ನ್ಯಾ.ರವೀಂದ್ರ ಹೆಗಡೆ ಕಳವಳ । ಸಂತ ಜೋಸೆಫರ ಕಾನ್ವೆಂಟ್‌ನಲ್ಲಿ ವಿಶ್ವ ಬಾಲಕಾರ್ಮಿಕ ಪದ್ಧತಿ ವಿರೋಧಿ ದಿನಾಚರಣೆ'''' ಉದ್ಘಾಟನೆ
ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರುಕಾಫಿ ಪ್ಲಾಂಟೇಶನ್ ಹಾಗೂ ಪಟಾಕಿ ತಯಾರಿಕಾ ಉದ್ಯಮಗಳಲ್ಲಿ ಬಾಲಕಾರ್ಮಿಕರ ಬಳಕೆ ಹೆಚ್ಚಾಗಿದೆ ಎಂದು ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶ ರವೀಂದ್ರ ಹೆಗಡೆ ಕಳವಳ ವ್ಯಕ್ತಪಡಿಸಿದರು.
ನಗರದ ಚರ್ಚ್ ರಸ್ತೆಯ ಬಾಲಕಿಯರ ಪದವಿಪೂರ್ವ ಕಾಲೇಜಿನ ಸಂತ ಜೋಸೆಫರ ಕಾನ್ವೆಂಟ್‌ನಲ್ಲಿ ಶುಕ್ರವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಪೊಲೀಸ್ ಹಾಗೂ ಕಾರ್ಮಿಕ ಇಲಾಖೆಯ ಸಹಯೋಗದಲ್ಲಿ ಆಯೋಜಿಸಲಾಗಿದ್ದ `ವಿಶ್ವ ಬಾಲಕಾರ್ಮಿಕ ಪದ್ಧತಿ ವಿರೋಧಿ ದಿನಾಚರಣೆ'''' ಉದ್ಘಾಟಿಸಿ ಮಾತನಾಡಿದರು.ಪಟಾಕಿ ತಯಾರಿಕೆಯಲ್ಲಿ ಅತಿ ಹೆಚ್ಚು ಮಕ್ಕಳನ್ನು ದುಡಿಸಿಕೊಳ್ಳಲಾಗುತ್ತಿದೆ ಎಂಬ ಕಾರಣಕ್ಕೆ ಇಂದು ಜಾಗತಿಕ ಮಟ್ಟದಲ್ಲಿ ಲಕ್ಷಾಂತರ ಜನ ಪಟಾಕಿ ಬಳಸುವುದನ್ನೇ ಕೈಬಿಡುತ್ತಿದ್ದಾರೆ. ಕೇವಲ ಪರಿಸರ ಮಾಲಿನ್ಯ ಮಾತ್ರವಲ್ಲದೆ, ಬಾಲ ಕಾರ್ಮಿಕರ ಶೋಷಣೆ ಪಟಾಕಿ ನಿಷೇಧದ ಹಿಂದಿನ ದೊಡ್ಡ ನೈತಿಕ ಕಾರಣ ಎಂದರು.
ಕಡಿಮೆ ಕೂಲಿಗೆ ಸಿಗುತ್ತಾರೆ ಎಂಬ ಕಾರಣಕ್ಕೆ ಮಕ್ಕಳನ್ನು ದುಡಿಸಿಕೊಳ್ಳುವ ಮಾಲೀಕರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.
ಬಾಲಕಾರ್ಮಿಕ ಮುಕ್ತ ಸಮಾಜ ನಿರ್ಮಾಣ ನಮ್ಮೆಲ್ಲರ ನೈತಿಕ ಹೊಣೆ. ಮಕ್ಕಳನ್ನು ಶಾಲೆಗೆ ಕಳುಹಿಸಿ ಉತ್ತಮ ನಾಗರಿಕರನ್ನಾಗಿ ರೂಪಿಸುವುದು ಪ್ರತಿಯೊಬ್ಬ ನಾಗರಿಕನ ಜವಾಬ್ದಾರಿಯಾಗಿದೆ. ಕಾನೂನು ಕೇವಲ ಕಾಗದದ ಮೇಲಷ್ಟೇ ಉಳಿಯದೆ ಅನುಷ್ಟಾನಕ್ಕೆ ಬರಬೇಕು. ನಮ್ಮ ಮಕ್ಕಳು ಕೈಗಾರಿಕೆ, ಹೋಟೆಲ್‌ಗಳಲ್ಲಿ ದುಡಿಯಬೇಕೇ ಅಥವಾ ಶಾಲೆಗೆ ಹೋಗಿ ಕಲಿಯಬೇಕೇ ಎಂಬುದನ್ನು ಸಮಾಜ ಗಂಭೀರ ವಾಗಿ ಯೋಚಿಸಬೇಕು. ಮಕ್ಕಳ ಬಾಲ್ಯವನ್ನು ಕಸಿದುಕೊಳ್ಳುವ ಯಾವುದೇ ಪ್ರವೃತ್ತಿ ಅಕ್ಷಮ್ಯ ಅಪರಾಧ ಎಂದರು.
