ಅಖಿಲ ಭಾರತ ಸೈನಿಕ ಶಾಲೆಗಳ ಅಂತರ ಗುಂಪು (ಹೆಚ್) ಕ್ರೀಡಾಕೂಟ-2026ರ ಸಮಾರೋಪ ಸಮಾರಂಭ ಅತ್ಯಂತ ಸಂಭ್ರಮದೊಂದಿಗೆ ಪೂರ್ಣಗೊಂಡಿತು.

ಕುಶಾಲನಗರ : ಅಖಿಲ ಭಾರತ ಸೈನಿಕ ಶಾಲೆಗಳ ಅಂತರ ಗುಂಪು (ಹೆಚ್) ಕ್ರೀಡಾಕೂಟ-2026ರ ಸಮಾರೋಪ ಸಮಾರಂಭ ಅತ್ಯಂತ ಸಂಭ್ರಮದೊಂದಿಗೆ ಪೂರ್ಣಗೊಂಡಿತು.

2007ರ ಅಕ್ಟೋಬರ್ 18ರಂದು ಸ್ಥಾಪನೆಗೊಂಡ ಕೊಡಗು ಸೈನಿಕ ಶಾಲೆ ಭವಿಷ್ಯದ ಮಿಲಿಟರಿ ನಾಯಕರನ್ನು ರೂಪಿಸುವ ಮತ್ತು ಯುವ ವಿದ್ಯಾರ್ಥಿಗಳಲ್ಲಿ ಶಿಸ್ತು, ಜವಾಬ್ದಾರಿ ಹಾಗೂ ದೇಶಪ್ರೇಮವನ್ನು ಬೆಳೆಸುವ ಉದಾತ್ತ ಮಿಷನ್‌ನೊಂದಿಗೆ ತನ್ನ ಸ್ಪೂರ್ತಿದಾಯಕ ಪಯಣವನ್ನು ಮುಂದುವರೆಸುತ್ತಾ ತನ್ನ 19ನೇ ಸಂಸ್ಥಾಪನಾ ದಿನಾಚರಣೆಯನ್ನು ಇದೇ ಸಂದರ್ಭ ಆಚರಿಸಿಕೊಂಡಿತು. ಶಾಲೆಯ ಪ್ರಾಂಶುಪಾಲರಾದ ಕರ್ನಲ್ ಅಮರ್ ಜೀತ್ ಸಿಂಗ್ ಅವರು ಕ್ರೀಡಾಕೂಟದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದರು.

