ಸಾರಾಂಶ
ಆರ್.ನರಸಿಂಹಮೂರ್ತಿ
ಕನ್ನಡಪ್ರಭ ವಾರ್ತೆ ಅಮೀನಗಡನೂರಾರು ದೇವಾಲಯಗಳ ತಾಣ. ಶಿಲ್ಪಕಲೆಯ ತೊಟ್ಟಿಲು, ದೇಶದ ಪಾರ್ಲಿಮೆಂಟಿನ ಮೊದಲ ಕಲ್ಪನೆಯ ದುರ್ಗಾ ದೇವಸ್ಥಾನ ಮುಂತಾದವುಗಳಿಂದ ಖ್ಯಾತಿಯಾದ ಐತಿಹಾಸಿಕ ಐಹೊಳೆ ವೀಕ್ಷಿಸಲು ಬರುವ ಪ್ರವಾಸಿಗರಿಗೆ ಇಕ್ಕಾಟ್ಟಾದ ರಸ್ತೆಗಳು, ರಸ್ತೆಯ ಬದಿಯಲ್ಲಿನ ತಿಪ್ಪೆ ಗುಂಡಿಗಳು, ಮೂತ್ರ ವಿಸರ್ಜನೆಯ ಗಬ್ಬು ವಾಸನೆ ಪ್ರವಾಸಿಗರ ಉತ್ಸಾಹ ಕುಂದಿಸುತ್ತದೆ.ಪ್ರವಾಸಿಗರಿಗೆ ನಿರಾಸೆ: ಬೆಂಗಳೂರು, ಮೈಸೂರು ಮುಂತಾದ ನಗರ, ಪಟ್ಟಣಗಳಿಂದ ಖಾಸಗಿ ವಾಹನದಲ್ಲಿ ಬರುವ ಪ್ರವಾಸಿಗರಿಗೆ ವಾಹನ ನಿಲುಗಡೆಗೆ ಸೂಕ್ತ ಸ್ಥಳವೂ ಇಲ್ಲ. ಹಣ ವಸೂಲಿಗಾಗಿಯೇ ನಾಮಕಾವಸ್ಥೆಯಂತೆ ಪಾರ್ಕಿಂಗ್ ಇದ್ದರೆ, ಐಹೊಳೆಗೆ ಬಸ್ ತಂಗುದಾಣವೂ ಇಲ್ಲ. ಬಸ್ ನಿಲ್ದಾಣ ಇಲ್ಲ. ಐತಿಹಾಸಿಕ ತಾಣ ಕಣ್ತುಂಬಿಕೊಳ್ಳಲು ಬರುವ ಪ್ರವಾಸಿಗರು ಇಲ್ಲಿನ ಅವ್ಯವಸ್ಥೆ ಕಂಡು ಮತ್ತೊಮ್ಮೆ ಈ ಕಡೆ ತಲೆ ಹಾಕುವುದೇ ಬೇಡ ಎಂಬ ನಿರ್ಧಾರಕ್ಕೆ ಬರುವಂತಾಗಿದೆ.