ಬಾಲಕಾರ್ಮಿಕರು ಕಂಡರೆ ದೂರು ಕೊಡಿಶಾಲಾ ವಿದ್ಯಾರ್ಥಿಗಳು ತಮ್ಮ ಆಸುಪಾಸಿನಲ್ಲಿ ಯಾರಾದರೂ ಶಾಲೆ ಬಿಟ್ಟು ದುಡಿಮೆಗೆ ಸೇರಿರುವುದನ್ನು ಕಂಡರೆ ತಕ್ಷಣ ಶಿಕ್ಷಕರಿಗೆ, ಪೋಷಕರಿಗೆ ಅಥವಾ ಸಂಬಂಧಪಟ್ಟ ಇಲಾಖೆಗೆ ಮಾಹಿತಿ ನೀಡಬೇಕು. ವಿದ್ಯಾರ್ಥಿಗಳು ಸಮಾಜದ ಕಣ್ಣುಗಳಾಗಬೇಕು. ಬಾಲಕಾರ್ಮಿಕ ಪದ್ಧತಿ ತಡೆಯಲು ಪೊಲೀಸ್, ಕಾರ್ಮಿಕ, ಕಂದಾಯ ಇಲಾಖೆ ಹಾಗೂ ಪಂಚಾಯತ್ ರಾಜ್ ಸಂಸ್ಥೆಗಳು ಪರಸ್ಪರ ಸಹಕರಿಸಿ ಕೆಲಸ ಮಾಡಬೇಕೆಂದು ಕರೆ ನೀಡಿದರು.
ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹನುಮಂತಪ್ಪ ಮಾತನಾಡಿ, ಬಾಲ ಕಾರ್ಮಿಕ ಪದ್ಧತಿ ಸಮಾಜಕ್ಕೆ ಅಂಟಿರುವ ಶಾಪ. ಪ್ರತಿಯೊಂದು ಮಗುವೂ ಕಡ್ಡಾಯವಾಗಿ ಶಿಕ್ಷಣ ಪಡೆಯಬೇಕು ಎಂದು ತಿಳಿಸಿದರು.ಸಂವಿಧಾನದ ಆರ್ಟಿಕಲ್ 21ರ ಪ್ರಕಾರ 14 ವರ್ಷದೊಳಗಿನ ಎಲ್ಲಾ ಮಕ್ಕಳಿಗೂ ಕಡ್ಡಾಯ ಶಿಕ್ಷಣದ ಹಕ್ಕಿದೆ. ಮಕ್ಕಳು ಶಾಲೆಯಲ್ಲಿರಬೇಕು ಇಲ್ಲವೇ ಮನೆಯಲ್ಲಿರಬೇಕು. ಇದನ್ನು ಹೊರತುಪಡಿಸಿ ಕಾನೂನು ಬಾಹಿರ ಚಟುವಟಿಕೆಗಳಿಗೆ ಅಥವಾ ಕೆಲಸಗಳಿಗೆ ಮಕ್ಕಳನ್ನು ಬಳಸಿಕೊಳ್ಳುತ್ತಿದ್ದರೆ ಅಂತಹವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ವಿಶೇಷವಾಗಿ ಪೊಕ್ಸೋ ಕಾಯ್ದೆಯಡಿ ಇಂತಹ ಪ್ರಕರಣ ದಾಖಲಾಗುತ್ತಿದ್ದು, ಇದನ್ನು ತಡೆಯಲು ಪೊಲೀಸ್ ಇಲಾಖೆ ಹಾಗೂ ವಿವಿಧ ಇಲಾಖೆಗಳ ನೇತೃತ್ವದಲ್ಲಿ ''''''''ಸ್ಪೆಷಲ್ ಟಾಸ್ಕ್ ಫೊರ್ಸ್'''''''' ರಚಿಸಿ ನಿರಂತರ ನಿಗಾ ಇಡಲಾಗುತ್ತಿದೆ ಎಂದರು.ಜಿಲ್ಲಾ ಕಾರ್ಮಿಕ ಅಧಿಕಾರಿ ಬಿ.ಸಿ.ಸುರೇಶ್ ಮಾತನಾಡಿ, ಜಿಲ್ಲೆಯಲ್ಲಿ ಕಾರ್ಮಿಕ ಇಲಾಖೆ, ಜಿಲ್ಲಾ ಬಾಲ ಕಾರ್ಮಿಕ ಯೋಜನಾ ಸೊಸೈಟಿ ಮತ್ತು ಇತರ ಇಲಾಖೆಗಳ ಜಂಟಿ ಆಶ್ರಯದಲ್ಲಿ ಬಾಲ ಹಾಗೂ ಕಿಶೋರ ಕಾರ್ಮಿಕರ ನಿರ್ಮೂಲನೆಗೆ ಮಹತ್ವದ ಕ್ರಮ ಕೈಗೊಳ್ಳಲಾಗಿದೆ. ಕಳೆದ 3 ವರ್ಷಗಳ ಅವಧಿಯಲ್ಲಿ ಜಿಲ್ಲೆ ಯಾದ್ಯಂತ ಒಟ್ಟು 2,053 ಜಂಟಿ ತಪಾಸಣೆ ನಡೆಸಲಾಗಿದೆ. ಈ ವೇಳೆ ಒಟ್ಟು 24 ಪ್ರಕರಣ ದಾಖಲಾಗಿವೆ. ಈ ಕಾರ್ಯಾಚರಣೆಗಳ ಮೂಲಕ 29 ಬಾಲ ಮತ್ತು ಕಿಶೋರ ಕಾರ್ಮಿಕರನ್ನು ರಕ್ಷಿಸಲಾಗಿದೆ. ನಿಯಮ ಉಲ್ಲಂಘಿಸಿದ 11 ಪ್ರಕರಣಗಳಲ್ಲಿ ನ್ಯಾಯಾಲಯ ದಂಡ ವಿಧಿಸಿದ್ದು, ಒಟ್ಟು ₹1.01 ಲಕ್ಷ ದಂಡವನ್ನು ಜಿಲ್ಲೆಯಲ್ಲಿ ವಸೂಲಿ ಮಾಡಲಾಗಿದೆ.ಅಂಬೇಡ್ಕರ್ ಕಾರ್ಮಿಕರ ಸಹಾಯಹಸ್ತ ಯೋಜನೆಯಡಿ ನೊಂದಾಯಿತರಾದ ಪತ್ರಿಕಾ ವಿತರಣಾ ಹಾಗೂ ನ್ಯೂಸ್ ಪೇ ಪರ್ ಕಾರ್ಮಿಕರ ಸಂಖ್ಯೆ 140 ಇದ್ದು, ಪತ್ರಿಕಾ ವಿತರಣಾ ಕಾರ್ಮಿಕರು ಇ-ಶ್ರಮ್ ಪೋರ್ಟಲ್ ನಲ್ಲಿ ಪ್ರಥಮವಾಗಿ ಆನ್‌ಲೈನ್ ಮೂಲಕ ಸ್ವ ಇಚ್ಚೆಯಿಂದ ನೋಂದಣಿ ಮಾಡಿಕೊಳ್ಳಬೇಕು. ಈ ಯೋಜನೆ ಯಡಿ ಅವರಿಗೆ ಅಪಘಾತದಲ್ಲಿ ಮರಣ ಹೊಂದಿದ್ದಲ್ಲಿ ₹2ಲಕ್ಷ, ಅಪಘಾತ ಶಾಶ್ವತ ದುರ್ಬಲತೆ ಹೊಂದಿದ್ದಲ್ಲಿ ₹2 ಲಕ್ಷ ಪರಿಹಾರ, ಅಪಘಾತ ಹಾಗೂ ಮಾರಣಾಂತಿಕ ಕಾಯಿಲೆ, ಗಂಭೀರ ಅನಾ ರೋಗ್ಯಕ್ಕೆ ತುತ್ತಾದಲ್ಲಿ ಆಸ್ಪತ್ರೆ ಮರುಪಾವತಿ ವೆಚ್ಚ ₹1 ಲಕ್ಷ ವರೆಗೆ ನೋಂದಾಯಿತ ಫಲಾನುಭವಿಗಳು ವಯೋಸಹಜ ಕಾಯಿಲೆ, ಅರೆಕಾಲಿಕ ಇನ್ನಿತರೆ ಕಾರಣಗಳಿಂದ ಮರಣ ಹೊಂದಿದ್ದಲ್ಲಿ ಫಲಾನುಭವಿ ಕುಟುಂಬದವರಿಗೆ ಅಂತ್ಯಕ್ರಿಯೆ ₹10 ಸಾವಿರ ಧನಸಹಾಯ ನೀಡಲಾಗುತ್ತದೆ ಎಂದು ತಿಳಿಸಿದರು.ಬಾಲಕಾರ್ಮಿಕ ವಿರೋಧಿ ದಿನಾಚರಣೆ ಅಂಗವಾಗಿ ಏರ್ಪಡಿಸಿದ್ಧ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಸಹಾಯಕ ಕಾರ್ಮಿಕ ಆಯುಕ್ತ ಸುಭಾಶ್ ಎಂ. ಆಲದಕಟ್ಟಿ, ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಸಿ.ಟಿ.ಜಯಕುಮಾರ್, ವಕೀಲರ ಸಂಘದ ಅಧ್ಯಕ್ಷ ಡಿ.ಬಿ. ಸುಜೇಂದ್ರ, ಜಿ.ಪಂ. ಕಾರ್ಯದರ್ಶಿ ಎಚ್.ಎಲ್.ಸುಜಾತಾ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಬಿ.ಎಚ್. ಕೃಷ್ಣಪ್ಪ, ವಿಕಸನ ಸಂಸ್ಥೆ ಅಧ್ಯಕ್ಷ ಎ.ಎಂ.ವರ್ಗೀಸ್ ಕ್ಲೀಟಸ್, ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷೆ ಕೆ.ಆರ್.ಜಯಶೀಲ ಉಪಸ್ಥಿತರಿದ್ದರು.