ಕನ್ನಡಪ್ರಭ ವಾರ್ತೆ ಬೆಳಗಾವಿ ರಾಷ್ಟ್ರೀಯ ಸ್ವಯಂ ಸೇವಕ ಸಂಘ(ಆರ್‌ಎಸ್‌ಎಸ್)ದ ವಾರ್ಷಿಕ ಅಖಿಲ ಭಾರತೀಯ ಪ್ರಾಂತ ಪ್ರಚಾರಕರ ಮೂರು ದಿನಗಳ ಬೈಠಕ್ ಭಾನುವಾರ ಬೆಳಗಾವಿಯಲ್ಲಿ ಸಮಾರೋಪಗೊಂಡಿತು. ಸಂಘದ ಶತಮಾನೋತ್ಸವ ವರ್ಷದ ಹಿನ್ನೆಲೆಯಲ್ಲಿ ನಡೆದ ಈ ಮಹತ್ವದ ಸಭೆಯಲ್ಲಿ ಸಂಘದ ಮುಂದಿನ ಕಾರ್ಯತಂತ್ರ, ಸಂಘಟನೆ ವಿಸ್ತರಣೆ, ಸಾಮಾಜಿಕ ಸವಾಲುಗಳು ಹಾಗೂ ವಿವಿಧ ರಾಷ್ಟ್ರೀಯ ವಿಷಯಗಳ ಕುರಿತು ಸುದೀರ್ಘ ಚರ್ಚೆ ನಡೆಯಿತು.
ಕನ್ನಡಪ್ರಭ ವಾರ್ತೆ ಬೆಳಗಾವಿ
ರಾಷ್ಟ್ರೀಯ ಸ್ವಯಂ ಸೇವಕ ಸಂಘ(ಆರ್‌ಎಸ್‌ಎಸ್)ದ ವಾರ್ಷಿಕ ಅಖಿಲ ಭಾರತೀಯ ಪ್ರಾಂತ ಪ್ರಚಾರಕರ ಮೂರು ದಿನಗಳ ಬೈಠಕ್ ಭಾನುವಾರ ಬೆಳಗಾವಿಯಲ್ಲಿ ಸಮಾರೋಪಗೊಂಡಿತು. ಸಂಘದ ಶತಮಾನೋತ್ಸವ ವರ್ಷದ ಹಿನ್ನೆಲೆಯಲ್ಲಿ ನಡೆದ ಈ ಮಹತ್ವದ ಸಭೆಯಲ್ಲಿ ಸಂಘದ ಮುಂದಿನ ಕಾರ್ಯತಂತ್ರ, ಸಂಘಟನೆ ವಿಸ್ತರಣೆ, ಸಾಮಾಜಿಕ ಸವಾಲುಗಳು ಹಾಗೂ ವಿವಿಧ ರಾಷ್ಟ್ರೀಯ ವಿಷಯಗಳ ಕುರಿತು ಸುದೀರ್ಘ ಚರ್ಚೆ ನಡೆಯಿತು.ಸರಸಂಘಚಾಲಕ ಡಾ.ಮೋಹನ್ ಭಾಗವತ್, ಸರಕಾರ್ಯವಾಹ ದತ್ತಾತ್ರೇಯ ಹೊಸಬಾಳೆ, ಸಹ ಸರಕಾರ್ಯವಾಹರು, ಅಖಿಲ ಭಾರತೀಯ ಪದಾಧಿಕಾರಿಗಳು ಸೇರಿದಂತೆ ದೇಶದ ವಿವಿಧ ಪ್ರಾಂತಗಳಿಂದ ಆಗಮಿಸಿದ್ದ 226 ಪ್ರಚಾರಕರು ಬೈಠಕ್‌ನಲ್ಲಿ ಭಾಗವಹಿಸಿದ್ದರು.ಸಭೆಯಲ್ಲಿ ಮಾರ್ಚ್ ನಂತರ ದೇಶದಾದ್ಯಂತ ನಡೆದ 83 ಸಂಘ ಶಿಕ್ಷಾ ವರ್ಗಗಳು ಹಾಗೂ 12 ಕಾರ್ಯಕರ್ತ ವಿಕಾಸ ವರ್ಗಗಳ ಪರಿಶೀಲನೆ ನಡೆಸಲಾಯಿತು. ಈ ತರಬೇತಿ ಶಿಬಿರಗಳ ಮೂಲಕ ಒಟ್ಟು 18,842 ಸ್ವಯಂ ಸೇವಕರು ತರಬೇತಿ ಪಡೆದಿರುವ ಮಾಹಿತಿ ಸಭೆಯಲ್ಲಿ ಮಂಡಿಸಲಾಯಿತು. ತರಬೇತಿ ಪಡೆದ ಕಾರ್ಯಕರ್ತರನ್ನು ಗ್ರಾಮ, ನಗರ ಹಾಗೂ ವಿವಿಧ ಸಾಮಾಜಿಕ ಕ್ಷೇತ್ರಗಳಲ್ಲಿ ಪರಿಣಾಮಕಾರಿಯಾಗಿ ತೊಡಗಿಸಿಕೊಳ್ಳುವ ಕುರಿತು ಚರ್ಚಿಸಲಾಯಿತು.
