ಶೈಕ್ಷಣಿಕ ಸಮಸ್ಯೆಗಳ ನಿವಾರಣೆಗೆ ಸಂಘಟಿತ ಪ್ರಯತ್ನ: ಎಂಎಲ್‌ಸಿ ಪುಟ್ಟಣ್ಣ

| Published : Jan 15 2025, 12:49 AM IST

ಶೈಕ್ಷಣಿಕ ಸಮಸ್ಯೆಗಳ ನಿವಾರಣೆಗೆ ಸಂಘಟಿತ ಪ್ರಯತ್ನ: ಎಂಎಲ್‌ಸಿ ಪುಟ್ಟಣ್ಣ
Share this Article
  • FB
  • TW
  • Linkdin
  • Email

ಸಾರಾಂಶ

ಶಿಕ್ಷಣ ಕ್ಷೇತ್ರ ಸಮಾಜದ ಪ್ರಮುಖ ಅಂಗವಾಗಿದ್ದು, ಉತ್ತಮ ನಾಗರಿಕರನ್ನು ರೂಪಿಸುವಲ್ಲಿ ಇವರ ಪಾತ್ರ ಪ್ರಮುಖವಾಗಿದೆ.

ಕನ್ನಡಪ್ರಭ ವಾರ್ತೆ ದೊಡ್ಡಬಳ್ಳಾಪುರ

ಕರ್ನಾಟಕ ರಾಜ್ಯದ ಶಿಕ್ಷಕರ ಮತ್ತು ಉಪನ್ಯಾಸಕರ ಸಮಸ್ಯೆಗಳನ್ನು ಬಗಹರಿಸಲು ಸಂಘಟಿತ ಹೋರಾಟ ನಡೆಸಲು ತಾವು ಸದಾ ಪೂರಕ ಆಲೋಚನೆ ಹೊಂದಿರುವುದಾಗಿ ವಿಧಾನಪರಿಷತ್‌ ಸದಸ್ಯ ಪುಟ್ಟಣ್ಣ ತಿಳಿಸಿದರು.ನಗರದ ಶ್ರೀವಾಣಿ ಪದವಿಪೂರ್ವ ಕಾಲೇಜಿನಲ್ಲಿ ಕರ್ನಾಟಕ ರಾಜ್ಯ ಪ್ರೌಢಶಾಲಾ ಸಹಶಿಕ್ಷಕರ ಸಂಘದ ವತಿಯಿಂದ ನೂತನ ವರ್ಷದ ಕ್ಯಾಲೆಂಡರ್ ಬಿಡುಗಡೆ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.ಶಿಕ್ಷಣ ಕ್ಷೇತ್ರ ಸಮಾಜದ ಪ್ರಮುಖ ಅಂಗವಾಗಿದ್ದು, ಉತ್ತಮ ನಾಗರಿಕರನ್ನು ರೂಪಿಸುವಲ್ಲಿ ಇವರ ಪಾತ್ರ ಪ್ರಮುಖವಾಗಿದೆ. ಅವರ ಬೇಡಿಕೆಗಳಿಗೆ ಸ್ಪಂದನೆ ಮಾಡಬೇಕಾಗಿರುವುದು ನಮ್ಮ ಕರ್ತವ್ಯ. ಶಿಕ್ಷಕ ಕ್ಷೇತ್ರದ ಪ್ರತಿನಿಧಿಯಾದ ನಾನು ಸದಾ ನಿಮ್ಮ ಜತೆಯಲ್ಲಿ ಇರುತ್ತೇನೆ. ಜನರು ದೇವಾಲಯಗಳನ್ನು ಕಟ್ಟುವ ಉತ್ಸಾಹವನ್ನು ಶಾಲಾ ಕಾಲೇಜುಗಳನ್ನು ಕಟ್ಟುವ ಕಡೆಗೆ ನೀಡಬೇಕಾಗಿದೆ ಎಂದರು.ತೂಬಗೆರೆ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕಿ ಸಿ.ಕೆ.