ಪರಿಸರ ರಕ್ಷಣೆಗೆ ಕಾಳಜಿ ಅಗತ್ಯ: ಶಾಸಕ ಬಸವರಾಜ ಶಿವಣ್ಣನವರ

| Published : Aug 19 2025, 01:00 AM IST

ಪರಿಸರ ರಕ್ಷಣೆಗೆ ಕಾಳಜಿ ಅಗತ್ಯ: ಶಾಸಕ ಬಸವರಾಜ ಶಿವಣ್ಣನವರ
Share this Article
  • FB
  • TW
  • Linkdin
  • Email

ಸಾರಾಂಶ

ಅತಿಯಾದ ಅರಣ್ಯ ನಾಶ ಮನುಷ್ಯ ಸೇರಿದಂತೆ ಜೀವಸಂಕುಲಗಳ ಅವನತಿಗೆ ಕಾರಣವಾಗುತ್ತಿದೆ. ಇದಕ್ಕೆ ಮಾನವನೆ ಕಾರಣ ಎನ್ನುವುದು ಸಹ ಸತ್ಯ ಸಂಗತಿ.

ಬ್ಯಾಡಗಿ: ಪರಿಸರ ರಕ್ಷಣೆ ಕುರಿತು ವಿಶೇಷ ಕಾಳಜಿ ಹಾಗೂ ರಕ್ಷಿತ ಅರಣ್ಯ ಪ್ರದೇಶಗಳ ಅಭಿವೃದ್ಧಿ ವಿಷಯದಲ್ಲಿ ಸಾಮೂಹಿಕ ಹೊಣೆಗಾರಿಕೆ ಹಾಗೂ ಪಾರದರ್ಶಕ ಚಿಂತನೆಗಳು ನಡೆಯಬೇಕಿದೆ ಎಂದು ಶಾಸಕ ಬಸವರಾಜ ಶಿವಣ್ಣನವರ ತಿಳಿಸಿದರು.ತಾಲೂಕಿನ ಮೋಟೆಬೆನ್ನೂರು ಗ್ರಾಮದ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿನ ಸಾಲುಮರದ ತಿಮ್ಮಕ್ಕ ಉದ್ಯಾನದದಲ್ಲಿ ಪರಿಸರಸ್ನೇಹಿ ಬಳಗದ ವತಿಯಿಂದ ಹಮ್ಮಿಕೊಂಡಿದ್ದ ಆಫ್ರಿಕನ್ ತಳಿಯ ಸಸಿ ನೆಡುವ ಕಾರ‍್ಯಕ್ರಮದಲ್ಲಿ ಮಾತನಾಡಿದರು.

ಅತಿಯಾದ ಅರಣ್ಯ ನಾಶ ಮನುಷ್ಯ ಸೇರಿದಂತೆ ಜೀವಸಂಕುಲಗಳ ಅವನತಿಗೆ ಕಾರಣವಾಗುತ್ತಿದೆ. ಇದಕ್ಕೆ ಮಾನವನೆ ಕಾರಣ ಎನ್ನುವುದು ಸಹ ಸತ್ಯ ಸಂಗತಿ ಎಂದರು.ಮುಪ್ಪಿನೇಶ್ವರ ಮಠದ ಮಲ್ಲಿಕಾರ್ಜುನ ಶ್ರೀಗಳು ಮಾತನಾಡಿ, ನೀರು, ಇಂಧನ, ಮರಳು, ಅರಣ್ಯ ಪ್ರದೇಶದಲ್ಲಿರುವ ಗಿಡ ಮರಗಳು ಸೇರಿದಂತೆ ಖನಿಜಗಳು ನಮ್ಮೆಲ್ಲರ ಪ್ರಾಕೃತಿಕ ಸಂಪತ್ತು. ಆದರೆ ತಿಳಿದೋ ಅಥವಾ ತಿಳಿಯದೆಯೋ ಸಂಪನ್ಮೂಲಗಳ ಅತಿಯಾದ ಬಳಕೆಯಿಂದಾಗಿ ಕೊರತೆಯಾಗುತ್ತಿದೆಯಲ್ಲದೇ ಸದ್ದಿಲ್ಲದೇ ನಮ್ಮ ಅರಿವಿಗೆ ಬಾರದಂತೆ ಖಾಲಿಯಾಗುತ್ತಿದ್ದು, ಇದರಿಂದಾಗುವ ದುಷ್ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದರು.ಈ ಸಂದರ್ಭದಲ್ಲಿ ಪರಿಸರಸ್ನೇಹಿ ಬಳಗದ ಅಧ್ಯಕ್ಷ ಮೋಹನಕುಮಾರ ಸಿ.ಎಚ್., ದಾನಪ್ಪ ಚೂರಿ, ವಲಯ ಅರಣ್ಯ ಅಧಿಕಾರಿ ಜಿ.ಕೆ. ಗಿರಿಧರ ರಾಮಪ್ಪ ಕೋಟಿ, ಈರಣ್ಣ ಚಿನ್ನಗುಡಿ, ದಿಲೀಪ ಕುಸಗೂರ, ಮಲ್ಲಿಕಾರ್ಜುನ ಕುದುರಿಹಾಳಮಠ, ಮಾಲತೇಶ ಕುರುಬರ, ಇನ್ನು ಮುಂತಾದವರು ಉಪಸ್ಥಿತರಿದ್ದರು.