ಮೂಲಭೂತ ಮೌಲ್ಯಗಳನ್ನು ಪ್ರತಿಬಿಂಬಿಸಿದೆ: ಸ್ಪರ್ಧಿಗಳ ಆಕರ್ಷಕ ಪಥಸಂಚಲನದೊಂದಿಗೆ ಪ್ರಾರಂಭಗೊಂಡು ಮುಖ್ಯ ಅತಿಥಿಗಳು ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ಕ್ರೀಡಾಪಟುಗಳಿಗೆ ಪ್ರಶಸ್ತಿ ಪತ್ರ, ಪದಕ ಹಾಗೂ ಪಾರಿತೋಷಕವನ್ನು ವಿತರಿಸಿದರು. ನಂತರ ಮಾತನಾಡಿದ ಅವರು, ಪ್ರತಿಷ್ಠಿತ ಕ್ರೀಡಾಕೂಟವು ಶಿಸ್ತು, ಧೈರ್ಯ, ಪರಿಶ್ರಮ, ತಂಡದ ಮನೋಭಾವ ಮತ್ತು ಶ್ರೇಷ್ಠತೆಯ ಅನ್ವೇಷಣೆಯಂತಹ ತಮ್ಮ ಸಂಸ್ಥೆಯ ಮೂಲಭೂತ ಮೌಲ್ಯಗಳನ್ನು ಪ್ರತಿಬಿಂಬಿಸಿದೆ ಎಂದರು. ಒಂದು ವಾರಗಳ ಅವಧಿಯಲ್ಲಿ ಬಾಸ್ಕೆಟ್‌ಬಾಲ್, ವಾಲಿಬಾಲ್, ಅಥ್ಲೆಟಿಕ್ಸ್ ಹಾಗೂ ರಸಪ್ರಶ್ನೆ ಮತ್ತು ಚರ್ಚಾ ಸ್ಪರ್ಧೆಗಳು ಸೈನಿಕ ಶಾಲೆಗಳ ಯುವ ಕೆಡೆಟ್‌ಗಳಿಗೆ ತಮ್ಮ ಕೌಶಲ್ಯಗಳನ್ನು ಪರೀಕ್ಷಿಸಿಕೊಳ್ಳಲು ಮತ್ತು ಪರಸ್ಪರ ಕಲಿಯಲು ಉತ್ತಮ ವೇದಿಕೆಯನ್ನು ಕಲ್ಪಿಸಿಕೊಟ್ಟವು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಎಲ್ಲಾ ಸ್ಪರ್ಧಾಳುಗಳಿಗೆ ಅಭಿನಂದನೆಗಳನ್ನು ಸಲ್ಲಿಸಿದರು. ಕಠಿಣ ಪರಿಶ್ರಮ, ಶಿಸ್ತುಬದ್ಧ ತರಬೇತಿ ಮತ್ತು ತಂಡದ ಮನೋಭಾವದಿಂದ ಮಾತ್ರ ಸಾಧನೆ ಸಾಧ್ಯ ಎಂದು ತಿಳಿಸಿದ ಅವರು, ಕ್ರೀಡೆಯ ನಿಜವಾದ ಸೌಂದರ್ಯವು ಸ್ಪರ್ಧಿಸುವ ಧೈರ್ಯ, ಅತ್ಯುತ್ತಮವಾದದ್ದನ್ನು ನೀಡುವ ದೃಢ ನಿಶ್ಚಯ, ಫಲಿತಾಂಶವನ್ನು ಒಪ್ಪಿಕೊಳ್ಳುವ ಕೃಪೆ ಮತ್ತು ನಿರಂತರವಾಗಿ ಮುನ್ನುಗ್ಗುವ ಉತ್ಸಾಹ ಕಲ್ಪಿಸುತ್ತದೆ ಎಂದರು. ರಾಷ್ಟ್ರೀಯ ಕ್ರೀಡಾಕೂಟವು ಯಶಸ್ವಿಯಾಗಿ ಪೂರ್ಣಗೊಳ್ಳಲು ಶ್ರಮಿಸಿದ ಶಾಲೆಯ ಉಪ ಪ್ರಾಂಶುಪಾಲರಾದ ವಿಂಗ್ ಕಮಾಂಡರ್ ಮೊಹಮ್ಮದ್ ಶಾಜಿ, ಆಡಳಿತಾಧಿಕಾರಿ ಸ್ಕ್ವಾಡ್ರನ್ ಲೀಡರ್ ದೀಪಕ್ ನಾಯಕ್, ಕ್ರೀಡಾ ಉಸ್ತುವಾರಿ ವೈ.ವಿ. ರಮಣ, ವಿವಿಧ ವಿಭಾಗಗಳಲ್ಲಿ ಶ್ರಮಿಸಿದ ಶಿಕ್ಷಕರು, ಸಂಘಟನಾ ಸಮಿತಿಯ ಸದಸ್ಯರು, ಎಪಿಸಿಟಿ, ಎನ್‌ಸಿಸಿ, ಪಿಐ ( ಸಿಬ್ಬಂದಿ, ತರಬೇತುದಾರರು, ತಂಡದ ವ್ಯವಸ್ಥಾಪಕರು ಹಾಗೂ ಎಲ್ಲಾ ಸಿಬ್ಬಂದಿ ವರ್ಗದವರಿಗೆ ಕೃತಜ್ಞತೆಗಳನ್ನು ಸಲ್ಲಿಸಿದರು.

ಅಂತಿಮವಾಗಿ ವಿದ್ಯಾರ್ಥಿಗಳು ಮೈದಾನದಲ್ಲಾಗಲಿ ಅಥವಾ ಮೈದಾನದ ಹೊರಗಾಗಲಿ ತಮ್ಮ ಮುಂದಿನ ಎಲ್ಲಾ ಪ್ರಯತ್ನಗಳಲ್ಲಿ ಯಶಸ್ಸು ಗಳಿಸಲಿ ಎಂದು ಹಾರೈಸಿದರು.

2026ರ ಅಖಿಲ ಭಾರತ ಸೈನಿಕ ಶಾಲೆಗಳ ಅಂತರ ಗುಂಪು (ಹೆಚ್) ಕ್ರೀಡಾಕೂಟವು ಅಧಿಕೃತವಾಗಿ ಮುಕ್ತಾಯಗೊಂಡಿದೆ ಎಂದು ಘೋಷಿಸಿದರು. ವಿಜೇತ ಕ್ರೀಡಾಪಟುಗಳ ವಿವರ:

ಕ್ರೀಡಾಕೂಟದಲ್ಲಿ ಕೊಡಗು ಸೈನಿಕ ಶಾಲೆ ಕೆಡೆಟ್ ಹೇಮಂತ್ ರೆಡ್ಡಿ ಜೂನಿಯರ್ ಬಾಸ್ಕೆಟ್‌ಬಾಲ್ ವಿಭಾಗದಲ್ಲಿ ಅತ್ಯುತ್ತಮ ಕ್ರೀಡಾಪಟು ಪ್ರಶಸ್ತಿಯನ್ನು, ದಿ ವಿಕಾಸ ಶಾಲೆಯ ಕೆಡೆಟ್ ಕನಿಷ್ಕಾ ಪಟೇಲ್ ಬಾಸ್ಕೆಟ್‌ಬಾಲ್ (ಹುಡುಗಿಯರು) ವಿಭಾಗದಲ್ಲಿ ಅತ್ಯುತ್ತಮ ಕ್ರೀಡಾಪಟು ಪ್ರಶಸ್ತಿಯನ್ನು ಪಡೆದರು.

