ಕಥಾ ರಚನೆಯಲ್ಲಿ ಏಕಾಗ್ರತೆ ಮುಖ್ಯ: ಭಾರತ ಸ್ಕೌಟ್ಸ್‌, ಗೈಡ್ಸ್‌ನ ಸುರೇಶ್‌ ಗುರೂಜಿ

| Published : Apr 26 2024, 12:53 AM IST

ಕಥಾ ರಚನೆಯಲ್ಲಿ ಏಕಾಗ್ರತೆ ಮುಖ್ಯ: ಭಾರತ ಸ್ಕೌಟ್ಸ್‌, ಗೈಡ್ಸ್‌ನ ಸುರೇಶ್‌ ಗುರೂಜಿ
Share this Article
  • FB
  • TW
  • Linkdin
  • Email

ಸಾರಾಂಶ

ಕಥಾ ರಚನೆಯಲ್ಲಿ ಯೋಚನಾ ಲಹರಿಯ ಜತೆಗೆ ಏಕಾಗ್ರತೆ, ಸಂಯಮ ಬಹಳ ಮುಖ್ಯ. ಈ ಹಿನ್ನೆಲೆಯಲ್ಲಿ ಮಕ್ಕಳು ಗಮನಹರಿಸಬೇಕು ಎಂದು ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಕಾರ್ಯದರ್ಶಿ ಸುರೇಶ್ ಗುರೂಜಿ ಅಭಿಪ್ರಾಯಪಟ್ಟರು. ಹಾಸನದಲ್ಲಿ ಮಕ್ಕಳಿಗಾಗಿ ಏರ್ಪಡಿಸಿದ್ದ ಉಚಿತ ಕಥಾ ಕಮ್ಮಟದಲ್ಲಿ ಮಾತನಾಡಿದರು.

ಉಚಿತ ಕಥಾ ಕಮ್ಮಟ

ಹಾಸನ: ಕಥಾ ರಚನೆಯಲ್ಲಿ ಯೋಚನಾ ಲಹರಿಯ ಜತೆಗೆ ಏಕಾಗ್ರತೆ, ಸಂಯಮ ಬಹಳ ಮುಖ್ಯ. ಈ ಹಿನ್ನೆಲೆಯಲ್ಲಿ ಮಕ್ಕಳು ಗಮನಹರಿಸಬೇಕು ಎಂದು ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಕಾರ್ಯದರ್ಶಿ ಸುರೇಶ್ ಗುರೂಜಿ ಅಭಿಪ್ರಾಯಪಟ್ಟರು.

ಬೆಂಗಳೂರಿನ ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ, ಹಾಸನ ತಾಲೂಕು ಘಟಕದ ವತಿಯಿಂದ ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಸಂಸ್ಥೆ ಸಹಯೋಗದೊಂದಿಗೆ ಸ್ಕೌಟ್ಸ್, ಗೈಡ್ಸ್ ಸಮುದಾಯ ಭವನದಲ್ಲಿ ಮಕ್ಕಳಿಗಾಗಿ ಏರ್ಪಡಿಸಿದ್ದ ಉಚಿತ ಕಥಾ ಕಮ್ಮಟದಲ್ಲಿ ಮಾತನಾಡಿ, ಶ್ರದ್ಧೆ, ಆಸಕ್ತಿ, ಘಟನೆಗಳನ್ನು ವಿಶ್ಲೇಷಣೆ ಮಾಡುವ ಕೌಶಲಗಳನ್ನು ಮಕ್ಕಳು ರೂಢಿಸಿಕೊಳ್ಳಬೇಕಿದೆ. ಕನ್ನಡದ ಹಿರಿಯ ಕಥೆಗಾರರ ಕಥಾ ಸಂಕಲನಗಳನ್ನು ಹೆಚ್ಚೆಚ್ಚು ಓದಬೇಕು. ಅಂದಾಗ ಮಾತ್ರ ಕಥಾ ಹಂದರದ ಗುಣಲಕ್ಷಣಗಳು ಮನನವಾಗುತ್ತವೆ. ಮಕ್ಕಳು ಪ್ರತಿದಿನ ಪ್ರಾಣಾಯಾಮ ಮತ್ತು ಧ್ಯಾನ ಮಾಡುವುದರಿಂದ ಮನಸ್ಸನ್ನು ನಿಗ್ರಹ ಮಾಡಿಕೊಳ್ಳುವುದರ ಜತೆಗೆ ನೆನಪಿನ ಶಕ್ತಿ ಹೆಚ್ಚುತ್ತದೆ ಎಂದು ಹೇಳಿದರು.

ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯ ರಾಜ್ಯ ಸಹಾಯಕ ಸಂಘಟನಾ ಆಯುಕ್ತೆ ಎಚ್.ಎಂ.ಪ್ರಿಯಾಂಕ ಮಾತನಾಡಿ, ಸಾಹಿತ್ಯ ಚಟವಟಿಕೆಗಳು ಮಕ್ಕಳನ್ನು ಸೃಜನಾತ್ಮಕವಾಗಿ ಸದೃಢಗೊಳಿಸುತ್ತವೆ. ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ಹಮ್ಮಿಕೊಂಡಿರುವ ಮಕ್ಕಳ ಕಥಾ ಕಮ್ಮಟವು ಅತ್ಯಂತ ಅರ್ಥಪೂರ್ಣವಾಗಿದೆ. ಇಂತಹ ಸುವರ್ಣ ಅವಕಾಶವನ್ನು ಮಕ್ಕಳು ಸದುಪಯೋಗಪಡಿಸಿಕೊಂಡು ಬರಹದಲ್ಲಿ ತೊಡಗಿಸಿಳ್ಳಬೇಕು ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಕೇಂದ್ರ ಕನ್ನಡ ಸಾಹಿತ್ಯ ವೇದಿಕೆಯ ಸಂಸ್ಥಾಪಕ ಅಧ್ಯಕ್ಷ ಕೊಟ್ರೇಶ್ ಎಸ್.ಉಪ್ಪಾರ್, ಕೇಂದ್ರ ಸಮಿತಿಯ ಜಂಟಿ ಕಾರ್ಯದರ್ಶಿ ನಾಗರಾಜ್ ದೊಡ್ಡಮನಿ, ಜಿಲ್ಲಾ ಮುಖ್ಯ ಆಯುಕ್ತ ಡಾ ವೈ.ಎಸ್.ವೀರಭದ್ರಪ್ಪ, ತಾಲೂಕು ಅಧ್ಯಕ್ಷೆ ಕೆ.ಸಿ.ಗೀತಾ, ಮಹಿಳಾ ಕಾರ್ಯದರ್ಶಿ ಪದ್ಮಾವತಿ ವೆಂಕಟೇಶ್, ಸಮಾಜ ಸೇವಕಿ ಭಾನುಮತಿ, ಕವಯಿತ್ರಿ ಗಿರಿಜಾ ನಿರ್ವಾಣಿ, ಪೋಷಕ ರಾಮಭದ್ರಯ್ಯ, ಎಎಸ್‌ಒಸಿ ಪ್ರಿಯಾಂಕ ಎಚ್.ಎಂ.ಸೇರಿ ಇತರ ಶಿಬಿರಾರ್ಥಿಗಳು ಹಾಜರಿದ್ದರು.

ಹಾಸನದ ಸ್ಕೌಟ್ಸ್, ಗೈಡ್ಸ್ ಸಮುದಾಯ ಭವನದಲ್ಲಿ ಮಕ್ಕಳಿಗಾಗಿ ಏರ್ಪಡಿಸಿದ್ದ ಉಚಿತ ಕಥಾ ಕಮ್ಮಟದಲ್ಲಿ ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಕಾರ್ಯದರ್ಶಿ ಸುರೇಶ್ ಗುರೂಜಿ ಮಾತನಾಡಿದರು.