ಏಕಾಗ್ರತೆಗೆ ಅಭ್ಯಾಸ ಬಲವೇ ಪ್ರಧಾನ ಸಾಧನ

| Published : Jan 09 2025, 12:47 AM IST

ಸಾರಾಂಶ

ಶ್ರದ್ಧೆ, ಉತ್ಸಾಹದಿಂದ ಬುದ್ಧಿ ಉಪಯೋಗಿಸಿ ಅಭ್ಯಾಸ ಮಾಡಬೇಕು. ವಿದ್ಯಾರ್ಥಿಗಳಿಗೆ ತಮ್ಮ ಶಕ್ತಿಯ ಬಗ್ಗೆ ನಂಬಿಕೆ ಇರಬೇಕು

ನರಗುಂದ: ಏಕಾಗ್ರತೆಗೆ ಅಭ್ಯಾಸ ಬಲವೇ ಪ್ರಧಾನ ಸಾಧನ, ಪುನಃ ಪುನಃ ಓದುವುದು, ಬರೆಯುವುದರಿಂದ ಸ್ಮರಣಶಕ್ತಿ ಹೆಚ್ಚಾಗುತ್ತದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಡಾ. ಗುರುನಾಥ ಹೂಗಾರ ಹೇಳಿದರು.

ಅವರು ಬುಧವಾರ ತಾಲೂಕಿನ ಬನಹಟ್ಟಿ ಗ್ರಾಮದ ಕರ್ನಾಟಕ ಪಬ್ಲಿಕ್‌ ಶಾಲೆ ಹಾಗೂ ಧಾರವಾಡ ಕರ್ನಾಟಕ ವಿದ್ಯಾವರ್ಧಕ ಸಂಘದ ಸಂಯುಕ್ತಾಶ್ರಯದಲ್ಲಿ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗಾಗಿ ಆಯೋಜಿಸಲ್ಪಟ್ಟ ಅಧ್ಯಯನದಲ್ಲಿ ಏಕಾಗ್ರತೆ ಸಾಧಿಸುವುದು ಹೇಗೆ ಎಂಬ ವಿಷಯ ಕುರಿತು ನಡೆದ ಕಾರ್ಯಕ್ರಮದಲ್ಲಿ ಮಾತನಾಡಿ, ಶ್ರದ್ಧೆ, ಉತ್ಸಾಹದಿಂದ ಬುದ್ಧಿ ಉಪಯೋಗಿಸಿ ಅಭ್ಯಾಸ ಮಾಡಬೇಕು. ವಿದ್ಯಾರ್ಥಿಗಳಿಗೆ ತಮ್ಮ ಶಕ್ತಿಯ ಬಗ್ಗೆ ನಂಬಿಕೆ ಇರಬೇಕು. ಅಧ್ಯಯನ ನಿರತರಾದಾಗ ಸಮಯಕ್ಕೆಆದ್ಯತೆ ಕೊಡಬೇಕು. ವಿನಾಕಾರಣ ಸಮಯ ಹಾಳು ಮಾಡದೇ ಸದ್ಬಳಕೆ ಮಾಡಿಕೊಳ್ಳಬೇಕು. ಈಗಾಗಲೇ ಸಿ ಗ್ರೇಡ್ ವಿದ್ಯಾರ್ಥಿಗಳಿಗಾಗಿ ತಾಲೂಕಿನಲ್ಲಿ ಪರಿಣಾಮ ಸುಧಾರಣೆಗಾಗಿ ಕೇಂದ್ರ ಸ್ಥಾಪಿಸಿದ್ದು, ವಿದ್ಯಾರ್ಥಿಗಳಲ್ಲಿ ಕಲಿಕಾ ಆಸಕ್ತಿ ಹೆಚ್ಚಿಸಲಾಗುತ್ತಿದೆ. ಪಾಲಕರ ಸಭೆ ಕರೆದು ಮಕ್ಕಳ ಬಗ್ಗೆ ನಿರಂತರ ಕಾಳಜಿ ವಹಿಸುವಂತೆ ಮಾಡಲಾಗಿದೆಎಂದು ತಿಳಿಸಿದರು.

