಿದ್ದಲು ಅಸಾಧ್ಯ ಎಂದರು. ನೇರವಾಗಿ ನೀವೇ ಡಿಜಿಟಲ್‌ ಮಾಧ್ಯಮದಿಂದ ಭೂ ದಾಖಲೆಗಳನ್ನು ಪಡೆದುಕೊಳ್ಳಬಹುದಾಗಿದೆ. ನಿಮ್ಮ ದಾಖಲೆಗಳನ್ನು ನಿಮ್ಮ ಕೈಗೆ ತಲುಪಿಸುವ ಯೋಜನೆಯೆ ಭೂ ಸುರಕ್ಷಾ ಯೋಜನೆ ಎಂದರು.

ಅನಗತ್ಯವಾಗಿ ಕಂದಾಯ ದಾಖಲೆ ಪಡೆಯಲು ವಿಳಂಬ, ಅಡೆ ತಡೆಗಳನ್ನು ಆಲಿಸಿ, ತ್ವರಿತ ಆಡಳಿತ ಸೇವೆ ಒದಗಿಸುವ ಪ್ರಯತ್ನಕ್ಕೆ ರಾಜ್ಯ ಸರ್ಕಾರ ಮುಂದಾಗಿದೆ. ರೈತರು ಹಾಗೂ ಸಾರ್ವಜನಿಕರು ಈ ಯೋಜನೆಯನ್ನು ಸದುಪಯೋಗ ಪಡೆದುಕೊಳ್ಳಿ ಎಂದು ಸಲಹೆ ನೀಡಿದರು. ತಾಲೂಕಿನ ಎಲ್ಲ ದಾಖಲೆಗಳನ್ನು ಸಂಪೂರ್ಣ ಹಾಗೂ ತ್ವರಿತವಾಗಿ ಜನರ ಹಿತದೃಷ್ಟಿಯಿಂದ ಗಣಕೀಕರಣ ಮಾಡಬೇಕು ಎಂದು ತಹಸೀಲ್ದಾರ್‌ ಸೂಚನೆ ನೀಡಿದರು. ಸಂಪೂರ್ಣವಾಗಿ ಗಣಕೀಕರಣ ನಂತರ ಸಾರ್ವಜನಿಕರು ಡಿಜಿಟಲ್‌ ಮಾಧ್ಯಮದ ಮೂಲಕ ನೇರವಾಗಿ ಪಡೆಯಿರಿ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಕಾಡಾ ಮಾಜಿ ಅಧ್ಯಕ್ಷ ಎಚ್.ಎಸ್.ನಂಜಪ್ಪ, ಜಿಪಂ ಮಾಜಿ ಉಪಾಧ್ಯಕ್ಷ ಕೆ.ಎಸ್.ಮಹೇಶ್‌, ತಹಸೀಲ್ದಾರ್‌ ಟಿ.ರಮೇಶ್‌ ಬಾಬು, ಮುಖಂಡರಾದ ಎಸ್‌ಆರ್‌ಎಸ್‌ ರಾಜಶೇಖರ್‌, ಎಚ್.ಎನ್.ಬಸವರಾಜು, ಪಿ.ಮಹದೇವಪ್ಪ, ಮಂಚಹಳ್ಳಿ ಲೋಕೇಶ್‌, ಜಿ.ಕೆ.ಲೋಕೇಶ್, ಎಡಿಎಲ್‌ಆರ್‌ ಮಹೇಶ್‌, ಸರ್ವೆ ಸೂಪರ್‌ ವೈಸರ್‌ ಮಹೇಶ್‌, ಉಪ ತಹಸೀಲ್ದಾರ್‌ ಪ್ರಕಾಶ್‌, ಶಿರಸ್ತೇದಾರ್‌ ಮಹೇಶ್‌, ಲಕ್ಷ್ಮೀನಾರಾಯಣ, ರಾಜಸ್ವ ನಿರೀಕ್ಷಕ ಮನೋಹರ್‌, ರಾಜಕುಮಾರ್‌, ನಾಗೇಂದ್ರ, ಗಂಗಾಧರ್‌, ಗ್ರಾಮ ಲೆಕ್ಕಿಗರಾದ ವಿನಯ್‌ ಕುಮಾರ್‌, ಜವರೇಗೌಡ, ಸಿದ್ದರಾಮೇಗೌಡ, ರೆಕಾರ್ಡ್‌ ರೂಂ ಉಸ್ತುವಾರಿ ನೌಕರರಾದ ಮಹಮದ್‌ ಅಲಿ, ಉಮರ್‌, ದರ್ಶನ, ಪುರಸಭೆ ಸದಸ್ಯರು ಹಾಗೂ ಕಂದಾಯ ಇಲಾಖೆಯ ಅಧಿಕಾರಿಗಳಿದ್ದರು.