ಸರಸ್ವತಿ ಮಾತನಾಡಿ, ತಾಲೂಕಿನ ಸರ್ಕಾರಿ ಪದವಿ ಪೂರ್ವ ಕಾಲೇಜುಗಳಲ್ಲಿ ಸಿಇಟಿ ಪರೀಕ್ಷೆಗೆ ವಿದ್ಯಾರ್ಥಿಗಳನ್ನು ಸಿದ್ದಗೊಳಿಸಲು ಸ್ಮಾರ್ಟ್ ಕ್ಲಾಸ್ ತರಗತಿಗಳ ಅಗತ್ಯವಿದೆ. ಆದ್ದರಿಂದ ವಿಧಾನ ಪರಿಷತ್ತು ಸದಸ್ಯರಾದ ಪುಟ್ಟಣ್ಣ ಅವರು ತಮ್ಮ ಶಾಸಕರ ಅನುದಾನದಲ್ಲಿ ಸ್ಮಾರ್ಟ್ ಕ್ಲಾಸ್ ತರಗತಿಗಳನ್ನು ನಿರ್ಮಿಸಿ ಮಾಡಿಕೊಡಬೇಕು ಎಂದು ಬೇಡಿಕೆ ಇಟ್ಟರು.ಕೊಂಗಾಡಿಯಪ್ಪ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ಎಸ್.ಬೋರಪ್ಪ ಮಾತನಾಡಿ, ಖಾಸಗಿ ಅನುದಾನಿತ ಪದವಿ ಪೂರ್ವ ಕಾಲೇಜುಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಬಿ.ಇಡಿ ರಹಿತ ಉಪನ್ಯಾಸಕರಿಗೆ ವೇತನ ಸಹಿತವಾಗಿ ಬಿ.ಇಡಿ ವ್ಯಾಸಂಗ ಮಾಡಲು ಸರ್ಕಾರ ಅನುಮತಿ ನೀಡಬೇಕಾಗಿದೆ. ನೂರಾರು ಮಂದಿ ಬಿ.ಇಡಿ ರಹಿತ ಉಪನ್ಯಾಸಕರು ಪ್ರಸ್ತುತ ಆತಂಕದ ಸ್ಥಿತಿಯಲ್ಲಿದ್ದಾರೆ. ವಿಧಾನ ಪರಿಷತ್ತು ಸದಸ್ಯರು ಬಿ.ಇಡಿ ರಹಿತರ ಸಮಸ್ಯೆಯನ್ನು ಬಗೆಹರಿಸಲು ಸಹಕಾರ ನೀಡಬೇಕು ಎಂದು ಕೋರಿದರು.ಕಾರ್ಯಕ್ರಮದಲ್ಲಿ ಶ್ರೀ ವಾಣಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಬಿ.ಆರ್.ವೇಣುಗೋಪಾಲ್, ದೊಡ್ಡಬಳ್ಳಾಪುರ ತಾಲೂಕು ಖಾಸಗಿ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಎ.ಸುಬ್ರಹ್ಮಣ್ಯ, ಕಾರ್ಯದರ್ಶಿ ರಮೇಶ್, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಎಂ.ಎಸ್.ರಾಜಶೇಖರ್, ಕಾರ್ಯದರ್ಶಿ ಧನಂಜಯ, ರಾಷ್ಟ್ರಪ್ರಶಸ್ತಿ ಪುರಸ್ಕೃತ ಮುಖ್ಯ ಶಿಕ್ಷಕ ಆರ್.ನಾರಾಯಣಸ್ವಾಮಿ, ತಾ.ಕಸಾಪ ಅಧ್ಯಕ್ಷ ಪಿ.ಗೋವಿಂದರಾಜು, ಪ್ರಾಥಮಿಕ, ಪ್ರೌಢಶಾಲಾ, ಪದವಿ ಪೂರ್ವ ಮತ್ತು ಪದವಿ ಕಾಲೇಜುಗಳ ಶಿಕ್ಷಕ‌ ಮತ್ತು‌ ಉಪನ್ಯಾಸಕರ ಸಂಘಟನೆಗಳ ಪದಾಧಿಕಾರಿಗಳು ಭಾಗವಹಿಸಿದ್ದರು.ಫೋಟೋ-

14ಕೆಡಿಬಿಪಿ1- ದೊಡ್ಡಬಳ್ಳಾಪುರದಲ್ಲಿ ಕರ್ನಾಟಕ ರಾಜ್ಯ ಪ್ರೌಢಶಾಲಾ ಸಹಶಿಕ್ಷಕರ ಸಂಘದ ವತಿಯಿಂದ ನೂತನ ವರ್ಷದ ಕ್ಯಾಲೆಂಡರ್ ಬಿಡುಗಡೆ ಸಮಾರಂಭ ನಡೆಯಿತು.