ಇಂದು ರಕ್ತದಾನ ಶಿಬಿರ

ಹಾವೇರಿ: ನಗರದ ಬಸವಕೇಂದ್ರ ಹೊಸಮಠದ ಬಸವೇಶ್ವರ ಸಮುದಾಯ ಭವನದಲ್ಲಿ ಆ. 19ರಂದು ಬೆಳಗ್ಗೆ 10ಕ್ಕೆ ರಕ್ತ ನೀಡಿ, ಭರವಸೆ ನೀಡಿ, ಜೊತೆಯಾಗಿ ನಾವು ಜೀವ ಉಳಿಸೋಣ ಎಂಬ ಘೋಷ್ಯವಾಕ್ಯದೊಂದಿಗೆ ಸ್ವಯಂಪ್ರೇರಿತ ಬೃಹತ್ ರಕ್ತದಾನ ಶಿಬಿರ ಆಯೋಜಿಸಲಾಗಿದೆ.

ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮತ್ತು ಜಿಲ್ಲಾ ಆಸ್ಪತ್ರೆ, ಬಸವ ಕೇಂದ್ರ ಹೊಸಮಠ, ಹಾವೇರಿ ವಿಶ್ವವಿದ್ಯಾಲಯ, ಬಸವೇಶ್ವರ ಶಿಕ್ಷಣ ಮಹಾವಿದ್ಯಾಲಯ(ಬಿಇಡಿ), ಬಸವೇಶ್ವರ ಸ್ನಾತಕೋತ್ತರ ಕೇಂದ್ರ, ಶೂನ್ಯ ಫೌಂಡೇಶನ್, ಭಾರತೀಯ ರೆಡ್ ಕ್ರಾಸ್ ಸಂಸ್ಥೆ, ಹಾಗೂ ಲಯನ್ಸ್ ಕ್ಲಬ್ ಆಶ್ರಯದಲ್ಲಿ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ. ಶಿಬಿರವನ್ನು ಯಶಸ್ವಿಗೊಳಿಸಬೇಕೆಂದು ಹೊಸಮಠದ ಬಸವಶಾಂತಲಿಂಗ ಸ್ವಾಮೀಜಿ, ಲಯನ್ಸ್ ಕ್ಲಬ್ ಅಧ್ಯಕ್ಷ ಎ.ಎಚ್. ಕಬ್ಬಿಣಕಂತಿಮಠ ಹಾಗೂ ಭಾರತೀಯ ರೆಡ್‌ಕ್ರಾಸ್ ಸಂಸ್ಥೆಯ ಗೌರವ ಕಾರ್ಯಾಧ್ಯಕ್ಷ ಸಂಜೀವಕುಮಾರ ನೀರಲಗಿ ಪ್ರಕಟಣೆಯಲ್ಲಿ ಕೋರಿದ್ದಾರೆ.