ಶಾಖೆಗಳ ವಿಸ್ತರಣೆ, ಹೊಸ ಪ್ರದೇಶಗಳಲ್ಲಿ ಸಂಘದ ಕಾರ್ಯಚಟುವಟಿಕೆಗಳನ್ನು ವಿಸ್ತರಿಸುವುದು, ಯುವಜನತೆ, ವಿದ್ಯಾರ್ಥಿಗಳು, ಮಹಿಳೆಯರು ಹಾಗೂ ವಿವಿಧ ವೃತ್ತಿ ಕ್ಷೇತ್ರಗಳ ಜನರೊಂದಿಗೆ ಸಂಪರ್ಕ ಬಲಪಡಿಸುವುದು, ಸೇವಾ ಚಟುವಟಿಕೆಗಳನ್ನು ಇನ್ನಷ್ಟು ಪರಿಣಾಮಕಾರಿಯಾಗಿ ರೂಪಿಸುವುದು ಸೇರಿದಂತೆ ಸಂಘದ ಕಾರ್ಯವಿಧಾನದ ವಿವಿಧ ಆಯಾಮಗಳ ಕುರಿತು ಸಮಗ್ರ ಅವಲೋಕನ ನಡೆಸಲಾಯಿತು.ಗ್ರಾಮ ವಿಕಾಸ, ಕುಟುಂಬ ಪ್ರಬೋಧನೆ, ಪರಿಸರ ಸಂರಕ್ಷಣೆ, ವಿಪತ್ತು ನಿರ್ವಹಣೆ, ಸಾಮಾಜಿಕ ಸಮರಸತೆ ಹಾಗೂ ಸೇವಾ ಯೋಜನೆಗಳಿಗೆ ಮುಂದಿನ ದಿನಗಳಲ್ಲಿ ಹೆಚ್ಚಿನ ಆದ್ಯತೆ ನೀಡುವ ಬಗ್ಗೆ ಸಭೆಯಲ್ಲಿ ಒಮ್ಮತ ವ್ಯಕ್ತವಾಯಿತು. ದೇಶದ ಪ್ರಸ್ತುತ ಸಾಮಾಜಿಕ, ಸಾಂಸ್ಕೃತಿಕ ಹಾಗೂ ರಾಷ್ಟ್ರೀಯ ಸನ್ನಿವೇಶಗಳ ಕುರಿತು ಪ್ರಚಾರಕರು ತಮ್ಮ ಅನುಭವಗಳನ್ನು ಹಂಚಿಕೊಂಡು ಅಭಿಪ್ರಾಯ ವಿನಿಮಯ ನಡೆಸಿದರು.ಬೈಠಕ್ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಆರ್‌ಎಸ್‌ಎಸ್ ಅಖಿಲ ಭಾರತೀಯ ಪ್ರಚಾರ ಪ್ರಮುಖ ಸುನೀಲ್ ಅಂಬೇಕರ್, ಸಂಘದ ವಿವಿಧ ಹಂತಗಳ ಕಾರ್ಯಚಟುವಟಿಕೆಗಳ ಮೌಲ್ಯಮಾಪನ ನಡೆಸಲಾಗಿದ್ದು, ಮುಂದಿನ ಕಾರ್ಯಯೋಜನೆಗೆ ಅಗತ್ಯ ಮಾರ್ಗದರ್ಶನ ನೀಡಲಾಗಿದೆ ಎಂದು ತಿಳಿಸಿದರು.
