ಸಾರಾಂಶ
ಹರವೆ ವಿರಕ್ತ ಮಠದ ಶಾಖಾ ಮಠವನ್ನು ಸುತ್ತೂರು ಶ್ರೀಗಳ ನೇತೃತ್ವದಲ್ಲಿ ಗಣ್ಯರನ್ನು ಆಹ್ವಾನಿಸಿ ಅದ್ಧೂರಿಯಾಗಿ ಸಮಾಜದ ಸೇವೆಗೆ ಲೋಕಾರ್ಪಣೆ ಮಾಡಲು ಚಾಮರಾಜನಗರ ಜಿಲ್ಲೆಯ ಮುಖಂಡರ ಸಭೆಯಲ್ಲಿ ತೀರ್ಮಾನಿಸಲಾಯಿತು.
ಸುತ್ತೂರು ಶ್ರೀಗಳು ನೇತೃತ್ವದಲ್ಲಿ ಅದ್ಧೂರಿಯಾಗಿ ಮಠ ಲೋಕಾರ್ಪಣೆಗೆ ಮುಖಂಡರ ಸಲಹೆ ಕನ್ನಡಪ್ರಭ ವಾರ್ತೆ ಚಾಮರಾಜನಗರ
ಚಾಮರಾಜನಗರ ಜಿಲ್ಲಾ ಕೇಂದ್ರದ ಮೂಡ್ಲುಪುರ- ಉತ್ತುವಳ್ಳಿ ಮುಖ್ಯ ರಸ್ತೆಯಲ್ಲಿ ನಿರ್ಮಾಣವಾಗಿರುವ ಹರವೆ ವಿರಕ್ತ ಮಠದ ಶಾಖಾ ಮಠವನ್ನು ಸುತ್ತೂರು ಶ್ರೀಗಳ ನೇತೃತ್ವದಲ್ಲಿ ಗಣ್ಯರನ್ನು ಆಹ್ವಾನಿಸಿ ಅದ್ಧೂರಿಯಾಗಿ ಸಮಾಜದ ಸೇವೆಗೆ ಲೋಕಾರ್ಪಣೆ ಮಾಡಲು ಜಿಲ್ಲೆಯ ಮುಖಂಡರ ಸಭೆಯಲ್ಲಿ ತೀರ್ಮಾನಿಸಲಾಯಿತು. ನಗರ ಸಮೀಪದ ಮೂಡ್ಲುಪುರ- ಉತ್ತುವಳ್ಳಿ ಮುಖ್ಯ ರಸ್ತೆಯಲ್ಲಿರುವ ಹರವೆ ವಿರಕ್ತ ಮಠದ ಶಾಖಾ ಮಠದ ಅವರಣದಲ್ಲಿ ಶ್ರೀಮಠದ ಅಧ್ಯಕ್ಷರಾದ ಶ್ರೀ ಸರ್ಪಭೂಷಣ ಸ್ವಾಮೀಜಿಗಳ ಅಧ್ಯಕ್ಷತೆಯಲ್ಲಿ ಜಿಲ್ಲೆಯ ಸಮಾಜದ ಎಲ್ಲಾ ಮುಖಂಡರ ಪೂರ್ವಭಾವಿ ಸಭೆ ಮಂಗಳವಾರ ನಡೆಯಿತು. ಸಭೆಯಲ್ಲಿ ಭಾಗವಹಿಸಿದ್ದ ಕಾಡಾ ಅಧ್ಯಕ್ಷ ಪಿ. ಮರಿಸ್ವಾಮಿ, ಚಾಮುಲ್ ನಿರ್ದೇಶಕ ಎಚ್.ಎಸ್. ಬಸವರಾಜು, ಉಡಿಗಾಲಕುಮಾರಸ್ವಾಮಿ, ಮಹಾಸಭಾದ ಮಾಜಿ ಅಧ್ಯಕ್ಷ ಕೊಡಸೋಗೆ ಶಿವಬಸಪ್ಪ ಸೇರಿದಂತೆ ಅನೇಕ ಮುಖಂಡರು ಮಾತನಾಡಿ, ಜಿಲ್ಲಾ ಕೇಂದ್ರದಲ್ಲಿ ಹರವೆ ಶಾಖಾ ಮಠ ನಿರ್ಮಾಣ ಕೊಂಡಿರುವುದು ಸಂತಸ ತಂದಿದೆ. ಸಮಾಜ ಸೇವೆ ಮಾಡಲು ಜಿಲ್ಲಾ ಕೇಂದ್ರದಲ್ಲಿ ಹರವೆ ಶ್ರೀಗಳು ಬಹಳ ಪರಿಶ್ರಮ ಪಟ್ಟು ಶಾಖಾ ಮಠವನ್ನು ನಿರ್ಮಾಣ ಮಾಡಿದ್ದಾರೆ. ಗುಂಡ್ಲುಪೇಟೆ- ಉತ್ತುವಳ್ಳಿ ಮಾರ್ಗದಲ್ಲಿ ಜಿಲ್ಲಾ ಕೇಂದ್ರಕ್ಕೆ ಹೊಂದಿಕೊಂಡಂತೆ ೨ ಕಿ.