ಸಾರಾಂಶ
ಕನ್ನಡಪ್ರಭ ವಾರ್ತೆ ಹುಣಸೂರು ಹೆಣ್ಣು ಮಕ್ಕಳಿಗೆ ಶಿಕ್ಷಣ ಎನ್ನುವುದು ಆತ್ಮವಿಶ್ವಾಸದ ಸಂಕೇತ. ಆರ್ಥಿಕ ಸದೃಢತೆಗೆ ನಾಂದಿ. ಸ್ವಾವಲಂಬಿ ಮತ್ತು ಸ್ವತಂತ್ರ ಬದುಕು ಕಟ್ಟಿಕೊಳ್ಳುವ ಉತ್ತಮ ವೇದಿಕೆ ಎಂದು ಮೈಸೂರು ಜಿಲ್ಲಾ ಅಬಕಾರಿ ಇಲಾಖೆ ಉಪ ಆಯುಕ್ತೆ ಡಾ. ಮಹಾದೇವಿ ಬಾಯಿ ಅಭಿಪ್ರಾಯಪಟ್ಟರು.ಪಟ್ಟಣದ ಬಾಲಕಿಯರ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಬುಧವಾರ ಆಯೋಜಿಸಿದ್ದ 2024-25ನೇ ಸಾಲಿನ ದ್ವಿತೀಯ ಪಿಯು ವಿದ್ಯಾರ್ಥಿನಿಯರಿಗೆ ಬೀಳ್ಕೊಡುಗೆ ಮತ್ತು ಸಾಂಸ್ಕೃತಿಕ, ಕ್ರೀಡಾ ಮತ್ತು ಎನ್ಎಸ್ಎಸ್ ಚಟುವಟಿಕೆಗಳ ಸಮಾರೋಪ ಸಮಾರಂಭದಲ್ಲಿ ಮುಖ್ಯಅತಿಥಿಗಳಾಗಿ ಭಾಗವಹಿಸಿ ಅವರು ಮಾತನಾಡಿದರು.ಹೆಣ್ಣು ಮಕ್ಕಳು ಶಿಕ್ಷಿತರಾದಲ್ಲಿ ಮಾತ್ರ ಸ್ವಾವಲಂಬಿ ಮತ್ತು ಆತ್ಮವಿಶ್ವಾಸದ ಬದುಕು ನಡೆಸಲು ಸಾಧ್ಯವೆಂದು 19ನೇ ಶತಮಾನದಲ್ಲಿ ಸಾವಿತ್ರಿ ಬಾಯಿ ಫುಲೆ ಹೆಣ್ಣುಮಕ್ಕಳಿಗೆ ಶಾಲೆ ತೆರೆಯುವ ಮೂಲಕ ಹೆಣ್ಣು ಮಕ್ಕಳ ಶಿಕ್ಷಣಕ್ಕೆ ನಾಂದಿ ಹಾಡಿದರು. ಇಂದು ಆಧುನಿಕತೆ ನಮ್ಮನ್ನು ಆವರಿಸಿದೆ. ಹೆಣ್ಣುಮಕ್ಕಳು ಶಿಕ್ಷಣ ಪಡೆಯಲು ತಾವಾಗಿಯೇ ಮುಂದೆ ಬರುತ್ತಿದ್ದಾರೆ. ಪಾಲಕರೂ ಕೂಡ ಬೆಂಬಲಿಸುತ್ತಿದ್ದಾರೆ. ಶಿಕ್ಷಣವೆಂದರೆ ಕೇವಲ ಅಕ್ಷರ ಜ್ಞಾನ ಮಾತ್ರವಲ್ಲ. ಅದರಲ್ಲೂ ಕುಟುಂಬ ಪ್ರವೇಶಿಸಿದ ಸುಶಿಕ್ಷಿತ ಹೆಣ್ಣು ಕುಟುಂಬವನ್ನು ಸರಿದೂಗಿಸಿಕೊಂಡು ಹೋಗುವ ಛಾತಿ ಹೊಂದುತ್ತಾಳೆ ಎಂದರು.ಚಿತ್ರನಟಿ ಅಮೃತಾ ಅಯ್ಯಂಗಾರ್ ಮಾತನಾಡಿ, ಹೆಣ್ಣು ಮಕ್ಕಳು ಅಕ್ಷರಸ್ಥರಾದರೆ ಕುಟುಂಬ ಮತ್ತು ಸಮುದಾಯ ಅಭಿವೃದ್ಧಿಪಥದತ್ತ ಸಾಗುತ್ತದೆ. ಹುಣಸೂರು ಕಲೆ, ಸಾಹಿತ್ಯ ಮತ್ತು ಪರಂಪರೆಗಳ ಸಂಗಮ ಕ್ಷೇತ್ರವಾಗಿದೆ. ಚಲನಚಿತ್ರ ಕ್ಷೇತ್ರದ ಮೂಲ ಉದ್ದೇಶ ಸಮಾಜಕ್ಕೆ ಉತ್ತಮ ಸಂದೇಶಗಳನ್ನು ನೀಡುವ, ಅರಿವು ಮೂಡಿಸುವುದಾಗಿದೆ. ನಾನು ನಟಿಸಿದ ಚಿತ್ರಗಳು ಈ ಸಾಲಿಗೆ ಸೇರುತ್ತಿದೆ ಎನ್ನುವುದೇ ನನ್ನ ಹೆಮ್ಮೆ ಎಂದು ತಮ್ಮ ವೃತ್ತಿಯ ಕುರಿತು ವಿವರಿಸಿದರು.ಅಧ್ಯಕ್ಷತೆಯನ್ನು ಪ್ರಾಂಶುಪಾಲ ಎ. ರಾಮೇಗೌಡ ವಹಿಸಿದ್ದರು. ಕಾಲೇಜು ಅಭಿವೃದ್ಧಿ ಸಮಿತಿ ಅಧ್ಯಕ್ಷ ತಟ್ಟೆಕೆರೆ ಶ್ರೀನಿವಾಸ್ ವಿದ್ಯಾರ್ಥಿನಿಯರಿಗೆ ಶುಭ ಹಾರೈಸಿರು. ರಾಷ್ಟ್ರಪ್ರಶಸ್ತಿ ಪುರಸ್ಕೃತ ಅಧ್ಯಾಪಕ ಎಚ್.ಎನ್. ಗಿರೀಶ್ ಕಳೆದ ಸಾಲಿನ ಕಾರ್ಯಕ್ರಮಗಳ ಕುರಿತು ವರದಿ ನೀಡಿದರು. ಸಿಡಿಸಿ ಸಮಿತಿ ಸದಸ್ಯರಾದ ಕೆ. ಕೃಷ್ಣ, ಶಿವಕುಮಾರ್, ಮಮತಾ ಗಜೇಂದ್ರ, ಕೆ.ಎಚ್. ವೀರಭದ್ರಪ್ಪ, ಅಶೋಕ್, ಪ್ರಾಧ್ಯಾಪಕರಾದ ಡಾ.ಪಿ.ಜೆ. ಕೃಷ್ಣ, ಡಿ.ಎಸ್. ಸ್ವಾಮಿ, ಎನ್.ಆರ್. ರಾಜೇಶ್, ವಿದ್ಯಾರ್ಥಿನಿಯರು ಇದ್ದರು. ವಿದ್ಯಾರ್ಥಿನಿಯರು ಆಕರ್ಷಕ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಸಂಭ್ರಮಿಸಿದರು.