ದೇಶದಲ್ಲಿ ಜನಸಂಖ್ಯೆ ಅಸಮತೋಲನ, ಮಾದಕ ವಸ್ತುಗಳ ದುರುಪಯೋಗ, ಕುಟುಂಬ ವ್ಯವಸ್ಥೆಯ ಮೇಲೆ ಉಂಟಾಗುತ್ತಿರುವ ಪರಿಣಾಮಗಳು ಹಾಗೂ ಸಾಮಾಜಿಕ ಮೌಲ್ಯಗಳ ಕುಸಿತದ ಕುರಿತು ಸಭೆಯಲ್ಲಿ ಕಳವಳ ವ್ಯಕ್ತಪಡಿಸಲಾಗಿದೆ. ಈ ವಿಷಯಗಳಲ್ಲಿ ಸಮಾಜದಲ್ಲಿ ಜಾಗೃತಿ ಮೂಡಿಸುವ ಅಭಿಯಾನಗಳಿಗೆ ಹೆಚ್ಚಿನ ಒತ್ತು ನೀಡಲು ನಿರ್ಧರಿಸಲಾಗಿದೆ ಎಂದು ಹೇಳಿದರು.------ಬಾಕ್ಸ್‌ಎಸ್‌ಐಟಿಯಿಂದ ಸತ್ಯಾಂಶ ಬೆಳಕಿಗೆ
ರಾಮ ಮಂದಿರ ನಿರ್ಮಾಣಕ್ಕಾಗಿ ಸಂಗ್ರಹಿಸಲಾದ ದೇಣಿಗೆ ಹಣದ ದುರುಪಯೋಗದ ಆರೋಪಗಳ ಕುರಿತೂ ಸಭೆಯಲ್ಲಿ ಚರ್ಚೆ ನಡೆದಿರುವುದಾಗಿ ತಿಳಿಸಿದ ಅವರು, ಈ ಬೆಳವಣಿಗೆಗೆ ಸಂಘ ವಿಷಾದ ವ್ಯಕ್ತಪಡಿಸಿದೆ. ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ(ಎಸ್‌ಐಟಿ) ತನಿಖೆಯನ್ನು ಸಮಗ್ರವಾಗಿ ಪೂರ್ಣಗೊಳಿಸಿ ಸತ್ಯಾಂಶ ಹೊರತರುತ್ತದೆ ಎಂಬ ವಿಶ್ವಾಸ ವ್ಯಕ್ತಪಡಿಸಲಾಗಿದೆ. ತನಿಖೆ ಪೂರ್ಣಗೊಂಡ ಬಳಿಕ ತಪ್ಪಿತಸ್ಥರ ವಿರುದ್ಧ ಕಾನೂನು ಪ್ರಕಾರ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂಬ ನಿರೀಕ್ಷೆಯನ್ನು ಸಂಘ ಹೊಂದಿದೆ. ಭವಿಷ್ಯದಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ದೇಣಿಗೆ ನಿರ್ವಹಣೆಯಲ್ಲಿ ಇನ್ನಷ್ಟು ಪಾರದರ್ಶಕತೆ, ಹೊಣೆಗಾರಿಕೆ ಹಾಗೂ ಪರಿಣಾಮಕಾರಿ ಆಡಳಿತ ವ್ಯವಸ್ಥೆ ರೂಪಿಸುವ ಅಗತ್ಯವಿದೆ ಎಂಬ ಅಭಿಪ್ರಾಯವೂ ಸಭೆಯಲ್ಲಿ ವ್ಯಕ್ತವಾಗಿದೆ. ಜೊತೆಗೆ ರಾಮಭಕ್ತರ ಭಾವನೆಗಳಿಗೆ ಯಾವುದೇ ರೀತಿ ಧಕ್ಕೆಯಾಗದಂತೆ ಸಂಬಂಧಿತ ಸಮಿತಿಗಳು ಅತ್ಯಂತ ಜವಾಬ್ದಾರಿಯಿಂದ ಕಾರ್ಯನಿರ್ವಹಿಸಬೇಕು ಎಂದು ತಿಳಿಸಿಲಾಗಿದೆ ಎಂಬುದನ್ನು ತಿಳಿಸಿದರು.------ಕೋಟ್‌ಮೂರು ದಿನಗಳ ಬೈಠಕ್‌ನಲ್ಲಿ ದೇಶದ ವಿವಿಧ ಭಾಗಗಳಲ್ಲಿನ ಸಂಘಟನಾ ಚಟುವಟಿಕೆಗಳ ವಿಮರ್ಶೆ, ಸಮಾಜದ ವಿವಿಧ ವರ್ಗಗಳೊಂದಿಗೆ ಸಂಪರ್ಕ ವೃದ್ಧಿ, ಶತಮಾನೋತ್ಸವ ವರ್ಷದ ಉಳಿದ ಕಾರ್ಯಕ್ರಮಗಳ ರೂಪುರೇಷೆ, ಸೇವಾ ಕಾರ್ಯಗಳ ವಿಸ್ತರಣೆ ಹಾಗೂ ಮುಂದಿನ ದಿನಗಳ ಸಂಘಟನಾ ಕಾರ್ಯತಂತ್ರಗಳ ಕುರಿತು ಸವಿಸ್ತಾರ ಚರ್ಚೆ ನಡೆಸಿ ಅಗತ್ಯ ಮಾರ್ಗದರ್ಶನ ನೀಡಲಾಗಿದೆ.ಸುನೀಲ್ ಅಂಬೇಕರ್, ಆರ್‌ಎಸ್‌ಎಸ್ ಅಖಿಲ ಭಾರತೀಯ ಪ್ರಚಾರ ಪ್ರಮುಖ