ಜಿಲ್ಲಾಡಳಿತದ ವತಿಯಿಂದ ಸರ್ವರ ಸಹಕಾರ, ಬೆಂಬಲದೊಂದಿಗೆ ನ.1ರಂದು ನಗರದಲ್ಲಿ ಕನ್ನಡ ರಾಜ್ಯೋತ್ಸವವನ್ನು ಅದ್ದೂರಿ ಹಾಗೂ ಅರ್ಥಪೂರ್ಣವಾಗಿ ಆಚರಿಸಲು ನಿರ್ಧಾರ ತೆಗೆದುಕೊಳ್ಳಲಾಯಿತು.

ಕನ್ನಡಪ್ರಭ ವಾರ್ತೆ ಚಾಮರಾಜನಗರ

ಜಿಲ್ಲಾಡಳಿತದ ವತಿಯಿಂದ ಸರ್ವರ ಸಹಕಾರ, ಬೆಂಬಲದೊಂದಿಗೆ ನ.1ರಂದು ನಗರದಲ್ಲಿ ಕನ್ನಡ ರಾಜ್ಯೋತ್ಸವವನ್ನು ಅದ್ದೂರಿ ಹಾಗೂ ಅರ್ಥಪೂರ್ಣವಾಗಿ ಆಚರಿಸಲು ನಿರ್ಧಾರ ತೆಗೆದುಕೊಳ್ಳಲಾಯಿತು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲಾಧಿಕಾರಿ ಶ್ರೀರೂಪ ಅಧ್ಯಕ್ಷತೆಯಲ್ಲಿ ನಡೆದ ವಿವಿಧ ಕನ್ನಡಪರ ಸಂಘ-ಸಂಸ್ಥೆಗಳು, ಕಲಾವಿದರು, ಅಧಿಕಾರಿಗಳು, ಇತರ ಸಂಘಟನೆಗಳ ಪ್ರತಿನಿಧಿಗಳು ಭಾಗವಹಿಸಿದ್ದ ಸಭೆಯಲ್ಲಿ ಕನ್ನಡ ರಾಜ್ಯೋತ್ಸವವನ್ನು ಅದ್ದೂರಿಯಾಗಿ ಆಚರಣೆ ಮಾಡಲು ತೀರ್ಮಾನ ಕೈಗೊಳ್ಳಲಾಯಿತು.

ಸಭೆಯಲ್ಲಿ ಭಾಗವಹಿಸಿದ್ದ ಮುಖಂಡರು ಮಾತನಾಡಿ, ಕನ್ನಡ ನಾಡು, ನುಡಿ ಕುರಿತು ವಿಶೇಷ ಕಾರ್ಯಕ್ರಮಗಳ ಮೂಲಕ ಕನ್ನಡ ರಾಜ್ಯೋತ್ಸವವನ್ನು ವಿಜೃಂಭಣೆಯಿಂದ ಆಚರಿಸಬೇಕು. ಈ ನಿಟ್ಟಿನಲ್ಲಿ ನಮ್ಮೆಲ್ಲರ ಸಂಪೂರ್ಣ ಸಹಕಾರ ಜಿಲ್ಲಾಡಳಿತಕ್ಕೆ ಇದೆ. ಗಡಿ ಭಾಗದಲ್ಲೂ ಒಂದು ದಿನ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ಆಯೋಜನೆ ಮಾಡಬೇಕು. ಜಿಲ್ಲೆಯ ಎಲ್ಲಾ ಗ್ರಾಮ ಪಂಚಾಯಿತಿಗಳು, ಬ್ಯಾಂಕುಗಳು, ಕೇಂದ್ರ ಕಚೇರಿಗಳಲ್ಲಿ ರಾಜ್ಯೋತ್ಸವ ಆಚರಣೆಯಾಗಬೇಕು ಎಂದರು.

ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಗಣ್ಯರನ್ನು ಸನ್ಮಾನಿಸಿ ಗೌರವಿಸಬೇಕು. ಕನ್ನಡಕ್ಕಾಗಿ ಹೋರಾಟ ಮಾಡಿದ ಜಿಲ್ಲೆಯ ಹೋರಾಟಗಾರರು, ಚಳವಳಿಗಾರರನ್ನು ಗುರುತಿಸಿ ಸನ್ಮಾನಿಸಬೇಕು. ಎಸ್.ಎಸ್.ಎಲ್.ಸಿ, ಪಿಯುಸಿ ಯಲ್ಲಿ ಕನ್ನಡ ಭಾಷೆಯಲ್ಲಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳನ್ನು ಆಹ್ವಾನಿಸಿ ಗೌರವಿಸಬೇಕು. ಸಂಜೆಯ ವೇಳೆ ಕನ್ನಡ ನಾಡು ನುಡಿ ಕುರಿತ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಏರ್ಪಡಿಸಬೇಕು ಎಂದು ತಿಳಿಸಿದರು.

ಬ್ಯಾಂಕುಗಳಲ್ಲಿ, ಹೆದ್ದಾರಿ ಟೋಲ್‌ಗಳಲ್ಲಿ ಪ್ರಧಾನವಾಗಿ ಕನ್ನಡ ಭಾಷೆಯಲ್ಲಿ ನಾಮಫಲಕಗಳು ಇರಬೇಕು. ಜಿಲ್ಲೆಯಲ್ಲಿ ಆಂಗ್ಲಭಾಷೆಯಲ್ಲಿ ಪ್ರಧಾನವಾಗಿ ಬರೆಸಲಾಗಿರುವ ಫಲಕಗಳನ್ನು ಪರಿಶೀಲಿಸಿ ಕನ್ನಡ ಭಾಷೆಯಲ್ಲಿ ಎದ್ದು ಕಾಣುವಂತೆ ಬರೆಸಲು ಅಂಗಡಿ ಮಾಲೀಕರಿಗೆ ಸೂಚಿಸಬೇಕು ಎಂದು ಸಲಹೆ ನೀಡಿದರು.

ಜಿಲ್ಲಾಧಿಕಾರಿ ಶ್ರೀರೂಪ ಮಾತನಾಡಿ ಎಲ್ಲ ಕಾರ್ಯಕ್ರಮಗಳಿಗು ಸಂಘ ಸಂಸ್ಥೆಗಳ ಮುಖಂಡರು, ಸಮುದಾಯದ ದುರೀಣರು ಜಿಲ್ಲಾಡಳಿತಕ್ಕೆ ಸಹಕರಿಸುತ್ತಿದ್ದಾರೆ. ಈ ಬಾರಿಯೂ ಜಿಲ್ಲಾಡಳಿತದಿಂದ ಕನ್ನಡ ರಾಜ್ಯೋತ್ಸವವನ್ನು ಅದ್ದೂರಿಯಾಗಿ ಆಚರಿಸಲು ಎಲ್ಲ ಕ್ರಮ ತೆಗೆದುಕೊಳ್ಳಲಿದ್ದೇವೆ ಎಂದರು.

ಲೀಡ್ ಬ್ಯಾಂಕ್ ವ್ಯವಸ್ಥಾಪಕರು ಕೂಡಲೇ ಜಿಲ್ಲೆಯ ಬ್ಯಾಂಕ್ ಅಧಿಕಾರಿಗಳ ಸಭೆ ಕರೆದು ಕನ್ನಡ ಅನುಷ್ಠಾನಕ್ಕೆ ತುರ್ತಾಗಿ ನಿರ್ದೇಶನ ನೀಡಬೇಕು. ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿ ಅಧಿಕಾರಿಗಳು ಕನ್ನಡದಲ್ಲಿ ಪ್ರಧಾನವಾಗಿ ನಾಮಫಲಕ ಇರುವ ಬಗ್ಗೆ ಪರಿಶೀಲಿಸಬೇಕು ಎಂದು ನಿರ್ದೇಶನ ನೀಡಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ಮುತ್ತುರಾಜು, ಹೆಚ್ಚುವರಿ ಜಿಲ್ಲಾಧಿಕಾರಿ ವಿ.ಪ್ರಿಯದರ್ಶಿನಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಪ್ರಭಾರ ಸಹಾಯಕ ನಿರ್ದೇಶಕರಾದ ಡಾ. ಮಂಜುನಾಥ್, ಜಿಲ್ಲಾ ಪಂಚಾಯತ್ ಸಹಾಯಕ ಕಾರ್ಯದರ್ಶಿ ಶ್ರೀಕಂಠರಾಜೇಅರಸ್, ಡಿವೈಎಸ್‌ಪಿ ಸ್ನೇಹರಾಜ್, ವಿವಿಧ ಇಲಾಖೆಗಳ ಅಧಿಕಾರಿಗಳು, ಮುಖಂಡರಾದ ಚಾ.ರಂ. ಶ್ರೀನಿವಾಸಗೌಡ, ಚಾ.ಗು. ನಾಗರಾಜು, ಸುರೇಶ್ ವಾಜಪೇಯಿ, ಜಿ. ಬಂಗಾರು, ನಮ್ಮನೆ ಪ್ರಶಾಂತ್, ರವಿಚಂದ್ರ ಪ್ರಸಾದ್, ಹೊಸೂರು ಶಿವಣ್ಣ, ನವೀನ್, ಶಿವಣ್ಣ, ಜ. ಸುರೇಶ್ ನಾಗ್, ನಿಜಧ್ವನಿ ಗೋವಿಂದರಾಜು, ಮುಖಂಡರು, ಅಧಿಕಾರಿಗಳು ಇದ್ದರು.