ಇಕ್ಕಟ್ಟಾದ ರಸ್ತೆ: ಪಟ್ಟಣದಕಲ್ಲಿನಿಂದ ಐಹೊಳೆಗೆ ಬರುವ ವಾಹನಗಳಿಗೆ ವೀರಭಧ್ರೇಶ್ವರ ದೇವಸ್ಥಾನದಿಂದ ಊರು ಪ್ರವೇಶಿಸಿ ದುರ್ಗಾ ದೇವಸ್ಥಾನ ಬರುವವರೆಗೂ ಜನವಸತಿ ಸ್ಥಳಗಳ ಮಧ್ಯೆಯೇ ರಸ್ತೆ ಇರುವುದರಿಂದ ಅತ್ಯಂತ ಇಕ್ಕಟ್ಟಾದ ರಸ್ತೆಯಲ್ಲೇ ಬಹು ಪ್ರಯಾಸದಿಂದ ವಾಹನಗಳು ಬರುವ ಪರಿಸ್ಥಿತಿ ಇದೆ. ಇದರಿಂದ ಪ್ರವಾಸಿಗರಿಗೆ ಬಹಳಷ್ಟು ಕಿರಿಕಿರಿಯಾಗುತ್ತದೆ. ಇಲ್ಲಿ ರಸ್ತೆ ಅಗಲೀಕರಣ ಅವಶ್ಯಕತೆಯಿದೆ.ರಸ್ತೆ ಮಧ್ಯದಲ್ಲೇ ಚರಂಡಿ ನೀರು: ಈ ಇಕ್ಕಾಟ್ಟಾದ ರಸ್ತೆಯ ಮಧ್ಯದಲ್ಲೇ ಚರಂಡಿ ನೀರು ಹರಿದು ರಸ್ತೆಗಳು ಸಂಪೂರ್ಣ ಹದಗೆಟ್ಟಿವೆ. ಇನ್ನು ಐಹೊಳೆಯ ಪ್ರಮುಖ ಆಕರ್ಷಣೆಯಾದ ದುರ್ಗಾ ದೇವಸ್ಥಾನ ಮುಖ್ಯದ್ವಾರದಲ್ಲೇ ಚರಂಡಿ ಇದ್ದು, ಅದು ವಿಶೇಷ ದಿನಗಳಲ್ಲಿ ಮಾತ್ರ ಸ್ವಚ್ಛತೆಗೊಂಡು ಉಳಿದ ದಿನಗಳಲ್ಲಿ ಗಬ್ಬ ನಾರುತ್ತದೆ. ಪ್ರವಾಸಿಗರು ದೇವಾಲಯಗಳ ವೀಕ್ಷಿಸಲು ಟಿಕೇಟ್ ಪಡೆದು ಒಳಬಂದರೆ ಮಾತ್ರ ಶೌಚಾಲಯ ವ್ಯವಸ್ಥೆಯಿದೆ. ಪ್ರವಾಸಿಗರಿಗೆ ಹೊರಭಾಗದ ಶೌಚಾಲಯದ ವ್ಯವಸ್ಥೆಯಿಲ್ಲದ ಕಾರಣ ಬಂದವರು ಬಯಲಲ್ಲೇ ಮೂತ್ರ ವಿಸರ್ಜನೆ ಮಾಡುತ್ತಾರೆ. ಇದರಿಂದ ಬರುವ ಗಬ್ಬು ವಾಸನೆಯಿಂದ ಮೂಗುಮುಚ್ಚಿಕೊಂಡು ಬರುವ ಸ್ಥಿತಿ ಇದೆ.
ನೀರಿನಲ್ಲಿ ನಿಂತ ದೇಗುಲಗಳು: ಇತ್ತೀಚೆಗೆ ಸುರಿದ ನಿರಂತರ ಮಳೆಯಿಂದ ಐಹೊಳೆಯ ಗೌಡರಗುಡಿ, ಅಂಬಿಗರ ಗುಡಿ ನೀರಿನಲ್ಲಿ ನಿಂತಿದ್ದು, ಸೊಳ್ಳೆ, ಕ್ರಿಮಿಕೀಟಗಳ ಉತ್ಪತ್ತಿಯ ತಾಣಗಳಾಗಿ ರೋಗರುಜಿನಗಳಿಗೆ ಕಾರಣವಾಗುತ್ತಿವೆ. ಈ ಬಗ್ಗೆ ಪ್ರಾಚ್ಯವಸ್ತು ಇಲಾಖೆ ಯಾವುದೇ ಕ್ರಮ ಕೈಗೊಂಡಿಲ್ಲ. ಗ್ರಾಮ ಪಂಚಾಯತಿ ಇದ್ದೂ ಇಲ್ಲದಂತಿದೆ. ವರ್ಷದಲ್ಲೊಮ್ಮೆ ಜಿಲ್ಲಾ ಮಟ್ಟದಿಂದ ಅಧಿಕಾರಿಗಳೋ, ಸಂಘ-ಸಂಸ್ಥೆಗಳವರೋ ಆಗಮಿಸಿ ಸ್ವಚ್ಛತಾ ಅಭಿಯಾನ ನಡೆಸಿ ಹೋಗುತ್ತಾರೆ. ವಿಶೇಷ ದಿನಗಳಲ್ಲಿ ಮಾತ್ರ ಗ್ರಾಮ ಪಂಚಾಯತಿ ಸ್ವಚ್ಛತೆ ಮಾಡುತ್ತದೆ.ಐಹೊಳೆಗೆ ಬರುವ ಪ್ರವಾಸಿಗರಿಗೆ ಸರಿಯಾದ ಮೂಲ ಸೌಲಭ್ಯ, ಸಂಚಾರ ವ್ಯವಸ್ಥೆ, ಸ್ವಚ್ಛತೆ ಮಾಡುವ ಕಡೆಗೆ ಪ್ರಾಚ್ಯವಸ್ತು ಇಲಾಖೆಯಾಗಲೀ, ಪ್ರವಾಸೋದ್ಯಮ ಇಲಾಖೆಯಾಗಲೀ, ಸ್ಥಳೀಯ ಗ್ರಾಮ ಪಂಚಾಯತಿಯಾಗಲೀ ಲಕ್ಷ್ಯ ವಹಿಸದಿದ್ದ ಕಾರಣ ಪ್ರವಾಸಿಗರ ಸಂಖ್ಯೆ ಇಳಿಮುಖವಾಗಿದೆ. ವರ್ಷದಲ್ಲೊಮ್ಮೆ ಪ್ರಾಚ್ಯವಸ್ತು ಇಲಾಖೆ ಹಾಗೂ ಪ್ರವಾಸೋದ್ಯಮ ಇಲಾಖೆಗಳಿಂದ ದಿನಾಚರಣೆಗಳು ನಡೆಯುತ್ತದೆ, ಅಧಿಕಾರಿಗಳು ಬರುತ್ತಾರೆ ನಾಮಕಾವಸ್ತೆ ಪ್ರವಾಸೋದ್ಯಮ ದಿನಾಚರಣೆ ಆಚರಿಸಿ ತೆರಳುತ್ತಾರೆ. ಪ್ರವಾಸಿಗರ ಸಮಸ್ಯೆ ಆಲಿಸುವುದಿಲ್ಲ ಎಂಬ ದೂರು ಕೇಳಿಬರುತ್ತಿವೆ.
ಐಹೊಳೆಗೆ ಬರುವ ರಸ್ತೆಗಳು ಉತ್ತಮವಾಗಿದ್ದು, ಪಟ್ಟದಕಲ್ಲಿನಿಂದ ಐಹೊಳೆಗೆ ಪ್ರವೇಶಿಸುವ ರಸ್ತೆ ಇಕ್ಕಟ್ಟಾಗಿದ್ದು ಅದು ಅಗಲೀಕರಣಗೊಳ್ಳಬೇಕಿದೆ. ಗ್ರಾಮ ಪಂಚಾಯತಿಯಿಂದ ಪಾರ್ಕಿಂಗ್ ವ್ಯವಸ್ಥೆಯಿದ್ದರೂ ಅದು ಕಿರಿದಾಗಿದೆ. ರಾಜ್ಯ ಸರ್ಕಾರ ಪ್ರವಾಸಿ ತಾಣಗಳ ಮೂಲ ಸೌಲಭ್ಯಕ್ಕೆ ಒತ್ತು ನೀಡಿದ್ದರೂ ಇನ್ನೂ ಜಾರಿಯಾಗಿಲ್ಲ. ಗ್ರಾಮದ ರಸ್ತೆಯ ಎರಡೂ ಬದಿಗಳಲ್ಲಿ ಚರಂಡಿ ತುಂಬಿದಾಗ ಸ್ವಚ್ಛಗೊಳಿಸಲಾಗುತ್ತದೆ. ಆದರೂ ಪ್ರಾಚ್ಯವಸ್ತು ಇಲಾಖೆ ಹಾಗೂ ಪ್ರವಾಸೋದ್ಯಮ ಇಲಾಖೆ ಇತ್ತಕಡೆ ಹೆಚ್ಚ ಲಕ್ಷ್ಯ ವಹಿಸದರೆ ಪ್ರವಾಸಿಗರಿಗೆ ಅನುಕೂಲವಾಗುತ್ತದೆ.- ಶರಣಪ್ಪ ಮಾಲಗಿತ್ತಿ ಗ್ರಾಮ ಪಂಚಾಯತಿ ಸದಸ್ಯ ಐಹೊಳೆ