ಸೈನಿಕ ಶಾಲೆ ಅಮರಾವತಿ ನಗರದ ಕೆಡೆಟ್ ಹರೀಶ್ ಜಿ ವಾಲಿಬಾಲ್ (ಬಾಲಕರ) ವಿಭಾಗದಲ್ಲಿ, ಕೆಡೆಟ್ ಕವಿಯಾ ಸೆಲ್ವನ್ ಕಿರಿಯ ಹುಡುಗರ (ಅಥ್ಲೆಟಿಕ್ಸ್) ವಿಭಾಗದಲ್ಲಿ, ವಿವೇಕ ಸ್ಕೂಲ್ ಆಫ್ ಎಕ್ಸಲೆನ್ಸ್‌ನ ಕೆಡೆಟ್ ಚಿತ್ರ ಶ್ರೀ ಕಿರಿಯ ಬಾಲಕಿಯರ ವಿಭಾಗದಲ್ಲಿ, ಸೈನಿಕ ಶಾಲೆ ಅಮರಾವತಿ ನಗರದ ಕೆಡೆಟ್ ಸುದೀಪ್ ಉಪ ಕಿರಿಯ ಹುಡುಗರ (ಅಥ್ಲೆಟಿಕ್ಸ್) ವಿಭಾಗದಲ್ಲಿ ಮತ್ತು ವೇದವ್ಯಾಸ ಶಾಲೆಯ ಕೆಡೆಟ್ ಆರುಷಿ ಉಪ ಕಿರಿಯ ಹುಡುಗಿಯರ (ಅಥ್ಲೆಟಿಕ್ಸ್) ವಿಭಾಗದಲ್ಲಿ ಅತ್ಯುತ್ತಮ ಕ್ರೀಡಾಪಟು ಪ್ರಶಸ್ತಿಗಳನ್ನು ಪಡೆದರು.

ಚರ್ಚಾ ಸ್ಪರ್ಧೆಯಲ್ಲಿ ವಿವೇಕ ಸ್ಕೂಲ್ ಆಫ್ ಎಕ್ಸಲೆನ್ಸ್‌ನ ಕೆಡೆಟ್ ಉತ್ಸವ್ ವಿಷಯದ ಪರವಾಗಿ ಅತ್ಯುತ್ತಮ ಮಾತುಗಾರ ಪ್ರಶಸ್ತಿಯನ್ನು ಹಾಗೂ ಸೈನಿಕ ಶಾಲೆ ಕೊಡಗು ಕೆಡೆಟ್ ಗಗನ್ ದೀಪ್ ವಿಷಯದ ವಿರುದ್ಧವಾಗಿ ಅತ್ಯುತ್ತಮ ಮಾತುಗಾರ ಪ್ರಶಸ್ತಿಯನ್ನು ಪಡೆದರು. ಭಾಗವಹಿಸಿದ್ದ ಹನ್ನೊಂದು ಶಾಲೆಗಳಲ್ಲಿ ಅತಿಥೇಯ ಸೈನಿಕ ಶಾಲೆ ಕೊಡಗು ಪ್ರಥಮ ಸ್ಥಾನವನ್ನು, ಸೈನಿಕ ಶಾಲೆ ಅಮರಾವತಿ ನಗರ ದ್ವಿತೀಯ ಸ್ಥಾನವನ್ನು, ವೇದವ್ಯಾಸ ವಿದ್ಯಾಲಯಂ ತೃತೀಯ ಸ್ಥಾನವನ್ನು ಪಡೆಯುವುದರೊಂದಿಗೆ ಸೈನಿಕ ಶಾಲೆ ಕೊಡಗು ಒಟ್ಟಾರೆ ಚಾಂಪಿಯನ್ ತಂಡವಾಗಿ ಹೊರಹೊಮ್ಮಿತು. ಪ್ರಸ್ತುತ ಕಾರ್ಯಕ್ರಮದಲ್ಲಿ ಶಾಲೆಯ ಪ್ರಥಮ ಮಹಿಳೆ ದಿವ್ಯಾ ಸಿಂಗ್, ಉಪ ಪ್ರಾಂಶುಪಾಲರಾದ ವಿಂಗ್ ಕಮಾಂಡರ್ ಮೊಹಮ್ಮದ್ ಶಾಜಿ, ಆಡಳಿತಾಧಿಕಾರಿ ಸ್ಕ್ವಾಡ್ರನ್ ಲೀಡರ್ ದೀಪಕ್ ನಾಯಕ್, ಬೋಧಕ-ಬೋಧಕೇತರ ವರ್ಗ, ಎಪಿಸಿಟಿ, ಎನ್‌ಸಿಸಿ, ಪಿಐ ಸಿಬ್ಬಂದಿ, ತರಬೇತುದಾರರು, ತಂಡದ ವ್ಯವಸ್ಥಾಪಕರು ಹಾಗೂ ವಿದ್ಯಾರ್ಥಿಗಳು ಇದ್ದರು.