ಧಾರವಾಡದ ಕವಿವ ಸಂಘದ ಕಾರ್ಯಕ್ರಮ ಸಂಯೋಜಕ ವೀರಣ್ಣ ಒಡ್ಡೀನ ಮಾತನಾಡಿ, ಅಧ್ಯಯನ ಒಂದು ವೃತದ್ದಂತೆ.ವಿದ್ಯಾರ್ಥಿಗಳು ವೃತಧಾರಕರಾಗಿ ಅಧ್ಯಯನ ಮಾಡಬೇಕು. ಓದಿನ ಜತೆಗೆ ಬರವಣಿಗೆಗೂ ಮಹತ್ವ ನೀಡಬೇಕು. ಓದುವಾಗ ಅನ್ಯ ವಿಷಯ ಮನಸ್ಸನ್ನು ಪ್ರವೇಶಿಸದಂತೆ ನಿರ್ಬಂಧಿಸಬೇಕು. ಅಧ್ಯಯನ ನಿರತರಾದಾಗ ಅಲ್ಪ ವಿಶ್ರಾಂತಿ ಮುಖ್ಯ ಎಂದರು.

ಡಿಮ್ಹಾನ್ಸ ಮನೋಆರೋಗ್ಯ ಸಮಾಜ ಕಾರ್ಯಕರ್ತ ಪ್ರಶಾಂತ ಪಾಟೀಲ ಉಪನ್ಯಾಸದಲ್ಲಿ ಮಾತನಾಡಿ, ಎಸ್ಸೆಸ್ಸೆಲ್ಸಿ ಪರೀಕ್ಷೆ ನಿಮ್ಮ ಜೀವನದ ಮಹತ್ವದ ತಿರುವು. ಆತ್ಮವಿಶ್ವಾಸ, ಛಲ, ಬದ್ಧತೆಯಿಂದ ಅಧ್ಯಯನ ಮಾಡಿದರೆ ಜೀವನದಲ್ಲಿ ಎಂತಹ ಸಾಧನೆಯನ್ನಾದರೂ ಮಾಡಬಹುದು. ಮುಖ್ಯವಾಗಿ ಓದಲು ಹಸಿವು ಮತ್ತು ಆಸಕ್ತಿ ಮುಖ್ಯ.ಪರೀಕ್ಷೆ ಬಗ್ಗೆ ವಿನಾಕಾರಣ ಭಯ ಪಡದೆ ಅಧ್ಯಯನ ಮಾಡಬೇಕು. ಭಯವು ನಿಮ್ಮ ಶಕ್ತಿ ಸಾಮರ್ಥ್ಯ ಕುಗ್ಗಿಸುತ್ತದೆ. ಯೋಜನಾಬದ್ಧವಾಗಿ ಓದಿದರೆ ಯಶಸ್ಸು ನಿಮ್ಮದಾಗುತ್ತದೆ. ಗುಂಪು ಚರ್ಚೆ, ಹಳೆ ಪ್ರಶ್ನೆಪತ್ರಿಕೆ ಬಿಡಿಸುವುದರಿಂದ ಹೆಚ್ಚು ಅಂಕ ಗಳಿಸಲು ಸಾಧ್ಯ. ಪಠ್ಯಪುಸ್ತಕದ ಹೊರತು ಗೈಡ್ ಹಾಗೂ ಡೈಜಿಸ್ಟ್‌ ಗಳನ್ನು ಉಪಯೋಗಿಸಬಾರದು ಎಂದು ಹೇಳಿದರು.

ಕೆಪಿಎಸ್ ಶಾಲೆಯ ಪ್ರಾಚಾರ್ಯ ಕೆ.ಎಂ. ಹುದ್ದಾರ, ಉಪ ಪ್ರಾಚಾರ್ಯ ಎಸ್.ವೈ. ಪಾಟೀಲ, ಗೀತಾ ಪೂಜಾರ, ಸಿ.ಜಿ. ಖಾನಾಪೂರ, ಪರಮೇಶ, ಕವಿತಾ ಸಿರಿಯಣ್ಣವರ, ಅನ್ನಪೂರ್ಣಾ, ಸಂಗನಗೌಡ ಪಾಟೀಲ, ಎಸ್.ಎನ್.ಗಡೇಕಾರ, ಕೆಪಿಎಸ್ ಪ್ರೌಢ ಶಾಲೆಯ ಶಿಕ್ಷಕರು, ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳು, ಸಿಬ್ಬಂದಿ ಉಪಸ್ಥಿತರಿದ್ದರು.