ಸಮಾಜದಲ್ಲಿ ಮಾನವೀಯ ಮೌಲ್ಯ ಕುಸಿತ ಕಳವಳ: ನ್ಯಾ. ಸುಮಲಾತಾ

| Published : Apr 24 2024, 02:15 AM IST

ಸಾರಾಂಶ

ಭಾಲ್ಕಿ ಚನ್ನಬಸವಾಶ್ರಮದಲ್ಲಿ ನಡೆದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರನ್ನು ಕಲಬುರಗಿ ಹೈಕೋರ್ಟ್‌ ನ್ಯಾಯಮೂರ್ತಿ ಸುಮಲತಾ ಸನ್ಮಾನಿಸಿದರು.

ಕನ್ನಡಪ್ರಭ ವಾರ್ತೆ ಭಾಲ್ಕಿ

ಸಮಾಜದಲ್ಲಿ ಮಾನವೀಯ ಮೌಲ್ಯ ಬೆಳೆದಲ್ಲಿ ಅಪರಾಧದಂತಹ ಪ್ರಕರಣಗಳು ನಿಯಂತ್ರಣಕ್ಕೆ ಬರಲು ಸಾಧ್ಯವಾಗುತ್ತದೆ ಎಂದು ಕಲಬುರಗಿ ಹೈಕೋರ್ಟ್‌ ನ್ಯಾಯಮೂರ್ತಿ ಸುಮಲಾತಾ ಅಭಿಪ್ರಾಯಪಟ್ಟರು.

ಪಟ್ಟಣದ ಚನ್ನಬಸವಾಶ್ರಮ ಪರಿಸರದಲ್ಲಿ ಹಿರೇಮಠ ಸಂಸ್ಥಾನದಿಂದ ವಚನ ಜಾತ್ರೆ-2024, ಅಕ್ಕಮಹಾದೇವಿ ಜಯಂತಿ ಮತ್ತು ಡಾ.ಚನ್ನಬಸವ ಪಟ್ಟದ್ದೇವರ 25ನೇ ಸ್ಮರಣೋತ್ಸವ, ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಸಾಧಕರಿಗೆ ಪ್ರಶಸ್ತಿ ವಿತರಿಸಿ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಯುವ ಸಮುದಾಯದಲ್ಲಿ ಮಾನವೀಯ ಮೌಲ್ಯ ಕುಸಿಯುತ್ತಿರುವುದು ಆತಂಕ ತರಿಸಿದೆ. ಇದರಿಂದ ಸಮಾಜದಲ್ಲಿ ವಿವಿಧ ಕೃತ್ಯಗಳಿಗೆ ಕಾರಣವಾಗುತ್ತಿದೆ ಎಂದರು.

12ನೇ ಶತಮಾನದ ಶರಣರು ಸಮಾಜೋದ್ಧಾರ ಕಾರ್ಯಗಳ ಮೂಲಕ ಮಾನವೀಯ ಮೌಲ್ಯ ನೆಲೆಗೊಳಿಸಲು ಪರಿಶ್ರಮಿಸಿದರು. ಅದರಂತೆ ಡಾ.ಚನ್ನಬಸವ ಪಟ್ಟದ್ದೇವರು ಈ ಭಾಗದಲ್ಲಿ 109 ವರ್ಷಗಳ ಕಾಲ ಗಂಧದಂತೆ ಸಾರ್ಥಕ ಬದುಕು ಸವಿದು ಸಮಾಜಕ್ಕೆ ಅದ್ಭುತ ಕೊಡುಗೆ ನೀಡಿದ್ದಾರೆ.

ನಾಡೋಜ ಡಾ.ಬಸವಲಿಂಗ ಪಟ್ಟದ್ದೇವರು ಕೂಡ ಅನಾಥ ಮಕ್ಕಳ ಸೇವೆ, ಶಿಕ್ಷಣ ಸೇವೆ ಮೂಲಕ ಉತ್ತಮ ಕೊಡುಗೆ ನೀಡುತ್ತಿದ್ದಾರೆ. ಅವರ ಕಾರ್ಯಗಳೇ ಈ ನೆಲಕ್ಕೆ ನನ್ನನ್ನು ಕರೆತಂದಿದೆ. ಪೂಜ್ಯರ ಆಶೀರ್ವಾದ ಸಿಕ್ಕಿರುವುದು ನನ್ನ ಪುಣ್ಯವೆಂದು ಭಾವಿಸಿದ್ದೇನೆ ಎಂದು ತಿಳಿಸಿದರು.

ಉತ್ತಂಗಿ ಕೊಟ್ಟೂರು ಗುರುಬಸವೇಶ್ವರ ಸಂಸ್ಥಾನ ಮಠದ ಜಗದ್ಗುರು ಸೋಮಶಂಕರ ಸ್ವಾಮೀಜಿ, ಬೈಲೂರು ನಿಷ್ಕಲ ಮಂಟಪದ ನಿಜಗುಣಾನಂದ ಸ್ವಾಮೀಜಿ, ನಾಡೋಜ ಡಾ.ಬಸವಲಿಂಗ ಪಟ್ಟದ್ದೇವರು, ಪೀಠಾಧಿಪತಿ ಗುರುಬಸವ ಪಟ್ಟದ್ದೇವರು ಸಾನ್ನಿಧ್ಯ ವಹಿಸಿದರು. ಬೀದರ್ ಬಸವಸೇವಾ ಪ್ರತಿಷ್ಠಾನದ ಡಾ.ಅಕ್ಕ ಗಂಗಾಂಬಿಕಾ ತಾಯಿ ಅಧ್ಯಕ್ಷತೆ ವಹಿಸಿದರು. ಉದ್ಯಮಿ ಜೈರಾಜ ಖಂಡ್ರೆ ಬಸವ ಗುರುವಿನ ಪೂಜೆ ನೆರವೇರಿಸಿದರು.