ಮಿ. ವ್ಯಾಪ್ತಿಯಲ್ಲಿ ಮಠ ನಿರ್ಮಾಣಗೊಂಡಿದೆ. ಜಿಲ್ಲಾ ಹಾಗು ಹೊರ ಜಿಲ್ಲೆಗಳಿಂದ ಆಗಮಿಸುವ ಭಕ್ತರಿಗೆ ಹಾಗು ಬಡ ವಿದ್ಯಾರ್ಥಿಗಳ ವ್ಯಾಸಂಗ ಅನುಕೂಲವಾಗುವಂತೆ ದೂರದೃಷ್ಠಿಯನ್ನುಟ್ಟುಕೊಂಡು ಶ್ರೀಗಳು ಮಠ ನಿರ್ಮಾಣ ಮಾಡಿದ್ದಾರೆ ಎಂದು ಪ್ರಶಂಸೆ ವ್ಯಕ್ತಪಡಿಸಿದರು. ಜಿಲ್ಲೆಯ ಸಮಾಜದ ಬಂಧುಗಳು ಶ್ರೀಮಠದ ಶಾಖಾ ಮಠ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸುವ ಜೊತೆಗೆ ತಮ್ಮ ಗ್ರಾಮಗಳಿಗೆ ಶ್ರೀಗಳು ಆಗಮಿಸಿದ್ದ ಸಂದರ್ಭದಲ್ಲಿ ಅವರಿಗೆ ಹೆಚ್ಚಿನ ರೀತಿಯಲ್ಲಿ ಸಹಕಾರ ನೀಡಬೇಕು. ಸದ್ಯದಲ್ಲಿಯೇ ದಿನಾಂಕ ನಿಗದಿ ಪಡಿಸಿ, ಎಲ್ಲಾ ಗ್ರಾಮಗಳಿಗೆ ಶ್ರೀಗಳು ಹಾಗೂ ಅವರ ಪ್ರತಿನಿಧಿಗಳು ಭೇಟಿ ನೀಡಿ, ಆಹ್ವಾನ ಪತ್ರಿಕೆಯನ್ನು ನೀಡಲಿದ್ದಾರೆ. ಆಯಾ ಗ್ರಾಮಗಳ ಮುಖಂಡರು ಹಾಗೂ ಯುವಕರು ಮುರ್ತುವಜಿ ವಹಿಸಿ, ಮಠ ಲೋಕಾರ್ಪಣೆ ಕಾರ್ಯಕ್ರಮದ ಯಶಸ್ವಿಗೆ ಶ್ರಮಿಸಬೇಕು ಎಂದು ಮುಖಂಡರು ಮನವಿ ಮಾಡಿದರು. ಹರವೆ ವಿರಕ್ತ ಮಠ ಅಧ್ಯಕ್ಷರಾದ ಶ್ರೀ ಸರ್ಪಭೂಷಣಸ್ವಾಮೀಜಿ ಮಾತನಾಡಿ, ಚಾಮರಾಜನಗರದಿಂದ ಹರವೆ ೧೫ ಕಿ.ಮೀ.ದೂರದಲ್ಲಿದ್ದು, ಜಿಲ್ಲಾ ಕೇಂದ್ರಕ್ಕೆ ಆಗಮಿಸಿದ ಭಕ್ತರಿಗೆ ಶ್ರೀಮಠಕ್ಕೆ ಬರುವುದು ತ್ರಾಸದಾಯಕವಾಗುತ್ತಿತ್ತು. ಇದನ್ನರಿತು ಜಿಲ್ಲಾ ಕೇಂದ್ರದಲ್ಲಿ ಶಾಖಾ ಮಠವನ್ನು ಆರಂಭಿಸಬೇಕೆಂಬ ನಮ್ಮ ಆಲೋಚನೆಗೆ ತಕ್ಕಂತೆ ಮೂಡ್ಲುಪುರ –ಉತ್ತುವಳ್ಳಿ ಮಾರ್ಗದಲ್ಲಿ ನಿವೇಶನ ಲಭ್ಯವಾಯಿತು. ಈ ಜಾಗದಲ್ಲಿ ಹರವೆ ಶಾಖಾ ಮಠವನ್ನು ನಿರ್ಮಾಣ ಮಾಡಿದ್ದು, ಇದುವರೆಗೆ ಭಕ್ತರ ಬಳಿಗೆ ಹೋಗಿಲ್ಲ. ಸ್ವಂತ ಹಣದಲ್ಲಿಯೇ ಮಠ ನಿರ್ಮಾಣ ಮಾಡಿದ್ದು, ಮುಂದಿನ ದಿನಗಳಲ್ಲಿ ಭಕ್ತರಾದ ತಾವೆಲ್ಲರು ಸಲಹೆ, ಸಹಕಾರ ವನ್ನು ನೀಡಿ ಶ್ರೀಮಠದ ಉದ್ಗಾಟನೆಗೆ ಮುಂದಾಗಿ, ಸಮಾಜ ಸೇವೆಗೆ ಶ್ರೀಮಠವನ್ನು ಬಳಸಿಕೊಳ್ಳಬೇಕು ಎಂಬುವುದು ನನ್ನ ಆಶಯವಾಗಿದೆ ಎಂದರು. ಈಗಾಗಲೇ ಸುತ್ತೂರುಶ್ರೀಗಳ ನೇತೃತ್ವದಲ್ಲಿ ನಾಡಿನ ವಿವಿಧ ಮಠಾಧೀಶರು ಗಣ್ಯರನ್ನು ಆಹ್ವಾನಿಸಿ, ಉದ್ಗಾಟನೆಗೆ ಸಕಾಲ ಸಿದ್ದತೆಗಳನ್ನು ಮಾಡಿಕೊಳ್ಳಲಾಗುತ್ತಿದೆ. ಇದಕ್ಕೆ ಜಿಲ್ಲೆಯ ಎಲ್ಲಾ ಭಕ್ತರನ್ನು ಒಳಗೊಂಡಂತೆ ಅದ್ದೂರಿಯಾಗಿ ಕಾರ್ಯಕ್ರಮ ಮಾಡಬೇಕಾಗಿದೆ. ಸಮಾಜದ ಬಂಧುಗಳು, ಯುವಕರು, ಪ್ರತಿಯೊಬ್ಬರು ಕಾರ್ಯಕ್ರದಮ ಯಶಸ್ವಿಗೆ ಹೆಚ್ಚಿನ ಸಹಕಾರ ನೀಡಬೇಕು ಎಂದು ಶ್ರೀಗಳು ಮನವಿ ಮಾಡಿದರು. ಸಭೆಯಲ್ಲಿ ಕಾಡಾ ಅಧ್ಯಕ್ಷ ಪಿ.ಮರಿಸ್ವಾಮಿ, ಚಾಮುಲ್ ಅಧ್ಯಕ್ಷ ವೈ.ಸಿ. ನಾಗೇಂದ್ರ, ನಿರ್ದೇಶಕರಾದ ಎಚ್.ಎಸ್. ಬಸವರಾಜು, ಸದಾಶಿವಮೂರ್ತಿ, ವೀರಶೈವ ಲಿಂಗಾಯತ ಮಹಾಸಭಾದ ಜಿಲ್ಲಾಧ್ಯಕ್ಷ ಮೂಡ್ಲುಪುರ ನಂದೀಶ್, ತಾಲೂಕು ಅಧ್ಯಕ್ಷ ಬಾಲಚಂದ್ರ ಮೂರ್ತಿ, ಕೇಂದ್ರ ಸಮಿತಿ ಸದಸ್ಯ ಎನ್‌ರಿಚ್ ಮಹದೇವಸ್ವಾಮಿ, ಮಾಜಿ ಅಧ್ಯಕ್ಷ ಕೋಡಸೋಗೆ ಶಿವಬಸಪ್ಪ, ನಿರ್ದೇಶಕ ಹೊಸೂರು ನಟೇಶ್, ಮುರುಡೇಶ್, ಬಸವರಾಜು, ನಿರಂಜನ್, ಎನ್.ಆರ್. ಪುರುಷೋತ್ತಮ್, ಶರಣ ಸಾಹಿತ್ಯ ಪರಿಷತ್ ಪ್ರಧಾನ ಕಾರ್ಯದರ್ಶಿ ಬಿ.ಕೆ. ರವಿಕುಮಾರ್, ಎಪಿಎಂಸಿ ನಿರ್ದೇಶಕ ಅಲೂರು ಪ್ರದೀಪ್, ನಾಗೇಂದ್ರ ಪುಟ್ಟು, ತಾ.ಪಂ. ಮಾಜಿ ಸದಸ್ಯ ಉದಯಕುಮಾರ್, ಶ್ರೀಶಿವಾಲಂಕಾರೇಶ್ವರ ಸ್ವಾಮಿ ಸೇವಾ ಸಮಿತಿಯ ಅಧ್ಯಕ್ಷ ಸೋಮಣ್ಣ, ದೊಡ್ಡರಾಯಪೇಟೆ ಗಿರೀಶ್, ಟಿ. ಗುರು, ಬಸವೇಶ್ವರ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಗೌರಿಶಂಕರ್, ಸಮಾಜ ಸೇವಕ ಡಾ.ಪರಮೇಶ್ವರಪ್ಪ, ಮಹದೇವಸ್ವಾಮಿ, ಪ್ರಭು, ಪರಶಿವಮೂರ್ತಿ, ದಯಾನಿಧಿ, ಸೋಮೇಶ್ ಸೇರಿದಂತೆ ಅನೇಕ ಮುಖಂಡರು ಭಾಗವಹಿಸಿದ್ದರು.