ಈ ವೇಳೆ ಕಲಬುರಗಿ ವಿಜಯ ಕರ್ನಾಟಕ ಪತ್ರಿಕೆ ಸ್ಥಾನಿಕ ಸಂಪಾದಕ ದೇವಯ್ಯ ಗುತ್ತೇದಾರ, ಸರ್ಕಾರಿ ನೌಕರರ ಸಂಘದ ರಾಜ್ಯ ಉಪಾಧ್ಯಕ್ಷ ರಾಜೇಂದ್ರಕುಮಾರ ಗಂದಗೆ, ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಶಶಿಧರ ಕೋಸಂಬೆ, ಜಿಲ್ಲಾ ಕಸಾಪ ಅಧ್ಯಕ್ಷ ಸುರೇಶ ಚನಶೆಟ್ಟಿ, ಜಾಗತಿಕ ಲಿಂಗಾಯತ ಮಹಾಸಭಾದ ಜಿಲ್ಲಾಧ್ಯಕ್ಷ ಬಸವಾರಾಜ ಧನ್ನೂರು, ಉದ್ಯಮಿ ಚಂದ್ರಶೇಖರ ಹೆಬ್ಬಾಳೆ, ಕಮಲನಗರದ ಹಿರಿಯ ಮುಖಂಡ ಪ್ರಕಾಶ ಟೊಣ್ಣೆ, ಬಂಡೆಪ್ಪ ಕಂಟೆ ಸೇರಿ ಹಲವರಿದ್ದರು.

ಲೋಕನಾಥ ಚಾಂಗ್ಲೇರಾ, ಹಾವಗಿ ಶರಣರು ವಚನ ಸಂಗೀತ ನಡೆಸಿ ಕೊಟ್ಟರು. ದೀಪಕ ಠಮಕೆ ನಿರೂಪಿಸಿದರು.

ಸಾಧಕರಿಗೆ ಪ್ರಶಸ್ತಿ ಪ್ರದಾನ:

ಇದೇ ವೇಳೆ ಸಾಮಾಜಿಕ, ಸಾಹಿತ್ಯಿಕ, ಕಲಾ ಸೇರಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈಯುತ್ತಿರುವ ಸಾಧಕರನ್ನು ಹಿರೇಮಠ ಸಂಸ್ಥಾನದಿಂದ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಕಲಬುರಗಿ ಹೈಕೋರ್ಟ್‌ ಸುಮಲತಾ ಪ್ರಶಸ್ತಿ ಪ್ರದಾನ ಮಾಡಿದರು.

ಡಾ.ಸಿದ್ರಾಮಪ್ಪ ಪೊಲೀಸ್ ಪಾಟೀಲ್ ಕುಕನೂರು (ಸಿದ್ಧರಾಮ ಜಂಬಲದಿನ್ನಿ ವಚನ ಸಂಗೀತ ಪ್ರಶಸ್ತಿ), ಹಿರಿಯ ಸಾಹಿತಿ ರಘುಶಂಖ ಭಾತಂಬ್ರಾ (ಡಾ.ಚನ್ನಬಸವ ಪಟ್ಟದ್ದೇವರ ಸಾಹಿತ್ಯ ಪ್ರಶಸ್ತಿ), ಮಲ್ಲಿಕಾರ್ಜುನ ಬಾಗೋಡಿ ಕಲಬುರಗಿ (ನಾಡೋಜ ಡಾ.ಜೆ.ಎಸ್.ಖಂಡೇರಾವ ಚಿತ್ರಕಲಾ ಪ್ರಶಸ್ತಿ), ಗುಂಡಪ್ಪ ಬೆಲ್ಲೆ ಮದನೂರು (ಡಾ.ಚನ್ನಬಸವ ಪಟ್ಟದ್ದೇವರು ಯುವ ಪ್ರಶಸ್ತಿ), ಮಿಲೀಂದ ಗುರೂಜಿ ಉಮಾಪೂರ (ಡಾ.ಚನ್ನಬಸವ ಪಟ್ಟದ್ದೇವರು ಧಾರ್ಮಿಕ ಸೇವಾ ಪ್ರಶಸ್ತಿ) ಮತ್ತು ಮೀರಾಬಾಯಿ ದೇವೀಂದ್ರ ಸೊಂತ ಅವರಿಗೆ (ಡಾ.ಜಿ.ವಿಸಾಜಿ ಸಾಹಿತ್ಯ ಪ್ರಶಸ್ತಿ) ನೀಡಿ ಗೌರವಿಸಲಾಯಿತು.